– ಮುದುಡಿದ್ದ ಕಮಲಕ್ಕೆ ‘ಪವರ್’ ನೀಡಿದ ‘ಪವಾರ್’
ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‍ಸಿಪಿ)ಯ ಶಾಸಕಾಂಗ ನಾಯಕ ಅಜಿತ್ ಪವಾರ್ ನೀಡಿದ ಪವರ್ ನಿಂದ ಬಿಜೆಪಿ ಇಂದು ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಿದೆ. ಬಿಜೆಪಿಯನ್ನು ಅಧಿಕಾರದ ಕುರ್ಚಿ ಬಳಿ ಕರೆತಂದ ಅಜಿತ್ ಪವಾರ್ ಯಾರು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂದು ಅಜಿತ್ ಪವಾರ್ ಬೆಂಬಲದಿಂದಲೇ ದೇವೇಂದ್ರ ಫಡ್ನವಿಸ್ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಜಿತ್ ನೀಡಿದ ಪವರ್ ನಿಂದಲೇ ಮಹಾರಾಷ್ಟ್ರದಲ್ಲಿ ಎರಡನೇ ಬಾರಿ ಕಮಲ ಅರಳಿದೆ. ಫಡ್ನವಿಸ್ ಜೊತೆ ಅಜಿತ್ ಪವಾರ್ ಸಹ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಚಿಕ್ಕಪ್ಪ ಶರದ್ ಪವಾರ್ ಮತ್ತು ಎನ್‍ಸಿಪಿಗೆ ಶಾಕ್ ನೀಡಿದರು.
ಯಾರು ಈ ಅಜಿತ್ ಪವಾರ್?: ಎನ್‍ಸಿಪಿ ಮುಖ್ಯಸ್ಥರಾಗಿರುವ ಶರದ್ ಪವಾರ್ ಅವರ ಹಿರಿಯ ಸೋದರ ಅನಂತರಾವ್ ಪವಾರ್ ಅವರ ಪುತ್ರ ಅಜಿತ್ ಪವಾರ್. ಚಿಕ್ಕಪ್ಪನ ಮಾರ್ಗದರ್ಶನದಲ್ಲಿ ರಾಜಕೀಯ ಪ್ರವೇಶಿಸಿದ ಅಜಿತ್ ಪವಾರ್, 1990ರಿಂದ ಇದುವರೆಗೂ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 22 ಜುಲೈ 1959 ಅಹಮದ್ ನಗರದಲ್ಲಿ ಜನಿಸಿದ ಅಜಿತ್ ಪವಾರ್ ಗೆ ಚಿಕ್ಕಪ್ಪನೇ ಒಂದು ರೀತಿಯ ರಾಜಕೀಯ ಗುರುಗಳು. ಇದನ್ನೂ ಓದಿ: ಅಜಿತ್ ಪವಾರ್ ನಿರ್ಧಾರದೊಂದಿಗೆ ಎನ್‍ಸಿಪಿ ಇಲ್ಲ: ಶರದ್ ಪವಾರ್
1982ರಲ್ಲಿ ರಾಜಕೀಯ ಪ್ರವೇಶಿಸಿದ ಅಜಿತ್ ಪವಾರ್, ಸಹಕಾರಿ ಸಕ್ಕರೆ ಕಾರ್ಖಾನೆಯ ಬೋರ್ಡ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಪುಣೆ ಜಿಲ್ಲೆಯ ಸಹಕಾರಿ ಬ್ಯಾಂಕಿನ ಚೇರ್‍ಮನ್ ಆಗಿ 16 ವರ್ಷ ಕಾರ್ಯನಿರ್ವಹಿಸಿದ್ದಾರೆ. ನಂತರ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ಆದರೆ ಶರದ್ ಪವಾರ್ ಅವರಿಗಾಗಿ ಅಜಿತ್ ತಮ್ಮ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಇದನ್ನೂ ಓದಿ: ಕದ್ದುಮುಚ್ಚಿ ಮಾಡೋದು ನಮಗೆ ಗೊತ್ತಿಲ್ಲ: ಬಿಜೆಪಿ ವಿರುದ್ಧ ಠಾಕ್ರೆ ಕೆಂಡ
ಶರದ್ ಪವಾರ್ ಅವರಿಗಾಗಿ ಲೋಕಸಭಾ ಕ್ಷೇತ್ರ ಬಿಟ್ಟುಕೊಟ್ಟ ಅಜಿತ್ ಪವಾರ್ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರು. 1967 ರಿಂದ 1990ರವರೆಗೆ ಶರದ್ ಪವಾರ್ ಬಾರಾಮತಿಯಿಂದಲೇ ಶಾಸಕರಾಗಿ ಆಯ್ಕೆಯಾಗುತ್ತಿದ್ದರಿಂದ ಅಜಿತ್ ಪವಾರ್ ಚುನಾವಣೆಯಲ್ಲಿ ಜಯದ ಮಾಲೆ ಸರಳವಾಗಿ ಸಿಕ್ಕಿತ್ತು. ಇದೇ ಕ್ಷೇತ್ರದಿಂದ ಅಜಿತ್ ಪವಾರ್ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಶರದ್ ಪವಾರ್ ಮತ್ತು ಅಜಿತ್ ಪವಾರ್ ಒಟ್ಟು 12 ಬಾರಿ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಗೆಲುವು ದಾಖಲಿಸಿದ್ದಾರೆ.
ಈ ಮೊದಲು ಡಿಸಿಎಂ ಆಗಿದ್ರು: 2010ರಲ್ಲಿ ಕಾಂಗ್ರೆಸ್-ಎನ್‍ಸಿಪಿ ಜೊತೆಯಾಗಿ ಸರ್ಕಾರ ರಚನೆ ಮಾಡಿದ್ದಾಗ ಅಜಿತ್ ಪವಾರ್ ಮುಖ್ಯಮಂತ್ರಿಯಾಗಿದ್ದರು. ಜನತಾ ಪಕ್ಷ ಮತ್ತ ಆಪ್ತ ವಲಯದಲ್ಲಿ ಅಜಿತ್ ಪವಾರ್ ಅವರನ್ನು ಬಾಬಾ ಎಂದೇ ಕರೆಯಲಾಗುತ್ತದೆ. ಸೆಪ್ಟೆಂಬರ್ 2012ರಲ್ಲಿ ಹಗರಣದಲ್ಲಿ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಅಜಿತ್ ಪವಾರ್ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸಂಬಂಧ ಶ್ವೇತಪತ್ರ ಹೊರಡಿಸಿದ್ದ ಎನ್‍ಸಿಪಿ, ಅಜಿತ್ ಪವಾರ್ ಗೆ ಕ್ಲೀನ್ ಚಿಟ್ ನೀಡಿತ್ತು. 1500 ಕೋಟಿ ರೂ. ನೀರಾವರಿ ಹಗರಣದಲ್ಲಿ ಅಜಿತ್ ಪವಾರ್ ಆರೋಪಿಯಾಗಿದ್ದಾರೆ. ಇದನ್ನೂ ಓದಿ: ಒಡೆದ ಕುಟುಂಬ, ಪಕ್ಷ- ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಲೆ
ವಿವಾದಾತ್ಮಕ ಹೇಳಿಕೆಯಿಂದಲೇ ಪ್ರಸಿದ್ಧಿ: ಹಲವು ಬಾರಿ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಅಜಿತ್ ಪವಾರ್ ಸುದ್ದಿಯಾಗಿದ್ದಾರೆ. 7 ಏಪ್ರಿಲ್ 2013ರಲ್ಲಿ ಬರ ಪರಿಹಾರ ಆಗ್ರಹಿಸಿ 55 ದಿನ ಉಪವಾಸ ಪ್ರತಿಭಟನೆ ನಡೆಸಿದ್ದ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಣೆಕಟ್ಟೆಯಲ್ಲಿ ನೀರು ಇಲ್ಲದಿದ್ರೆ ನಾವು ಅಲ್ಲಿ ಮೂತ್ರ ಮಾಡಬೇಕಾ ಎಂಬ ಹೇಳಿಕೆ ಮಾಹಾರಾಷ್ಟ್ರದಲ್ಲಿ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿತ್ತು. ಕೊನೆಗೆ ಸಾರ್ವಜನಿಕವಾಗಿ ಕ್ಷಮೆ ಕೇಳಿ, ಇದು ನನ್ನ ಜೀವನದ ದೊಡ್ಡ ತಪ್ಪು ಎಂದು ಹೇಳಿದ್ದರು.
ಪ್ರಚಾರದ ವೇಳೆ ಬೆದರಿಕೆ: 16 ಏಪ್ರಿಲ್ 2014ರ ಲೋಕಸಭಾ ಚುನಾವಣೆ ಸಮಯದಲ್ಲಿ ಸೋದರಿ ಸುಪ್ರಿಯಾ ಸುಲೆ ಪರ ಪ್ರಚಾರ ಮಾಡುತ್ತಿದ್ದರು. ಪ್ರಚಾರದ ವೇಳೆ ಚುನಾವಣೆಯಲ್ಲಿ ಸೋದರಿ ಸುಪ್ರಿಯಾ ಸುಲೆಗೆ ಮತ ನೀಡದಿದ್ದರೆ ನಿಮ್ಮ ಗ್ರಾಮದ ನೀರಿನ ಸಂಪರ್ಕ ಕಡಿತಗೊಳಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು. ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ 48 ಗಂಟೆ ಪ್ರಚಾರ ನಡೆಸದಂತೆ ಅಜಿತ್ ಪವಾರ್ ಗೆ ಚುನಾವಣೆ ಆಯೋಗ ನಿಷೇಧ ಹೇರಿತ್ತು.