ಬೆಂಗಳೂರು: ರಾಜ್ಯದಲ್ಲಿ ಹುಲಿಗಳೆಂದು ಹೇಳಿಕೊಂಡು ಆರ್ಭಟಿಸುತ್ತಿದ್ದ ಕೆಲ ನಾಯಕರು ಮುಂಬೈನಲ್ಲಿ ಬಯಲಾಟದ ಪ್ರಯತ್ನ ಮಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಯುವ ಘಟಕ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂಬೈಗೆ ಹೋಗಿ ಕಾಂಗ್ರೆಸ್, ಜೆಡಿಎಸ್ ಹಿರಿಯ ನಾಯಕರು ಬೀದಿ ರಂಪಾಟ ಮಾಡುತ್ತಿರುವುದು ಶೋಭೆ ತರುವಂತದಲ್ಲ. ರಾಜ್ಯದಲ್ಲಿ ಹುಲಿಗಳೆಂದು ಆರ್ಭಟಿಸುತ್ತಿದ್ದ ಕೆಲ ನಾಯಕರು, ಮುಂಬೈಗೆ ಹೋಗಿ ಬಯಲಾಟದ ಪ್ರಯತ್ನ ಮಾಡುತ್ತಿದ್ದಾರೆ. ಅತೃಪ್ತ ಶಾಸಕರನ್ನ ಮನವೊಲಿಸಿ ಕರೆತಂದರೆ ನಮ್ಮ ಅಭ್ಯಂತರವೇನಿಲ್ಲ ಎಂದು ಮುಂಬೈ ತೆರಳಿರುವ ಸಚಿವ ಡಿಕೆ ಶಿವಕುಮಾರ್, ಶಾಸಕ ಶಿವಲಿಂಗೇಗೌಡ ಹಾಗೂ ಸಚಿವ ಜಿ.ಟಿ ದೇವೇಗೌಡ ಅವರ ಹೆಸರನ್ನು ಹೇಳದೆ ಟಾಂಗ್ ಕೊಟ್ಟರು.
Advertisement
Advertisement
ನಿಮ್ಮ ಶಾಸಕರೇ ನಿಮ್ಮ ನಡುವಳಿಕೆ ವಿರುದ್ಧ ದೂರು ನೀಡಿದ್ದಾರೆ. ಹೀಗಾಗಿ ಅತೃಪ್ತರಿಗೆ ಅಲ್ಲಿನ ಸರ್ಕಾರ ಭದ್ರತೆ ನೀಡಿದ್ದಾರೆ. ಬಿಜೆಪಿ 105 ಸ್ಥಾನಗಳಿಸಿದ್ದರೂ ರಾಜ್ಯದಲ್ಲಿ ವಿರೋಧ ಪಕ್ಷದಲ್ಲಿದೆ ಎಂದರು. ಬಳಿಕ ಸ್ಪೀಕರ್ ನಡುವಳಿಕೆ ಬಗ್ಗೆ ನಾನೇನು ಮಾತನಾಡಲ್ಲ. ಅವರೊಳಗಿನ ಆಂತರಿಕ ಭಿನ್ನಾಭಿಪ್ರಾಯದಿಂದಲೇ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಕಾದು ನೋಡೋಣ ಏನಾಗುತ್ತೆ ಎಂದು ಹೇಳಿದ್ದಾರೆ.