ಉಡುಪಿ: ಶ್ರೀಕೃಷ್ಣ ಉಡುಪಿ ಮಠದ ಆರಾಧ್ಯ ದೈವ. ಮುಖ್ಯಪ್ರಾಣ ಊರಿನ ಭಕ್ತರಿಗೆ, ಊರಿಗೆ ಶಕ್ತಿಕೊಡುವ ದೇವರು. ಈ ಇಬ್ಬರಿಗೆ ಪ್ರತಿದಿನ ಕೃಷ್ಣಮಠದಲ್ಲಿ ಪೂಜೆ ನಡೆಯುತ್ತದೆ. ಈ ನಡುವೆ ಎಲ್ಲರ ರಕ್ಷಕನಾಗಿರುವ- ಕಲಿಯುಗದಲ್ಲೂ ಕಾಣುವ ದೇವರು ಎಂದು ಪ್ರಸಿದ್ಧಿ ಪಡೆದಿರುವ ನಾಗರಾಜನಿಗೆ ಢಮರು ಸೇವೆ ನಡೆದಿದೆ. ಇಷ್ಟಕ್ಕೂ ಪಲಿಮಾರು ಪರ್ಯಾಯ ಮುಗಿಯುತ್ತಿರುವ ಸಂದರ್ಭದಲ್ಲಿ ನಡೆದ ವಿಶೇಷ ನಾಗಮಂಡಲ ಸೇವೆಗೊಂದು ಧಾರ್ಮಿಕ ಹಿನ್ನೆಲೆ ಇದೆ.
ನಾಗ ತುಳುವರ ಆರಾಧ್ಯ ಶಕ್ತಿ. ಉಡುಪಿ- ದಕ್ಷಿಣ ಕನ್ನಡದಲ್ಲಿ ನಾಗದೇವರ ಪೂಜೆಗೆ ವಿಶೇಷ ಸ್ಥಾನಮಾನವಿದೆ. ನಾಗಮಂಡಲೋತ್ಸವ ನಾಗರಾಜನಿಗೆ ಬಲು ಪ್ರಿಯವಾದ ಸೇವೆ ಎಂಬೂದು ಕರಾವಳಿಗರ ನಂಬಿಕೆ. ಇಷ್ಟಾರ್ಥ ಸಿದ್ಧಿ, ಕಷ್ಟ ಪರಿಹಾರ, ಹರಕೆ ತೀರಿಸಲು ನಾಗಮಂಡಲ ಸೇವೆ ಮಾಡುವುದು ವಾಡಿಕೆ. ಕಡೆಗೋಲು ಶ್ರೀಕೃಷ್ಣ ಮಠದಲ್ಲಿ ವಿಶೇಷ ನಾಗಮಂಡಲೋತ್ಸವ ನಡೆದಿದೆ.
Advertisement
Advertisement
ಪರ್ಯಾಯ ಪಲಿಮಾರು ಸ್ವಾಮೀಜಿ ಮಠದ ಕಡೆಯಿಂದ ನಾಗಾರಾಧನೆ ನಡೆದಿದೆ. ಬಡಗು ಮಾಳಿಗೆ ಮುಂಭಾಗದ ನಾಗರಾಜಗುಡಿಯಲ್ಲಿ ನಾಗಮಂಡಲ ಸೇವೆ ನಡೆದಿದೆ. ಪರ್ಯಾಯ ವಿದ್ಯಾಧೀಶ ಸ್ವಾಮೀಜಿಯ ಪರ್ಯಾಯ ಜನವರಿ 18ಕ್ಕೆ ಮುಕ್ತಾಯವಾಗಲಿದ್ದು, ಪರ್ಯಾಯ ಪೂಜೆಯಿಂದ ಶ್ರೀಗಳು ಏಳುವ ಮುನ್ನ ನಾಗಮಂಡಲ ನೀಡುವುದು ಸಂಪ್ರದಾಯ.
Advertisement
ಈಗಿನ ಪರ್ಯಾಯ ವಿದ್ಯಾಧೀಶ ಸ್ವಾಮೀಜಿ ಮಾತನಾಡಿ, ವಾದಿರಾಜ ಗುರುಸಾರ್ವಭೌಮರ ಕಾಲದಿಂದ ನಾಗಮಂಡಲ ನಡೆದುಕೊಂಡು ಬಂದಿದೆ. ಸಂಪತ್ತಿನ ರಕ್ಷಕನಿಗೆ ಸೇವೆ ಕೊಡುವುದು ನಮ್ಮ ಕರ್ತವ್ಯ. ಕರಾವಳಿಯ ನಾಸ್ತಿಕ ಕುಟುಂಬವೂ ವರ್ಷಕ್ಕೊಮ್ಮೆಯಾದರೂ ಯಾವುದಾದರೂ ನಾಗಸೇವೆ ಮಾಡದೆ ಇರುವುದಿಲ್ಲ ಎಂದರು.
Advertisement
ಬೃಹತ್ ಮಂಡಲ, ಅದರ ಸುತ್ತಲೂ ಅಡಿಕೆ ಮರದ ಹಿಂಗಾರ, ಮಂಡಲ ಪೂಜೆ ಹಾಲಿಟ್ಟು ಸೇವೆಯ ಮೂಲಕ ನಾಗಮಂಡಲಕ್ಕೆ ಚಾಲನೆ ಸಿಗುತ್ತದೆ. ಅದ್ಧೂರಿ ಮಂಟಪದಲ್ಲಿ ನಾಗಪಾತ್ರಿ ಮತ್ತು ನಾಗ ಕನ್ನಿಕೆಯ ನರ್ತನ ಸೇವೆ ಕಣ್ಣಿಗೆ ಹಬ್ಬ ತರುತ್ತದೆ. ಮಂಡಲದ ಸುತ್ತ ನಾಗಪಾತ್ರಿ ಮತ್ತು ಕನ್ನಿಕೆ ನರ್ತಿಸುತ್ತಾರೆ. ಸರ್ಪಗಳ ಮಿಥುನ ಪ್ರಕ್ರಿಯೆಯೇ ಧಾರ್ಮಿಕ ವಿಧಿಯ ವಸ್ತು. ನಾಗ ಪಾತ್ರಿ ಬುಟ್ಟಿಗಟ್ಟಲೆ ಹಿಂಗಾರವನ್ನು ಅರ್ಪಣೆ ಮಾಡಿಕೊಳ್ಳುವ ಪ್ರಕ್ರಿಯೆ ಜನರನ್ನು ಭಕ್ತಿಕಡಲಲ್ಲಿ ತೇಲುವಂತೆ ಮಾಡಿತು.
ಹಿಂಗಾರದಿಂದ ಹೊರ ಸೂಸುವ ಪರಿಮಳ ಗಂಡು-ಹೆಣ್ಣಿನ ನಡುವಿನ ಸಂತಾನ ಪ್ರಾಪ್ತಿಗೆ ಉಪಯುಕ್ತ ಎಂಬ ನಂಬಿಕೆಯೂ ಜನರಲ್ಲಿದೆ. ಕೃಷ್ಣಮಠದ ನಾಗಮಂಡಲ ಸೇವೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು. ಅಪರೂಪದ ಸೇವೆಯನ್ನು ಕೆಲ ಶ್ರೀಮಂತ ಕುಟುಂಬಗಳು ಮಾಡಿಸುತ್ತದೆ. ಕೃಷ್ಣಮಠದಲ್ಲಿ ಎರಡು ವರ್ಷಕ್ಕೊಮ್ಮೆ ನಾಗಮಂಡಲ ಸೇವೆ ನಡೆದುಕೊಂಡು ಬಂದಿದೆ.