ಬೆಂಗಳೂರು: ಹಂಗಾಮಿ ಸಭಾಪತಿಗೆ ಅಧಿಕಾರವಿಲ್ಲ ಎನ್ನುವುದಾದರೆ ನಾನು ಈಗಲೇ ರಾಜೀನಾಮೆ ನೀಡುತ್ತೇನೆ ಎಂದು ಬಸವರಾಜ್ ಹೊರಟ್ಟಿ ಹೇಳಿದ ಪ್ರಸಂಗ ಇಂದು ಪರಿಷತ್‍ನಲ್ಲಿ ನಡೆಯಿತು.
ಸಭಾಪತಿ ನೇಮಕಾತಿ ವಿಚಾರವಾಗಿ ನಡೆದ ಚರ್ಚೆ ವೇಳೆ ಬಿಜೆಪಿ ಶಾಸಕ ಶಾಣಪ್ಪ ಅವರು, ಹಂಗಾಮಿ ಸ್ಪೀಕರ್‍ಗೆ ಸದನ ನಡೆಸುವ ಅಧಿಕಾರವಿಲ್ಲ ಅಂತಾ ಇರುವುದಿಲ್ಲ ಎಂದಿದ್ದಕ್ಕೆ ಬಸವರಾಜ್ ಹೊರಟ್ಟಿ ಅವರು ರಾಜೀನಾಮೆ ನೀಡುವ ಕುರಿತು ಪ್ರಸ್ತಾಪಿಸಿದರು.
Advertisement
ಹೊರಟ್ಟಿ ಅವರ ಮಾತಿಗೆ ಸ್ಪಷ್ಟನೆ ನೀಡಿದ ಕಾನೂನು ಸಚಿವ ಕೃಷ್ಣಭೈರೇಗೌಡ ಅವರು, ನಡಾವಳಿಕೆ ನಡೆಸಲು ಹಂಗಾಮಿ ಸಭಾಪತಿಗೆ ಅವಕಾಶವಿದೆ. ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಬೆಂಬಲ ಸೂಚಿಸಿದರು. ಇದಕ್ಕೆ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ಶೀಘ್ರ ಚುನಾವಣೆ ನಡೆಸಬೇಕು ಅಂತಾ ಒತ್ತಾಯಿಸಿದರು. ತಕ್ಷಣವೇ ಪ್ರತಿಕ್ರಿಯೆ ನೀಡಿದ ಕೃಷ್ಣಬೈರೇಗೌಡ ಅವರು ಬಜೆಟ್ ಅಧಿವೇಶನದ ಒಳಗೆ ಆಯ್ಕೆ ಮಾಡುವುದಾಗಿ ಭರವಸೆ ನೀಡಿದರು.
Advertisement
ರಾಜ್ಯಪಾಲರ ಆದೇಶದಂತೆ ವಿಧಾನ ಪರಿಷತ್ ಸಭಾಪತಿ ಆಯ್ಕೆ ಆಗುವವರೆಗೂ, ಬಸವರಾಜ್ ಹೊರಟ್ಟಿಯವರು ಹಂಗಾಮಿ ಸಭಾಪತಿಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಉಗ್ರಪ್ಪ ಅವರು ಸರ್ಕಾರ ಕೆಟ್ಟ ಇತಿಹಾಸ ಸೃಷ್ಟಿಗೆ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿಕೊಂಡರು.