ಬೆಂಗಳೂರು: ಬಿಜೆಪಿಯಿಂದ (BJP) 6 ವರ್ಷ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಈಗ ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ. ಅಭಿಮಾನಿಗಳಿಂದ ಒತ್ತಡ ಇದೆ ಎಂದಿರುವ ಯತ್ನಾಳ್, ರಾಜ್ಯವೆಲ್ಲಾ ಸುತ್ತಾಡಿ ಜನಾಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಹೊಸ ಪಕ್ಷ ಕಟ್ಟಿ ಗೆದ್ದವರ ಪಟ್ಟಿ ನೋಡಿದರೆ ಜೆಡಿಎಸ್ ಮಾತ್ರ ಕಾಣುತ್ತದೆ. ಉಳಿದ ಘಟಾನುಘಟಿಗಳು ಹೊಸ ಪಕ್ಷದ ಸಹವಾಸವೇ ಬೇಡ ಎಂದು ಮರಳಿ ರಾಷ್ಟ್ರೀಯ ಪಕ್ಷದ ಗೂಡು ಸೇರಿದ್ದಾರೆ.
ಮಾಜಿ ಸಿಎಂಗಳಾದ ಬಂಗಾರಪ್ಪ, ಯಡಿಯೂರಪ್ಪ, ಹಾಲಿ ಸಿಎಂ ಸಿದ್ದರಾಮಯ್ಯ ಅವರಂತಹ ಮಾಸ್ ಲೀಡರ್‌ಗಳೇ ಸುಸ್ತಾಗಿದ್ದಾರೆ. ಜನಶಕ್ತಿ ಎಷ್ಟೇ ಒಟ್ಟಿಗಿದ್ದರೂ ಆರ್ಥಿಕ ಸಂಪನ್ಮೂಲದ ಶಕ್ತಿಯೂ ಅಷ್ಟೇ ಇರಬೇಕು.
ಎಸ್.ಬಂಗಾರಪ್ಪ
ಎಸ್.ಬಂಗಾರಪ್ಪ (S Bangarappa ) 2 ಬಾರಿ ಪಕ್ಷ ಕಟ್ಟಿದ್ದರು. ಸಿಎಂ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಕಾಂಗ್ರೆಸ್ ವಿರುದ್ಧ ಗುಟುರು ಹಾಕಿ ಕರ್ನಾಟಕ ಕಾಂಗ್ರೆಸ್ ಪಾರ್ಟಿ (ಕೆಸಿಪಿ) ಸ್ಥಾಪನೆ ಮಾಡಿದ್ದರು. ಇದನ್ನೂ ಓದಿ: ಹೊಸ ಹಿಂದೂ ಪಕ್ಷ ಸ್ಥಾಪನೆಯಾಗುತ್ತಾ? ಏನಿದು ಯತ್ನಾಳ್ ಲೆಕ್ಕಾಚಾರ?
1996ರಲ್ಲಿ ಕೆಸಿಪಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಕಂಡಿದ್ದರು. ಇದಾದ ಬಳಿಕ ಮತ್ತೆ ಕಾಂಗ್ರೆಸ್ ಮರಳಿ ಕಡಿಮೆ ಅವಧಿಯಲ್ಲೇ ಮತ್ತೆ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಕರ್ನಾಟಕ ವಿಕಾಸ ಪಕ್ಷ ರಚಿಸಿದ್ದರು.
1998ರಲ್ಲಿ ಲೋಕಸಭೆಯ ಮಧ್ಯಂತರ ಚುನಾವಣೆಯಲ್ಲಿ ಸ್ಪರ್ಧಿಸಿ ಕೆಸಿಪಿಯಿಂದ ಸೋಲು ಕಂಡರು. ಬಳಿಕ ಕಾಂಗ್ರೆಸ್ ಸೇರ್ಪಡೆಯಾದರು.
ಸಿದ್ದರಾಮಯ್ಯ:
ದೇವೇಗೌಡರ ವಿರುದ್ಧ ಗುಟುರು ಹಾಕಿ ಹೊಸ ಪಕ್ಷ ಕಟ್ಟಿದ್ದರು. ಅಖಿಲ ಭಾರತ ಪ್ರಗತಿಪರ ಜನತಾದಳ (ಎಬಿಪಿಜೆಡಿ) ಎಂಬ ಹೊಸಪಕ್ಷ ಸ್ಥಾಪಿಸಿದ್ದರು. ಆದರೆ ಯಾವುದೇ ಸಾರ್ವತ್ರಿಕ ಚುನಾವಣೆ ಎದುರಿಸದೇ ಪಕ್ಷವನ್ನು ವಿಸರ್ಜಿಸಿ ಬೃಹತ್ ಸಮಾವೇಶ ಮಾಡಿ ಸಿದ್ದರಾಮಯ್ಯ (Siddaramaiah) ಕಾಂಗ್ರೆಸ್ ಸೇರಿದ್ದರು. ಇದನ್ನೂ ಓದಿ: ನಾಳೆಯಿಂದ UPI, ಮಿನಿಮಮ್ ಬ್ಯಾಂಕ್ ಬ್ಯಾಲೆನ್ಸ್ ರೂಲ್ ಚೇಂಜ್
ಯಡಿಯೂರಪ್ಪ:
2012ರಲ್ಲಿ ಬಿಜೆಪಿ ವಿರುದ್ಧ ಸಡ್ಡು ಹೊಡೆದು ಕರ್ನಾಟಕ ಜನತಾ ಪಾರ್ಟಿ (KJP) ಸ್ಥಾಪನೆ ಮಾಡಿದ್ದರು. 2013ರ ಚುನಾವಣೆಯಲ್ಲಿ ಕೆಜೆಪಿ ಸ್ಪರ್ಧಿಸಿದ್ದರಿಂದ ಬಿಜೆಪಿ 40 ಸ್ಥಾನಕ್ಕೆ ಕುಸಿದಿತ್ತು. ಯಡಿಯೂರಪ್ಪ (Yediyurappa) ನೇತೃತ್ವದ ಕೆಜೆಪಿಯಿಂದ 6 ಮಂದಿಗೆ ಗೆಲುವು ಸಿಕ್ಕಿತ್ತು. ಲೋಕಸಭೆ ಚುನಾವಣೆ ವೇಳೆ ಕೆಜೆಪಿಯನ್ನು ವಿಲೀನಗೊಳಿಸಿ ಬಿಜೆಪಿಗೆ ಸೇರ್ಪಡೆಯಾದರು.
ಶ್ರೀರಾಮುಲು:
ಬಿಜೆಪಿಗೆ ಸಡ್ಡು ಹೊಡೆದು ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ಸ್ಥಾಪನೆ ಮಾಡಿದ್ದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಚುನಾವಣೆಯಲ್ಲಿ ಹೊಡೆತ ಬಿದ್ದಿತ್ತು. ಬಿಎಸ್‌ಆರ್ ಕಾಂಗ್ರೆಸ್‌ನಿಂದ ನಾಲ್ವರ ಗೆಲುವು ಸಾಧಿಸಿದ್ದರು. ನಂತರ ಪಕ್ಷ ಮುನ್ನಡೆಸಲಾಗದೇ ರಾಮುಲು (Sriramulu) ಬಿಜೆಪಿ ಸೇರಿದ್ದರು.
ಜನಾರ್ದನ ರೆಡ್ಡಿ
ಗಣಿ ಕೇಸಲ್ಲಿ ಜೈಲಿನಿಂದ ವಾಪಸ್ ಆದ ಬಳಿಕ ಬಿಜೆಪಿ ಜರ್ನಾರ್ದನ ರೆಡ್ಡಿ ಅವರನ್ನು (Janardhan Reddy) ದೂರ ಇಟ್ಟಿತ್ತು. 2023ರ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಸ್ಥಾಪನೆ ಮಾಡಿದ್ದರು. ಜನಾರ್ದನ ರೆಡ್ಡಿ ವಿಧಾನಸಭೆಗೆ ಆಯ್ಕೆಯಾದರೂ ಬಿಜೆಪಿಗೆ ಹಲವು ಕಡೆ ಪೆಟ್ಟು ನೀಡಿತ್ತು. 2024ರ ಲೋಕಸಭಾ ಚುನಾವಣೆ ವೇಲೆ ರೆಡ್ಡಿ ಬಿಜೆಪಿಗೆ ಬೆಂಬಲ ನೀಡಿದರು ಅಷ್ಟೇ ಅಲ್ಲದೇ ಕೆಆರ್‌ಪಿಪಿಯನ್ನು ಬಿಜೆಪಿ ಜೊತೆ ವಿಲೀನ ಮಾಡಿದರು.
ಉಪೇಂದ್ರ
ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಿರುವ ಉಪೇಂದ್ರ (Upendra) ಸದ್ಯ ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡಿಲ್ಲ.
ಅಶೋಕ್ ಖೇಣಿ
ಕರ್ನಾಟಕ ಮಕ್ಕಳ ಪಕ್ಷ ಸ್ಥಾಪಿಸಿದ್ದ ಅಶೋಕ್ ಖೇಣಿ (Ashok Kheny) ಒಂದು ಬಾರಿ ಗೆಲುವು ಸಾಧಿಸಿದ ಬಳಿಕ ಕಾಂಗ್ರೆಸ್ ಜೊತೆ ಪಕ್ಷವನ್ನು ವಿಲೀನ ಮಾಡಿದ್ದಾರೆ.