ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪ ಪ್ರಕರಣದಲ್ಲಿ 14 ದಿನಗಳ ಬಂಧನಕ್ಕೊಳಗಾಗಿರುವ ರವಿ ಬೆಳಗೆರೆ ಪರಪ್ಪನ ಅಗ್ರಹಾರದಲ್ಲಿ ಮೊದಲ ದಿನ ಕಳೆದಿದ್ದಾರೆ. ಜೈಲು ಸಿಬ್ಬಂದಿ ಬಳಿ ನೀವು ಯಾರು..ನಾನು ಯಾಕೆ ಇಲ್ಲಿದ್ದೇನೆ ಅಂತಾ ರವಿ ಬೆಳಗೆರೆ ಪ್ರಶ್ನಿಸಿದ್ದಾರೆ ಅಂತಾ ಮೂಲಗಳು ತಿಳಿಸಿವೆ.
ರವಿ ಬೆಳಗೆರೆ ಅವರಿಗೆ 12785 ಕೈದಿ ನಂಬರ್ ಕೊಡಲಾಗಿದ್ದು, 3ನೇ ಬ್ಯಾರಕ್ ನ ಒಂದನೇ ಕೊಠಡಿಯನ್ನು ನೀಡಲಾಗಿದೆ. ಆದರೆ ರವಿ ಬೆಳಗೆರೆ ಬಿಪಿ, ಶುಗರ್‍ನಿಂದ ಬಳಲುತ್ತಿದ್ದು, ಅವರನ್ನು ಪರಪ್ಪನ ಅಗ್ರಹಾರದ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರವಿ ಬೆಳಗೆರೆಯವರಿಗೆ ಮನೆಯಿಂದ ಊಟ ತರಿಸಲು ಅವಕಾಶ ನೀಡಲಾಗಿದೆ. ಸೋಮವಾರ ರಾತ್ರಿ ಮನೆಯಿಂದಲೇ ತಂದಿದ್ದ ರಾಗಿ ಮುದ್ದೆ, ತರಕಾರಿ ಸಾಂಬಾರ್ ನೀಡಲಾಗಿತ್ತು. ಸುರಕ್ಷತೆ ಹಾಗೂ ಭದ್ರತೆ ದೃಷ್ಠಿಯಿಂದ ಮುನ್ನೆಚ್ಚರಿಕೆಯಾಗಿ ಬ್ಯಾರಕ್ ನ ಸುತ್ತಮುತ್ತ ಬಂದೋಬಸ್ತ್ ಮಾಡಲಾಗಿದೆ.
ಇನ್ನು ಕಳೆದ ರಾತ್ರಿ ಪುತ್ರಿ ಚೇತನ ಬೆಳಗೆರೆ ಮಾತ್ರೆ ಹಾಗೂ ಔಷಧಿ ನೀಡಿ ಮನೆಗೆ ತೆರಳಿದ್ದಾರೆ. ಆದ್ರೆ ಪರಪ್ಪನ ಅಗ್ರಹಾರ ಸೇರಿದ ಬಳಿಕ ರವಿ ಬೆಳಗೆರೆ ಡಿಪ್ರೆಶನ್‍ಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ರವಿ ಬೆಳಗೆರೆ ಜಾಮೀನಿಗೆ ಅರ್ಜಿ ಸಲ್ಲಿಸೋದಾಗಿ ವಕೀಲ ದಿವಾಕರ್ ಹೇಳಿದ್ದಾರೆ.
ಇದನ್ನೂ ಓದಿ: ರವಿ ಬೆಳಗೆರೆಗೆ ಜಾಮೀನು ಮಂಜೂರು ಮಾಡದಂತೆ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ನೀಡಿದ 10 ಕಾರಣಗಳು ಇಲ್ಲಿವೆ…