ಲೋಕಸಭಾ ಸ್ಪೀಕರ್ (Lok Sabha Speaker) ಆಗಿ ಎನ್‌ಡಿಎ (NDA) ಮೈತ್ರಿಕೂಟದ ಅಭ್ಯರ್ಥಿ ಓಂ ಬಿರ್ಲಾ (Om Birla) ಎರಡನೇ ಬಾರಿಗೆ ಹುದ್ದೆ ಅಲಂಕರಿಸಿದ್ದಾರೆ. ಧ್ವನಿಮತದ ಮೂಲಕ 18ನೇ ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಅವರನ್ನು ಆಯ್ಕೆ ಮಾಡಲಾಯಿತು. ಸತತ ಎರಡನೇ ಬಾರಿ ಸ್ಪೀಕರ್ ಆಗಿರುವ ಅವರು, ಈ ಸಾಧನೆ ಮಾಡಿದ ಬಿಜೆಪಿಯ ಮೊದಲಿಗರೂ ಹೌದು. ಸತತ ಎರಡನೇ ಬಾರಿಗೆ ಲೋಕಸಭಾ ಸ್ಪೀಕರ್ ಆಗಿ ಆಯ್ಕೆಯಾಗಿರುವ ಈ ಓಂ ಬಿರ್ಲಾ ಯಾರು? ಅವರ ಹಿನ್ನೆಲೆ ಏನು? ಎರಡನೇ ಬಾರಿಗೆ ಓಂ ಬಿರ್ಲಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲು ಕಾರಣ ಏನು ಎಂಬ ಕುರಿತು ಈ ಕೆಳಗೆ ವಿವರಿಸಲಾಗಿದೆ.
ಓಂ ಬಿರ್ಲಾ ಯಾರು?
1962ರ ನವೆಂಬರ್ 23ರಂದು, ಶ್ರೀಕೃಷ್ಣ ಬಿರ್ಲಾ ಮತ್ತು ಶಕುಂತಲಾ ದೇವಿ ಅವರ ಮಗನಾಗಿ, ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಓಂ ಬಿರ್ಲಾ ಜನಿಸಿದರು. ಕೋಟಾದ ಸರ್ಕಾರಿ ವಾಣಿಜ್ಯ ಕಾಲೇಜು ಹಾಗೂ ಅಜ್ಮೇರ್‌ನ ಮಹರ್ಷಿ ದಯಾನಂದ ಸರಸ್ವತಿ ವಿವಿಯಲ್ಲಿ ಅವರು ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದಾರೆ. ವೈದ್ಯೆಯಾಗಿರುವ ಅಮಿತಾ ಬಿರ್ಲಾ ಜತೆ 1991ರಲ್ಲಿ ವಿವಾಹವಾಗಿದ್ದು, ಆಕಾಂಕ್ಷಾ ಮತ್ತು ಅಂಜಲಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
Advertisement
ಮೂರು ಬಾರಿ ಸಂಸದರಾಗಿದ್ದ ಬಿಜೆಪಿಯ ಓಂ ಬಿರ್ಲಾ ಅವರು 18ನೇ ಲೋಕಸಭೆಯ ಸ್ಪೀಕರ್ ಆಗಿ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂಟು ಬಾರಿ ಕೇರಳದ ಮಾವೇಲಿಕರ ಕೋಡಿಕುನ್ನಿಲ್ ಸುರೇಶ್ ಅವರನ್ನು ಸೋಲಿಸಿ ಸ್ಪೀಕರ್ ಆಗಿ ಮರು ಆಯ್ಕೆಗೊಂಡಿದ್ದಾರೆ.
Advertisement
Advertisement
ಓಂ ಬಿರ್ಲಾ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಪ್ರಸ್ತಾವನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಡಿಸಿದರು. ಹಂಗಾಮಿ ಸ್ಪೀಕರ್ ಅವರು ಧ್ವನಿ ಮತದ ಮೂಲಕ ಸಂಸದರ ಮತಗಳನ್ನು ಅಂಗೀಕರಿಸಿದರು.
Advertisement
ಕೋಚಿಂಗ್ ಫ್ಟಾಕ್ಟರಿಗೆ ಹೆಸರುವಾಸಿಯಾಗಿರುವ ರಾಜಸ್ಥಾನದ ಕೋಟಾ ಕ್ಷೇತ್ರದಿಂದ ಸಂಸದರಾಗಿರುವ 61 ವರ್ಷದ ಓಂ ಬಿರ್ಲಾ ಅವರು ಮೂರನೇ ತಲೆಮಾರಿನ ಆರ್‌ಎಸ್‌ಎಸ್ ಕುಟುಂಬದಿಂದ ಬಂದವರು. ಅದಕ್ಕೂ ಮುನ್ನ ಅವರು ರಾಜಸ್ಥಾನ ವಿಧಾನಸಭೆಯಲ್ಲಿ ಶಾಸಕರಾಗಿದ್ದರು.
2024ರ ಲೋಕಸಭೆ ಚುನಾವಣೆಯಲ್ಲಿ ಅವರು 7.44 ಲಕ್ಷ ಮತಗಳನ್ನು ಪಡೆದು, ಸುಮಾರು 44 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಹ್ಲಾದ್ ಗುಂಜಾಲ್ ಅವರನ್ನು ಸೋಲಿಸಿದ್ದರು. ಇದು ಅವರ ಸತತ ಮೂರನೇ ಗೆಲುವು. 1976ರ ಬಳಿಕ ಇದೇ ಮೊದಲ ಬಾರಿಗೆ ಸ್ಪೀಕರ್ ಚುನಾವಣೆಗೆ ಸ್ಪರ್ಧೆ ನಡೆದಿತ್ತು. ವಿರೋಧ ಪಕ್ಷಗಳು ಎಂಟು ಬಾರಿಯ ಕಾಂಗ್ರೆಸ್ ಸಂಸದ ಕೆ ಸುರೇಶ್ ಅವರನ್ನು ಕಣಕ್ಕಿಳಿಸಿದ್ದವು. ಆದರೆ ಸಾಕಷ್ಟು ಸಂಖ್ಯಾಬಲ ಹೊಂದಿರುವ ಎನ್‌ಡಿಎ, ಧ್ವನಿಮತದ ಮೂಲಕ ಓಂ ಬಿರ್ಲಾ ಅವರನ್ನು ಮತ್ತೆ ಆಯ್ಕೆ ಮಾಡಿದೆ.
ಕಾಂಗ್ರೆಸ್ ನಾಯಕ ಬಲರಾಮ್ ಜಖಾರ್ ಅವರು 1980 ಹಾಗೂ 1985ರಲ್ಲಿ ಸ್ಪೀಕರ್ ಆಗಿ ಎರಡು ಅವಧಿಗೆ ಕರ್ತವ್ಯ ನಿರ್ವಹಿಸಿದ್ದರು. ಅವರ ನಂತರ ಸತತ ಎರಡು ಅವಧಿಗೆ ಆಯ್ಕೆಯಾದ ಮೊದಲ ಸ್ಪೀಕರ್ ಓಂ ಬಿರ್ಲಾ.
1952ರಲ್ಲಿ ಮೊದಲ ಚುನಾವಣೆ:
1952ರಲ್ಲಿ ಮೊದಲ ಬಾರಿಗೆ ಚುನಾವಣೆ ನಡೆದಿತ್ತು, ಆಗ ಕಾಂಗ್ರೆಸ್ ಪರವಾಗಿ ಜವಾಹರ್ಲಾಲ್ ನೆಹರೂ ಅವರು ಜಿವಿ ಮಾವಲಂಕರ್ ಅವರನ್ನು ಸ್ಪೀಕರ್ ಹುದ್ದೆಗೆ ಅಭ್ಯರ್ಥಿಯಾಗಿ ಹೆಸರಿಸಿದ್ದರು. ಇದೇ ವೇಳೆ ಎಕೆ ಗೋಪಾಲನ್ ಅವರು ಸ್ಪೀಕರ್ ಸ್ಥಾನಕ್ಕೆ ಶಂಕರ್ ಶಾಂತಾರಾಮ್ ಮೋರೆ ಅವರ ಹೆಸರನ್ನು ಪ್ರಸ್ತಾಪಿಸಿದ್ದರು.
ನಂತರ ಮತ ವಿಭಜನೆಯಾಯಿತು. ಆ ಅವಧಿಯಲ್ಲಿ ಮಾವಲಂಕರ್ ಪರವಾಗಿ 394 ಮತಗಳು ಚಲಾವಣೆಗೊಂಡರೆ, ವಿರುದ್ಧವಾಗಿ 55 ಮತಗಳು ಚಲಾಣೆಗೊಂಡಿತ್ತು. ಶಂಕರ್ ಶಾಂತಾರಾಮ್ ಮೋರೆ ಕೂಡ ಮಾವಲಂಕರ್ ಪರವಾಗಿ ಮತ ಚಲಾವಣೆ ಮಾಡಿದ್ದರು. ಅವರು ಅದಕ್ಕೂ ಮೊದಲು 1949ರ ನವೆಂಬರ್ 26 ರಂದು ತಾತ್ಕಾಲಿಕ ಸಂಸತ್ತಿನ ಸ್ಪೀಕರ್ ಆಗಿ ಚುನಾಯಿತರಾಗಿದ್ದರು ಮತ್ತು 1952ರವರೆಗೆ ಈ ಹುದ್ದೆಯಲ್ಲಿದ್ದರು.
1967ರಲ್ಲೂ ನಡೆದಿತ್ತು ಚುನಾವಣೆ:
1967ರಲ್ಲಿ ಕಾಂಗ್ರೆಸ್‌ನ ನೀಲಂ ಸಂಜೀವ್ರೆಡ್ಡಿ ಅವರು ಟಿ ವಿಶ್ವನಾಥನ್ ಅವರನ್ನು ಎದುರಿಸಿದರು. ರೆಡ್ಡಿ 278 ಮತಗಳನ್ನು ಪಡೆದರೆ, ವಿಶ್ವನಾಥನ್ 207 ಮತಗಳನ್ನು ಪಡೆಯುವ ಮೂಲಕ ಸಂಜೀವ್ ರೆಡ್ಡಿ ಆಯ್ಕೆಯಾದರು.
1976ರಲ್ಲೂ ಚುನಾವಣೆ:
1976ರಲ್ಲೂ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆದಿತ್ತು. ಬಲಿರಾಮ್ ಭಗತ್ ಹಾಗೂ ಜಗನ್ನಾಥ ರಾವ್ ನಡುವೆ ಚುನಾವಣೆ ನಡೆದು ಬಲಿರಾಮ್ ಗೆದ್ದಿದ್ದರು. 1976 ಜನವರಿ 5ರಂದು ಸ್ಪೀಕರ್ ಆಗಿ ಬಲಿರಾಮ್ ಆಯ್ಕೆಯಾದರು.
ಕೃಷಿಕ ಮತ್ತು ಸಮಾಜ ಸೇವಕ ಬಿರ್ಲಾ ಅವರು ತಮ್ಮ ವಿದ್ಯಾರ್ಥಿ ದಿನಗಳಿಂದಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. 1991 ರಲ್ಲಿ ಭಾರತೀಯ ಯುವ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷರಾಗಿ ಮತ್ತು ರಾಷ್ಟ್ರಮಟ್ಟದಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಬಿರ್ಲಾ ಅವರು ಕೋಟಾ ಕ್ಷೇತ್ರದಿಂದ 17 ನೇ ಲೋಕಸಭೆಗೆ ಆಯ್ಕೆಯಾಗಿದ್ದರು. ಅಲ್ಲಿ ಅವರು ಕಾಂಗ್ರೆಸ್‌ನ ರಾಮನಾರಾಯಣ್ ಮೀನಾ ಅವರನ್ನು 2.5 ಲಕ್ಷ ಮತಗಳಿಂದ ಸೋಲಿಸಿದ್ದರು. ಕಳೆದ ಲೋಕಸಭೆಗೆ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
17ನೇ ಲೋಕಸಭೆಯ ಸ್ಪೀಕರ್ ಆಗಿ ಎನ್‌ಡಿಎ ಅಭ್ಯರ್ಥಿ ಬಿರ್ಲಾ ಅವಿರೋಧವಾಗಿ ಆಯ್ಕೆಯಾಗಿದ್ದರು. ಆಗ ಬಿರ್ಲಾ ಅವರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದರು. ಇದಕ್ಕೆ ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಬಿಜೆಡಿ ಸೇರಿದಂತೆ ಎಲ್ಲಾ ಪ್ರಮುಖ ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ್ದವು. ವೈಎಸ್‌ಆರ್‌ಸಿಪಿ ಮತ್ತು ಟಿಡಿಪಿ ಕೂಡ ಬಿರ್ಲಾ ಅವರ ಉಮೇದುವಾರಿಕೆಯನ್ನು ಬೆಂಬಲಿಸಿದ್ದವು.
ಸ್ಪೀಕರ್ ಆಯ್ಕೆ ಹೇಗೆ?
ಸಂವಿಧಾನದ 93ನೇ ವಿಧಿ ಸ್ಪೀಕರ್ ಆಯ್ಕೆ ಬಗ್ಗೆ ಹೇಳುತ್ತದೆ. ಹೊಸ ಲೋಕಸಭೆ ಮತಚನೆಯಾದ ನಂತರವೇ ಈ ಹುದ್ದೆ ತೆರವಾಗುತ್ತದೆ. ಅಧಿವೇಶನ ಪ್ರಾರಂಭವಾದ ನಂತರ ರಾಷ್ಟ್ರಪತಿ ಹಂಗಾಮಿ ಸ್ಪೀಕರ್ ನೇಮಕ ಮಾಡುತ್ತಾರೆ, ಇದರಿಂದ ಲೋಕಸಭೆಯ ನೂತನ ಸದಸ್ಯರು ಪ್ರಮಾಣವಚನ ಸ್ವೀಕರಿಸಬಹುದು.
ವಿಶೇಷವೆಂದರೆ ಲೋಕಸಭೆಯ ಸ್ಪೀಕರ್ ಅನ್ನು ಬಹುಮತದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಒಟ್ಟು ಸದಸ್ಯರಲ್ಲಿ ಹೆಚ್ಚು ಮತ ಪಡೆದವರು ಸ್ಪೀಕರ್ ಆಗುವ ಅವಕಾಶ ಪಡೆಯುತ್ತಾರೆ.
ರಾಜಕಾರಣ ಅನುಭವ:
ಚುನಾವಣಾ ರಾಜಕಾರಣದಲ್ಲಿ ಓಂ ಬಿರ್ಲಾ ಅವರಿಗೆ ಎರಡು ದಶಕಗಳ ಅನುಭವ ಇದೆ. ಆದರೆ ಹಿಂದಿನ ಅವಧಿಯಲ್ಲಿ ಲೋಕಸಭೆ ಕಲಾಪಗಳನ್ನು ತಾಳ್ಮೆಯಿಂದ ನಿರ್ವಹಿಸಿದ್ದರು. ಆಗ ಪ್ರತಿಪಕ್ಷಗಳು ಈಗಿನಷ್ಟು ಪ್ರಬಲವಾಗಿರಲಿಲ್ಲ. ಸದನದಲ್ಲಿ ಗದ್ದಲವೆಬ್ಬಿಸಿದ ಸಂಸದರನ್ನು ಅಮಾನತು ಮಾಡುವ ನಿರ್ಧಾರದಿಂದ ಅವರು ವಿವಾದಕ್ಕೆ ಕೂಡ ಸಿಲುಕಿದ್ದರು.
ಚರ್ಚೆಯ ಗುಣಮಟ್ಟವನ್ನು ಸುಧಾರಿಸಲು ಮಸೂದೆಗಳು ಅಥವಾ ನೀತಿಗಳ ಕುರಿತು ಸಂಸದರಿಗೆ ಮಾಹಿತಿ ನೀಡುವ ಕಲಾಪಗಳನ್ನು ನಡೆಸುವ ಹೊಸ ವ್ಯವಸ್ಥೆಯನ್ನು ಓಂ ಬಿರ್ಲಾ ಪರಿಚಯಿಸಿದ್ದರು. ಹಾಗೆಯೇ ಸಂಸದರು ತಮ್ಮ ಪ್ರಶ್ನೆ ಅಥವಾ ಉತ್ತರದಂತಹ ಚರ್ಚೆಯ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಅವಕಾಶ ನೀಡಿದ ಮೊದಲ ಸ್ಪೀಕರ್ ಓಂ ಬಿರ್ಲಾ.
1987- 1991ರವರೆಗೆ ಕೋಟಾ ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷರಾಗಿದ್ದ ಅವರು, 1991- 97ರ ಅವಧಿಯಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾಗಿದ್ದರು. ಬಳಿಕ 1997ರಲ್ಲಿ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆಯಾದರು. 2003ರವರೆಗೂ ಈ ಹುದ್ದೆಯಲ್ಲಿದ್ದರು. ಎಂ ವೆಂಕಯ್ಯ ನಾಯ್ಡು ಅವರು 2002-04ರ ಅವಧಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ, ಅವರಿಗೆ ಹೆಚ್ಚು ಆಪ್ತರಾಗಿ ಗುರುತಿಸಿಕೊಂಡರು. ರಾಜಸ್ಥಾನ ಬಿಜೆಪಿ ಅಧ್ಯಕ್ಷರಾಗಿ ವಸುಂಧರಾ ರಾಜೇ ಆಯ್ಕೆಯಾದ ಬಳಿಕ ಬಿರ್ಲಾ ಅವರು ರಾಜಕೀಯದಲ್ಲಿ ಏಳಿಗೆ ಕಂಡರು.
ಶಿಸ್ತಿಗೆ ಹೆಸರುವಾಸಿ ಓಂ ಬಿರ್ಲಾ:
ಪ್ರಸ್ತುತ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸದನದಲ್ಲಿ ಕಟ್ಟುನಿಟ್ಟಾದ ಶಿಸ್ತು ಮತ್ತು ನಿಯಮಗಳಿಗೆ ಬದ್ಧರಾಗಿರುವುದಕ್ಕೆ ಹೆಸರುವಾಸಿಯಾಗಿದ್ದಾರೆ.
ಸ್ಪೀಕರ್ ಆಗಿ ಓಂ ಬಿರ್ಲಾ ಪಾಲಿಸುವ ಶಿಸ್ತು:
– ನಿಯಮಗಳು ಮತ್ತು ಕಾರ್ಯವಿಧಾನಗಳಿಗೆ ಕಟ್ಟುನಿಟ್ಟಾದ ಅನುಸರಣೆ
– ಅಡಚಣೆಗಳು ಅಥವಾ ಅಶಿಸ್ತಿನ ನಡವಳಿಕೆಯನ್ನು ಅನುಮತಿಸದಿರುವುದು
– ರಚನಾತ್ಮಕ ಚರ್ಚೆಗಳು ಮತ್ತು ಚರ್ಚೆಗಳನ್ನು ಉತ್ತೇಜಿಸುವುದು
– ನಿರ್ಧಾರಗಳಲ್ಲಿ ನಿಷ್ಪಕ್ಷಪಾತ ಮತ್ತು ನ್ಯಾಯಯುತವಾಗಿರುವುದು
– ಕಲಾಪಕ್ಕೆ ಅಡ್ಡಿಪಡಿಸುವವರನ್ನು ಅಮಾನತುಗೊಳಿಸುವುದು ಸೇರಿದಂತೆ ಅಶಿಸ್ತಿನ ಸಂಸದರ ಮೇಲೆ ಕ್ರಮಕೈಗೊಳ್ಳುವುದು
– ಸದನವು ಸುಗಮವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆಯಾ ಎಂದು ಖಚಿತಪಡಿಸಿಕೊಳ್ಳುವುದು
– ಪ್ರತಿಪಕ್ಷದವರು ಸೇರಿದಂತೆ ಎಲ್ಲಾ ಸದಸ್ಯರಿಂದ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು