ನಾಗ ಸಾಧುಗಳು ಯಾರು? ನೇಮಕಾತಿ ಹೇಗೆ ನಡೆಯುತ್ತೆ? ದೀಕ್ಷೆ ಪೂರ್ಣಗೊಳ್ಳುವುದು ಯಾವಾಗ?

Public TV
3 Min Read
Naga Sadhus 4

ಪ್ರಯಾಗರಾಜ್: ಮಹಾ ಕುಂಭಮೇಳದಲ್ಲಿ (Maha Kumbh Mela) ನಾಗ ಸಾಧುಗಳ (Naga Sadhus) ದೀಕ್ಷೆಗಾಗಿ ಅಭ್ಯರ್ಥಿಗಳ ವಿಶಿಷ್ಟ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.

ಸನಾತನ ಧರ್ಮಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವ ಉದ್ದೇಶದಿಂದ ವಿವಿಧ ಅಖಾರಗಳಲ್ಲಿ ನಾಗಗಳು ಸಿದ್ಧರಾಗಿರುವ ಸಾವಿರಾರು ಯುವ ಸನ್ಯಾಸಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದು ಅಖಾರಗಳು ಈಗಾಗಲೇ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿವೆ.

ನಾಗಗಳು ಅಂದರೆ ಯಾರು?
‘ನಾಗ’ ಎಂಬ ಪದವು ಪ್ರಾಚೀನ ಕಾಲದಲ್ಲಿ ಭಾರತದ ಕಾಡುಗಳು ಮತ್ತು ಬೆಟ್ಟಗಳಲ್ಲಿ ಅಲೆದಾಡುತ್ತಿದ್ದ ಹಾವಿನ ಆರಾಧಕರ ಪ್ರಾಚೀನ ಬುಡಕಟ್ಟು ಜನಾಂಗವನ್ನು ಸೂಚಿಸುತ್ತದೆ. ನಾಗ ಸಾಧುಗಳು ಶಿವನೇ (Shiva) ದೇವರೆಂದು ನಂಬುತ್ತಾರೆ.

ನಾಗಾ ಸಾಧುಗಳಾಗುವ ಮೊದಲ ಹೆಜ್ಜೆ ಯಾವುದೆಂದರೆ ಮಾರ್ಗದರ್ಶನ ಮಾಡುವ ಗುರುವನ್ನು ಹುಡುಕಬೇಕಾಗುತ್ತದೆ. ಗುರು ಸಿಕ್ಕಿದ ಬಳಿಕ ಕಠಿಣ ತರಬೇತಿ ಮತ್ತು ಶಿಸ್ತಿನ ಅವಧಿಗೆ ಒಳಗಾಗಬೇಕಾಗುತ್ತದೆ. ಇದರಲ್ಲಿ ಧ್ಯಾನ, ಯೋಗ ಮತ್ತು ಇತರ ಆಧ್ಯಾತ್ಮಿಕ ಅಭ್ಯಾಸಗಳು ಸೇರಿವೆ. ಕಟ್ಟುನಿಟ್ಟಾದ ಬ್ರಹ್ಮಚರ್ಯ ನಿಯಮಗಳನ್ನು ಪಾಲಿಸಬೇಕು ಮತ್ತು ಲೌಕಿಕ ಸುಖಗಳಿಂದ ದೂರವಿರಬೇಕಾಗುತ್ತದೆ.

Naga Sadhus 1

ರಹಸ್ಯ ಸಂದರ್ಶನ:
ಅಖಾರ ಸೇರಲು ನೋಂದಣಿ ಫಾರಂ ನೀಡಲಾಗುತ್ತದೆ. ನಾಗ ಸಾಧುಗಳಾಲು ಇಚ್ಛಿಸಿದ ವ್ಯಕ್ತಿಗಳನ್ನು ರಹಸ್ಯವಾಗಿ ಸಂದರ್ಶಿಸಲಾಗುತ್ತಿದೆ. ಜುನಾ, ಶ್ರೀ ನಿರಂಜನಿ, ಶ್ರೀ ಮಹಾನಿರ್ವಾಣಿ, ಆವಾಹನ್, ಅಟಲ್ ಮತ್ತು ಆನಂದ್ ಅಖಾರಗಳಲ್ಲಿನ ಎಲ್ಲಾ ಮಾನದಂಡಗಳನ್ನು ಪೂರೈಸಿದವರನ್ನು ನಾಗ ಸನ್ಯಾಸದ ದೀಕ್ಷೆ ನೀಡಲಾಗುತ್ತದೆ. ಇದನ್ನೂ ಓದಿ: ನನ್ನ ಹಲವು ಪ್ರಶ್ನೆಗಳಿಗೆ ಸನಾತನ ಧರ್ಮದಲ್ಲಿ ಉತ್ತರ ಸಿಕ್ಕಿತು – ಕುಂಭಮೇಳದಲ್ಲಿ ಆಫ್ರಿಕಾದ ಸಾಧು

Naga Sadhus 3

ಪಿಂಡ ಪ್ರದಾನ ಮಾಡುತ್ತಾರೆ ಯಾಕೆ?
ನಾಗ ಸಾಧುಗಳ ದೀಕ್ಷೆ ಪಡೆಯುತ್ತಿರುವ ಮೊದಲ ಬ್ಯಾಚ್‌ ಸದಸ್ಯರಿಗೆ ಗಂಗಾ ನದಿಯ ದಡದಲ್ಲಿ ಆಚರಣೆಯನ್ನು ನಡೆಸಲಾಗಿದೆ. ಪ್ರತಿ ಅಖಾರದಲ್ಲಿ ವಿಭಿನ್ನ ದಿನಗಳಲ್ಲಿ ದೀಕ್ಷೆ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ. ಶನಿವಾರ ಜುನಾ ಅಖಾರದಲ್ಲಿ ಸನ್ಯಾಸಿಗಳಿಗೆ ಕೇಶ ಮುಂಡನ ಮಾಡಲಾಗಿದೆ. ಈ ಸನ್ಯಾಸಿಗಳು ತಮ್ಮ ಪಿಂಡ ಪ್ರದಾನ ಮಾಡಬೇಕಾಗುತ್ತದೆ. ಹಿಂದೂ ಧರ್ಮದದಲ್ಲಿ ತಮ್ಮ ಮನೆಯವರು, ಕುಟುಂಬಸ್ಥರು ಅಗಲಿದಾಗ ಅವರಿಗೆ ಗೌರವ ಸಲ್ಲಿಸುವ ಪರಿಯನ್ನು ಪಿಂಡ ಪ್ರದಾನ ಎನ್ನಲಾಗುತ್ತದೆ. ಆದರೆ ನಾಗಗಳಾದವರು ಜೀವಂತವಾಗಿದ್ದರೂ, ಭೌತಿಕ ಪ್ರಪಂಚದೊಂದಿನ ಸಂಬಂಧವನ್ನು ಕಡಿತಗೊಳಿಸಬೇಕಾಗುತ್ತದೆ. ಸಂಬಂಧ ಕಡಿತಗೊಳಿಸುವ ಸಲುವಾಗಿ ತಮ್ಮ ಪಿಂಡವನ್ನೇ ಪ್ರದಾನ ಮಾಡುತ್ತಾರೆ.

ನಾಗಾದೀಕ್ಷೆ ಪೂರ್ಣಗೊಳ್ಳುವುದು ಯಾವಾಗ?
ಕೇಶ ಮುಂಡನ ಮತ್ತು ಪಿಂಡ ದಾನದ ನಂತರ ಮೌನಿ ಅಮಾವಾಸ್ಯೆಯ ಅಮೃತ ಸ್ನಾನ ಹಬ್ಬದ ರಾತ್ರಿ ನಾಗ ಸಾಧುವಾಗಲು ಸಂಪೂರ್ಣ ದೀಕ್ಷೆಯನ್ನು ನಡೆಸಲಾಗುತ್ತದೆ. ಎಲ್ಲಾ ಅಭ್ಯರ್ಥಿಗಳು ಧರ್ಮದ ಧ್ವಜದ ಅಡಿಯಲ್ಲಿ ವಿವಸ್ತ್ರವಾಗಿ ನಿಲ್ಲುತ್ತಾರೆ. ಆಚಾರ್ಯ ಮಹಾಮಂಡಲೇಶ್ವರರು ಅವರನ್ನು ವಿಧಿವಿಧಾನಗಳೊಂದಿಗೆ ನಾಗರಾಗಲು ದೀಕ್ಷೆ ನೀಡುತ್ತಾರೆ. ಸಭಾಪತಿ (ಸಮಾರಂಭದ ಅಧ್ಯಕ್ಷತೆ ವಹಿಸುವ ವ್ಯಕ್ತಿ) ಅವರಿಗೆ ಅಖಾರದ ನಿಯಮಗಳು ಮತ್ತು ನಿಯಮಗಳ ಬಗ್ಗೆ ತಿಳಿಸುತ್ತಾರೆ ಮತ್ತು ಪ್ರತಿಜ್ಞೆಯನ್ನು ಬೋಧಿಸುತ್ತಾರೆ. ಪ್ರಕ್ರಿಯೆ ಪೂರ್ಣಗೊಂಡ ನಂತರ ಎಲ್ಲರನ್ನೂ ಅಮೃತ ಸ್ನಾನಕ್ಕೆ ಕಳುಹಿಸಲಾಗುತ್ತದೆ. ಅಮೃತ ಸ್ನಾನದ ರಾತ್ರಿಯಂದು ಇವರ ನಾಗಾದೀಕ್ಷೆ ಪೂರ್ಣಗೊಳ್ಳುತ್ತದೆ. ಇದನ್ನೂ ಓದಿ: ಕುಂಭಮೇಳದಲ್ಲಿ 7 ಅಡಿ ಎತ್ತರದ ರಷ್ಯಾದ ಬಾಬಾ – ‘ಪರಶುರಾಮನ ಅವತಾರ’ ಎಂದ ಭಕ್ತರು

Naga Sadhus 2

ಮೂರು ಹಂತಗಳಲ್ಲಿ ಪರಿಶೀಲನೆ:
ಜುನಾ ಅಖಾರದಲ್ಲಿ ಸುಮಾರು 2,000 ಜನರಿಗೆ ನಾಗ ಸನ್ಯಾಸಕ್ಕೆ ದೀಕ್ಷೆ ನೀಡಿದರೆ ಶ್ರೀ ನಿರಂಜನಿ ಅಖಾರದಲ್ಲಿ ಸುಮಾರು 1,100 ಮಂದಿಯನ್ನು ನಾಗಾ ಸನ್ಯಾಸಿಗಳನ್ನಾಗಿ ಮಾಡಲಾಗುತ್ತದೆ. ಅದೇ ರೀತಿಯಾಗಿ ಶ್ರೀ ಮಹಾನಿರ್ವಾಣಿ, ಅಟಲ್, ಆನಂದ್ ಮತ್ತು ಆವಾಹನ ಅಖಾರಗಳಲ್ಲಿ ಈ ಪ್ರಕ್ರಿಯೆ ಪ್ರಾರಂಭವಾಗಿದೆ.

ಅರ್ಜಿದಾರರನ್ನು ಮೂರು ಹಂತಗಳಲ್ಲಿ ಸಂಪೂರ್ಣವಾಗಿ ಅವರ ವಿವರವನ್ನು ಪರಿಶೀಲಿಸಲಾಗುತ್ತದೆ. ಈ ಪರಿಶೀಲನಾ ಪ್ರಕ್ರಿಯೆ ಆರು ತಿಂಗಳ ಮೊದಲೇ ಆರಂಭವಾಗುತ್ತದೆ. ಅಖಾರದ ಠಾಣಾಪತಿ ಅಷ್ಟಕೋಶಲ್ ಮಹಂತ್, ಅಭ್ಯರ್ಥಿಯ ವಿವರ ಮತ್ತು ಆತನ ಚಟುವಟಿಕೆಗಳನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸುತ್ತಾರೆ. ಪರಿಶೀಲನೆ ನಡೆಸಿದ ಬಳಿಕ ವರದಿಯನ್ನು ಅಖಾರದ ಆಚಾರ್ಯ ಮಹಾಮಂಡಲೇಶ್ವರರಿಗೆ ನೀಡಲಾಗುತ್ತದೆ. ಆಚಾರ್ಯ ಮಹಾಮಂಡಲೇಶ್ವರರು ಅಖಾರದ ಪಂಚರಿಂದ ಮತ್ತೆ ಪರಿಶೀಲನೆ ನಡೆಸುತ್ತಾರೆ.

ಅರ್ಜಿಗಳ ಪರಿಶೀಲನೆಯ ಸಮಯದಲ್ಲಿ ಜುನಾ ಅಖಾರ 53 ಮಂದಿಯನ್ನು ಮತ್ತು ನಿರಂಜನಿ ಅಖಾರ 22 ಜನರನ್ನು ಅನರ್ಹಗೊಳಿಸಿದೆ.

Share This Article