ಮಾಸ್ಕೋ: ಉಕ್ರೇನ್ ದೇಶವನ್ನು ಯುದ್ಧಭೂಮಿಯಲ್ಲಿ ಮಣಿಸಲಾಗದೇ ಕಳೆದೊಂದು ವರ್ಷದಿಂದ ಒದ್ದಾಡುತ್ತಿರುವ ರಷ್ಯಾಗೆ (Russia) ಈಗ ಮನೆಯಲ್ಲಿಯೇ ಬೆಂಕಿ ಬಿದ್ದಿದೆ. ಅಂತರ್ಯುದ್ಧ ಶುರುವಾಗಿದೆ. ಪುಟಿನ್ ಪಾಲಿಗೆ ಅವರ ಪರಮಾಪ್ತ ಯೆವ್ಗೆನಿ ಪ್ರಿಗೋಜಿನ್ (Yevgeny Prigozhin) ಕಂಟಕವಾಗುತ್ತಿದ್ದಾನೆ. ತನ್ನ ಅಧೀನದ ವಾಗ್ನರ್ ಬಾಡಿಗೆ ಸೇನೆಯನ್ನು ಪುಟಿನ್ (Vladimir Putin) ಸರ್ಕಾರದ ವಿರುದ್ಧ ಛೂ ಬಿಟ್ಟಿದ್ದು, ದಂಗೆಗೆ ಕಾರಣವಾಗಿದ್ದಾನೆ.
ವಾಗ್ನರ್ ಸೇನೆ (Wagner Mercenary Group) ದಕ್ಷಿಣ ರಷ್ಯಾದ ರೋಸ್ತೋವ್ ನಗರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಇಡೀ ನಗರದಲ್ಲಿ ವಾಗ್ನರ್ ಸೇನೆಯ ಯುದ್ಧ ಟ್ಯಾಂಕ್‌ಗಳು ಸಂಚರಿಸುತ್ತಿವೆ. ಇದೀಗ ವಾಗ್ನರ್ ಪಡೆ ಮಾಸ್ಕೋ ಕಡೆ ಹೆಜ್ಜೆ ಇಟ್ಟಿದೆ. ಇದನ್ನು ತಡೆಯಲು ರಷ್ಯಾ ಸೇನೆ ಮುಂದಾಗಿದ್ದು, ವಾಗ್ನರ್ ಪಡೆಗಳ ಮೇಲೆ ವಾಯು ದಾಳಿ ನಡೆಸುತ್ತಿದೆ. ಇದಕ್ಕೆ ವಾಗ್ನರ್ ಪಡೆಗಳು ತಿರುಗೇಟು ನೀಡುತ್ತಿವೆ. ರಷ್ಯಾದ ಹಲವು ಸೇನಾ ಕಾಪ್ಟರ್‌ಗಳು ನಾಶವಾಗಿವೆ. ವಾಗ್ನರ್ ಪಡೆ ಹತ್ತಿಕ್ಕಲು ರಷ್ಯಾ ಸೇನೆ ತಮ್ಮದೇ ದೇಶದ ವರ‍್ನೇಜ್ ತೈಲಾಗಾರದ ಮೇಲೆ ಬಾಂಬ್ ದಾಳಿ ನಡೆಸಿದೆ. ದೊಡ್ಡ ಮಟ್ಟದಲ್ಲಿ ಬೆಂಕಿಯ ಜ್ವಾಲೆಗಳು ಎದ್ದಿವೆ. ಗುಂಡಿನ ಚಕಮಕಿ, ಬಾಂಬ್ ದಾಳಿಗಳು ಮುಂದುವರೆದಿವೆ. ಅಷ್ಟಕ್ಕೂ, ರಷ್ಯಾದ ಪುಟಿನ್ ಸರ್ಕಾರಕ್ಕೆ ಕಂಟಕವಾಗಿರುವ ವಾಗ್ನರ್ ಸೇನೆಯ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಯಾರು? ಏನಿದು ವಾಗ್ನರ್ ಗ್ರೂಪ್? ಇದನ್ನೂ ಓದಿ: ಪುಟಿನ್ ಆಪ್ತ ಕೆಂಡ – ರಷ್ಯಾ ಸೈನಿಕರ ವಿರುದ್ಧವೇ ಖಾಸಗಿ ಸೇನೆಯಿಂದ ಬಂಡಾಯ
ಯಾರು ಈ ಪ್ರಿಗೋಜಿನ್?
ಪ್ರಿಗೋಜಿನ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಪರಮಾಪ್ತ. ಅಂತರಂಗದ ಗೆಳೆಯ. ಪುಟಿನ್ ಪಾಲಿನ ಅಡುಗೆ ಭಟ್ಟ ಹಾಗೂ ಫುಡ್ ಕಂಟ್ರಾಕ್ಟರ್. ಈತ 1980ರಲ್ಲಿ ದರೋಡೆ ಕೇಸಲ್ಲಿ 9 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. 1990ರಲ್ಲಿ ಪುಟಿನ್‌ಗೆ ಪ್ರಿಗೋಜಿನ್ ಪರಿಚಯವಾದ. 2000ರಲ್ಲಿ ಪುಟಿನ್ ಅಧ್ಯಕ್ಷರಾಗುತ್ತಲೇ ಪ್ರಿಗೋಜಿನ್ ವಾಣಿಜ್ಯ ವ್ಯವಹಾರ ವಿಸ್ತರಿಸಿದ. 2001ರಿಂದ ನಿರಂತರವಾಗಿ ಪುಟಿನ್ ಅತ್ಯಾಪ್ತ ವರ್ಗದಲ್ಲಿ ಗುರುತಿಸಿಕೊಂಡ.
ರಷ್ಯಾದ ಸೇನೆ, ಶಾಲೆಗಳ ಫುಡ್ ಕಂಟ್ರಾಕ್ಟ್‌ಗಳೆಲ್ಲಾ ಪ್ರಿಗೋಜಿನ್ ಹಿಡಿತದಲ್ಲಿವೆ. 2014ರಲ್ಲಿ ವಾಗ್ನರ್ ಪಿಎಂಸಿ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ. ಕ್ರಿಮಿಯಾ ಆಕ್ರಮಣದಲ್ಲಿ ಲಿಟಲ್ ಗ್ರೀನ್‌ಮ್ಯಾನ್ ರೂಪದಲ್ಲಿ ವಾಗ್ನರ್ ಹಸ್ತ. 2016ರಲ್ಲಿ ಪ್ರಿಗೋಜಿನ್ ಮೇಲೆ ಅಮೆರಿಕಾ ಹಲವು ನಿರ್ಬಂಧಗಳನ್ನು ಹೇರಿತು. 2016ರ ಅಮೆರಿಕಾ ಚುನಾವಣೆಯಲ್ಲಿ ಟ್ರಂಪ್ ಪರ ಪ್ರಿಗೋಜಿನ್ ಪ್ರಚಾರ ಮಾಡಿಸಿದ್ದ. ಅಮೆರಿಕಾದ ಎಫ್‌ಬಿಐನಿಂದ ಪ್ರಿಗೋಜಿನ್ ತಲೆಗೆ 2.50 ಲಕ್ಷ ಡಾಲರ್ ರಿವಾರ್ಡ್ ಘೋಷಿಸಲಾಗಿತ್ತು. ವಾಗ್ನರ್ ಸೇನಾಧಿಪತಿಯಯಾಗಿ ಮತ್ತಷ್ಟು ಬಲಿಷ್ಠವಾಗಿ ಪ್ರಿಗೋಜಿನ್ ಬೆಳೆದ. ಇದನ್ನೂ ಓದಿ: ಟೈಟಾನಿಕ್ ಹಡಗಿನ ಅವಶೇಷ ನೋಡಲು ತೆರಳಿದ್ದ ವಿಶ್ವದ ಐವರು ಶ್ರೀಮಂತರ ದಾರುಣ ಸಾವು
ಕದನದ ಬಗ್ಗೆ ಪ್ರಿಗೋಜಿನ್ ಹೇಳೋದೇನು?
ತಮ್ಮ ವಿಚಾರದಲ್ಲಿ ಪುಟಿನ್ ಎಡವುತ್ತಿದ್ದಾರೆ. ನಾವು ದೇಶದ್ರೋಹಿಗಳಲ್ಲ, ದೇಶಭಕ್ತರು. ನಾವ್ಯಾರಿಗೂ ದ್ರೋಹ ಮಾಡಿಲ್ಲ. ನಮ್ಮಲ್ಲಿ ಯಾರು ಕೂಡ ಶರಣಾಗಲ್ಲ. ಈ ದೇಶ ಭ್ರಷ್ಟಾಚಾರ, ಸುಳ್ಳುಗಳಿಂದ ಹಾಳಾಗಬಾರದು. ಅದಕ್ಕಾಗಿಯೇ ಈ ಕದನ. ಇದು ಸೇನಾ ದಂಗೆಯಲ್ಲ. ನ್ಯಾಯಕ್ಕಾಗಿ ನಡೆಸುತ್ತಿರುವ ಮಾರ್ಚ್ ಎಂದು ಪ್ರಿಗೋಜಿನ್ ಸ್ಪಷ್ಟಪಡಿಸಿದ್ದಾನೆ.
ವ್ಯಾಗ್ನರ್ ಪಡೆ ಎಂದರೇನು?
ವ್ಯಾಗ್ನರ್ ಪಡೆ (Wagner Mercenary) ಎಂಬುದು ಒಂದು ಖಾಸಗಿ ಸೇನೆಯಾಗಿದ್ದು, ಇದನ್ನು ಪ್ಯಾರಾ ಮಿಲಿಟರಿ ಪಡೆ ಎಂದು ಕರೆಯಲಾಗುತ್ತದೆ. ಪುಟಿನ್ ಆಪ್ತ ಪ್ರಿಗೋಜಿನ್ ಈ ಪಡೆಯ ಮುಖ್ಯಸ್ಥನಾಗಿದ್ದಾನೆ. ಇದು ಕಾನೂನು ಬಾಹಿರ ಸೇನಾ ಪಡೆಯಾಗಿದ್ದರೂ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದಂತೆ ಕೆಲಸ ಮಾಡುತ್ತಿದೆ. ಪೂರ್ವ ಉಕ್ರೇನ್‌ನಲ್ಲಿ ರಷ್ಯಾದ ಪರ ಪ್ರತ್ಯೇಕತಾವಾದಿ ಪಡೆಗಳನ್ನು ಬೆಂಬಲಿಸುತ್ತಿದ್ದಾಗ 2014ರಲ್ಲಿ ಮೊದಲ ಬಾರಿಗೆ ಈ ರೀತಿಯ ಪಡೆ ಇದೆ ಎನ್ನುವುದು ಪ್ರಪಂಚಕ್ಕೆ ಗೊತ್ತಾಯಿತು. ಒಟ್ಟು 50 ಸಾವಿರ ಸೈನಿಕರು ಈ ಪಡೆಯಲ್ಲಿದ್ದಾರೆ ಎಂದು ವರದಿಯಾಗಿದೆ.