ಬೆಂಗಳೂರು: ಪತಿಬೇಕು ಡಾಟ್ ಕಾಮ್ ಮೂಲಕ ಬೇರೆಯದ್ದೇ ಫ್ಲೇವರಿನ ಚಿತ್ರವೊಂದನ್ನು ಕೊಟ್ಟವರು ನಿರ್ದೇಶಕ ರಾಕೇಶ್. ಈ ಕಾರಣದಿಂದಲೇ ಅವರು ಮುಂದೆ ಯಾವ ಚಿತ್ರ ಮಾಡುತ್ತಾರೆಂಬ ಬಗ್ಗೆ ಕುತೂಹಲವಿತ್ತು. ಇದೀಗ ಹೊಸಾ ಚಿತ್ರಕ್ಕಾಗಿ ರಾಕೇಶ್ ಸಂಪೂರ್ಣ ತಯಾರಿ ಮಾಡಿಕೊಂಡಿದ್ದಾರೆ.
ಈ ಚಿತ್ರಕ್ಕೆ ವಿಶೇಷವಾದ ಶೀರ್ಷಿಕೆಯೂ ಪಕ್ಕಾ ಆಗಿದೆ. ಫ್ಯಾನ್ ಆಫ್ ರೆಬೆಲ್ ಸ್ಟಾರ್ ಎಂಬ ಕ್ಯಾಚೀ ಟೈಟಲ್ ರಿಜಿಸ್ಟರ್ ಕೂಡಾ ಆಗಿದೆ. ಆದರೆ ಈ ಸಿನಿಮಾದ ಹೀರೋ ಯಾರೆಂಬ ವಿಚಾರದಲ್ಲಿ ಮಾತ್ರ ನಿರ್ದೇಶಕ ರಾಕೇಶ್ ಮಹಾ ಕುತೂಹಲವೊಂದನ್ನು ಹುಟ್ಟು ಹಾಕಿ ಬಿಟ್ಟಿದ್ದಾರೆ!
ಈ ಚಿತ್ರದಲ್ಲಿ ಹೀರೋ ಆಗಲಿರುವವರು ಅಂಬರೀಶ್ ಅವರ ಆಪ್ತ ವಲಯದಲ್ಲಿದ್ದವರಂತೆ. ಅಂಬಿಗೂ ಕೂಡಾ ಅವರಂದ್ರೆ ತುಂಬಾ ಇಷ್ಟವಿತ್ತು. ಸದ್ಯ ರಾಕೇಶ್ ಅವರು ಬಿಟ್ಟುಕೊಟ್ಟಿರೋದು ಇದೊಂದು ಹಿಂಟ್ ಮಾತ್ರ. ಇದೀಗ ಇದರ ಸುತ್ತಲೇ ನಾನಾ ದಿಕ್ಕಿನ ಚರ್ಚೆ ನಡೆಯುತ್ತಿದೆ. ಅಂಬರೀಶ್ ಆಪ್ತ ವಲಯದಲ್ಲಿದ್ದವರ ಚಿತ್ರಾವಳಿಗಳನ್ನ ಹಲವರು ರಿವೈಂಡ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಏನೇ ತಿಪ್ಪರಲಾಗ ಹೊಡೆದರೂ ಈ ಹೀರೋನನ್ನು ಕಂಡು ಹಿಡಿಯೋದು ಅಷ್ಟು ಸಲೀಸಿನ ಸಂಗತಿಯಲ್ಲ.
ಅಂದಹಾಗೆ ಈ ಚಿತ್ರವನ್ನ ಅಂಬಿ ಅಭಿಮಾನಿಗಳೇ ಸೇರಿಕೊಂಡು ನಿರ್ಮಾಣ ಮಾಡುತ್ತಿರೋದು ವಿಶೇಷ. ಅಂಬರೀಶ್ ಮೇಲೆ ಅಗಾಧ ಅಭಿಮಾನ ಹೊಂದಿದ್ದ ಉದ್ಯಮಿಯೊಬ್ಬರು ಈ ಸಿನಿಮಾಗೆ ಸಾಥ್ ನೀಡುತ್ತಿದ್ದಾರಂತೆ. ಕಡೇಯದಾಗಿ ಅಂಬಿ ಪಾರ್ಥೀವ ಶರೀರವನ್ನ ಅಂತಿಮ ದರ್ಶನಕ್ಕಿಡಲಾಗಿದ್ದ ಮಂಡ್ಯದ ಮೈದಾನದಲ್ಲಿಯೇ ಈ ಚಿತ್ರಕ್ಕೆ ಆರಂಭ ಸಿಗಲಿದೆಯಂತೆ. ಇದೊಂದು ಅಪ್ಪಟ ಮಂಡ್ಯ ಸೀಮೆಯ ಹಳ್ಳಿಗಾಡಿನ ಕಥೆ. ಇದರ ಹೀರೋ ಯಾರೆಂಬುದೂ ಸೇರಿದಂತೆ ಉಳಿಕೆ ವಿವರಗಳು ಹಂತ ಹಂತವಾಗಿ ಹೊರ ಬೀಳಲಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv