ಆನೇಕಲ್: ವೈಟ್‌ಫೀಲ್ಡ್ ಠಾಣೆಯ ಎಎಸ್‌ಐ ದೇವರಾಜ್ ಅವರು ಬಾಬು ಎಂಬುವರಿಂದ 10 ಸಾವಿರ ರೂ. ಲಂಚ ಪಡೆಯುತ್ತಿರುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ.
ಆರೋಪಿ ದೇವರಾಜ್ ಅವರು ಸಿಮೆಂಟ್ ಮತ್ತು ಸ್ಟೀಲ್ ಅಂಗಡಿ ಮಾಲೀಕರ ವಾಹನ ರಸ್ತೆಯಲ್ಲಿ ಕಂಡಾಕ್ಷಣ ಅದನ್ನು ವಶ ಪಡಿಸಿಕೊಂಡು ಠಾಣೆಗೆ ತರುತ್ತಿದ್ದರು. ನಂತರ ಆ ವಾಹನವನ್ನು ಬಿಡಿಸಿಕೊಳ್ಳಲು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಹಣ ನೀಡದಿದ್ದರೆ ಮಾಲೀಕರು ಕಳ್ಳ ಸಾಗಣೆ ಮಾಡುತ್ತಿದ್ದಾರೆ ಎಂದು ಕೇಸು ದಾಖಲು ಮಾಡುವುದಾಗಿ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು ಎಂಬ ಆರೋಪ ಮೊದಲಿನಿಂದಲೂ ಕೇಳಿಬಂದಿತ್ತು.
Advertisement
Advertisement
ಬಾಬು ಅವರು ಸ್ಟೀಲ್ ವ್ಯಾಪಾರ ಮತ್ತು ಸ್ಟೀಲ್ ಸರಬರಾಜು ಮಾಡುವ ವಾಹನಗಳನ್ನು ಹೊಂದಿದ್ದರು. ಇವರಿಂದಲೂ ಸಾಕಷ್ಟು ಬಾರಿ ಹಣ ವಸೂಲಿ ಮಾಡಿದ್ದಾರೆ. ಬ್ಯಾಂಕ್ ಲೋನ್ ಕಟ್ಟಲು ಹಣ ಬೇಕು. 50 ಸಾವಿರ ರೂ. ಕೊಡು ಎಂದು ಆಗಾಗ ಕಾಲ್ ಮಾಡಿ ಹಿಂಸೆ ಕೊಡುತ್ತಿದ್ದರು. ಇದರಿಂದ ಬೇಸತ್ತ ಬಾಬು ಎಸಿಬಿ ಮೊರೆ ಹೋಗಿದ್ದಾರೆ. ಇಂದು ಟ್ರ‍್ಯಾಪ್ ಮಾಡಿಸಿ ಬಲೆಗೆ ಬೀಳಿಸಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಬೆಳತ್ತೂರು ಪರಮೇಶ್ ತಿಳಿಸಿದರು.
Advertisement
Advertisement
ಕಳೆದ ಏಳು ಎಂಟು ವರ್ಷಗಳಿಂದ ಹಣ ವಸೂಲಿ ಮಾಡಿ ಎರಡು ಎಕರೆ ಜಮೀನು, ಬಗಲುಗುಂಟೆ ವ್ಯಾಪ್ತಿಯಲ್ಲಿ ನಾಲ್ಕು ಸೈಟ್ ಖರೀದಿ ಮಾಡಿದ್ದಾರೆ. ತೊಂಡೆ ಕೊಪ್ಪದಲ್ಲಿ ಐಶಾರಾಮಿ ಬಂಗಲೆ ಕಟ್ಟಿದ್ದಾನೆ ಎಂದು ಪರಮೇಶ್ ಆರೋಪಿಸಿದ್ದಾರೆ. ಇದನ್ನೂ ಓದಿ: ಸ್ಟಾರ್‌ಲಿಂಕ್ ಇಂಡಿಯಾದ ಮುಖ್ಯಸ್ಥ ಸಂಜಯ್ ಭಾರ್ಗವ ರಾಜೀನಾಮೆ
ಡಿಸಿಪಿ ಕಚೇರಿ ಕೆಳಗೆ ಇರುವ ಠಾಣೆಯಲ್ಲೇ ಇಷ್ಟೊಂದು ಭ್ರಷ್ಟಾಚಾರ ನಡೆಯುತ್ತಿದೆ. ಇನ್ನೂ ಬೇರೆ ಕಡೆ ಯಾವ ರೀತಿ ಭ್ರಷ್ಟಾಚಾರ ನಡೆಯಬಹುದು ಎಂದ ಅವರು, ಸದ್ಯದಲ್ಲೇ ಮತ್ತೊಬ್ಬ ಅಧಿಕಾರಿಯ ಬಣ್ಣ ಬಯಲು ಮಾಡುವುದಾಗಿ ತಿಳಿಸಿದರು.
ಈ ಬಗ್ಗೆ ಮಂಗಳವಾರ ಎಸಿಬಿ ತನಿಖಾಧಿಕಾರಿಗಳು ಟ್ರ‍್ಯಾಪ್ ಕಾರ್ಯಾಚರಣೆ ಕೈಗೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಬೆಂಗಳೂರು ನಗರ ಎಸಿಬಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ. ಇದನ್ನೂ ಓದಿ: 12,000 ಕೆಜಿ ತೂಕದ ಬಸ್ಸನ್ನು ಕೂದಲಿನಿಂದ ಎಳೆದ ಭಾರತೀಯ ಮಹಿಳೆ- Video Viral