Tuesday, 17th July 2018

Recent News

ಎಲ್ಲಿದ್ದರೂ ಬಂದು ಬಿಡು ಮಗನೇ ಎಂದು ಗೋಗರೆಯುತ್ತಿದ್ದಾರೆ ಹಾಸನದ ಪೋಷಕರು!

ಹಾಸನ: ಕ್ಷುಲ್ಲಕ ಕಾರಣಕ್ಕೆ ತಾನು ಓದುತ್ತಿದ್ದ ಖಾಸಗಿ ಶಾಲೆಯ ಶಿಕ್ಷಕರು ಥಳಿಸಿದ್ದಕ್ಕೆ ಮನನೊಂದ ವಿದ್ಯಾರ್ಥಿಯೊಬ್ಬ ಮನೆ ಬಿಟ್ಟು ಹೋಗಿರುವ ಘಟನೆ ಹಾಸನದಲ್ಲಿ ನಡೆದಿದೆ.

ನಗರದ ಶಾಂತಿನಗರದ ಶ್ರೀನಿವಾಸ್ ಮತ್ತು ಪುಷ್ಪಲತಾ ಪುತ್ರ ಚಿರಾಗ್ ಕಾಣೆಯಾಗಿರುವ ವಿದ್ಯಾರ್ಥಿ. ಹಾಸನದ ಪ್ರತಿಷ್ಠಿತ ರಾಯಲ್ ಅಪೊಲೋ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಚಿರಾಗ್, ನವೆಂಬರ್ 19-20 ರಂದು ಶಾಲೆಯವರೇ ಕರೆದುಕೊಂಡು ಹೋಗಿದ್ದ ವಂಡರ್ ಲಾ ಪ್ರವಾಸಕ್ಕೆ ಹೋಗಿದ್ದನು.

ಪ್ರವಾಸ ಮುಗಿಸಿ ಬಂದ ನಂತರ ದುಬಾರಿ ವಾಚ್ ಕಟ್ಟಿಕೊಂಡು ಮಾಮೂಲಿ ಶಾಲೆಗೆ ಹೋಗಿದ್ದ. ಇದನ್ನು ಕಂಡ ಶಿಕ್ಷಕರು ಚಿರಾಗ್ ಗೆ ಹೊಡೆದಿದ್ದಾರೆ ಎನ್ನಲಾಗಿದೆ. ಅಲ್ಲದೇ ನಿನ್ನ ಪೋಷಕರನ್ನು ಶಾಲೆಗೆ ಕರೆದುಕೊಂಡು ಬರುವವರೆಗೂ ವಾಚ್ ಕೊಡೋದಿಲ್ಲ ಎಂದಿದ್ದಾರೆ.

ಇದರಿಂದ ಮನನೊಂದ ಚಿರಾಗ್ ನವೆಂಬರ್ 21 ರ ಬೆಳಗ್ಗೆ ಟ್ಯೂಷನ್ ಹೋಗಿ ಬರುತ್ತೇನೆ ಎಂದು ಮನೆ ಬಿಟ್ಟು ಹೋದವನು ಇನ್ನೂ ಮರಳಿ ಬಂದಿಲ್ಲ. ಇದರಿಂದ ಪೋಷಕರು ಕಂಗಾಲಾಗಿದ್ದು, ಒಂದೇ ಸಮನೆ ಕಣ್ಣೀರಿಡುತ್ತಿದ್ದಾರೆ. ಎಲ್ಲಿದ್ದರೂ ಬಂದು ಬಿಡು ಮಗನೇ ಎಂದು ಗೋಗರೆಯುತ್ತಿದ್ದಾರೆ.

ಚಿರಾಗ್ 21 ರ ಬೆಳಗ್ಗೆ ಮನೆಯಿಂದ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *