ಜಂಬೂ ಸವಾರಿಯಿಲ್ಲದೇ ಮೈಸೂರು ದಸರಾ ಊಹಿಸಿಕೊಳ್ಳೋದಕ್ಕೂ ಸಾಧ್ಯವಿಲ್ಲ. ಮೈಸೂರು ದಸರಾ ಮಹೋತ್ಸವಕ್ಕೆ ಶತಮಾನಗಳ ಇತಿಹಾಸವಿದೆ. ಈ ದಸರಾ ಮಹೋತ್ಸವದಲ್ಲಿ ಜಂಬೂ ಸವಾರಿ ಅಂದ್ರೆ ಆನೆಗಳೇ ಆಕರ್ಷಣೆ. ಮೈಸೂರು ಮಹಾರಾಜರ ಆಡಳಿತದ ನಂತರವೂ ಆನೆಯ ಮೇಲೆ ಅಂಬಾರಿ ಹೊರುವ ಪರಂಪರೆ ಸಾಗಿ ಬಂದಿದೆ. ಅದೇ ರೀತಿ ಈ ಮೈಸೂರು ದಸರೆಯಲ್ಲಿ ಅಂಬಾರಿ ಹೊತ್ತ ಆನೆಗಳ ಇತಿಹಾಸ ಅಷ್ಟೇ ವಿಸ್ಮಯ. ಹೀಗೆ ಇತಿಹಾಸ ನಿರ್ಮಿಸಿ ಹೋದ ಹಳೆಯ ಆನೆಗಳ ಸಾಲಿನ ಅಂಚಿನಲ್ಲಿ ಈಗ ಅಭಿಮನ್ಯು (Abhimanyu) ಕೂಡ ಇದ್ದಾನೆ. ದಶಕಗಳಿಂದ ಈಚೆಗೆ ಬಂದ ಆನೆಗೆ ಅಂಬಾರಿ ಹೊರುವ ಹೊಣೆ ಬಿಟ್ಟುಕೊಡುವ ಕಾಲ ಬಂದೇ ಬಿಟ್ಟಿದೆ.
ದಸರಾ ಉತ್ಸವದ ಕೊನೆಯ ದಿನ ಜಂಬೂ ಸವಾರಿಯೊಂದಿಗೆ (Jamboo Savari) ಮುಕ್ತಾಯಗೊಳ್ಳುತ್ತದೆ. ಇಂದು ಸ್ತಬ್ಧಚಿತ್ರಗಳ ಮೆರವಣಿಗೆ ಬಳಿಕ ಅಭಿಮನ್ಯು ತಾಯಿ ಚಾಮುಂಡಿ ವಿಗ್ರಹ ಇರುವ ಚಿನ್ನದ ಅಂಬಾರಿ ಹೊತ್ತು ರಾಜಬೀದಿಯಲ್ಲಿ ಸಾಗಲಿದ್ದಾನೆ.
ಮುಂದಿನ ವರ್ಷ ಅಂಬಾರಿ ಹೊತ್ತರೆ ಮುಗಿಯಿತು:
ದಸರಾ ಆನೆಗಳಿಗೂ ಶತಮಾನದ ನಂಟು ಇದೆ. ಎಲ್ಲೆಡೆ ಹೊಸ ಪೀಳಿಗೆ ಪ್ರವೇಶಿಸಿದಂತೆ ಮೈಸೂರಿನ ಆನೆಗಳಲ್ಲೂ ಬದಲಾವಣೆ ಆಗುತ್ತಿದೆ. ಆದರೆ, ಈಗ ಇರುವ ಹಳೆಯ ಆನೆಗಳ ಪೈಕಿ ಅಭಿಮನ್ಯುನೇ ಹಿರಿಯ. 59 ವರ್ಷ ವಯಸ್ಸಿನ ಅಭಿಮನ್ಯು ಮುಂದಿ ವರ್ಷ ಅಂಬಾರಿ ಹೊತ್ತರೆ ಮುಗಿಯಿತು. ಏಕೆಂದರೆ ಅರಣ್ಯ ಅಧಿಕಾರಿಗಳು ಹೇಳುವಂತೆ 60 ವರ್ಷ ತುಂಬಿದ ಆನೆಗಳಿಗೆ ನಿಯಮದಂತೆ ನಿವೃತ್ತಿ ಕೊಡಬೇಕು. ಅಭಿಮನ್ಯುವಿಗೆ ಈಗ 59 ವರ್ಷ ವಯಸ್ಸಾಗಿದ್ದು, ಮುಂದಿನ ವರ್ಷ 60ನೇ ವಯಸ್ಸಿಗೆ ಕಾಲಿಡಲಿದ್ದಾನೆ. ಮುಂದಿನ ವರ್ಷ ಅಂಬಾರಿ ಹೊತ್ತರೆ ಅಲ್ಲಿಗೆ ಅಭಿಮನ್ಯು ಇತಿಹಾಸ ಪುಟ ಸೇರಿಕೊಳ್ಳಲಿದ್ದಾನೆ ಎನ್ನುತ್ತಾರೆ ಡಿಸಿಎಫ್ ಪ್ರಭು. ಇದನ್ನೂ ಓದಿ: 6ನೇ ಬಾರಿ ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು ಬಗ್ಗೆ ನಿಮಗೆಷ್ಟು ಗೊತ್ತು?
ಅಭಿಮನ್ಯು ಹೆಮ್ಮರವಾಗಿ ಬೆಳೆದಿದ್ದು ಹೇಗೆ?
1951ರ ಸಮಯದಲ್ಲಿ ಸುರ್ಗುಜಾ ಮಧ್ಯಪ್ರದೇಶದ ಭಾಗವಾಗಿತ್ತು. ಆದ್ರೆ 2000 ಇಸವಿಯ ನಂತರ ಛತ್ತಿಸ್‌ಘಡದ ಜಿಲ್ಲೆಯಾಗಿ ಸೇರ್ಪಡೆಯಾಯಿತು. ಈ ಸ್ಥಳಕ್ಕೂ ನಮ್ಮ ಕರ್ನಾಟಕಕ್ಕೂ ನಂಟು ಇದೆ. ಅದು ಹೇಗೆ ಅಂತೀರಾ..? ಈ ಹಿಂದೆ ಸುಮಾರು 3 ದಶಕಗಳ ಕಾಲ ಸರ್ಗುಜಾದಲ್ಲಿ ಆನೆಗಳ ಹಾವಳಿ ಮಿತಿ ಮೀರಿತ್ತು. ಆನೆಗಳನ್ನ ಸೆರೆ ಹಿಡಿಯಬೇಕು, ಉಪಟಳ ತಪ್ಪಿಸಬೇಕು ಅನ್ನೋ ಕೂಗು ಸರ್ಗೂಜಾ ಭಾಗದಲ್ಲಿ ಜೋರಾಗಿತ್ತು. ಸ್ಥಳೀಯರ ಒತ್ತಡಕ್ಕೆ ಮಣಿದ ಅಂದಿನ ಮಧ್ಯಪ್ರದೇಶದ ರಾಜ್ಯ ಸರ್ಕಾರ ಆನೆಗಳನ್ನ ಸೆರೆ ಹಿಡಿಯೋದಕ್ಕೇನೋ ಅನುಮತಿ ನೀಡಿತು. ಆದ್ರೆ ಅವುಗಳನ್ನ ಸೆರೆ ಹಿಡಿಯುವ ಕಾರ್ಯಾಚರಣೆ ಅಷ್ಟು ಸುಲಭವಾಗಿರಲಿಲ್ಲ. ಆಗ ಮಧ್ಯಪ್ರದೇಶದ ಚಿತ್ತ ಹಾಯಿಸಿದ್ದು, ಕರ್ನಾಟಕದತ್ತ. ಖೆಡ್ಡಕ್ಕೆ ಕೆಡವುವ ಕಾರ್ಯಾಚರಣೆಯಲ್ಲಿ ಕರ್ನಾಟಕದ ಆನೆಗಳು ಆಗಲೇ ಬಲಶಾಲಿಗಳಾಗಿ ಗುರುತಿಸಿಕೊಂಡಿದ್ದವು. ಇಲ್ಲಿಂದ ಆನೆಗಳನ್ನ ಕರೆದುಕೊಂಡು ಬಂದು ಆನೆಗಳನ್ನ ಸೆರೆಹಿಡಿಯುವ ತೀರ್ಮಾನಕ್ಕೆ ಅಲ್ಲಿನ ಸರ್ಕಾರ ಮುಂದಾಯಿತು. ಅದರಂತೆ ಇಂದಿನ ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು ಸೇರಿ ಹಲವು ಆನೆಗಳ ತಂಡವನ್ನ ಸರ್ಗುಜಾಕ್ಕೆ ಕರೆದೊಯ್ಯಲಾಯ್ತು. ನೀರಿಕ್ಷೆಯಂತೆ ನಮ್ಮ ಆನೆಗಳು ಸರ್ಗುಜಾದಲ್ಲಿ ಸುಮಾರು 42 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಯಶಸ್ವಿಯಾದವು. ಈ ಆನೆ ಸೆರೆ ಕಾರ್ಯಾಚರಣೆ ಆಗ The Last Migration – Wild Elephant Captureʼ ಸಾಕ್ಷ್ಯಚಿತ್ರವಾಗಿ ರೂಪುಗೊಂಡಿತು. ಇದು ನಮ್ಮ ಅಭಿಮನ್ಯುವಿನ ಮೇಲಿನ ಅಭಿಮಾನ ಹೆಚ್ಚಿಸಿ ಈಗಲೂ ಅಪರೇಷನ್ ಎಂದರೆ ʻಅಭಿಮನ್ಯುʼ ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಆದ್ರೆ ಇನ್ನೊಂದು ವರ್ಷ ಕಳೆದರೆ ಆಮೇಲೆ ಅಭಿಮನ್ಯು ಅಂಬಾರಿ ಹೊರುವ ಸೌಭಾಗ್ಯದಿಂದ ದೂರವಾಗಲಿದ್ದಾನೆ ಅನ್ನೋದು ವಿಷಾದನೀಯ.
ಅಂಬಾರಿ ಹೊತ್ತ ಆನೆಗಳು ಅಜರಾಮರ:
ಮೈಸೂರು ದಸರಾ ಮಹೋತ್ಸವದಲ್ಲಿ ಹಲವು ಆನೆಗಳು ಭಾಗಿಯಾಗಿವೆ. ಇಂತ ಆನೆಗಳ ಪಟ್ಟಿ ನೂರಕ್ಕೂ ಅಧಿಕ. ಆದ್ರೆ ಅಂಬಾರಿ ಹೊತ್ತ ಆನೆಗಳ ಸಂಖ್ಯೆ ಕಡಿಮೆ. ಇದರಲ್ಲಿ ಶತಮಾನಗಳಷ್ಟು ಹಳೆಯಾದ ಜಯಮಾರ್ತಾಂಡ ಆನೆಯೇ ಅತ್ಯಂತ ಹಿರಿಯ. ಈತನೇ ಅಂಬಾರಿ ಹೊತ್ತ ಮೊದಲಿಗ. ಹಲವಾರು ವರ್ಷ ಮಾರ್ತಾಂಡ ಯಶಸ್ವಿಯಾಗಿ ತನ್ನ ಜವಾಬ್ದಾರಿ ನಿಭಾಯಿಸಿ ಮಹಾರಾಜರ ಪ್ರೀತಿಗೂ ಪಾತ್ರನಾಗಿದ್ದ. ಈಗಲೂ ಅರಮನೆಯ ದೊಡ್ಡ ದ್ವಾರದ (ಜಯಮಾರ್ತಾಂಡ ದ್ವಾರ) ರೂಪದಲ್ಲಿ ಅಜರಾಮರನಾಗಿದ್ದಾನೆ. ಆನಂತರ ವಿಜಯಬಹದ್ದೂರ್, ರಾಮಪ್ರಸಾದ್, ನಂಜುಂಡ, ಐರಾವತ, ಮೋತಿಲಾಲ್, ರಾಜೇಂದ್ರ, ಬಿಳಿಗಿರಿ, ದ್ರೋಣ, ಬಲರಾಮ, ಅರ್ಜುನನ ನಂತರ ಅಭಿಮನ್ಯು ಈ ಸ್ಥಾನ ಅಲಂಕರಿಸಿದ್ದಾನೆ.
ಕೆಲ ಆನೆಗಳ ಅಕಾಲಿಕ ಮರಣ
ಇನ್ನು ದಸರೆಯಲ್ಲಿ ಪಾಲ್ಗೊಂಡು ವಿಶ್ವವಿಖ್ಯಾತಿಯಾಗಿದ್ದ ಆನೆಗಳ ಪೈಕಿ ಕೆಲ ಆನೆಗಳು ಅಕಾಲಿಕ ಮರಣಕ್ಕೆ ತುತ್ತಾಗಿ ಕಹಿ ಸುದ್ದಿ ನೀಡಿದ ಘಟನೆಗಳೂ ನಮ್ಮ ಕಣ್ಣಮುಂದಿವೆ. ಹೌದು. ಈ ಹಿಂದೆ ದ್ರೋಣ ಆನೆ ವಿದ್ಯುತ್ ದುರಂತದಿಂದ ಸಾವನ್ನಪ್ಪಿತ್ತು. 2023ರಲ್ಲಿ ಎಲ್ಲರ ಮನೆ ಮಾತಾಗಿದ್ದ ಅರ್ಜುನ ಆನೆ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಹಾಸನದಲ್ಲಿ ಕಾಡಾನೆ ತಿವಿತದಿಂದ ಸಾವನ್ನಪ್ಪಿತ್ತು. ಕೋಟ್ಯಂತರ ಅಭಿಮಾನಿಗಳು ಅರ್ಜುನನ್ನ ನೆನೆದು ಕಣ್ಣೀರಿಟ್ಟಿದ್ದರು. ಇದೀಗ ಸರ್ಕಾರ ಅರ್ಜುನನ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿಯನ್ನೂ ಘೋಷಣೆ ಮಾಡಿದೆ. ಇದಕ್ಕೆ ಒಂದು ವರ್ಷದ ಮುನ್ನವೇ ಅಂಬಾರಿ ಹೊರುವ ಆನೆಗಳ ಸಾಲಿನಲ್ಲಿದ್ದ ಗೋಪಾಲಕೃಷ್ಣ ಆನೆಯೂ ಅಯ್ಯಪ್ಪ ಎಂಬ ಆನೆ ಜೊತೆಗೆ ಕಾದಾಟ ನಡೆಸಿ ಸಾವನ್ನಪ್ಪಿತ್ತು. ದಸರೆ, ಗಜಪಯಣ ಬಂತೆಂದರೆ, ಆನೆ ಪ್ರಿಯರಿಗೆ ಇದು ಮರೆಯಲಾಗದ ಕಹಿ ಘಟನೆ. ಇದನ್ನೂ ಓದಿ: ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್
ಅಭಿಮನ್ಯು ನಂತರದ ಯಜಮಾನ ಯಾರು?
ದಸರಾ ಪ್ರತಿ ವರ್ಷದ ನಾಡ ಹಬ್ಬ. ಮೈಸೂರು ದಸರಾವೆಂದರೆ ಅದು ಜಂಬೂ ಸವಾರಿಯೂ ಹೌದು. ಅಭಿಮನ್ಯು ನಿವೃತ್ತಿ ನಂತರ ಹಳೆ ತಲೆಮಾರಿನ ಆನೆಗಳ ಕೊಂಡಿ ಮುಗಿಯಲಿದೆ. ಬಳಿಕ ಹೊಸ ತಲೆಮಾರಿನ ಆನೆಗಳದ್ದೇ ಕಾಲ. 2026ರ ನಂತರ ಹೊಸ ಕ್ಯಾಪ್ಟನ್ ಬೇಕೇ ಬೇಕು. ಇದಕ್ಕಾಗಿ ಈಗಿನಿಂದಲೇ ಅರಣ್ಯ ಇಲಾಖೆ ತಯಾರಿಯನ್ನೂ ಮಾಡಿಕೊಂಡಿದೆ. ದಶಕದ ಹಿಂದೆಯಷ್ಟೆ ಸೆರೆ ಸಿಕ್ಕು ನಾಲೈದು ವರ್ಷದಿಂದ ದಸರಾಕ್ಕೆ ಬರುತ್ತಿರುವ ಆನೆಗಳಿಗೂ ಅಂಬಾರಿ ಹೊರುವ ಅವಕಾಶ ಸಿಗಲಿದೆ. ಇದರಲ್ಲಿ ಧನಂಜಯ, ಮಹೇಂದ್ರ, ಭೀಮಾ, ಗೋಪಿ, ಪ್ರಶಾಂತ, ಏಕಲವ್ಯ ಆನೆಗಳಿವೆ. ಇವುಗಳಲ್ಲಿ ಧನಂಜಯ ಇಲ್ಲವೇ ಮಹೇಂದ್ರಗೆ ಮುಂದಿನ ಅವಕಾಶ ಸಿಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.
ಅಂಬಾರಿ ಆನೆಗಳ ಸಿನಿಮಾ ನಂಟು
ಹಲವು ಆನೆಗಳು ಅಂಬಾರಿ ಹೊತ್ತು ಹೆಸರುವಾಸಿಯಾಗಿವೆ. ಅಲ್ಲದೇ ಸಿನಿಮಾ ನಂಟನ್ನು ಹೊಂದಿರುವುದು ವಿಶೇಷ. ಹೌದು. ಐರಾವತ ಆನೆಯಂತು ಹಾಲಿವುಡ್ ಸಿನಿಮಾದಲ್ಲೇ ನಟಿಸಿ ಸೈ ಎನಿಸಿಕೊಂಡಿದೆ. 1935ರಲ್ಲಿ ತೆರೆ ಕಂಡ ʻದಿ ಎಲಿಫೆಂಟ್ ಬಾಯ್ʼ ಅನ್ನೋ ಚಿತ್ರದಲ್ಲಿ ನಟಿಸಿದ್ದ. ಇನ್ನೂ ಅಣ್ಣಾವ್ರ ಸೂಪರ್ ಹಿಟ್ ಸಿನಿಮಾದಲ್ಲಿ ಕಾಣಿಸಿಕೊಂಡಿರೋದು ರಾಜೇಂದ್ರ ಆನೆ. ಅಣ್ಣಾವ್ರ ಗಂಧದ ಗುಡಿ ಸಿನಿಮಾ ನೋಡುವಾಗೆಲ್ಲ ರಾಜೇಂದ್ರ ಕಣ್ಮುಂದೆ ಬರುತ್ತಾನೆ. ಇನ್ನೂ ಅಭಿಮನ್ಯು ಕೂಡ ವಿಶೇಷ ಸಾಕ್ಷ್ಯಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾನೆ. ದ್ರೋಣ ಆನೆಯೂ ಸ್ಟೋರ್ಡ್ ಆಫ್ ಟಿಪ್ಪು ಸುಲ್ತಾನ್ ಧಾರಾವಾಹಿಯಲ್ಲಿ ಕಾಣಿಸಿಕೊಂಡಿತ್ತು. ಇದನ್ನೂ ಓದಿ: ಕೇಸರಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿರುವ ತಾಯಿ ಚಾಮುಂಡೇಶ್ವರಿ
ಹೀಗೆ ಮೈಸೂರು ದಸರಾದ ಮುಕುಟ ಮಣಿಗಳಂತೆ ಕಾಣಿಸಿಕೊಳ್ಳುವ ದಸರಾ ಆನೆಗಳ ಇತಿಹಾಸ ಅವಿಸ್ಮರಣೀಯವಾಗಿದೆ. ಆದ್ರೆ ಅಭಿಮನ್ಯು ನಂತರ ಯಾರಾಗಲಿದ್ದಾರೆ ಅಂಬಾರಿಯ ಸಾರಥಿ ಅನ್ನೋದಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದೆ.