ಉಡುಪಿ: ಶಿರೂರು ಶ್ರೀಗಳು ಕೊನೆಯ ಬಾರಿಗೆ ಮಠದಲ್ಲಿ ಮೊಸರು ಅವಲಕ್ಕಿಯನ್ನು ಸೇವಿಸಿದ್ದರು. ಇದಾದ ಕೆಲ ಸಮಯದ ಬಳಿಕ ಶ್ರೀಗಳು ರಕ್ತದ ವಾಂತಿ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಹಾಗಾದ್ರೆ ಕೊನೆಯ ಬಾರಿಗೆ ಮೊಸರು ಅವಲಕ್ಕಿ ನೀಡಿದ್ದು ಯಾರು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ವನ ಮಹೋತ್ಸವದಲ್ಲಿ ಭಾಗಿಯಾಗಿದ್ದ ಶ್ರೀಗಳು ಅಲ್ಲಿ ಯಾವುದೇ ಆಹಾರವನ್ನು ಸೇವಿಸಿರಲಿಲ್ಲವಂತೆ. ಸಂಜೆ ಮಠಕ್ಕೆ ಆಗಮಿಸಿದಾಗಲೇ ತಮ್ಮ ನೆಚ್ಚಿನ ಆಹಾರವಾದ ಮೊಸರು ಅವಲಕ್ಕಿ ತಿಂದಿದ್ದರು. ಅವಲಕ್ಕಿ ತಿಂದ ಬಳಿಕವೇ ಶ್ರೀಗಳಿಗೆ ಫುಡ್ ಪಾಯ್ಸನ್ ಆಗಿದೆ ಮಠದ ಮೂಲಗಳು ತಿಳಿಸಿದ್ದವು. ಶ್ರೀಗಳು ರಕ್ತದ ವಾಂತಿ ಮಾಡಿಕೊಳ್ಳುತ್ತಿದ್ದಂತೆ ಭಕ್ತವೃಂದ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿತ್ತು.
Advertisement
Advertisement
ಬಹು ಅಂಗಾಂಗ ವೈಫಲ್ಯದಿಂದ ತೀವ್ರ ಅಸ್ವಸ್ಥರಾಗಿದ್ದ ಶ್ರೀಗಳು ಗುರುವಾರ ಬೆಳಗ್ಗೆ ಹರಿಪಾದ ಸೇರಿದ್ದರು. ಶ್ರೀಗಳ ಸಾವಿನ ಬಳಿಕ ಅವರಿಗೆ ವಿಷಪ್ರಾಶನ ಮಾಡಿಸಲಾಗಿದೆಯೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಇದಕ್ಕೆ ಪೂರಕವಾಗಿರುವಂತೆ ಕೆಎಂಸಿ ಆಸ್ಪತ್ರೆಯ ವೈದ್ಯರೂ ದೇಹದಲ್ಲಿ ವಿಷಕಾರಕ ಅಂಶ ಪತ್ತೆಯಾಗಿದೆ ಅಂದಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು. ಸದ್ಯ ಶ್ರೀಗಳ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಶಿರೂರು ಮಠವನ್ನು ಮೂರು ದಿನಗಳ ಕಾಲ ವಶಕ್ಕೆ ಪಡೆದು, ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದ್ದಾರೆ.
Advertisement
ಪೇಜಾವರ ಶ್ರೀಗಳು ಗುರುವಾರ ಶಿರಸಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ನಾನು ಈ ಮೊದಲು ಲಾತವ್ಯ ಆಚಾರ್ಯರೊಂದಿಗೆ ಫೋನ್ ನಲ್ಲಿ ಮಾತನಾಡಿ ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೆ. ಅವರಿಗೆ ಕೆಟ್ಟದಾದ ಕಂಚಿನ ಪಾತ್ರೆಯಲ್ಲಿ ಫಲಾಹಾರ ನೀಡಲಾಗಿತ್ತು. ಪಾತ್ರೆ ದೋಷದಿಂದ ಶಿರೂರು ಶ್ರೀಗಳು ಸಾವನ್ನಪ್ಪಿರುವ ಸಾಧ್ಯತೆಗಳಿವೆ ಎಂಬ ಶಂಕೆ ವ್ಯಕ್ತಪಡಿಸಿದ್ದರು.