ಪಹಲ್ಗಾಮ್ ದಾಳಿಯಲ್ಲಿ ಸಾವನ್ನಪ್ಪಿದ 26 ಮಂದಿ ಯಾರು? – ಸಂಪೂರ್ಣ ಮಾಹಿತಿ ಇಲ್ಲಿದೆ

Public TV
5 Min Read
pahalgam attack from karnataka

ಶ್ರೀನಗರ: ಜಮ್ಮು ಕಾಶ್ಮೀರದ (Jammu Kashmir) ಪಹಲ್ಗಾಮ್‌ನಲ್ಲಿ (Pahaglam) ನಡೆದ ಭಯೋತ್ಪಾದಕರ ಹಿಂದೂಗಳ ನರಮೇಧದಲ್ಲಿ ಮೂವರು ಕನ್ನಡಿಗರು ಸೇರಿ ಒಟ್ಟು 26 ಜನರು ಬಲಿಯಾಗಿದ್ದು, ಆ 26 ಮಂದಿ ಯಾರು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಅಮೆರಿಕ ಮೂಲದ ಟಿಸಿಎಸ್ ಟೆಕ್ಕಿ ಬಿತನ್, ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಮತ್ತು ಐಎಎಫ್ ಅಧಿಕಾರಿ ತೇಜ್ ಹೈಲ್ಯಾಂಗ್ ಸೇರಿದಂತೆ ಒಟ್ಟು 26 ಜನರ ಹೆಸರನ್ನು ಅಧಿಕಾರಿಗಳು ಬಿಡುಗಡೆಗೊಳಿಸಿದ್ದಾರೆ.

ದಾಳಿಯಲ್ಲಿ 26 ಜನರು ಸಾವನ್ನಪ್ಪಿರುವ ಕುರಿತು ಅಧಿಕಾರಿಗಳು ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ಅಮೆರಿಕ ಮೂಲದ ಕೋಲ್ಕತ್ತಾದ ಟೆಕ್ಕಿ, ಬಿಹಾರದ ಅಬಕಾರಿ ಇನ್ಸ್ಪೆಕ್ಟರ್, ಕರ್ನಾಟಕದ ರಿಯಲ್ ಎಸ್ಟೇಟ್ ಏಜೆಂಟ್, ಒಡಿಶಾದ ಅಕೌಂಟೆಂಟ್, ನೌಕಾಪಡೆಯ ಅಧಿಕಾರಿಯೊಬ್ಬರು ತಮ್ಮ ಕುಟುಂಬಗಳೊಂದಿಗೆ ಪಹಗ್ಲಾಮ್‌ನ ಸುಂದರ ದೃಶ್ಯವನ್ನು ಆನಂದಿಸುತ್ತಿದ್ದಾಗ ಪೈಶಾಚಿಕ ದಾಳಿಗೆ ಬಲಿಯಾಗಿದ್ದಾರೆ.

pahalgam attack

ಮೃತರ ಪೈಕಿ ಮಹಾರಾಷ್ಟ್ರದ ಅತುಲ್, ಸಂಜಯ್, ಸಂತೋಷ್, ಕೌಸ್ತುಭ, ಮುಂಬೈನ ಹೆಮಂತ್‌ಮ ದಿಲೀಪ್, ಪಶ್ಚಿಮ ಬಂಗಾಳದ ಕೋಲ್ಕತ್ತಾದ ಬಿತಾನ್, ಸಮೀರ್, ಉತ್ತರಾಖಂಡದ ನೀರಜ್, ಹರಿಯಾಣದ ವಿನಯ್ ನಾರ್ವೆಲ್, ಉತ್ತರ ಪ್ರದೇಶದ ಶುಭಂ, ಬಿಹಾರದ ಮನೀಶ್, ಪಂಜಾಬ್‌ನ ದಿನೇಶ್, ಕೇರಳದ ರಾಮಚಂದ್ರ, ಗುಜರಾತ್‌ನ ಸುಮೀತ್, ಯತೀಶ್, ಶೈಲೇಶ್‌ಬಾಯ್, ಕರ್ನಾಟಕದ ಭರತ್ ಭೂಷಣ್, ಮಧುಸೂದನ್, ಮಂಜುನಾಥ್ ರಾವ್, ಒಡಿಶಾದ ಪ್ರಶಾಂತ್, ಪಹಲ್ಗಾಮ್‌ನ ಸೈಯದ್ ಆದಿಲ್ ಹಸೇನ್, ನೇಪಾಳದ ಸುದೀಪ್, ಆಂಧ್ರಪ್ರದೇಶ ವಿಶಾಖಪಟ್ಟಂನ ಸಚಂದ್ರ, ಅರುಣಾಚಲ ಪ್ರದೇಶದ ತೇಜ್ ಹೈಲ್ಯಾಂಗ್, ಮಧ್ಯಪ್ರದೇಶ ಇಂದೋರ್‌ನ ಸುಶೀಲ್ ಸಾವನ್ನಪ್ಪಿದ್ದಾರೆ.

ಹರಿಯಾಣದ ನೌಕಾಪಡೆಯ ಲೆಫ್ಟಿನೆಂಟ್ ವಿನಯ್ ನರ್ವಾಲ್:
ಮೃತರಲ್ಲಿ ಹರಿಯಾಣದ ಕರ್ನಾಲ್‌ನ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಸಾವನ್ನಪ್ಪಿದ್ದಾರೆ. ಕೇವಲ ನಾಲ್ಕು ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದ ಅವರು ತಮ್ಮ ಪತ್ನಿಯೊಂದಿಗೆ ಹನಿಮೂನ್‌ಗೆ ಹೋಗಿದ್ದಾಗ ಈ ದುರಂತ ನಡೆದಿದೆ. ಈ ಕುರಿತು ವಿನಯ್ ಪತ್ನಿ ಹಿಮಾಂಶಿ ಮಾತನಾಡಿ, ನಾವು ಭೇಲ್ಪುರಿ ತಿನ್ನುತ್ತಿದ್ದೆವು, ಆ ಸಮಯದಲ್ಲಿ ಬಂದೂಕುಧಾರಿಯೊಬ್ಬರು ಬಂದು, ನನ್ನ ಗಂಡ ಮುಸ್ಲಿಂ ಅಲ್ಲ ಎಂದು ತಿಳಿಯುತ್ತಿದ್ದಂತೆಯೇ ಅವರ ಮೇಲೆ ಗುಂಡು ಹಾರಿಸಿದರು ಎಂದು ಹೇಳಿದರು.

Pahalgam terror attack vinay narvel 1

ಗುಪ್ತಚರ ಬ್ಯೂರೋ ಅಧಿಕಾರಿ ಮನೀಶ್ ರಂಜನ್:
ದಾಳಿಯಲ್ಲಿ ಐಎಎಫ್ ಅಧಿಕಾರಿ ತೇಜ್ ಹೈಲ್ಯಾಂಗ್ ಮತ್ತು ಬಂಗಾಳದ ಪುರುಲಿಯಾ ಜಿಲ್ಲೆಯ ಗುಪ್ತಚರ ಬ್ಯೂರೋ ಅಧಿಕಾರಿ ಮನೀಶ್ ರಂಜನ್ ಸಾವನ್ನಪ್ಪಿದ್ದಾರೆ. ಪ್ರಸ್ತುತ ಹೈದರಾಬಾದ್‌ಗೆ ನಿಯೋಜನೆಗೊಂಡಿರುವ ರಂಜನ್, ಕುಟುಂಬ ಸಮೇತ ಜಮ್ಮು ಮತ್ತು ಕಾಶ್ಮೀರದಲ್ಲಿ ರಜೆ ಕಳೆಯುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

Pahalgam terror attack manish ranjan

ಕರ್ನಾಟಕದ ಮೂವರು:
ಬೆಂಗಳೂರು ಮೂಲದ ಟೆಕ್ಕಿ ಭರತ್ ಭೂಷಣ್ ಕೂಡ ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಿ, ಉಗ್ರರ ಅಟ್ಟಹಾಸಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಶುಕ್ರವಾರ ಬೆಂಗಳೂರಿನಿಂದ ವೆಕೆಷನ್‌ಗಾಗಿ ಭರತ್ ಭೂಷಣ್, ಪತ್ನಿ, ಹಾಗೂ ಮೂರು ವರ್ಷದ ಮಗ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ನಾಲ್ಕೈದು ದಿನಕ್ಕೆ ಪ್ರವಾಸಕ್ಕೆ ತೆರಳಿದ್ದ ಕುಟುಂಬ ಗುರುವಾರ ಮಧ್ಯಾಹ್ನ ಬೆಂಗಳೂರಿಗೆ ವಾಪಸ್ ಆಗಬೇಕಿತ್ತು. ಆದರೆ ಮಂಗಳವಾರ ನಡೆದ ಉಗ್ರರ ಗುಂಡಿನ ದಾಳಿಯಿಂದ ಭರತ್ ಭೂಷಣ್ ಪ್ರಾಣಪಕ್ಷಿ ಹಾರಿಹೋಗಿದೆ.

pahalgam terror attack Bharath Bushan

ದಕ್ಷಿಣ ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್ ಕಣಿವೆಯಲ್ಲಿ ಉಗ್ರರು ನಡೆಸಿದ ನಡೆದ ಹಿಂದೂಗಳ ನರಮೇಧದಲ್ಲಿ ಬೆಂಗಳೂರಿನ ಮಧುಸೂದನ್ ಬಲಿಯಾಗಿದ್ದಾರೆ. ಮೂಲತಃ ಆಂಧ್ರದ ನೆಲ್ಲೂರಿನವರಾದ ಮಧುಸೂದನ್ ರಾಮಮೂರ್ತಿ ನಗರದಲ್ಲಿ ವಾಸವಾಗಿದ್ದರು. ಎರಡು ದಿನದ ಹಿಂದೆ ಕಾಶ್ಮೀರಕ್ಕೆ ಕುಟುಂಬ ತೆರಳಿತ್ತು.

pahalgam terror attack madhusudhan

ಮಂಜುನಾಥ್ ರಾವ್ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಕುಣಿಮಕ್ಕಿ ಮೂಲದವರು. ಅವರ ತಂದೆ ಶಿವಮೊಗ್ಗದ ಮ್ಯಾಮ್ ಕೋಸ್ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿದ್ದರು. ಮೂರು ದಿನಗಳ ಹಿಂದೆ ಮಂಜುನಾಥ್ ರಾವ್ ಪತ್ನಿ, ಮಗನನ್ನು ಕರೆದುಕೊಂಡು ಕಾಶ್ಮೀರ ಪ್ರವಾಸ ಕೈಗೊಂಡಿದ್ದರು. ಮಗನ ಪಿಯುಸಿ ಪರೀಕ್ಷೆ ಮುಗಿದ ಬೆನ್ನಲ್ಲೇ 6 ದಿನಗಳ ಪ್ಯಾಕೇಜ್ ಪ್ರವಾಸ ಕೈಗೊಂಡಿದ್ದರು. ಎರಡು ದಿನಗಳ ಹಿಂದೆ ಸಂಬಂಧಿ ಅಶೋಕ್‌ಗೆ ಕರೆ ಮಾಡಿದ್ದ ಮಂಜುನಾಥ್ ಏ.24ರಂದು ವಾಪಸ್ ಬರುವುದಾಗಿ ಹೇಳಿದ್ದರು. ಆದ್ರೆ ದುರದೃಷ್ಟವಶಾತ್ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.

pahalgam terror attack manjunath

ಮಹಾರಾಷ್ಟ್ರದ ಸಂತೋಷ್ ಜಗದಾಳೆ & ಕೌಸ್ತುಭ್ ಗನ್ಬೋಟೆ:
ಮಹಾರಾಷ್ಟ್ರದ ಪುಣೆಯ ಉದ್ಯಮಿಗಳಾದ ಸಂತೋಷ್ ಜಗದಾಳೆ ಮತ್ತು ಕೌಸ್ತುಭ್ ಗನ್ಬೋಟೆ ಕುಟುಂಬ ಸಮೇತ ಮಂಗಳವಾರ ಪಹಲ್ಗಾಮ್‌ಗೆ ತೆರಳಿದ್ದರು. ಅದೇ ದಿನ ವಿಧಿ ಅವರಿಬ್ಬರನ್ನು ಗುಂಡಿನ ದಾಳಿಯಲ್ಲಿ ಬಲಿ ಪಡೆದುಕೊಂಡಿದೆ.

Pahalgam terror attack kaustub

ಈ ಕುರಿತು ಸಂತೋಷ್ ಮಗಳು ಮಾತನಾಡಿ, ನಮ್ಮ ಸುತ್ತಲೂ ಹಲವಾರು ಪ್ರವಾಸಿಗರಿದ್ದರು. ಆದರೆ ಭಯೋತ್ಪಾದಕರು ಹಿಂದೂ ಅಥವಾ ಮುಸ್ಲಿಂ ಎಂದು ಕೇಳಿದ ನಂತರ ಪುರುಷನ್ನು ಗುರಿಯಾಗಿಸಿಕೊಂಡು ಬಲಿ ಪಡೆದಿದ್ದಾರೆ ಎಂದರು.

Pahalgam terror attack santosh jagadale

ಒಡಿಶಾದ ಪ್ರಶಾಂತ್ ಸತ್ಪತಿ:
ಒಡಿಶಾದ ಬಾಲಸೋರ್‌ನ ಮೂಲದವರಾದ ಪ್ರಶಾಂತ್ ಸತ್ಪತಿ ಎಂಬುವವರು ತಮ್ಮ ಪತ್ನಿ ಮತ್ತು ಎಂಟು ವರ್ಷದ ಮಗನೊಂದಿಗೆ ಜಮ್ಮು ಕಾಶ್ಮೀರಕ್ಕೆ ತೆರಳಿದ್ದರು. ಈ ವೇಳೆ ಗುಂಡಿನ ದಾಳಿಗೆ ಸಾವನ್ನಪ್ಪಿದ್ದಾರೆ. ಈ ಕುರಿತು ಮೃತನ ಸಹೋದರ ಮಾತನಾಡಿ. ನಾವು ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಿದಾಗ, ಅವರು ನನ್ನ ಸಹೋದರ ಸಾವಿನ್ನಪ್ಪಿರುವ ಕುರಿತು ಮಾಹಿತಿ ನೀಡಿದರು. ಸದ್ಯ ನನ್ನ ಸಹೋದರ ಪತ್ನಿ ಹಾಗೂ ಮಗನ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು.

ಪಶ್ಚಿಮ ಬಂಗಾಳದ ಇಬ್ಬರು
ಅಮೆರಿಕ ಮೂಲದ ಕೋಲ್ಕತ್ತಾದ ಬೈಷ್ಣಬ್ಘಾಟಾ ನಿವಾಸಿಯಾಗಿರುವ ಟಿಸಿಎಸ್ ಟೆಕ್ಕಿ ಬಿತನ್ ಅಧಿಕಾರಿ ತಮ್ಮ ಅಮೆರಿಕದಿಂದ ಹಿಂದಿರುಗಿ ತಮ್ಮ ಪತ್ನಿ ಸೋಹಿನಿ ಅಧಿಕಾರಿ (37) ಮತ್ತು ಅವರ ಮೂರುವರೆ ವರ್ಷದ ಮಗ ಹೃದಾನ್ ಅಧಿಕಾರಿಯೊಂದಿಗೆ ಪಹಲ್ಗಾಮ್ ತೆರಳಿದ್ದರು. ಈ ವೇಳೆ ದಾಳಿಯಲ್ಲಿ ಪ್ರಾಣ ಕಳೆದುಕೊಂಡರು. ಏ.16 ರಿಂದ ಏ.24ರವರೆಗೆ ಕಾಶ್ಮೀರ ಪ್ರವಾಸದ ಯೋಜನೆ ಹಾಕಿಕೊಂಡಿದ್ದರು.

ಈ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬಿತನ್ ಅಧಿಕಾರಿ ಪಶ್ಚಿಮ ಬಂಗಾಳದವರು. ನಾನು ಅವರ ಪತ್ನಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಅವರ ಪಾರ್ಥಿವ ಶರೀರವನ್ನು ಕೋಲ್ಕತ್ತಾಕ್ಕೆ ತರಲು ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.

ಕೋಲ್ಕತ್ತಾ ನಿವಾಸಿ ಸಮೀರ್ ಗುಹಾ ಅವರು ಕೇಂದ್ರದ ಅಂಕಿಅಂಶ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ಪತ್ನಿ ಮತ್ತು ಮಗಳೊಂದಿಗೆ ಕಾಶ್ಮೀರಕ್ಕೆ ಭೇಟಿ ನೀಡಿದಾಗ ಈ ದಾಳಿ ನಡೆದಿದೆ.

Pahalgam terror attack

ಉತ್ತರ ಪ್ರದೇಶದ ಶುಭಂ ದ್ವಿವೇದಿ:
ಪಹಲ್ಗಾಮ್ ದಾಳಿಗೂ ಮುಂಚೆ ಶುಭಂ ಮತ್ತು ಅವರ ಪತ್ನಿ ಮ್ಯಾಗಿ ತಿನ್ನುತ್ತಿದ್ದರು. ಈ ವೇಳೆ ಸಮವಸ್ತ್ರದಲ್ಲಿದ್ದ ಇಬ್ಬರು ಪುರುಷರು ಅವರ ಬಳಿಗೆ ಬಂದು, ನೀವು ಮುಸ್ಲಿಮರಾ ಎಂದು ಕೇಳಿದರು. ಬಳಿಕ ಇಸ್ಲಾಮಿಕ್ ನಂಬಿಕೆಯ ಘೋಷಣೆಯಾದ ಕಲೀಮಾವನ್ನು ಪಠಿಸುವಂತೆ ಒತ್ತಾಯಿಸಿದರು. ಈ ಕುರಿತು ಶುಭಂ ತಂದೆ ಮಾತನಾಡಿ, ಎರಡು ತಿಂಗಳ ಹಿಂದೆ ಶುಭಂ ಮದುವೆಯಾಗಿತ್ತು. ಮಗ ಮತ್ತು ಸೊಸೆ ಕಾಶ್ಮೀರಕ್ಕೆ ಹೋಗಿದ್ದರು. ಇಂದು ವಾಪಸ್ಸಾಗಬೇಕಿತ್ತು. ಆದರೆ ಈ ಘೋರ ದುರಂತ ನಡೆದಿದೆ ಎಂದರು.

Pahalgam terror attack shubam

ಗುಜರಾತ್‌ನ ಮೂವರು:
ಭಯೋತ್ಪಾದಕ ದಾಳಿಯಲ್ಲಿ ಗುಜರಾತ್‌ನ ಭಾವನಗರದ ಯತೀಶ್‌ಭಾಯ್ ಮತ್ತು ಅವರ ಮಗ ಸ್ಮಿತ್ ಸಾವನ್ನಪ್ಪಿದ್ದಾರೆ. ಓರ್ವ ಗಾಯಗೊಂಡಿರುವುದಾಗಿ ಗುಜರಾತ್ ಸರ್ಕಾರ ತಿಳಿಸಿದ್ದು, ಶೀಘ್ರವೇ ಗಾಯಾಳುವನ್ನು ಸುರಕ್ಷಿತವಾಗಿ ಕರೆತರಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಇನ್ನೂ ಗುಜರಾತ್‌ನ ಸೂರತ್‌ನವರಾದ ಶೈಲೇಶ್ ಕಲ್ಥಿಯಾ ಅವರು ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ಕಾಶ್ಮೀರಕ್ಕೆ ತೆರಳಿದ್ದರು. ಕುದುರೆ ಸವಾರಿಮಾಡುತ್ತಿದ್ದಾಗ ಕುಟುಂಬದ ಮುಂದೆಯೇ ದಾಳಿಗೀಡಾದರು.

Pahalgam terror attack yashbai and son

ನೇಪಾಳದ ಸುದೀಪ್:
ಪಹಲ್ಗಾಮ್ ದಾಳಿಯಲ್ಲಿ ನೇಪಾಳ ಮೂಲದ ಸುದೀಪ್ ಎಂಬುವವರು ಸಾವನ್ನಪ್ಪಿದ್ದಾರೆ. ಈ ಕುರಿತು ಸುದೀಪ್ ಅವರ ಚಿಕ್ಕಪ್ಪ ದಾಧಿರಾಮ್ ನ್ಯೌಪಾನೆ ದೂರವಾಣಿ ಮೂಲಕ ಮಾತನಾಡಿ, ಸುದೀಪ್ (27) ಕುಟುಂಬದಲ್ಲಿ ಒಬ್ಬನೇ ಮಗ. ಬುತ್ವಾಲ್‌ನಲ್ಲಿರುವ ಮಾಡರ್ನ್ ಸೊಸೈಟಿ ಡೆಂಟಲ್ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದರು.

Pahalgam terror attack sudeep

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಒಂದು ಅಂಗವಾದ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಭಯೋತ್ಪಾದಕರು ಪ್ರವಾಸಿಗರ ಗುರುತಿನ ಚೀಟಿಗಳನ್ನು ಪರಿಶೀಲಿಸಿ, ಮುಸ್ಲಿಮೇತರರೆಂದು ಗುರುತಿಸಿ ಬಳಿಕ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

 

Share This Article