ಬೆಂಗಳೂರು: ವೀಲಿಂಗ್ ಮಾಡುತ್ತಿದ್ದ ನಾಲ್ವರಿಗೆ ಗ್ರಾಮಸ್ಥರು ಗೂಸಾ ಕೊಟ್ಟ ಘಟನೆ ಕೆಂಗೇರಿಯ ಹೆಮ್ಮಿಗೆಪುರ ಗ್ರಾಮದಲ್ಲಿ ನಡೆದಿದೆ.
ಕೆಎ 01 ಜೆಡಿ 4109 ಹಾಗೂ ಕೆಎ 05 ಕೆಪಿ 4474 ನಂಬರಿನ ಸ್ಕೂಟಿಗಳಲ್ಲಿ ಯುವಕರು ಇಂದು ಮಧ್ಯಾಹ್ನ ನೈಸ್ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದರು. ಇದನ್ನು ನೋಡಿದ ಹೆಮ್ಮಿಗೆಪುರದ ಗ್ರಾಮಸ್ಥರು ಯುವಕರನ್ನು ತಡೆದು, ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲದೆ ಮತ್ತೊಮ್ಮೆ ವೀಲಿಂಗ್ ಮಾಡದಂತೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಗ್ರಾಮಸ್ಥರಿಂದ ಗೂಸಾ ತಿಂದ ಯುವಕರ ಹೆಸರು ತಿಳಿದು ಬಂದಿಲ್ಲ. ಗ್ರಾಮಸ್ಥರು ಯುವಕರನ್ನು ಥಳಿಸಿದ್ದು ಅಷ್ಟೇ ಅಲ್ಲದೆ ಸ್ಕೂಟಿಗಳಿಗೆ ಕಲ್ಲು, ಕೋಲಿನಿಂದ ಹೊಡೆದು ಜಖಂಗೊಳಿಸಿದ್ದಾರೆ.
ಇತ್ತೀಚೆಗಷ್ಟೇ ಹೆಮ್ಮಿಗೆಪುರ ಗ್ರಾಮದ ಸಿದ್ದಪ್ಪ ಎಂಬವರಿಗೆ ಸ್ಕೂಟಿ ಮೂಲಕ ವೀಲಿಂಗ್ ಮಾಡುತ್ತಿದ್ದ ಯುವಕರ ಗುದ್ದಿದ್ದರು. ಪರಿಣಾಮ ಸಿದ್ದಪ್ಪ ಅವರ ಕಾಲು ಮುರಿದಿತ್ತು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ವೀಲಿಂಗ್ ಮಾಡುವ ಯುವಕರಿಗೆ ಪಾಠ ಕಲಿಸಲು ಕಾಯುತ್ತಿದ್ದರು. ಭಾನುವಾರ ಮಧ್ಯಾಹ್ನ ಕೈಗೆ ಸಿಕ್ಕ ನಾಲ್ಕು ಜನ ಯುವಕರಿ ಹಿಗ್ಗಾಮುಗ್ಗಾ ಥಳಿಸಿ ಬುದ್ಧಿ ಕಲಿಸಿದ್ದಾರೆ.