ಬೆಂಗಳೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ದೋಸ್ತಿಗಳಿಗೆ ಆಂತರಿಕ ಕಲಹಕ್ಕೆ ಸಾಕ್ಷಿಯಾಗಿತ್ತು. ಕೊನೆ ಕ್ಷಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ತವರು ಕ್ಷೇತ್ರವನ್ನು ಕೈ ವಶ ಮಾಡಿಕೊಂಡು, ಆಪ್ತ ವಿಜಯ್ ಶಂಕರ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಇತ್ತ ಬಿಜೆಪಿಯಿಂದ ಹಾಲಿ ಸಂಸದರಾಗಿರುವ ಪ್ರತಾಪ್ ಸಿಂಹ ಎರಡನೇ ಬಾರಿ ಕಣಕ್ಕಿಳಿದಿದ್ದಾರೆ. ಹಾಗಾಗಿ ಮೈಸೂರು-ಕೊಡಗು ಹಲವು ಚುನಾವಣಾ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿತ್ತು.
ಚುನಾವಣೆ ಅಂತ್ಯಗೊಂಡು ಅಭ್ಯರ್ಥಿಗಳ ಭವಿಷ್ಯ ಇವಿಎಂ ಯಂತ್ರ ಪೆಟ್ಟಿಗೆಯಲ್ಲಿ ಭದ್ರವಾಗಿ ಸ್ಟ್ರಾಂಗ್ ರೂಮ್ ಸೇರಿಕೊಂಡಿದೆ. ಇತ್ತ ಎರಡೂ ಪಕ್ಷಗಳು ಖಾಸಗಿ ಏಜೆನ್ಸಿಗಳ ಮೂಲಕ ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿದ್ದು, ಸರ್ವೆಯ ಅಂಕಿ ಅಂಶಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ದೋಸ್ತಿ ಲೆಕ್ಕ: ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆಯಾಗಿ ನಡೆಸಿರುವ ಸಮೀಕ್ಷೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು ದಾಖಲಿಸುತ್ತಾರೆ. ವಿಜಯ್ ಶಂಕರ್ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಅಲ್ಪ ಹಿನ್ನಡೆ ಕಂಡರೂ ಗೆಲುವು ದಾಖಲಿಸುತ್ತಾರೆ. ಮಡಿಕೇರಿಯಲ್ಲಿ 6 ಸಾವಿರ, ವಿರಾಜಪೇಟೆಯಲ್ಲಿ 10 ಸಾವಿರ, ಚಾಮುಂಡೇಶ್ವರಿಯಲ್ಲಿ 9 ಸಾವಿರ, ಕೃಷ್ಣರಾಜದಲ್ಲಿ 16 ಸಾವಿರ ಮತ್ತು ಚಾಮರಾಜದಲ್ಲಿ 12 ಸಾವಿರ ಮತಗಳ ಹಿನ್ನಡೆಯನ್ನು ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಕಾಣಲಿದ್ದಾರೆ. ಉಳಿದ ಕ್ಷೇತ್ರಗಳಾದ ಪಿರಿಯಾಪಟ್ಟಣದಲ್ಲಿ 24 ಸಾವಿರ, ಹುಣಸೂರು 26 ಸಾವಿರ ಮತ್ತು ನರಸಿಂಹರಾಜದಲ್ಲಿ 46 ಸಾವಿರ ಮತಗಳ ಅಂತರ ಕಾಯ್ದುಕೊಂಡು ಒಟ್ಟಾರೆಯಾಗಿ 43 ಸಾವಿರ ಮತಗಳ ಲೀಡ್‍ನಿಂದ ವಿಜಯ್ ಶಂಕರ್ ಗೆಲ್ಲುತ್ತಾರೆ ಎಂದು ದೋಸ್ತಿ ಸಮೀಕ್ಷೆ ಹೇಳುತ್ತಿದೆ.
Advertisement
Advertisement
ಬಿಜೆಪಿ ಲೆಕ್ಕ: ಕಮಲ ನಾಯಕರ ಸಮೀಕ್ಷೆ ಪ್ರತಾಪ್ ಸಿಂಹ ಗೆಲುವು ಪಡೆಯಲಿದ್ದಾರೆ ಎಂದು ಹೇಳಿದೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಲಿದ್ದಾರೆ. ಪಿರಿಯಾಪಟ್ಟಣದಲ್ಲಿ 25 ಸಾವಿರ, ಹುಣಸೂರಿನಲ್ಲಿ 25 ಸಾವಿರ ಮತ್ತು ನರಸಿಂಹಹರಾಜ ಕ್ಷೇತ್ರದಲ್ಲಿ 50 ಸಾವಿರ ಮತಗಳ ಹಿನ್ನಡೆಯನ್ನು ಪ್ರತಾಪ್ ಸಿಂಹ ಹೊಂದಲಿದ್ದಾರೆ. ಉಳಿದಂತೆ ಮಡಿಕೇರಿಯಲ್ಲಿ 70 ಸಾವಿರ, ವಿರಾಜಪೇಟೆಯಲ್ಲಿ 30 ಸಾವಿರ, ಚಾಮುಂಡೇಶ್ವರಿಯಲ್ಲಿ 20 ಸಾವಿರ, ಕೃಷ್ಣರಾಜದಲ್ಲಿ 19 ಸಾವಿರ, ಚಾಮರಾಜದಲ್ಲಿ 20 ಸಾವಿರ ಮುನ್ನಡೆ ಪಡೆದು ಅಂದಾಜು 65 ಸಾವಿರ ಮತಗಳ ಅಂತರದಿಂದ ಪ್ರತಾಪ್ ಸಿಂಹ ಗೆಲುವು ಕಾಣುತ್ತಾರೆ ಎಂದು ಬಿಜೆಪಿ ಸಮೀಕ್ಷೆ ತಿಳಿಸಿದೆ