ರಾಮ ಜನ್ಮ ಭೂಮಿ ಹೋರಾಟದಲ್ಲಿ ಎಲ್‍ಕೆ ಅಡ್ವಾಣಿ ದೇಶವ್ಯಾಪಿ ಸಂಚರಿಸುವ ಮೂಲಕ ಬಿಜೆಪಿಗೆ ಜನಬೆಂಬಲವನ್ನು ತಂದು ಕೊಟ್ಟಿದ್ದರು. ಈ ಹೋರಾಟಕ್ಕೆ ವಿಎಚ್‍ಪಿ ಮತ್ತು ಆರ್‍ಎಸ್‍ಎಸ್ ಬೆಂಬಲ ನೀಡಿತ್ತು. ಪರಿಣಾಮ 1994 ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಗಳಿಸಲು ಯಶಸ್ವಿಯಾಗಿತ್ತು. 1995ರಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಪಡೆದುಕೊಳ್ಳುವಲ್ಲಿ ಸಫಲವಾಯಿತು. ಮಹಾರಾಷ್ಟ್ರದಲ್ಲಿ 65 ಸ್ಥಾನ ಹಾಗೂ ಗುಜರಾತ್‍ನಲ್ಲಿ 121 ಸ್ಥಾನ ಬಿಜೆಪಿಗಳಿಸಿತ್ತು.
ಇವೆಲ್ಲದರ ಪರಿಣಾಮ 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 161 ಸ್ಥಾನಗಳಿಸಿದ್ದರೆ, ಕಾಂಗ್ರೆಸ್ 140, ಜನತಾದಳ 40 ಸ್ಥಾನಗಳಿಸಿತ್ತು. ಮುಂಬೈನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಪ್ರಧಾನಿ ಮಾಡಲು ಒಮ್ಮತದ ನಿರ್ಣಯವನ್ನು ಕೈಗೊಳ್ಳಲಾಯಿತು.
Advertisement
Advertisement
ವಾಜಪೇಯಿಯವರು ದೇಶದ 10ನೇ ಪ್ರಧಾನಿಯಾಗಿ ಮೇ 16, 1996ರಲ್ಲಿ ಸಂಸತ್ತಿನ ಅಶೋಕ ಹಾಲ್‍ನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಅಂದು ರಾಷ್ಟ್ರಪತಿಯಾಗಿದ್ದ ಡಾ. ಶಂಕರ್ ದಯಾಳ್ ಶರ್ಮಾ ಅವರು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಪ್ರಮಾಣವಚನ ಬೋಧಿಸಿದ್ದರು.
Advertisement
ಅಟಲ್ ಜೊತೆಗೆ ಅಂದು ಸಿಕಂದರ್ ಭಕ್ತ್, ಡಾ.ಮುರಳಿ ಮನೋಹರ ಜೋಶಿ, ಸೂರಜ್ ಬಾನ್, ಪ್ರಮೋದ್ ಮಹಾಜನ್, ಜಸ್ವಂತ್ ಸಿಂಗ್, ಕರಿಯಾ ಮುಂಡಾ, ರಾಮ್ ಜೇಠ್ಮಲಾನಿ, ಧನಂಜಯ್ ಕುಮಾರ್, ಸುರೇಶ್ ಪ್ರಭು, ಸುಷ್ಮಾ ಸ್ವರಾಜ್ ಸೇರಿದಂತೆ ಅನೇಕರು ಸಂಪುಟ ದರ್ಜೆ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಅಂದಿನ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಉಪರಾಷ್ಟ್ರಪತಿ ಕೆ.ಆರ್.ನಾರಾಯಣ, ಎಲ್.ಕೆ.ಅಡ್ವಾಣಿ, ವಿಜಯರಾಜೇ ಸಿಂಧಿಯಾ, ಪಿವಿ ನರಸಿಂಹ ರಾವ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Advertisement
ಅದೇ ದಿನ ಸಂಜೆ 5 ಗಂಟೆಗೆ ಅಟಲ್ ನೇತೃತ್ವದಲ್ಲಿ ಮೊದಲ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ವಾಜಪೇಯಿ ಅವರು, ಸದನದಲ್ಲಿ ಬಹುಮತ ಸಾಬೀತು ಪಡಿಸಲು ನಮಗೆ ಮೇ 31ರವರೆಗೆ ಸಮಯ ನೀಡಲಾಗಿದೆ. ಬಹುಮತ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ನಾವು ಮರ್ಯಾದೆಯಿಂದ ಹಿಂದೆ ಸರಿಯುತ್ತೇವೆ. ಆದರೆ ನಾವು ಯಾವುದೇ ಕುದುರೆ ವ್ಯಾಪಾರದ ಮಾರ್ಗವನ್ನು ಅನುಸರಿಸುವುದಿಲ್ಲ. ನಮ್ಮಲ್ಲಿರುವ ಎಲ್ಲಾ ಸಾಮಥ್ರ್ಯ ಬಳಸಿ ಬಹುಮತ ಸಾಬೀತು ಮಾಡುತ್ತೇವೆ. ಆದರೆ ನಮ್ಮ ಹೋರಾಟದ ಅಂತಿಮ ಗುರಿ ಅಧಿಕಾರ ಪಡೆಯುವುದೊಂದೇ ಅಲ್ಲ. ಒಳ್ಳೆಯ ಸರ್ಕಾರ ನಡೆಸುವುದು ಕೂಡಾ ನಮ್ಮ ಉದ್ದೇಶ ಎಂದು ಹೇಳಿದ್ದರು.
ಮುಂದುವರಿದು ಮಾತನಾಡಿದ ಅವರು, ರಾಷ್ಟ್ರ ಇಂದು ಸಂಕಷ್ಟಮಯ ಪರಿಸ್ಥಿತಿಯಲ್ಲಿದೆ. ದೇಶದ ಆರ್ಥಿಕ ಸ್ಥಿತಿ ಬಿಗಡಾಯಿಸಿದೆ. ಏಕೈಕ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಜನರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ನಾವು ಸ್ವಚ್ಛ, ಪ್ರಾಮಾಣಿಕ, ಸಂವೇದನಾಶೀಲ ಹಾಗೂ ಪಾರದರ್ಶಕ ಸರ್ಕಾರ ನೀಡಲು ಬದ್ಧರಾಗಿದ್ದೇವೆ ಎಂದು ಹೇಳಿದ್ದರು.
ಕಳೆದ 40 ವರ್ಷಗಳಿಂದ ನಾನು ರಾಜಕಾರಣದಲ್ಲಿದ್ದೇನೆ. ನಾನು ಕುರ್ಚಿಗಾಗಿ ಅಥವಾ ಯಾವುದೇ ಪದವಿಗಾಗಿ ದುಡಿಯುತ್ತಿಲ್ಲ. ನನ್ನ ಕರ್ತವ್ಯದ ಭಾವನೆಯಿಂದ ನಾನು ರಾಷ್ಟ್ರಕ್ಕಾಗಿ, ಮಾತೃಭೂಮಿಗಾಗಿ, ಸೇವೆಗಾಗಿ, ಸಮರ್ಪಣಾ ಭಾವದಿಂದ ದುಡಿಯುತ್ತಿದ್ದೇನೆ. ರಾಷ್ಟ್ರ ಉತ್ಥಾನದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಅಂದು ಸಂಪುಟ ಸಭೆಯಲ್ಲಿ ಮಾತು ಮುಗಿಸಿದ್ದರು ಅಟಲ್ ಬಿಹಾರಿ ವಾಜಪೇಯಿ. ಆದರೆ ಸಿಕ್ಕಿದ ಅವಕಾಶದಲ್ಲಿ ಬಹುಮತ ಸಾಬೀತು ಪಡಿಸಲು ಆಗಲಿಲ್ಲ. ಹೀಗಾಗಿ 13 ದಿನಗಳಲ್ಲೇ ವಾಜಪೇಯಿ ಸರ್ಕಾರ ಬಿದ್ದು ಹೋಯಿತು.
13 ತಿಂಗಳ ಪ್ರಧಾನಿ: 1998 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 182 ಸ್ಥಾನಗಳಿಸಿತು. ಮಿತ್ರ ಪಕ್ಷಗಳನ್ನು ಸೇರಿಸಿ ಎನ್‍ಡಿಎ ಒಕ್ಕೂಟ ರಚಿಸುವ ಮೂಲಕ ಎರಡನೇ ಬಾರಿ ವಾಜಪೇಯಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಎಐಡಿಎಂಕೆ ಅಧಿನಾಯಕಿ ಜಯಲಲಿತಾ ಸರ್ಕಾರಕ್ಕೆ ನೀಡಿದ ಬಹುಮತವನ್ನು ಹಿಂತೆಗೆದ ಕಾರಣ ವಾಜಪೇಯಿ ಅವರ 13 ತಿಂಗಳ ಅಧಿಕಾರ ಅವಧಿ ಅಂತ್ಯವಾಯಿತು.
ಕಾರ್ಗಿಲ್ ಯುದ್ದ, ಪೋಕ್ರಾನ್‍ನಲ್ಲಿ ಅಣುಬಾಂಬು ಸ್ಪೋಟ ಪರಿಣಾಮದಿಂದಾಗಿ 1999ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 182 ಸ್ಥಾನಗಳಿಸಿತು. ಮಿತ್ರಪಕ್ಷಗಳನ್ನು ಸದಸ್ಯರನ್ನು ಸೇರಿಸಿ ಎನ್‍ಡಿಎ ಒಕ್ಕೂಟ ಲೋಕಸಭೆಯ ಒಟ್ಟು 543 ಸದಸ್ಯರಲ್ಲಿ 303 ಎನ್‍ಡಿಎ ಸದಸ್ಯರು ಆಯ್ಕೆ ಆದ್ದರಿಂದ ವಾಜಪೇಯಿ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಆಯ್ಕೆಯಾದರು.
(ಮಾಹಿತಿ ಕೃಪೆ: ಬಿ.ಎಚ್.ನಿರಗುಡಿ ಅವರ 2006ರಲ್ಲಿ ಮುದ್ರಣವಾದ ‘ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ’ ಕನ್ನಡ ಕೃತಿಯ ಯಥಾವತ್ ವಿವರ)
https://youtu.be/c6bRPaIlo1s
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv