ಶಿವಮೊಗ್ಗ: ಕಾಂಗ್ರೆಸ್‌ನಲ್ಲಿ (Congress) ರಾಷ್ಟ್ರೀಯ ನಾಯಕರು ಎಲ್ಲಿದ್ದಾರೆ? ರಾಷ್ಟ್ರೀಯ ನಾಯಕರಿಲ್ಲದೆ ಕಾಂಗ್ರೆಸ್ ಪಕ್ಷವು ಸೊರಗುತ್ತಿದೆ. ನಮ್ಮಲ್ಲಿ ರಾಜ್ಯ ನಾಯಕರು, ರಾಷ್ಟ್ರೀಯ ನಾಯಕರು ಕೂಡಾ ಇದ್ದಾರೆ. ರಾಜ್ಯಕ್ಕೆ ಪಕ್ಷ ಸಂಘಟನೆಗೆ ನಮ್ಮ ರಾಷ್ಟ್ರೀಯ ನಾಯಕರು ಬರುತ್ತಲೇ ಇರುತ್ತಾರೆ. ರಾಹುಲ್ ಗಾಂಧಿ (Rahul Gandhi), ಸೋನಿಯಾ (Sonia Gandhi) ಹಾಗೂ ಪ್ರಿಯಾಂಕಾ ಗಾಂಧಿ (Priyanka Gandhi) ಪ್ರಚಾರ ಮಾಡಿದ ಕಡೆಯಲ್ಲೆಲ್ಲಾ ಕಾಂಗ್ರೆಸ್ ಸೋತಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (Eshwarappa) ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು.
ಪದೇ ಪದೇ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಬರುವ ಬಗ್ಗೆ ಕಾಂಗ್ರೆಸ್ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಗತಿ ಇಲ್ಲದೇ ಇರುವವರು ಕಾಂಗ್ರೆಸ್ ನಲ್ಲಿ ಪ್ರಚಾರಕ್ಕೆ ಬರುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಾತ್ರ ಎಲ್ಲೆಡೆ ಹೋಗುತ್ತಿದ್ದಾರೆ. ಅವರಿಬ್ಬರು ಸಮಾವೇಶಗಳನ್ನು ಮಾಡಿಕೊಂಡು ಬಾಯಿಗೆ ಬಂದಂತೆ ಮಾತನಾಡಿಕೊಂಡು ಓಡಾಡುತ್ತಿದ್ದಾರೆ. ಅವರಲ್ಲಿ ನಾಯಕರೇ ಇಲ್ಲ. ಹಾಗಾಗಿ ಅವರು ಯಾರೂ ರಾಜ್ಯಕ್ಕೆ ಬರುವುದಿಲ್ಲ. ಇದ್ದವರು ಬಂದರೆ ಚುನಾವಣೆಯಲ್ಲಿ ಸೋಲುತ್ತಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: `ಕೈ’ಗೆ ಶಾಕ್ – ಚುನಾವಣಾ ರಾಜಕೀಯದಿಂದ ಶಾಸಕ ತನ್ವೀರ್ ಸೇಠ್ ನಿವೃತ್ತಿ
Advertisement
Advertisement
ಕಾಂಗ್ರೆಸ್‌ನ ಪೇ ಸಿಎಂ ಪೋಸ್ಟರ್ ವಾರ್ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಮೊದಲು ನರೇಂದ್ರ ಮೋದಿಗೆ ನರಹಂತಕ ಎಂದರು. ಬಳಿಕ ಇವರದ್ದು ಪರ್ಸಂಟೇಜ್ ವ್ಯವಹಾರ ಎಂದು ಟೀಕೆ ಮಾಡಿದರು. ಈಗ ಪೇ ಸಿಎಂ ಎಂದು ಆರೋಪ ಮಾಡುತ್ತಿದ್ದಾರೆ. ನಾವು ಏನು ಅಭಿವೃದ್ಧಿ ಮಾಡಿದ್ದೇವೆ ಎಂಬುದನ್ನು ರಾಜ್ಯದ ಜನ ಗಮನಿಸುತ್ತಾರೆ. ಇದಕ್ಕೆ ತಕ್ಕ ಉತ್ತರ ಚುನಾವಣೆಯಲ್ಲಿ ಕೊಡುತ್ತಾರೆ ಎಂದು ಕಿಡಿಕಾರಿದರು.
Advertisement
ಕಾಂಗ್ರೆಸ್ ನಾಯಕರು ಟೀಕೆ ಮಾಡುವ ಪದಗಳು ಸರಿಯಿಲ್ಲ. ನಮಗೂ ಆ ಭಾಷೆ ಬಳಸಲು ಬರುತ್ತದೆ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರಿಗೆ ಭಾಷೆಗಳ ಬಗ್ಗೆ ಹಿಡಿತವೇ ಇಲ್ಲ. ಇವರನ್ನು ಈಗಾಗಲೇ ರಾಜ್ಯದ ಜನರು ತಿರಸ್ಕಾರ ಮಾಡಿದ್ದಾರೆ. ತಿರಸ್ಕಾರ ಮಾಡಿದ ಮುಖಗಳನ್ನು ಇಟ್ಟುಕೊಂಡು ಮತ್ತೆ ಹೋದರೆ ಜನರು ಪುರಸ್ಕರಿಸುತ್ತಾರಾ ಎಂದು ಪ್ರಶ್ನಿಸಿದರು.
Advertisement
ಮತ್ತೆ ಬಾದಾಮಿಯಿಂದಲೇ ಸ್ಪರ್ಧಿಸಿ ಎಂದು ಸಿದ್ದರಾಮಯ್ಯನವರಿಗೆ ಯಡಿಯೂರಪ್ಪನವರು ಹೇಳಿದ್ದರು. ಆ ಮಾತನ್ನು ಕೂಡಾ ಅವರು ಕೇಳಲಿಲ್ಲ. ಏನೋ ಹಿರಿಯರಾಗಿ ಯಡಿಯೂರಪ್ಪನವರು ಸಲಹೆಯನ್ನು ನೀಡಿದ್ದರು. ಅದನ್ನು ಕೂಡಾ ಸಿದ್ದರಾಮಯ್ಯನವರು ತಿರಸ್ಕರಿಸಿದ್ದಾರೆ. ಹಿರಿಯರ ಮಾರ್ಗದರ್ಶನ ಬೇಕು ಎಂದರೆ ಅವರ ಮಾತನ್ನು ಕೇಳಬಹುದಿತ್ತು ಎಂದರು. ಇದನ್ನೂ ಓದಿ: ಮೋದಿ ಭೇಟಿಯಿಂದ ʼಕೈʼ ನಾಯಕರಿಗೆ ಭ್ರಮನಿರಸನ: ಬೊಮ್ಮಾಯಿ
ಸಿದ್ದರಾಮಯ್ಯನವರಿಗೆ ತಮ್ಮ ಕ್ಷೇತ್ರ ಯಾವುದೆಂದೇ ಗೊತ್ತಿಲ್ಲ. ಆದರೆ ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಹೇಳುತ್ತಿದ್ದಾರೆ. ಇದೇ ವೇಳೆ ಹೈಕಮಾಂಡ್ ಹೇಳಿದ ಕಡೆ ಸ್ಪರ್ಧಿಸುವುದಾಗಿಯೂ ಹೇಳಿದ್ದಾರೆ. ಆದರೆ ಹೈಕಮಾಂಡ್ ಕೋಲಾರದಿಂದ ಸ್ಪರ್ಧಿಸಲು ಸೂಚಿಸಿದೆಯೇ? ಯಾವುದೇ ಕಾರಣಕ್ಕೂ ಕೋಲಾರದಲ್ಲಿ ಸಿದ್ದರಾಮಯ್ಯನವರು ಸ್ಪರ್ಧಿಸುವುದೂ ಇಲ್ಲ. ಒಂದೊಮ್ಮೆ ಸ್ಪರ್ಧಿಸಿದರೂ ಗೆಲ್ಲುವುದಿಲ್ಲ. ಏಕೆಂದರೆ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ, ಮುನಿಯಪ್ಪನವರು ಇವರನ್ನು ಗೆಲ್ಲಲು ಬಿಡುವುದಿಲ್ಲ. ಏಕೆಂದರೆ ಇವರೆಲ್ಲರ ಸೋಲಿಗೆ ಸಿದ್ದರಾಮಯ್ಯ ಕಾರಣವಾಗಿದ್ದಾರೆ ಎಂದು ಹರಿಹಾಯ್ದರು.
ಶಿವಮೊಗ್ಗದಲ್ಲಿ ವಿಜಯ ಸಂಕಲ್ಪ ಯಾತ್ರೆ ಕುರಿತು ಮಾತನಾಡಿದ ಅವರು, ಮಾರ್ಚ್ 1ರಿಂದ ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಿಂದ ವಿಜಯ ಸಂಕಲ್ಪ ಯಾತ್ರೆ ಹೊರಡಲಿದೆ. ಒಟ್ಟು ನಾಲ್ಕು ದಿಕ್ಕುಗಳಿಂದ ಯಾತ್ರೆ ಹೊರಡಲಿದ್ದು, ಜೆ.ಪಿ.ನಡ್ಡಾ ಅವರು ಈ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆಯನ್ನು ನೀಡಲಿದ್ದಾರೆ ಎಂದು ಹೇಳಿದರು.