ನವದೆಹಲಿ: ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‍ಲೋಡ್ ಮಾಡುವುದು ಮತ್ತು ನೋಡುವುದು ಮಕ್ಕಳ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO Act) ಕಾಯ್ದೆಯಡಿ ಅಪರಾಧ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಮೂಲಕ ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಕಠಿಣ ಕಾನೂನಿನ ಕುರಿತು ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪು ನೀಡಿದೆ.
ಕೇವಲ ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‍ಲೋಡ್ ಮಾಡುವುದು ಮತ್ತು ನೋಡುವುದು ಪೋಕ್ಸೊ ಕಾಯ್ದೆಯಡಿ ಅಪರಾಧವಲ್ಲ ಎಂದು ತೀರ್ಪು ನೀಡಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರಿದ್ದ ದ್ವಿಸದಸ್ಯ ಪೀಠವು ತಳ್ಳಿಹಾಕಿತು. ತೀರ್ಪು ನೀಡುವಲ್ಲಿ ಹೈಕೋರ್ಟ್ ಮಹಾ ತಪ್ಪು ಎಸಗಿದೆ ಎಸಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಇದನ್ನೂ ಓದಿ: ಪ್ರಸಾದದಲ್ಲಿ ಕಲಬೆರಕೆ, ಅಪವಿತ್ರಕ್ಕೆ ಡೋಂಟ್ ಕೇರ್ – ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದಕ್ಕೆ ಮುಗಿಬಿದ್ದ ಭಕ್ತರು
ನ್ಯಾಯಾಲಯವು ‘Child pornography’ ಪದದ ಬಳಕೆಯನ್ನು ಅಸಮ್ಮತಿಗೊಳಿಸಿದೆ ಮತ್ತು ಸಂಸತ್ತು ಪೋಕ್ಸೊ ಕಾಯಿದೆಗೆ ತಿದ್ದುಪಡಿಯನ್ನು ತರಬೇಕು ಎಂದು ಸಲಹೆ ನೀಡಿತು. ನಾವು ಸುಗ್ರೀವಾಜ್ಞೆಯನ್ನು ತರಬಹುದು ಎಂದು ಸೂಚಿಸಿದ್ದೇವೆ. ಯಾವುದೇ ಆದೇಶಗಳಲ್ಲಿ ಇದನ್ನು `’Child pornography’ ಎಂದು ಉಲ್ಲೇಖಿಸದಂತೆ ನಾವು ಎಲ್ಲಾ ಕೆಳಹಂತದ ನ್ಯಾಯಾಲಯಗಳಿಗೆ ಸೂಚಿಸಿದ್ದೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಯಾವುದೇ ಡಿಜಿಟಲ್ ಸಾಧನದಲ್ಲಿ ಯಾವುದೇ ರೂಪದಲ್ಲಿ, ಅಂತರ್ಜಾಲದಲ್ಲಿ ವ್ಯಕ್ತಿಯು ಯಾವುದೇ ಮಕ್ಕಳ ಅಶ್ಲೀಲ ದೃಶ್ಯವನ್ನು ವೀಕ್ಷಿಸುವುದು, ಹಂಚುವುದು ಅಥವಾ ಪ್ರದರ್ಶಿಸುವುದು ಸಹ ಅಪರಾಧವಾಗಿದೆ. ಪೋಕ್ಸೊ ಕಾಯ್ದೆಯ ಸೆಕ್ಷನ್ 15ರ ಪ್ರಕಾರ, ಯಾವುದೇ ವ್ಯಕ್ತಿಯು ಮಗುವನ್ನು ಒಳಗೊಂಡ ಯಾವುದೇ ಅಶ್ಲೀಲ ವೀಡಿಯೋ ಅಥವಾ ಫೋಟೋ ಸಂಗ್ರಹಿಸಿ ಅದನ್ನು ನಾಶಪಡಿಸಲು ವಿಫಲವಾದರೆ 5,000 ರೂ. ಮತ್ತು ಪುನರಾವರ್ತಿತ ಅಪರಾಧಕ್ಕೆ 10,000 ರೂ. ದಂಡ ವಿಧಿಸಲಾಗುತ್ತದೆ. ಪ್ರಸಾರ ಮಾಡಲು ಸಂಗ್ರಹಿಸಿದರೆ, ದಂಡದ ಜೊತೆಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ವಾಣಿಜ್ಯ ಉದ್ದೇಶಕ್ಕಾಗಿ ಮಕ್ಕಳ ಅಶ್ಲೀಲ ವಸ್ತುಗಳನ್ನು ಸಂಗ್ರಹಿಸಿದರೆ ಮೂರರಿಂದ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ನಂತರದ ಅಪರಾಧದಲ್ಲಿ ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.
ಏನಿದು ಪ್ರಕರಣ?
28 ವರ್ಷದ ಯುವಕನೊಬ್ಬ ತನ್ನ ಮೊಬೈಲ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‍ಲೋಡ್ ಮಾಡಿದ ಆರೋಪದ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿತ್ತು.
ಮಕ್ಕಳ ಅಶ್ಲೀಲ ಚಿತ್ರಗಳನ್ನು ಖಾಸಗಿಯಾಗಿ ವೀಕ್ಷಿಸುವುದು ಅಪರಾಧವಲ್ಲ ಎಂಬ ಹೈಕೋರ್ಟ್ ತೀರ್ಪಿನ ವಿರುದ್ಧ ಎನ್‍ಜಿಒ ಜಸ್ಟ್ ರೈಟ್ ಫಾರ್ ಚಿಲ್ಡ್ರನ್ ಅಲೈಯನ್ಸ್ ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆ ನಡೆಸಿ ಈ ಆದೇಶವನ್ನು ನೀಡಲಾಗಿದೆ.
ಎಸ್.ಹರೀಶ್ ಎಂಬಾತ ಮೊಬೈಲ್‌ನಲ್ಲಿ ಎರಡು ಮಕ್ಕಳ ಅಶ್ಲೀಲ ವೀಡಿಯೊಗಳನ್ನು ಡೌನ್‍ಲೋಡ್ ಮಾಡಿ ಮತ್ತು ವೀಕ್ಷಿಸಿದ್ದಕ್ಕಾಗಿ ಪೋಕ್ಸೊ ಕಾಯ್ದೆ ಮತ್ತು ಐಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಈ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಮರುಸ್ಥಾಪಿಸಿದೆ.
ಇತ್ತೀಚೆಗೆ ಮಕ್ಕಳ ಅಶ್ಲೀಲ ದೃಶ್ಯಗಳು ಆಕಸ್ಮಿಕವಾಗಿ ಅಥವಾ ಸ್ವಯಂಚಾಲಿತವಾಗಿ ಡೌನ್‍ಲೋಡ್ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಾಧವಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿತ್ತು. ಇದನ್ನೂ ಓದಿ: ಓಣಂ ರಂಗೋಲಿ ಹಾಕಿದ್ದಕ್ಕೆ ಕಾಲಿನಿಂದ ಅಳಿಸಿ ನೃತ್ಯ ಮಾಡಿ ಕಿರಿಕ್