ಸ್ಯಾಂಡಲ್‌ವುಡ್ ಡಾಲಿ (Dali) ಎಂದೇ ಖ್ಯಾತಿಗಳಿಸಿರುವ ನಟ ಧನಂಜಯ್ (Dhananjay) ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ನಟನಾಗಿ, ನಿರ್ಮಾಪಕನಾಗಿ ಖ್ಯಾತಿಗಳಿಸಿರುವ ಡಾಲಿ ಧನಂಜಯ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ‘ಕಾಮನ್ ಮ್ಯಾನ್ ಹೀರೋ’ ಅಂತನೇ ಬಿರುದು ಪಡೆದಿರುವ ಡಾಲಿ ಈ ಬಾರಿ ಹುಟ್ಟುಹಬ್ಬವನ್ನು (Birthday) ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ.
ತನ್ನ ಬರ್ತಡೇ ದಿನ ಅಭಿಮಾನಿಗಳ ಜೊತೆ ಸಮಯ ಕಳೆಯಲು ನಿರ್ಧರಿಸಿರುವ ಡಾಲಿ, ಅಂದು ತಾವು ಯಾವೆಲ್ಲ ಸ್ಥಳದಲ್ಲಿ ಸಿಗುತ್ತೇನೆ ಎನ್ನುವುದನ್ನು ಹೇಳಿಕೊಂಡಿದ್ದಾರೆ. ಹುಟ್ಟು ಹಬ್ಬದ ದಿನದಂದು ತಾವು ಮನೆಯಲ್ಲಿ ಇರದೇ ಇರುವ ಕಾರಣಕ್ಕಾಗಿ ಯಾರೂ ಮನೆ ಹತ್ತಿರ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಹುಟ್ಟು ಹಬ್ಬದ ಮುನ್ನ ದಿನ ಆ.22 ರಂದು ಉತ್ತರಕಾಂಡ (Uttarkanda) ಸಿನಿಮಾದ ಟೀಸರ್ ರಿಲೀಸ್ ಆಗುವುದರಿಂದ ಅಂದು ಸಂಜೆ 5.30ಕ್ಕೆ ಸಂತೋಷ ಚಿತ್ರಮಂದಿರದಲ್ಲಿ ಸಿಗುತ್ತಾರಂತೆ.
ಅಂದು ರಾತ್ರಿಯೇ 11 ಗಂಟೆಯಿಂದ ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡುವುದಕ್ಕೂ ಡಾಲಿ ಸಿಗುತ್ತಾರಂತೆ. ಆಗಸ್ಟ್ 23ಕ್ಕೆ ಡಾಲಿ ಹುಟ್ಟು ಹಬ್ಬ. ಅಂದು ಮತ್ತೆ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೂ ನಂದಿ ಲಿಂಕ್ಸ್ ಗ್ರೌಂಡ್ ನಲ್ಲೇ ಧನಂಜಯ್ ಅಭಿಮಾನಿಗಳೊಂದಿಗೆ ಸಮಯ ಕಳೆಯುವುದಾಗಿ ತಿಳಿಸಿದ್ದಾರೆ. ಹುಟ್ಟು ಹಬ್ಬಕ್ಕೆ ಬರುವವರು ಕೇಕ್, ಹಾರ ತರಬೇಡಿ ಎಂದು ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ಈ ಬಾರಿಯ ಹುಟ್ಟುಹಬ್ಬವನ್ನು ಅಭಿಮಾನಿಗಳು ಡಾಲಿ ಉತ್ಸವ (Dali festival) ಹೆಸರಿನಲ್ಲಿ ಆಚರಿಸುತ್ತಿದ್ದಾರೆ. ಡಾಲಿ ಉತ್ಸವ ಎಂದು ಹೆಸರಿಟ್ಟು ‘ಅಭಿಮಾನದ ತೇರು ಎಳೆಯೋಣ ಬನ್ನಿ’ ಎಂದು ಟ್ಯಾಗ್ ಲೈನ್ ಇಡಲಾಗಿದೆ. ಇಂದಿನಿಂದಲೇ ಅಭಿಮಾನಿಗಳು ಉತ್ಸವಕ್ಕೆ ರೆಡಿಯಾಗಿದ್ದಾರೆ. 4 ವರ್ಷಗಳ ಬಳಿಕ ಅದ್ದೂರಿಯಾಗಿ ಅಭಿಮಾನಿಗಳ ಜೊತೆ ಡಾಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಡಾಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 10 ವರ್ಷಗಳಾಗಿದೆ. ಹಾಗಾಗಿ ಈ ಬಾರಿಯ ಹುಟ್ಟುಹಬ್ಬ ಧನಂಜಯ್ ಅವರಿಗೆ ತುಂಬಾ ವಿಶೇಷವಾಗಿದೆ.
ನೆರೆ, ಕೊರೊನಾ, ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ಕಾರಣದಿಂದ ಧನಂಜಯ್ ಕಳೆದ 4 ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಅಭಿಮಾನಿಗಳ ಕೈಗೂ ಸಿಕ್ಕಿರಲಿಲ್ಲ. ಹಾಗಾಗಿ ಈ ಬಾರಿ ದೊಡ್ಡ ಮಟ್ಟದಲ್ಲಿ ಬರ್ತಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದು ಹುಟ್ಟುಹಬ್ಬದ ದಿನ ಅಭಿಮಾನಿಗಳ ಜೊತೆಯೇ ಸಮಯ ಕಳೆಯಲು ನಿರ್ಧರಿಸಿದ್ದಾರೆ.
Web Stories