Latest

ವಿಡಿಯೋದಲ್ಲಿ ಅಪ್ಪ ಬದುಕಿರೋದನ್ನು ನೋಡೋದಕ್ಕೆ ನನಗೆ ಖುಷಿ: ವೀರಯೋಧನ ಪುತ್ರಿ

Published

on

Share this

ಮುಂಬೈ: ಇಂದಿಗೆ ಮುಂಬೈ ಮೇಲೆ ದಾಳಿಯಾಗಿ 9 ವರ್ಷ. ಆ ದಾಳಿಯಲ್ಲಿ ಯೋಧರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಹುತಾತ್ಮರಾಗಿದ್ದರು. ದಾಳಿಯಲ್ಲಿ ಹುತಾತ್ಮರಾಗಿರುವ ವಿಜಯ್ ಸಲಾಸ್ಕರ್ ಅವರ ಮಗಳು ತಂದೆಯನ್ನು ನೆನಪಿಸಿಕೊಂಡು ಮಾತನಾಡಿದ್ದಾರೆ.

26-11-2008ರ ರಾತ್ರಿ ನಾನು ಹಾಗೂ ನನ್ನ ತಂದೆ ಲಾಂಗ್ ಡ್ರೈವ್ ಹೋಗಲು ತಯಾರಿ ನಡೆಸಿಕೊಂಡಿದ್ದೇವು. ನನ್ನ ತಂದೆಗೆ ಮೊಟ್ಟೆ ಎಂದರೆ ತುಂಬಾ ಇಷ್ಟ. ಆದರೆ ನನಗೆ ಅದರ ವಾಸನೆ ಕೂಡ ಆಗುವುದಿಲ್ಲ. ಮೊಟ್ಟೆಯ ವಾಸನೆ ತಾಳಲಾರದೇ ನಾನು ರೂಮಿನ ಒಳಗೆ ಹೋದೆನು. 1 ಗಂಟೆ ಆದರೂ ಅಪ್ಪ ನನ್ನನ್ನು ಕರಿಯಲಿಲ್ಲ. ಅಪ್ಪ ಯಾಕೆ ನನ್ನ ಕರೆದಿಲ್ಲ ಅಂತ ಹೊರ ಬಂದು ನೋಡಿದಾಗ ಫೈರಿಂಗ್ ಆಗುತ್ತಿರೋ ವಿಚಾರಕ್ಕೆ ಹೊರಹೋಗಿದ್ದರೆಂದು ತಿಳಿಯಿತು ಎಂದು ವಿಜಯ್ ಅವರ ಮಗಳು ದಿವ್ಯ ಆ ದಿನವನ್ನು ನೆನಪಿಸಿಕೊಂಡರು.

ಬಳಿಕ ನನ್ನ ತಂದೆಯ ಮರಣದ ಸುದ್ದಿಯನ್ನು ಟಿವಿಯಲ್ಲಿ ನೋಡಿದಾಗ ನಮಗೆ ದೊಡ್ಡ ಆಘಾತವೇ ಉಂಟಾಯಿತು. ಅಪ್ಪ ಯಾವಾಗ್ಲೂ ಯಾವುದೇ ವಿಷಯವಿದ್ದರೂ ಘಟನಾ ಸ್ಥಳಕ್ಕೆ ಭೇಟಿ ನೀಡುತ್ತಿದ್ದರು. ನಾವು ಅವರನ್ನು ನೋಡಲು ಆಸ್ಪತ್ರೆಗೆ ಹೋಗುತ್ತಿದ್ದೇವು. ಆದರೆ ಈ ಬಾರಿ ಆ ರೀತಿ ಆಗಲಿಲ್ಲ ಎಂದು ಮಾಧ್ಯಮವೊಂದಕ್ಕೆ ದಿವ್ಯ ತಮ್ಮ ಅಳಲುತೋಡಿಕೊಂಡ್ರು.

ಹೆಣ್ಣು ಮಕ್ಕಳು ಯಾವತ್ತು ತಮ್ಮ ತಂದೆಯೊಂದಿಗೆ ಸಲುಗೆಯಿಂದ ಇರುತ್ತಾರೆ. ಅಂತೆಯೇ ನನಗೂ ಕೂಡ ತಂದೆ ಅಂದ್ರೆ ಪಂಚಪ್ರಾಣ. ನನ್ನ ತಂದೆ ನನಗೆ ಒಳ್ಳೆಯ ಸ್ನೇಹಿತರಾಗಿದ್ದರು. ಆದ್ರೆ ಇಂದು ಅವರು ನನ್ನೊಂದಿಗಿಲ್ಲ. ಇಂದು ಅವರ ನೆನಪಾದಾಗ ಯೂಟ್ಯೂಬ್ ನಲ್ಲಿ ವಿಡಿಯೋವನ್ನು ನೋಡುತ್ತೇನೆ. ಅವರು ಮಾತನಾಡುವುದು ಹಾಗೂ ಅವರು ನಡೆದಾಡುವುದನ್ನು ನೋಡುತ್ತೇನೆ. ಆ ವಿಡಿಯೋಗಳನ್ನು ನೋಡುತ್ತಿದ್ದಂತೆಯೇ ಅಪ್ಪ ನನ್ನ ಕಣ್ಣೆದುರೇ ಬಂದು ನಿಂತಂತೆ ಆಗುತ್ತದೆ. ಆದರೆ ಆ ವಿಡಿಯೋದಲ್ಲಿ ಅಪ್ಪ ಬದುಕಿರುವುದನ್ನು ನೋಡುವುದಕ್ಕೆ ಖುಷಿಯಾಗುತ್ತದೆ ಎಂದು ಅವರು ಹೇಳಿದರು.

ದಿವ್ಯ ತನ್ನ ಮಾಸ್ಟರ್ಸ್ ಡಿಗ್ರಿಯನ್ನು ಮುಗಿಸಿ ತನ್ನದೇ ಆದ ಕಂಪೆನಿ ತೆರೆದಿದ್ದಾರೆ. ವಿಶ್ವವಿದ್ಯಾಲಯ ಘಟಿಕೋತ್ಸವದ ವೇಳೆ ತಂದೆ ಜೊತೆಯಲ್ಲಿ ಇರುತ್ತಿದ್ದರೆ ಸಂತೋಷವಾಗುತಿತ್ತು. ನನ್ನ ತಂದೆ ಎನ್ ಕೌಂಟರ್ ಸ್ಪೆಷಲಿಸ್ಟ್ ಆಗಿದ್ದರು. ಆದರೆ ಅವರನ್ನು ಎನ್ ಕೌಂಟರ್ ಸ್ಪೆಷಲಿಷ್ಟ್ ಎಂದು ಕರೆಯುವುದು ಅವರಿಗೆ ಇಷ್ಟವಾಗುತ್ತಿರಲಿಲ್ಲ. ಅದನ್ನು ಕೇಳಿ ಅವರಿಗೆ ಸಂತೋಷವಾಗುತ್ತಿರಲಿಲ್ಲ. ಒಬ್ಬರ ಜೀವವನ್ನು ತೆಗೆಯುವುದು ಒಂದು ಸಾಧನೆ ಅಲ್ಲ ಎಂದು ಅವರು ಹೇಳುತ್ತಿದ್ದರು ಎಂದು ದಿವ್ಯ ತಮ್ಮ ತಂದೆಯ ಮಾತುಗಳನ್ನು ನೆನಪಿಸಿಕೊಂಡರು,

ತಮ್ಮ ತಂದೆಯ ಮೇಲೆ ಗೌರವ ಇದ್ದ ಕಾರಣ ಅವರ ಸಹೋದ್ಯೋಗಿಗಳು ಆಗಾಗ ಮನೆಗೆ ಭೇಟಿ ನೀಡುತ್ತಿರುತ್ತಾರೆ. ತನ್ನ ತಂದೆಯ ಹುಟ್ಟುಹಬ್ಬದ ದಿನದಂದು ಮನೆಗೆ ಬರುತ್ತಾರೆ. ಅಷ್ಟೇ ಅಲ್ಲದೇ ನಮಗೆ ಏನಾದ್ರೂ ಸಹಾಯ ಬೇಕಿದ್ದರೆ ಅವರು ನಮಗೆ ಸಹಾಯ ಮಾಡುತ್ತಾರೆ ಎಂದು ದಿವ್ಯ ತಿಳಿಸಿದ್ದಾರೆ.

ಅಂದು ಏನಾಯ್ತು?: 26 ನವೆಂಬರ್ 2008 ರಂದು ಮುಂಬೈನ ತಾಜ್ ಹೋಟೆಲ್, ನಾರಿಮನ್ ಹೌಸ್ ಸೇರಿದಂತೆ ನಗರದ ಹಲವು ಕಡೆ ಭಯೋತ್ಪಾದಕರು ದಾಳಿ ನಡೆಸಿದ್ದರು. 10 ಮಂದಿ ಉಗ್ರರು ಸಮುದ್ರ ಮಾರ್ಗವಾಗಿ ಬಂದು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಸ್ಥಳೀಯರು, ವಿದೇಶಿ ಪ್ರವಾಸಿಗರು ಹಾಗೂ ಭದ್ರತಾ ಪಡೆಯ ಯೋಧರು ಸೇರಿದಂತೆ ಹಲವು ಮಂದಿ ಸಾವನ್ನಪ್ಪಿದ್ದರು. ಆ ಉಗ್ರರಲ್ಲಿ ಅಜ್ಮಲ್ ಕಸಬ್ ನನ್ನು ಜೀವಂತವಾಗಿ ಸೆರೆ ಹಿಡಿದಿದ್ದರು.

Click to comment

Leave a Reply

Your email address will not be published. Required fields are marked *

Advertisement
Advertisement