– ಸಿಎಂ ರೇಸ್‌ನಲ್ಲಿ ನಾಲ್ವರ ಪೈಪೋಟಿ
ಭೋಪಾಲ್: 2003 ರಿಂದ ಮಧ್ಯಪ್ರದೇಶದಲ್ಲಿ ಆಡಳಿತ (2018 ರ ನಂತರ 15 ತಿಂಗಳ ಅವಧಿ ಹೊರತುಪಡಿಸಿ) ನಡೆಸಿಕೊಂಡು ಬಂದಿರುವ ಬಿಜೆಪಿ 2023 ರ ಚುನಾವಣೆಯಲ್ಲೂ ಭರ್ಜರಿ ಗೆಲುವು ದಾಖಲಿಸಿದೆ. ಅಮೋಘ ಜಯ ಸಾಧಿಸಿರುವ ಮಧ್ಯಪ್ರದೇಶದಲ್ಲಿ ಈಗ ಸಿಎಂ ಯಾರಾಗುತ್ತಾರೆ ಎಂಬುದೇ ಪ್ರಶ್ನೆ.
Advertisement
ಮಧ್ಯಪ್ರದೇಶದಲ್ಲಿ ಹಾಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಇದ್ದರೂ, ಇವರನ್ನು ಸಿಎಂ ಅಭ್ಯರ್ಥಿ ಎಂದು ಬಿಜೆಪಿ ಘೋಷಣೆ ಮಾಡಿರಲಿಲ್ಲ. ಇಲ್ಲಿ ಕೇಂದ್ರ ಸಚಿವರು, ಸಂಸದರನ್ನೂ ಕಣಕ್ಕಿಳಿಸಲಾಗಿತ್ತು. ಬಿಜೆಪಿ ತಂತ್ರ, ಸಾಮೂಹಿಕ ನಾಯಕತ್ವ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಫಲ ನೀಡಿತು. ರಾಜ್ಯದ 230 ಸ್ಥಾನಗಳ ಪೈಕಿ ಬಿಜೆಪಿ 163 ಸ್ಥಾನಗಳನ್ನು ಗಳಿಸಿದ್ದು, ಕಾಂಗ್ರೆಸ್ ಕೇವಲ 66ಕ್ಕೆ ಕುಸಿದಿದೆ.
Advertisement
Advertisement
ಬಿಜೆಪಿ ವಲಯದಲ್ಲಿ ದಾಖಲೆ ಬರೆಯುತ್ತಾರಾ ಚೌಹಾಣ್
ಮೂವರು ಕೇಂದ್ರ ಸಚಿವರು ಸೇರಿದಂತೆ ಏಳು ಸಂಸದರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದರೊಂದಿಗೆ ಚೌಹಾಣ್ ಅವರನ್ನು ಸೈಡ್‌ಲೈನ್ ಮಾಡಲಾಗಿದೆ ಎಂದು ಹೇಳಲಾಗಿತ್ತು. ಅಲ್ಲದೇ ಚೌಹಾಣ್‌ಗೆ ಟಿಕೆಟ್ ಕೊಟ್ಟಿದ್ದೂ ತಡವಾಗಿಯೇ. ಮೊದಲ ಪಟ್ಟಿಯಲ್ಲಿ ಇವರ ಹೆಸರೇ ಇರಲಿಲ್ಲ. ಆದರೆ ಬಿಜೆಪಿಯ ಇತಿಹಾಸದಲ್ಲಿಯೇ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದ ಹೆಗ್ಗಳಿಕೆಯನ್ನು ಚೌಹಾಣ್ ಹೊಂದಿದ್ದಾರೆ. ಈ ಕಾರಣದಿಂದಲೂ ಅವರನ್ನು ಮೂಲೆಗುಂಪು ಮಾಡುವ ಯತ್ನ ನಡೆದಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮುಖ್ಯಸ್ಥನ ಸ್ಥಾನಕ್ಕೆ ಕಮಲ್‍ನಾಥ್ ರಾಜೀನಾಮೆ?
Advertisement
ಕೇಂದ್ರ ಸಚಿವರಾದ ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ (ಇಬ್ಬರೂ ರಾಜ್ಯದ ಜನಸಂಖ್ಯೆಯ ಅರ್ಧದಷ್ಟು ಇರುವ ಇತರೆ ಹಿಂದುಳಿದ ವರ್ಗಗಳ ನಾಯಕರು), ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಮತ್ತು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಹೆಸರು ಸಿಎಂ ರೇಸ್‌ನಲ್ಲಿ ಕೇಳಿಬರುತ್ತಿದೆ.
ಸಿಎಂ ರೇಸ್‌ನಲ್ಲಿರುವವರ ಪೈಕಿ ಇಬ್ಬರು ಬ್ರಾಹ್ಮಣ ನಾಯಕರು ಸೇರಿದ್ದಾರೆ. ಮಧ್ಯಪ್ರದೇಶ ರಾಜ್ಯಾಧ್ಯಕ್ಷರೂ ಆದ ಸಂಸದ ವಿ.ಡಿ. ಶರ್ಮಾ ಹಾಗೂ ಐದನೇ ಬಾರಿಗೆ ಶಾಸಕ ಮತ್ತು ಸಚಿವರೂ ಆದ ರಾಜೇಂದ್ರ ಶುಕ್ಲಾ ಇಬ್ಬರೂ ವಿಂಧ್ಯಾ ಪ್ರದೇಶದಿಂದ ಬಂದವರು.
ಅಮಿತ್ ಶಾ ನಿಕಟವರ್ತಿಗೆ ಪಟ್ಟ?
ವಿಜಯವರ್ಗಿಯಾ ಮಾಲ್ವಾ-ನಿಮಾರ್ ಪ್ರದೇಶದಿಂದ ಬಂದವರು. ಆ ಭಾಗದಲ್ಲಿ ಬಿಜೆಪಿ 66 ಸ್ಥಾನಗಳ ಪೈಕಿ 47 ಸ್ಥಾನಗಳನ್ನು ಗೆದ್ದಿದೆ. ಇವರು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ನಿಕಟವರ್ತಿ. ಆದರೆ ಪಶ್ಚಿಮ ಬಂಗಾಳದಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಇವರ ವಿರುದ್ಧವೂ ಆರೋಪ ಕೇಳಿಬಂದಿದೆ. ಇದು ಮುಖ್ಯಮಂತ್ರಿ ಆಗುವ ಇವರ ಕನಸಿಗೆ ಅಡ್ಡಗಾಲಾಗಿದೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಹಾವು ಏಣಿಯಾಟ – ಅತಿದೊಡ್ಡ, ಅತಿಸಣ್ಣ ನಿರ್ಣಾಯಕ ಗೆಲುವುಗಳಿವು
ಮಧ್ಯಪ್ರದೇಶದಲ್ಲಿ ಪಕ್ಷದ ಗೆಲುವಿನಲ್ಲಿ ಚೌಹಾಣ್ ಅವರ ಲಾಡ್ಲಿ ಬೆಹ್ನಾ ಯೋಜನೆ ಪಾತ್ರ ವಹಿಸಿತ್ತು ಎಂದು ಹೇಳಲಾಗಿದೆ. ಆದರೆ ರಾಜ್ಯ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಬಿಜೆಪಿಯ ಗೆಲುವಿನ ಹಿಂದಿನ ಏಕೈಕ ಅಂಶವೆಂದರೆ ‘ಮೋದಿ ಮ್ಯಾಜಿಕ್’ ಎಂದು ವಿಜಯವರ್ಗಿಯಾ ಅವರು ಅಭಿಪ್ರಾಯಪಟ್ಟಿದ್ದಾರೆ.
ಸಿಎಂ ಕಿರೀಟ ಧರಿಸ್ತಾರಾ ಸಿಂಧಿಯಾ?
ಬಿಜೆಪಿಯ ಗೆಲುವಿನಲ್ಲಿ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪಾತ್ರವೂ ಮಹತ್ವದ್ದು ಎನ್ನಲಾಗಿದೆ. ಗ್ವಾಲಿಯರ್ ರಾಜಮನೆತನದಲ್ಲಿ ಜನಿಸಿದ ಸಿಂಧಿಯಾ ಅವರು, ರಾಜ್ಯದ ವರ್ಚಸ್ವಿ ಹಾಗೂ ಪ್ರಭಾವಿ ನಾಯಕನೂ ಹೌದು. 2002 ರಲ್ಲಿ ಗುನಾ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದು, ಮೊದಲ ಬಾರಿಗೆ ಕಾಂಗ್ರೆಸ್ ಸಂಸದರಾದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದರೂ, ಸಿಎಂ ಕಮಲ್‌ನಾಥ್ ವಿರುದ್ಧದ ಮುನಿಸು ಮತ್ತು ಸಿಎಂ ಸ್ಥಾನ ಸಿಗಲಿಲ್ಲವೆಂಬ ಸಿಟ್ಟಿನಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡರು.
ಈ ಬಾರಿ ಬಿಜೆಪಿಯ ಗೆಲುವಿನಲ್ಲಿ ಸಿಂಧಿಯಾ ಪ್ರಮುಖ ಪಾತ್ರ ವಹಿಸಿದ್ದಾರೆ. ಗ್ವಾಲಿಯರ್-ಚಂಬಲ್ ವಲಯದಲ್ಲಿ ಬಿಜೆಪಿ ಅಮೋಘ ಬೆಂಬಲ ಸಿಗುವಂತೆ ಮಾಡಿದ್ದಾರೆ. ಈ ಭಾಗದಲ್ಲಿ 2018 ರಲ್ಲಿ ಬಿಜೆಪಿ 7 ಸ್ಥಾನ ಗೆದ್ದಿತ್ತು. ಈಗ ಆ ಸಂಖ್ಯೆ 18 ಸ್ಥಾನಗಳಿಗೆ ಏರಿದೆ. 2018 ರಲ್ಲಿ ಕಾಂಗ್ರೆಸ್ ಗೆಲುವಿನ ಹಿಂದೆಯೂ ಸಿಂಧಿಯಾ ಪ್ರಾಬಲ್ಯವಿರುವ ಪ್ರದೇಶಗಳೇ ಕಾರಣವಾಗಿದ್ದವು. ಆದರೆ ಈ ಬಾರಿ ಈ ಮತಗಳು ಬಿಜೆಪಿಯತ್ತ ಕ್ರೋಢೀಕರಣಗೊಂಡವು. ಬಿಜೆಪಿಯ ಗೆಲುವು ಸಿಂಧಿಯಾರನ್ನು ಮತ್ತಷ್ಟು ಬಲಶಾಲಿಯಾಗಿಸಿದ್ದು, ‘ಮಹಾರಾಜ’ನ ಕಣ್ಣು ಈಗ ಸಿಎಂ ಕುರ್ಚಿಯತ್ತ ನೆಟ್ಟಿದೆ.
ಆದರೆ ಮಾಜಿ ಕಾಂಗ್ರೆಸ್ ನಾಯಕ ಬಿಜೆಪಿ ಸೇರಿ ಕೇವಲ ಮೂರೂವರೆ ವರ್ಷವಷ್ಟೇ ಆಗಿದೆ. ಅವರನ್ನು ಮುಖ್ಯಮಂತ್ರಿ ಮಾಡುವುದರಿಂದ ಪಕ್ಷದ ಹಿರಿಯರ ಅಸಮಾಧಾನಕ್ಕೆ ಕಾರಣವಾಗಬಹುದು. ಇದು ಮುಂಬರುವ ಲೋಕಸಭಾ ಚುನಾವಣಾ ಮೇಲೆ ಪರಿಣಾಮ ಬೀರಬಹುದು. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವು – ಜೋತಿರಾದಿತ್ಯ ಸಿಂಧಿಯಾ ಬಣಕ್ಕೆ ಖುಷಿ ಕೊಡದ ಫಲಿತಾಂಶ
ರೇಸ್‌ನಲ್ಲಿ ಕೇಂದ್ರ ಸಚಿವ
ಕೇಂದ್ರ ಕೃಷಿ ಸಚಿವ ಮತ್ತು ಪಕ್ಷದ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಮುಖ್ಯಸ್ಥರಾಗಿರುವ ನರೇಂದ್ರ ಸಿಂಗ್ ತೋಮರ್ ಕೂಡ ಸಿಎಂ ಸ್ಥಾನಕ್ಕೆ ಪ್ರಬಲ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಕೋಟ್ಯಂತರ ರೂ. ನಗದು ಡೀಲ್ ವೀಡಿಯೋ ಮೂಲಕ ಅವರ ಪುತ್ರ ದೇವೇಂದ್ರ ಸಿಂಗ್ ತೋಮರ್ ವಿವಾದಕ್ಕೆ ಸಿಲುಕಿದ್ದಾರೆ. ಇದು ತೋಮರ್ ಅವರಿಗೆ ಸಂಕಷ್ಟ ತಂದೊಡ್ಡಿದೆ.