ಕೇರಳದಲ್ಲಿ ಟಿಪ್ಪು ಸದ್ದು – ಸುಲ್ತಾನ್ ಬತ್ತೇರಿ ಹೆಸರನ್ನು ಬದಲಾಯಿಸುತ್ತೇನೆ ಎಂದ ಬಿಜೆಪಿ ಅಧ್ಯಕ್ಷ ಸುರೇಂದ್ರನ್‌

Public TV
2 Min Read
Kerala BJP Chief K Surendran

ತಿರುವನಂತಪುರಂ: ಕೇರಳದ ಲೋಕಸಭಾ ಚುನಾವಣೆಯಲ್ಲಿ (Kerala Lok Sabha Election) ಟಿಪ್ಪು ಸುಲ್ತಾನ್‌ (Tipu Sulthan) ಹೆಸರು ಸದ್ದು ಮಾಡಿದೆ. ನಾನು ಗೆದ್ದರೆ ಸುಲ್ತಾನ್ ಬತ್ತೇರಿ (Sultan Bathery) ಹೆಸರನ್ನು ಗಣಪತಿವಟ್ಟಂ ಎಂದು ಬದಲಾಯಿಸುವುದು ನನ್ನ ಮೊದಲ ಆದ್ಯತೆ ಎಂದು ವಯನಾಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಂದ್ರನ್‌ (K Surendran) ಘೋಷಿಸಿದ್ದಾರೆ.

ಬಿಜೆಪಿ (BJP) ರಾಜ್ಯಾಧ್ಯಕ್ಷರಾಗಿರುವ ಸುರೇಂದ್ರನ್‌ ಅವರನ್ನು ರಾಹುಲ್‌ ಗಾಂಧಿ (Rahul Gandhi) ಸ್ಪರ್ಧಿಸುತ್ತಿರುವ ವಯನಾಡು (Wayanad) ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ.

ಇಂದಿನ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಯಾರು? ಸುಲ್ತಾನ್‌ ಬತ್ತೇರಿ ಹೆಸರು ಯಾಕೆ ಬಂತು? ಮೊದಲು ಈ ಸ್ಥಳವನ್ನು ಗಣಪತಿವಟ್ಟಂ (Ganapativattam) ಎಂದು ಕರೆಯಲಾಗುತ್ತಿತ್ತು. ಈ ವಿಚಾರ ವಯನಾಡು ಜನತೆಗೆ ತಿಳಿದಿದೆಯೇ ಎಂದು ಪ್ರಶ್ನಿಸಿದರು.  ಇದನ್ನೂ ಓದಿ: ನಮ್ಮ ಬಲಿಷ್ಠ ಸರ್ಕಾರದ ಅವಧಿಯಲ್ಲಿ ಉಗ್ರರು ಅವರ ನೆಲದಲ್ಲೇ ಹತ್ಯೆಯಾಗುತ್ತಿದ್ದಾರೆ: ಮೋದಿ

 

Tipu Sultan

ಸುಲ್ತಾನ್ ಬತ್ತೇರಿ ಎಂಬ ಹೆಸರು ಟಿಪ್ಪು ಸುಲ್ತಾನನ ಆಕ್ರಮಣದ ಭಾಗವಾಗಿ ಹೊರಹೊಮ್ಮಿದೆ. ಸುಲ್ತಾನ್ ಬತ್ತೇರಿಯನ್ನು ಗಣಪತಿವಟ್ಟಂ ಎಂದು ಮರುನಾಮಕರಣ ಮಾಡಬೇಕು. ಇದು ಹಿಂದೂಗಳು ಮತ್ತು ಕ್ರಿಶ್ಚಿಯನ್ನರನ್ನು ಕಗ್ಗೊಲೆ ಮಾಡಿದ ಟಿಪ್ಪು ಸುಲ್ತಾನನ ನಾಡಲ್ಲ. ಕಾಂಗ್ರೆಸ್ ಮತ್ತು ಸಿಪಿಎಂಗಳು ಈಗಲೂ ಕ್ರಿಮಿನಲ್‌ಗಳ ಹೆಸರನ್ನು ಇಡಲು ಬಯಸುತ್ತವೆ ಎಂದು ವಾಗ್ದಾಳಿ ನಡೆಸಿದರು.

ಸುಲ್ತಾನ್‌ ಬತ್ತೇರಿ ಹೆಸರು ಬಂದಿದ್ದು ಹೇಗೆ?
ಈ ಪಟ್ಟಣವನ್ನು ಮೂಲತಃ ಗಣಪತಿವಟ್ಟಂ ಎಂದು ಕರೆಯಲಾಗುತ್ತಿತ್ತು. ಸುಲ್ತಾನ್ ಬತ್ತೇರಿಯ ಪುರಸಭಾ ವೆಬ್‌ಸೈಟ್‌ನ ಪ್ರಕಾರ ಗಣಪತಿ ದೇವಸ್ಥಾನದ ಹೆಸರನ್ನು ಇಡಲಾಗಿತ್ತು. ಸುಲ್ತಾನ್ ಬತ್ತೇರಿಯು ಮೈಸೂರು ಆಳ್ವಿಕೆಯ ಸಮಯದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಡಂಪಿಂಗ್ ಮೈದಾನವಾಗಿತ್ತು ಎಂದು ಕೇರಳ ಪ್ರವಾಸೋದ್ಯಮದ ಅಧಿಕೃತ ವೆಬ್‌ಸೈಟ್ ಹೇಳುತ್ತದೆ.

18ನೇ ಶತಮಾನ ಟಿಪ್ಪು ಸುಲ್ತಾನ್ ಸೇನೆ ಪಟ್ಟಣವನ್ನು ವಶಪಡಿಸಿಕೊಳ್ಳುತ್ತದೆ ಮತ್ತು ದೇವಾಲಯವನ್ನು ಭಾಗಶಃ ನಾಶ ಮಾಡುತ್ತದೆ. ಈಗ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಸ್ವಾಧೀನಪಡಿಸಿಕೊಂಡಿದ್ದು,  ಈಗ ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವೆಂದು ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ಭಾರತದ ಮೊದಲ ಚುನಾವಣೆ 4 ತಿಂಗಳ ಕಾಲ ನಡೆದಿದ್ದು ನಿಮಗೆ ಗೊತ್ತಾ..?

Ganapativattam Sultan Bather

ಟಿಪ್ಪುವಿನ ಸೇನೆಯು ಗಣಪತಿವಟ್ಟಂ ಪಟ್ಟಣವನ್ನು ತನ್ನ ಬ್ಯಾಟರಿಯನ್ನು (ಕ್ಯಾನನ್‌ಗಳ ಸಮೂಹ) ಶೇಖರಿಸುವ ಸ್ಥಳವಾಗಿ ಬಳಸಿಕೊಂಡಿತು. ಬ್ರಿಟಿಷರ ಈ ಜಾಗವನ್ನು ವಶಪಡಿಸಿದ ಬಳಿಕ ಈ ಪಟ್ಟಣವನ್ನು ‘ಸುಲ್ತಾನರ ಬ್ಯಾಟರಿ’ ಎಂದು ಕರೆಯುತ್ತಿದ್ದರು. ಕಾಲಾನಂತರದಲ್ಲಿ ಈ ಹೆಸರು ಸುಲ್ತಾನ್ ಬತ್ತೇರಿಯಾಗಿ ಬದಲಾಯಿತು.

ದೇವಸ್ಥಾನ ಧ್ವಂಸ, ಬಲವಂತದ ಮತಾಂತರ
ಟಿಪ್ಪುವಿನ ಸೇನೆ ದೇವಸ್ಥಾನ ಮತ್ತು ಚರ್ಚುಗಳನ್ನು ಧ್ವಂಸ ಮಾಡಿತು. ಬಲವಂತದ ಧಾರ್ಮಿಕ ಮತಾಂತರದಿಂದ ತಪ್ಪಿಸಿಕೊಳ್ಳಲು ಹಲವು ಮಂದಿ ಆ ಪ್ರದೇಶವನ್ನು ತೊರೆದರು. 25 ಚರ್ಚುಗಳನ್ನು ಟಿಪ್ಪುವಿನ ಸೇನೆ ನಾಶ ಮಾಡಿತು. ಮತಾಂತರ ಮತ್ತು ಚರ್ಚ್‌ಗಳ ನಾಶದಿಂದ ಈ ಭಾಗದಲ್ಲಿ ಪ್ರಬಲವಾಗಿದ್ದ ರೋಮನ್ ಕ್ಯಾಥೋಲಿಕ್‌ ಜನರ ಸಂಖ್ಯೆ ಗಮನಾರ್ಹವಾಗಿ ಇಳಿಕೆಯಾಯಿತು. ಟಿಪ್ಪು ಸುಲ್ತಾನ್ ಮಹಾ ಗಣಪತಿ ದೇವಸ್ಥಾನವನ್ನು ತನ್ನ ಶಸ್ತ್ರಾಸ್ತವನ್ನು ಇರಿಸುವ ಜಾಗವನ್ನಾಗಿ ಬದಲಾಯಿಸಿದ್ದ ಎಂದು ಇತಿಹಾಸದಲ್ಲಿ ಉಲ್ಲೇಖವಿದೆ.

 

Share This Article