ನವದೆಹಲಿ: ಸಹಾರಾ ಗ್ರೂಪ್ (Sahara Group) ಸಂಸ್ಥಾಪಕ ಸುಬ್ರತಾ ರಾಯ್ (Subrata Roy) ಅವರ ನಿಧನದ ಬಳಿಕ ಸೆಬಿ (SEBI) ಖಾತೆಯಲ್ಲಿರುವ 25,000 ಕೋಟಿ ರೂ. ಹಣ ಯಾರಿಗೆ ಸೇರುತ್ತೆ ಎನ್ನುವುದೇ ಈಗ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.
ತನಿಖೆ ಆರಂಭವಾದ ಕಳೆದ 10 ವರ್ಷದಿಂದ ಈ ಹಣ ಸೆಬಿ ಖಾತೆಯಲ್ಲಿದೆ. ಕ್ಲೈಮ್ ಮಾಡದ ಹಣ ಏನಾಗುತ್ತದೆ? ಆ ಹಣವನ್ನು ಸರ್ಕಾರದ ಹಣ ಎಂದು ಪರಿಗಣಿಸಬಹುದೇ? ಸರ್ಕಾರ ಈಗ ಸುಬ್ರತಾ ರಾಯ್ ಅವರ ನಿಧನದ ಬಳಿಕ ಹಲವು ಆಯ್ಕೆಯನ್ನು ಪರಿಶೀಲಿಸುತ್ತಿದೆ.
ಸಹಾರಾ ಮರುಪಾವತಿ ಪೋರ್ಟಲ್ ಮೂಲಕ ಹಣ ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಸುಮಾರು 2.5 ಲಕ್ಷ ಹೂಡಿಕೆದಾರರಿಗೆ ಸುಮಾರು 230 ಕೋಟಿ ರೂ. ಪಾವತಿಸಲು ಯಶಸ್ವಿಯಾಗಿದ್ದೇವೆ. ಹೊಸ ನೋಂದಣಿಗಳು ಇನ್ನೂ ನಡೆಯುತ್ತಿವೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಸುರಂಗದೊಳಗೆ ಸಿಲುಕಿ 10 ದಿನ – ಪೈಪ್ ಮೂಲಕ ಕ್ಯಾಮೆರಾ ಕಳುಹಿಸಿ ಕಾರ್ಮಿಕರ ಮೊದಲ ವೀಡಿಯೋ ಸೆರೆ
ಕಳೆದ ಜುಲೈನಲ್ಲಿ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಬಿಡುಗಡೆ ಮಾಡಿದ ಮರುಪಾವತಿ ಪೋರ್ಟಲ್‌ನಲ್ಲಿ ಪರಿಶೀಲಿಸಿದ ನಂತರ ನೋಂದಣಿಯಾದ 45 ದಿನಗಳಲ್ಲಿ ಸೆಬಿಯಲ್ಲಿರುವ ಹಣವನ್ನು ವರ್ಗಾಯಿಸಲಾಗುತ್ತಿದೆ.
ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಷನ್ ಮತ್ತು ಸಹಾರಾ ಹೌಸಿಂಗ್ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ತನ್ನ ಹೂಡಿಕೆದಾರರಿಗೆ ಬಡ್ಡಿಯೊಂದಿಗೆ ಹಣವನ್ನು ಮರುಪಾವತಿಸಬೇಕೆಂದು ಸೆಬಿ ನೀಡಿದ ಆದೇಶವನ್ನು 2012ರಲ್ಲಿ ಸುಪ್ರೀಂ ಕೋರ್ಟ್ (Supreme Court) ಎತ್ತಿ ಹಿಡಿದಿತ್ತು. ಅಷ್ಟೇ ಅಲ್ಲದೇ ಹೂಡಿಕೆದಾರರಿಗೆ ಹಣ ಪಾವತಿಸಲು 25,000 ಕೋಟಿ ರೂ. ಹಣವನ್ನು ಸೆಬಿ ಖಾತೆಯಲ್ಲಿ ಠೇವಣಿ ಇಡುವಂತೆ ಸೂಚಿಸಿತ್ತು. ಸುಪ್ರೀಂನಿಂದ ಈ ಆದೇಶ ಬಂದ ಬಳಿಕ ಸುಬ್ರತಾ ರಾಯ್ ಸಮಸ್ಯೆ ಎದುರಿಸಲು ಆರಂಭಿಸಿದರು.
ಹೆಚ್ಚಿನ ಹೂಡಿಕೆದಾರರು ಉತ್ತರ ಪ್ರದೇಶ ಮತ್ತು ಬಿಹಾರದವರು ಎಂದು ಸರ್ಕಾರಿ ದಾಖಲೆಗಳು ಸೂಚಿಸುತ್ತವೆ. ಉತ್ತರ ಪ್ರದೇಶದ ಸುಮಾರು 85 ಲಕ್ಷ ಹೂಡಿಕೆದಾರರು 2,200 ಕೋಟಿ ರೂ. ಮತ್ತು ಬಿಹಾರದ 55 ಲಕ್ಷ ಹೂಡಿಕೆದಾರರು 1,500 ಕೋಟಿ ರೂ. ಹಣವನ್ನು ಠೇವಣಿ ಇಟ್ಟಿದ್ದಾರೆ. ಇದನ್ನೂ ಓದಿ: Exclusive: ನಾನು ಬ್ಲೂ ಫಿಲಂ ತೋರಿಸಿದ್ರೆ ರಾಜಕೀಯ ನಿವೃತ್ತಿ: ಡಿಕೆಶಿ
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸುಬ್ರತಾ ರಾಯ್ ಅವರು ತಮ್ಮ 75 ನೇ ವಯಸ್ಸಿನಲ್ಲಿ ಕಳೆದ ಮಂಗಳವಾರ ಮುಂಬೈನಲ್ಲಿ ನಿಧನರಾದರು.