ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆಮದಾಗುವ ವಿದೇಶಿ ವಾಹನಗಳು ಮತ್ತು ಬಿಡಿ ಭಾಗಗಳ ಮೇಲೆ 25%ರಷ್ಟು ಸುಂಕವನ್ನು (Auto Tariff) ಘೋಷಿಸಿದ್ದು ಭಾರತದ(India) ಹಲವು ಅಟೋ ಕಂಪನಿಗಳ ಮೇಲೆ ಪರಿಣಾಮ ಬೀಳಲಿದೆ.
ಟಾಟಾ ಮೋಟಾರ್ಸ್, ಐಷರ್ ಮೋಟಾರ್ಸ್, ಸೋನಾ ಬಿಎಲ್‌ಡಬ್ಲ್ಯೂ ಮತ್ತು ಸಂವರ್ಧನ ಮದರ್‌ಸನ್‌ನಂತಹ ಭಾರತೀಯ ಕಂಪನಿಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಈ ಕಂಪನಿಗಳು ಅಮೆರಿಕ, ಯುರೋಪ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಚೀನಾಗಳಿಗೆ ಆಟೋ ಘಟಕಗಳನ್ನು ರಫ್ತು ಮಾಡುತ್ತಿವೆ.
ಟಾಟಾ ಮೋಟಾರ್ಸ್ ನೇರವಾಗಿ ಅಮೆರಿಕಕ್ಕೆ ವಾಹನಗಳನ್ನು ರಫ್ತು ಮಾಡುತ್ತಿಲ್ಲ. ಆದರೆ ಅದರ ಅಂಗಸಂಸ್ಥೆಯಾದ ಜಾಗ್ವಾರ್ ಲ್ಯಾಂಡ್ ರೋವರ್ (JLR) 2024ರ ಹಣಕಾಸು ವರದಿಯ ಪ್ರಕಾರ ಒಟ್ಟಾರೆ ಮಾರಾಟದ ಶೇ.22 ರಷ್ಟನ್ನು ಹೊಂದಿದೆ. 2024 ರ ಹಣಕಾಸು ವರ್ಷದಲ್ಲಿ ಜೆಎಲ್‌ಆರ್ ವಿಶ್ವಾದ್ಯಂತ ಸುಮಾರು 4 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. ಅಮೆರಿಕ ಜೆಎಲ್‌ಆರ್‌ನ ಪ್ರಮುಖ ಮಾರುಕಟ್ಟೆಯಲ್ಲಿ ಒಂದಾಗಿದೆ. ಅಮೆರಿಕದಲ್ಲಿ ಮಾರಾಟವಾಗುವ ಕಂಪನಿಯ ವಾಹನಗಳನ್ನು ಯುಕೆ ಮತ್ತು ಇತರ ಅಂತರಾಷ್ಟ್ರೀಯ ಘಟಕಗಳಲ್ಲಿ ತಯಾರಿಸಲಾಗುತ್ತದೆ. ಇದನ್ನೂ ಓದಿ: ಓಲಾ, ಊಬರ್ ಕ್ಯಾಬ್‍ಗಳಿಗೆ ಕೇಂದ್ರ ಸರ್ಕಾರದಿಂದ ಶಾಕ್ – ಸಹಕಾರ್ ಟ್ಯಾಕ್ಸಿ ಲೋಕಾರ್ಪಣೆಗೆ ಸಿದ್ಧತೆ
ರಾಯಲ್ ಎನ್‌ಫೀಲ್ಡ್ (Royal Enfield) ಮೋಟಾರ್‌ಸೈಕಲ್‌ಗಳ ತಯಾರಕರಾದ ಐಷರ್ ಮೋಟಾರ್ಸ್ (Eicher Motors) ಮೇಲೂ ಸುಂಕ ಪೆಟ್ಟು ಬೀಳಲಿದೆ. ರಾಯಲ್ ಎನ್‌ಫೀಲ್ಡ್ ಅಮೆರಿಕಕ್ಕೆ 650 ಸಿಸಿ ಬೈಕ್‌ಗಳನ್ನು ರಫ್ತು ಮಾಡುತ್ತಿದೆ. ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ AI ಮೊರೆ – ಏನಿದು VAC?
ಭಾರತದ ಪ್ರಮುಖ ಆಟೋ ಬಿಡಿಭಾಗ ತಯಾರಕರಲ್ಲಿ ಒಂದಾದ ಸಂವರ್ಧನ ಮದರ್‌ಸನ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಯುರೋಪ್ ಮತ್ತು ಅಮೆರಿಕದಲ್ಲಿ ಬಲವಾದ ಮಾರುಕಟ್ಟೆಯನ್ನು ಹೊಂದಿದೆ. ಇದು ಟೆಸ್ಲಾ ಮತ್ತು ಫೋರ್ಡ್ ಸೇರಿದಂತೆ ಪ್ರಮುಖ ಅಮೇರಿಕನ್ ವಾಹನ ತಯಾರಕರಿಗೆ ಬಿಡಿ ಭಾಗಗಳನ್ನು ಪೂರೈಸುತ್ತದೆ.
ಸೋನಾ ಕಾಮ್‌ಸ್ಟಾರ್ ಗೇರ್‌ಗಳು ಮತ್ತು ಸ್ಟಾರ್ಟರ್ ಮೋಟಾರ್‌ಗಳು ಸೇರಿದಂತೆ ಆಟೋಮೋಟಿವ್ ಸಿಸ್ಟಮ್‌ಗಳು ಮತ್ತು ಘಟಕಗಳನ್ನು ತಯಾರಿಸುತ್ತದೆ. ಕಂಪನಿಯು ತನ್ನ ಆದಾಯದ ಸುಮಾರು 66 ಪ್ರತಿಶತವನ್ನು ಅಮೆರಿಕ ಮತ್ತು ಯುರೋಪಿಯನ್ ಮಾರುಕಟ್ಟೆಗಳಿಂದ ಪಡೆಯತ್ತಿದೆ.
ಅಮೆರಿಕ, ಯುರೋಪ್ ಅಲ್ಲದೇ ಸೋನಾ ಬಿಎಲ್‌ಡಬ್ಲ್ಯೂ ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾಕ್ಕೆ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿದ್ದರಿಂದ ಗಂಭೀರವಾದ ಪೆಟ್ಟು ಬೀಳಲಾರದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
ಭಾರತ್ ಫೋರ್ಜ್, ಸನ್ಸೆರಾ ಎಂಜಿನಿಯರಿಂಗ್ ಲಿಮಿಟೆಡ್, ಸುಪ್ರಜಿತ್ ಎಂಜಿನಿಯರಿಂಗ್ ಮತ್ತು ಬಾಲಕೃಷ್ಣ ಇಂಡಸ್ಟ್ರೀಸ್ ಅಮೆರಿಕಕ್ಕೆ ತನ್ನ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ.
2024 ರ ಆರ್ಥಿಕ ವರ್ಷದಲ್ಲಿ ಭಾರತವು 21.2 ಶತಕೋಟಿ ಡಾಲರ್ ಮೌಲ್ಯದ ಆಟೋ ಘಟಕಗಳನ್ನು ರಫ್ತು ಮಾಡಿದೆ. ಅಮೆರಿಕ ಮತ್ತು ಯರೋಪ್ ವಿಶ್ವದಲ್ಲೇ ಅತಿ ಹೆಚ್ಚು ಪ್ರಮಾಣದ ಅಟೋ ಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದೆ.