ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿ ವಿಚಾರವಾಗಿ ಫೆ.13 ಗುರುವಾರ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಬರೋಬ್ಬರೀ 400 ಕನ್ನಡ ಸಂಘಟನೆಗಳಿಂದ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದೆ.
ಯಾರೆಲ್ಲಾ ಬೆಂಬಲ ನೀಡುತ್ತಿದ್ದಾರೆ?
ಬರೋಬ್ಬರಿ 400 ಕನ್ನಡ ಸಂಘಟನೆಗಳಿಂದ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದೆ. ಕನ್ನಡ ಸಂಘಟನೆಗಳ ಒಕ್ಕೂಟ, ಓಲಾ-ಉಬರ್ ಕಾರು ಚಾಲಕರ ಸಂಘ, ಚಾಲಕರ ಸಂಘಟನೆಗಳ ಒಕ್ಕೂಟ, ಆಟೋ-ಟ್ಯಾಕ್ಸಿ ಚಾಲಕರ ಸಂಘ ಕರ್ನಾಟಕ ಬಂದ್‍ಗೆ ಬೆಂಬಲ ಸೂಚಿಸಿದೆ. ಇತ್ತ ನಮ್ಮ ಕನ್ನಡ ರಕ್ಷಣಾ ವೇದಿಕೆ, ಜಯ ಕರ್ನಾಟಕ, ದಲಿತ ಪರ ಸಂಘಟನೆಗಳ ಒಕ್ಕೂಟ, ಮಹಿಳಾ ಸಂಘಟನೆಗಳ ಒಕ್ಕೂಟ, ರೈತ ಹೋರಾಟ ಸಂಘಗಳು, ಸಿಐಟಿಯು ಸೇರಿದಂತೆ ಕಾರ್ಮಿಕ ಸಂಘಟನೆಗಳಿಂದಲೂ ಬೆಂಬಲ ವ್ಯಕ್ತವಾಗಿದೆ.
Advertisement
Advertisement
ಬೀದಿವ್ಯಾಪಾರಿಗಳ ಸಂಪೂರ್ಣ ಬೆಂಬಲ:
ಬೀದಿ ಬದಿ ಹೋಟೆಲ್, ಬಟ್ಟೆಯಂಗಡಿ, ಪಾನಿಪೂರಿ ಅಂಗಡಿ, ಬೀದಿ ಬದಿ ತರಕಾರಿ, ಹೂವು, ಹಣ್ಣಿನಂಗಡಿ ಬಂದ್‍ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯದ 4,80,000 ಹಾಗೂ ಬೆಂಗಳೂರಿನಲ್ಲಿ 80 ಸಾವಿರ ಬೀದಿ ವ್ಯಾಪಾರಿಗಳು ಗುರುವಾರ ವ್ಯಾಪಾರ ಸ್ಥಗಿತಗೊಳಿಸಲಿದ್ದಾರೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಸಂಪೂರ್ಣ ಬಂದ್‍ಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಬೀದಿ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಸಿ.ಇ ರಂಗಸ್ವಾಮಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
Advertisement
ಶಾಲಾ-ಕಾಲೇಜು ರಜೆ ಇರುತ್ತಾ?
ಹೀಗಾಗಿ ಸಾರಿಗೆ ಬಸ್‍ಗಳ, ಆಟೋಗಳ ಸಂಚಾರ ಇರುತ್ತಾ? ಇಲ್ಲವಾ ಎನ್ನುವ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಶಾಲಾ ಕಾಲೇಜುಗಳಿಗೆ ರಜೆ ಇರುತ್ತಾ ಎನ್ನುವ ಬಗ್ಗೆ ಕೂಡ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ಫೆ. 12ರಂದು ನಮ್ಮ ತೀರ್ಮಾನ ತಿಳಿಸುತ್ತೇವೆ ಎಂದು ಅನೇಕ ಸಂಘಟನೆಗಳು ಹೇಳುತ್ತಿವೆ. ಹೀಗಾಗಿ ಫೆ. 13ರಂದು ಬಂದ್‍ಗೆ ಇನ್ನು ಹೆಚ್ಚು ಬೆಂಬಲ ವ್ಯಕ್ತವಾದರೆ ಬೆಂಗಳೂರು ಸ್ಥಬ್ಧವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
Advertisement
ಇತ್ತ ಕರ್ನಾಟಕ ಬ್ಯಾಂಕ್ ಎಂಪ್ಲಾಯಿಸ್ ಫೆಡರಲ್ ಅಸೋಸಿಯೇಶನ್ ಬಂದ್‍ಗೆ ನೈತಿಕ ಬೆಂಬಲಕ್ಕೆ ನೀಡುವ ಸಾಧ್ಯತೆ ಇದೆ. ಆದರೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಬಂದ್ ಮಾಡಬೇಕಾ? ಇಲ್ವ? ಎಂದು ತೀರ್ಮಾನ ಮಾಡುತ್ತೇವೆ ಎಂದು ಅಸೋಸಿಯೇಷನ್ ಕಾರ್ಯದರ್ಶಿ ಅಜೇಯ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಮಾಲ್‍ಗಳು ಇಲ್ಲಿಯವರಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮಾಲ್ ಮುಚ್ಚಬೇಕಾ? ತೆಗೆಯಬೇಕಾ ಎನ್ನುವುದು ಸ್ಪಷ್ಟವಾಗಿಲ್ಲ. ಮಾಲ್‍ಗಳ ಮಾಲೀಕರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಮಾಲ್‍ಗಳಿಗೆ ಎಂದಿನಂತೆ ನೆಟ್ ಹಾಕಿ ರಕ್ಷಿಸಲು ತೀರ್ಮಾನ ಮಾಡಲಾಗಿದ್ದು, ಮಾಲ್ ಮುಂದೆ ಕನ್ನಡ ಬಾವುಟ ಹಾಕಬೇಕು, ನೈತಿಕ ಬೆಂಬಲ ಕೊಡಬೇಕೆಂದು ಕನ್ನಡಪರ ಸಂಘಟನೆಗಳು ಮಾಲ್ ಮಾಲೀಕರ ನಡುವೆ ಚರ್ಚೆಯಲ್ಲಿ ತೀರ್ಮಾನಿಸಲಾಗಿದೆ ಎನ್ನಲಾಗುತ್ತಿದೆ.
ಖಾಸಗಿ ಬಸ್ ಅಸೋಸಿಯೇಷನ್‍ಗೆ ಬಂದ್ ಮಾಡುವಂತೆ ಯಾರು ಪ್ರಸ್ತಾವನೆಯೇ ನೀಡಿಲ್ಲ. ಕನ್ನಡ ಪರ ಸಂಘಟನೆಗಳ ಬಂದ್ ಕರೆ ಬಗ್ಗೆ ಮಾಹಿತಿಯೇ ಇಲ್ಲ. ಕನ್ನಡಕ್ಕಾಗಿ ಬಂದ್ ಮಾಡಿದ್ದರೆ ಒಳಿತು. ನಮ್ಮನ್ನು ಯಾವುದಾದರೂ ಸಂಘಟನೆಯವರು ಕರೆ ಮಾಡಿ ಬೆಂಬಲ ಕೇಳಿದರೆ ತೀರ್ಮಾನ ಮಾಡುತ್ತೇವೆ ಎಂದು ಖಾಸಗಿ ಬಸ್ ಅಸೋಸಿಯೇಷನ್‍ಗೆ ಕಾರ್ಯದರ್ಶಿ ಸತ್ಯಪ್ಪ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಹಾಗೆಯೇ ಕರ್ನಾಟಕ ರಾಜ್ಯ ಟ್ರಾವೆಲ್ ಮಾಲೀಕರ ಸಂಘ ಇನ್ನು ಅಂತಿಮ ತೀರ್ಮಾನ ಮಾಡಿಲ್ಲ. ಆದರೆ ನೈತಿಕ ಬೆಂಬಲ ಈಗಲೂ ಇದೆ ಎಂದು ಸಂಘದ ಅಧ್ಯಕ್ಷ ರಾಧಕೃಷ್ಣ ಹೊಳ ಪ್ರತಿಕ್ರಿಯಿಸಿದ್ದಾರೆ.
ಪ್ರವೀಣ್ ಕುಮಾರ್ ಶೆಟ್ಟಿ ಬಣದಿಂದ ಬೆಂಬಲವಿಲ್ಲ:
ಬಂದ್‍ಗೆ ಬೆಂಬಲ ಕೊಡಬೇಕೋ? ಬೇಡವೋ ಎಂದು ಇಂದು ಸಂಜೆ ನಿರ್ಧಾರ ಪ್ರಕಟಿಸುತ್ತೇವೆ. ಈ ಬಗ್ಗೆ ಚರ್ಚಿಸಲು ಪ್ರವೀಣ್ ಕುಮಾರ್ ಶೆಟ್ಟಿ ಅವರು ರಾಜ್ಯ ಮಟ್ಟದ ಪದಾಧಿಕಾರಿಗಳ ಸಭೆ ಕರೆದಿದ್ದಾರೆ. ಕೆಲ ಬೆರಳಿಕೆ ಸಂಘಟನೆಗಳು ಬಂದ್‍ಗೆ ಕರೆ ಕೊಟ್ಟರೆ ಬಂದ್ ಆಗಲ್ಲ. ಬಂದ್‍ನಿಂದ ಕನ್ನಡಿಗರಿಗೆ ಹೊರೆಯಾಗುತ್ತೆ ಬಿಟ್ಟರೆ ಇದರಿಂದ ಸರೋಜಿನಿ ಮಹಿಷಿ ವರದಿ ಜಾರಿಯಾಗಲ್ಲ. ಈ ವರದಿ ಜಾರಿಯನ್ನು ಮುಖ್ಯಮಂತ್ರಿಗಳೇ ಜಾರಿ ಮಾಡಬೇಕಿದೆ. ಹೀಗಾಗಿ ಮುಖ್ಯಮಂತ್ರಿಗಳನ್ನ ಎಚ್ಚರಿಸುವ ಕೆಲಸ ಆಗಬೇಕಿದೆ. ಬಂದ್ ಮಾಡುವುದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತೆ. ಬಂದ್ ಬಗ್ಗೆ ನಾವು ಗಮನ ಹರಿಸಿಲ್ಲ. ಇದೇ ವರದಿ ಜಾರಿಗೆಗೆ ಆಗ್ರಹಿಸಿ ನಾವು ಅತ್ತಿಬೆಲೆಯಿಂದ ಜಾಥ ನಡೆಸಿ ಸಿಎಂಗೆ ಮನವಿ ಮಾಡ್ತೇವೆ. ಜಾಥ ನಡೆಸುವ ಕುರಿತು ಶೀಘ್ರದಲ್ಲೇ ದಿನಾಂಕ ಪ್ರಕಟ ಮಾಡ್ತೇವೆ ಎಂದು ಪ್ರವೀಣ್ ಕುಮಾರ್ ಶೆಟ್ಟಿ ಹೇಳಿಕೆ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.