ಮೈಸೂರು: ಅಖಂಡ ಕರ್ನಾಟಕದ ಹಿನ್ನೆಲೆ ತಿಳಿಯದೇ, ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಆಗ್ರಹಿಸುತ್ತಿರುವವರು ಸ್ವಾರ್ಥಿಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ.
ಇಂದು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಅಂತಾ ಏನಿಲ್ಲ. ನಮ್ಮದು ಅಖಂಡ ಕರ್ನಾಟಕ. ಏಕೀಕರಣ ಮಹತ್ವ ತಿಳಿದಿಲ್ಲದವರು ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಆಗ್ರಹಿಸುತ್ತಿರುವ ಸ್ವಾರ್ಥಿಗಳು. ಕರ್ನಾಟಕ ಏಕೀಕರಣ ಏಕಾಯಿತು ಎಂಬುದು ತಿಳಿದಿಲ್ಲ. ಭಾಷಾವಾರು ಪ್ರಾಂತ್ಯ ಏಕಾಯಿತು ಎಂಬುದರ ಮಾಹಿತಿಯಿಲ್ಲದೇ ಹೇಳಿಕೆ ನೀಡುತ್ತಿರುವುದು ಬಾಲಿಶ ವಾದ ಎಂದು ಕಿಡಿಕಾರಿದರು.
Advertisement
ನಾನೂ ಸಹ ಉತ್ತರ ಕರ್ನಾಟಕದ ಶಾಸಕನೇ, ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಅಭಿವೃದ್ಧಿಯ ವಿಚಾರವನ್ನು ನಾನು ಒಪ್ಪುತ್ತೇನೆ. ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಪಾಯಿ ಹಣ ನೀಡಿದ್ದೇನೆ. ಅಲ್ಲದೇ ಪ್ರತ್ಯೇಕ ರಾಜ್ಯದ ಮಾತನಾಡುತ್ತಿರುವ ಶ್ರೀರಾಮುಲು, ಉಮೇಶ್ ಕತ್ತಿಯವರು ಉತ್ತರ ಕರ್ನಾಟಕ ಭಾಗಕ್ಕೆ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಶೂನ್ಯ ಕೊಡುಗೆ ನೀಡಿದೆ ಎಂದು ಆರೋಪಿಸಿದರು.