ಚೆನಾಬ್ ರೈಲ್ವೆ ಸೇತುವೆ ನಿರ್ಮಾಣ ಕಾರ್ಯದಲ್ಲಿ 17 ವರ್ಷ ಕಳೆದ IISC ಪ್ರೊಫೆಸರ್ ಮಾಧವಿ ಲತಾ

Public TV
2 Min Read
Madhavi Latha Chenab Railway Bridge Project

ನವದೆಹಲಿ: ಜಮ್ಮು ಕಾಶ್ಮೀರದಲ್ಲಿರುವ ವಿಶ್ವದ ಅತಿ ಎತ್ತರದ ‘ಚೆನಾಬ್’ ರೈಲ್ವೆ ಸೇತುವೆಯನ್ನು (Chenab Railway Bridge) ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಚೆನಾಬ್ ಸೇತುವೆ ನಿರ್ಮಾಣ ಕಾರ್ಯದಲ್ಲಿ ಅನೇಕ ತಂತ್ರಜ್ಞರು ಕೊಡುಗೆ ನೀಡಿದ್ದಾರೆ. ಈ ಪೈಕಿ ಐಐಎಸ್‌ಸಿ ಪ್ರೊಫೆಸರ್ (IISC) ಮಾಧವಿ ಲತಾ (Madhavi Latha) ಕೂಡ ಒಬ್ಬರು. ಚೆನಾಬ್ ನಿರ್ಮಾಣ ಕಾರ್ಯದಲ್ಲಿ ಮಾಧವಿ ಲತಾ 17 ವರ್ಷಗಳನ್ನು ಕಳೆದಿದ್ದಾರೆ.

ಹೌದು, ಚೆನಾಬ್ ಸೇತುವೆ ನಿರ್ಮಾಣ ಕಾರ್ಯದಲ್ಲಿ ಮಾಧವಿ ಲತಾ ಅವರ ಕೊಡಗೆ ಅಪಾರವಾದದ್ದು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಪ್ರಾಧ್ಯಾಪಕರಾಗಿರುವ ಅವರು, ಚೆನಾಬ್ ಸೇತುವೆ ಯೋಜನೆಯಲ್ಲಿ ಭೂತಾಂತ್ರಿಕ ಸಲಹೆಗಾರರಾಗಿ 17 ವರ್ಷಗಳ ಕಾಲ ತೊಡಗಿಸಿಕೊಂಡಿದ್ದರು. ಈ ಸೇತುವೆ ರಚನೆಯ ಯೋಜನೆ, ವಿನ್ಯಾಸ ಮತ್ತು ನಿರ್ಮಾಣದಲ್ಲಿ ಭೂಪ್ರದೇಶದಿಂದ ಉಂಟಾಗುವ ಅಡೆತಡೆಗಳ ಮೇಲೆ ಗಮನ ಕೇಂದ್ರೀಕರಿಸಿದ್ದರು.

Madhavi Latha Chenab Railway Bridge Project 2

ಮಾಧವಿ ಲತಾ ಸಾಧನೆಗಳೇನು?
ಮಾಧವಿ ಲತಾ 1992ರಲ್ಲಿ ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಬಿ.ಟೆಕ್ ಪದವಿ ಗಳಿಸಿದರು. ನಂತರ ತೆಲಂಗಾಣದ ವಾರಂಗಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಭೂತಾಂತ್ರಿಕ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್ ವಿದ್ಯಾರ್ಥಿನಿಯಾಗಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಅಲ್ಲದೇ 2000ನೇ ಇಸವಿಯಲ್ಲಿ ಐಐಟಿ ಮದ್ರಾಸ್‌ನಿಂದ ಜಿಯೋಟೆಕ್ನಿಕಲ್ ಎಂಜಿನಿಯರಿಂಗ್‌ನಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.

ತಮ್ಮ ಸಾಧನೆಗಾಗಿ ಮಾಧವಿ ಲತಾ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2021ರಲ್ಲಿ ಅವರಿಗೆ ಭಾರತೀಯ ಭೂತಾಂತ್ರಿಕ ಸೊಸೈಟಿಯಿಂದ ಅತ್ಯುತ್ತಮ ಮಹಿಳಾ ಭೂತಾಂತ್ರಿಕ ಸಂಶೋಧಕಿ ಪ್ರಶಸ್ತಿಯನ್ನು ನೀಡಲಾಯಿತು. ಬಳಿಕ 2022ರಲ್ಲಿ ಅವರು ಭಾರತದ ಸ್ಟೀಮ್‌ನಲ್ಲಿ ಟಾಪ್ 75 ಮಹಿಳೆಯರಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟರು. ಪ್ರಸ್ತುತ ಮಾಧವಿ ಲತಾ ಅವರು ಪ್ರಸ್ತುತ ಐಐಎಸ್‌ಸಿಯಲ್ಲಿ HAG ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Madhavi Latha Chenab Railway Bridge Project 1

ಚೆನಾಬ್ ಸೇತುವೆ ಕಾರ್ಯದಲ್ಲಿ ಮಾಧವಿ ಲತಾ ಪಾತ್ರ:
1,315 ಮೀಟರ್ ಉದ್ದದ ಈ ಬ್ರಿಡ್ಜ್ ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಸಂಪರ್ಕದ ಪ್ರಮುಖ ಭಾಗವಾಗಿದೆ. ಅಷ್ಟೇ ಅಲ್ಲದೆ, ಭಾರತೀಯ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ.

ಚೆನಾಬ್ ಸೇತುವೆಯ ಗುತ್ತಿಗೆಪಡೆದ ಆಫ್ಕಾನ್ಸ್ ಸಂಸ್ಥೆಯ ಮನವಿಯ ಮೇರೆಗೆ ಮಾಧವಿ ಲತಾ ನಿರ್ಮಾಣ ಕಾಮಗಾರಿಗೆ ಮಾರ್ಗದರ್ಶನ ಮಾಡಿದ್ದಾರೆ. ಇಳಿಜಾರು ಸ್ಥಿರೀಕರಣ ಮತ್ತು ಸೇತುವೆಯ ಅಡಿಪಾಯದ ಕುರಿತು ಮಾಧವಿ ಲತಾ ಮಾರ್ಗದರ್ಶನ ಮಾಡಿದ್ದಾರೆ. 1,486 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಸೇತುವೆ ಒಂದು ಶತಮಾನಕ್ಕೂ ಹೆಚ್ಚು ಕಾಲ ಅತ್ಯಂತ ಕಠಿಣ ನೈಸರ್ಗಿಕ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಸೇತುವೆಯ ಅಡಿಭಾಗದಲ್ಲಿ ಬರುವ ಬಂಡೆಗಳ ನಡುವೆ ಹೆಚ್ಚಿನ ಅಂತರವಿದ್ದು, ಇಳಿಜಾರುಗಳು ತುಂಬಾ ಕಡಿದಾಗಿರುವುದರಿಂದ ಸ್ಥಿರತೆಯ ಬಗ್ಗೆ ಕಳವಳಗಳಿದ್ದವು. ಹೀಗಾಗಿ ಇಳಿಜಾರುಗಳಲ್ಲಿ ಕಮಾನು ಆಧಾರಸ್ತಂಭಗಳು ಮತ್ತು ಕಂಬಗಳಿಗೆ ಅಡಿಪಾಯಗಳ ನಿರ್ಮಾಣವು ಪ್ರಾಥಮಿಕ ಸವಾಲುಗಳಲ್ಲಿ ಒಂದಾಗಿತ್ತು. ಗಂಟೆಗೆ 220 ಕಿ.ಮೀ. ವೇಗದಲ್ಲಿ ಬೀಸುವ ಗಾಳಿಯನ್ನು ತಡೆದುಕೊಳ್ಳಲು ಸೇತುವೆಯ ಅಡಿಪಾಯವನ್ನು ದೊಡ್ಡದಾಗಿ ಮತ್ತು ಹೆಚ್ಚು ಆಳದಿಂದಲೇ ಮಾಡಲಾಗಿತ್ತು. ಅಲ್ಲದೆ ಈ ಸೇತುವೆ ಇರುವ ಪ್ರದೇಶ ಭೂಕಂಪನ ವಲಯದಲ್ಲಿ ಬರುತ್ತಿದ್ದು, ಎಂಜಿನಿಯರ್‌ಗಳಿಗೆ ಹೆಚ್ಚಿನ ಸವಾಲು ಒಡ್ಡಿತ್ತು. ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು ನಾವು ವಿನ್ಯಾಸ ಮಾರ್ಪಾಡುಗಳನ್ನು ಮಾಡಿದ್ದೇವೆ ಎಂದು ಮಾಧವಿ ಲತಾ ತಿಳಿಸಿದ್ದಾರೆ.

Share This Article