ಬಳ್ಳಾರಿ: ಬಜೆಟ್ ವಿಚಾರ ಇಟ್ಟುಕೊಂಡು ಪ್ರತ್ಯೇಕ ರಾಜ್ಯ ಕೇಳುವ ಶಾಸಕರು, ಹೋರಾಟಗಾರು ಕಮಂಗಿಗಳು ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ದಿವಂಗತ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ 78 ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ಪ್ರತ್ಯೇಕ ರಾಜ್ಯ ಕೇಳುವುದು ಹೇಗಿದೆ ಎಂದರೆ ಪತಿಗೆ ಹೆದರಿಸುವುದಕ್ಕೆ ಪತ್ನಿ ಪದೇ ಪದೇ ಬಾವಿಗೆ ಬೀಳುತ್ತೇನೆ ನೋಡು ಎನ್ನುವಂತಿದೆ ಎಂದು ಹೇಳಿ ಪರೋಕ್ಷವಾಗಿ ಶಾಸಕ ಶ್ರೀರಾಮುಲು, ಉಮೇಶ ಕತ್ತಿ ಸೇರಿದಂತೆ ಹಲವು ನಾಯಕರ ವಿರುದ್ಧ ವ್ಯಂಗ್ಯವಾಡಿದರು.
Advertisement
ಕರ್ನಾಟಕ ಏಕೀಕರಣವಾಗಿ 70 ವರ್ಷಗಳು ಕಳೆದಿವೆ. ಈಗ ಮತ್ತೇ ಪ್ರತ್ಯೇಕ ಮಾಡುವುದು ಹುಡುಗಾಟಿಕೆ ಅಲ್ಲ. ಒಂದು ವೇಳೆ ಕರ್ನಾಟಕ ಒಡೆಯುವ ಕೆಲಸಕ್ಕೆ ಮುಂದಾದರೆ ಅದು ಮಹಾ ಪಾಪದ ಕೆಲಸವಾಗುತ್ತದೆ. ಉತ್ತರ ಕರ್ನಾಟಕ್ಕೆ ಅನ್ಯಾಯವಾಗಿದ್ದರೆ ಚರ್ಚೆ ನಡೆಸಿ, ಹೋರಾಟ ಮಾಡಿ. ಆದರೆ ಅದೂ ಬಿಟ್ಟು ಬಜೆಟ್ ವಿಚಾರ ಇಟ್ಟುಕೊಂಡು ಪ್ರತ್ಯೇಕ ರಾಜ್ಯ ಕೇಳಲು ಮುಂದಾಗುವ ರಾಜಕಾರಣಿಗಳು ಕಮಂಗಿಗಳು ಎಂದು ಹೇಳಿದರು.