ಮುಂಬೈ: ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿಯವರ ಒಪ್ಪಂದ ಕೊನೆಗೊಳ್ಳುತ್ತದೆ. ಈ ನಡುವೆ ಬಿಸಿಸಿಐ ಈಗಾಗಲೇ ಕೋಚ್‍ಗಳ ಹುಡುಕಾಟದಲ್ಲಿ ತೊಡಗಿದ್ದು, ಕನ್ನಡಿಗರೊಬ್ಬರಿಗೆ ಕೋಚ್ ಆಗುವಂತೆ ಆಫರ್ ಕೂಡ ಕೊಟ್ಟಿದೆ ಎಂದು ವರದಿಯಾಗಿದೆ.
ದುಬೈನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕೊನೆಗೊಳ್ಳುತ್ತಿದ್ದಂತೆ ರವಿಶಾಸ್ತ್ರಿ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಶಾಸ್ತ್ರಿ 2014ರಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಡೈರೆಕ್ಟರ್ ಆಗಿ ಆಯ್ಕೆಗೊಂಡರು. 2016ರ ಬಳಿಕ ಒಂದು ವರ್ಷಗಳ ಕಾಲ ಕನ್ನಡಿಗ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದರು. ನಂತರ 2017ರಲ್ಲಿ ರವಿಶಾಸ್ತ್ರಿ ಮುಖ್ಯ ಕೋಚ್ ಆಗಿ ಟೀಂ ಇಂಡಿಯಾಗೆ ನೇಮಕಗೊಂಡರು. ರವಿಶಾಸ್ತ್ರಿ ಸಾರಥ್ಯದಲ್ಲಿ ಮುನ್ನಡೆದ ಭಾರತ ತಂಡ ಚಾಂಪಿಯನ್ ಟ್ರೋಫಿ, ಆಸ್ಟ್ರೇಲಿಯಾ ಸರಣಿ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸಹಿತ ಹಲವು ಮಹತ್ವದ ಪಂದ್ಯಗಳಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ.
2019ರ ಏಕದಿನ ವಿಶ್ವಕಪ್‍ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ ಸೋತರು ಕೂಡ ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿತ್ತು. ತವರಿನಲ್ಲಿ ನಡೆದ ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌತ್ ಆಫ್ರಿಕಾ, ಸರಣಿ ಗೆಲ್ಲುವ ಮೂಲಕ ಭಾರತ ತಂಡ ವಿಶೇಷ ಸಾಧನೆ ಮಾಡಿದೆ. ಟೀ ಇಂಡಿಯಾದಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಾಧಿಸಿದ್ದೇವೆ ಎಂಬ ಸಂತೃಪ್ತಿ ಇದೆ ಎಂದು ಶಾಸ್ತ್ರಿ ಕೂಡ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಕುಂಬ್ಳೆ, ಲಕ್ಷ್ಮಣ್ !
ಇದೀಗ ಟಿ-20 ವಿಶ್ವಕಪ್ ಬಳಿಕ ಬಿಸಿಸಿಐ ಜೊತೆಗಿನ ಒಪ್ಪಂದ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಮುಖ್ಯ ಕೋಚ್ ಹುದ್ದೆಗೆ ಕನ್ನಡಿಗ ಅನಿಲ್ ಕುಂಬ್ಳೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಈ ಹಿಂದೆ 2016-17ರ ನಡುವೆ ಒಂದು ವರ್ಷ ಕುಂಬ್ಳೆ ಕೋಚ್ ಆಗಿ ತಂಡದಲ್ಲಿ ಕಾರ್ಯನಿರ್ವಹಿಸಿದ್ದರು. ಬಳಿಕ ವಿರಾಟ್ ಕೊಹ್ಲಿ ಜೊತೆಗಿನ ವೈಮನಸ್ಸಿನಿಂದಾಗಿ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದರು. ಇದೀಗ ಮತ್ತೆ ಬಿಸಿಸಿಐ ಕುಂಬ್ಳೆ ಕಡೆಗೆ ಒಲವನ್ನು ತೋರಿದೆ ಎಂದು ವರದಿಯಾಗಿದೆ.
ಕುಂಬ್ಳೆ ಜೊತೆ ಕನ್ನಡಿಗ ರಾಹುಲ್ ದ್ರಾವಿಡ್ ಹೆಸರು ಕೂಡ ಕೇಳಿ ಬರುತ್ತಿದೆ. ಆದರೆ ದ್ರಾವಿಡ್ ಕೋಚ್ ಹುದ್ದೆ ಸ್ವೀಕರಿಸಲು ಸಿದ್ಧರಿಲ್ಲ ಎಂದು ಕೇಳಿಬರುತ್ತಿದೆ. ಈ ನಡುವೆ ಮಾಜಿ ಆಟಗಾರ ವಿ.ವಿ.ಎಸ್ ಲಕ್ಷ್ಮಣ್, ಪ್ರಸ್ತುತ ಬ್ಯಾಟಿಂಗ್ ಕೋಚ್ ಆಗಿರುವ ವಿಕ್ರಮ್ ರಾಥೋರ್ ಅವರ ಹೆಸರಿನೊಂದಿಗೆ ಕೆಲ ವಿದೇಶಿ ಕೋಚ್‍ಗಳ ಹೆಸರು ಕೇಳಿ ಬರುತ್ತಿದೆ. ಆದರೆ ಬಿಸಿಸಿಐ ಮಾತ್ರ ಸ್ವದೇಶಿ ಕೋಚ್‍ಗಳನ್ನು ಪರಿಗಣಿಸಲು ಒಲವು ತೋರಿಸಿದೆ ಎಂಬ ಮಾಹಿತಿ ಇದೆ. ಇದನ್ನೂ ಓದಿ: ನಾಳೆಯಿಂದ ದುಬೈನಲ್ಲಿ ಐಪಿಎಲ್ ಕಲರವ
ರವಿಶಾಸ್ತ್ರಿ ಕೋಚ್ ಆಗಿ ಕಾರ್ಯನಿರ್ವಹಿಸಿದ ಬಳಿಕ ಭಾರತ ತಂಡದಲ್ಲಿ ಆಟಗಾರರ ಬೆಂಚ್ ಸ್ಟ್ರೆಂತ್ ತುಂಬಾನೆ ಬೆಳೆದಿದ್ದು, ಹಲವು ಉದಯೋನ್ಮುಕ ಆಟಗಾರರು ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅವರ ಸರದಿ ಮುಗಿದ ಬಳಿಕ ಮುಂದಿನ ಕೋಚ್ ಯಾರಗಳಿದ್ದಾರೆ ಎಂಬ ಕುರಿತು ಕ್ರಿಕೆಟ್ ಅಂಗಳದಲ್ಲಿ ಚರ್ಚೆ ಜೋರಾಗಿದೆ. ಇದನ್ನೂ ಓದಿ:ಮಾಸ್ಕ್ ಹಾಕಿ, ಲಸಿಕೆ ಪಡೆಯಿರಿ- ಧೋನಿ ಕ್ಯಾಂಪೇನ್