ಚಿಕ್ಕಬಳ್ಳಾಪುರ: ರಾಕ್ಷಸಿ ಮುಖದ ವಿಚಿತ್ರ ಮಗುವೊಂದು ಜನಿಸಿದ್ದು, ನಿದ್ದೆ ಮಾಡಿದವರೆಲ್ಲಾ ಸಾಯುತ್ತಾರೆ ಎಂದು ಹೇಳಿ ಆ ಮಗು ಸತ್ತಿದೆಯಂತೆ ಎನ್ನುವ ಸುಳ್ಳು ವದಂತಿಯೊಂದು ಕಾಡ್ಗಿಚ್ಚಿಗಿಂತ ಜೋರಾಗಿ ಹಬ್ಬಿದ್ದು ಜಿಲ್ಲೆಯ ಹಲವು ಮಂದಿ ಇಡೀ ರಾತ್ರಿ ಜಾಗರಣೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ತೆಲುಗು ಭಾಷೆಯಲ್ಲಿ ಬರೆದ ವಾಟ್ಸಪ್ ಸಂದೇಶ ಹಾಗೂ ವಿಚಿತ್ರವಾಗಿ ಜನಿಸಿರುವ ಮಗುವಿನ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಶೇರ್ ಮಾಡಿದ್ದಾರೆ. ಇದನ್ನೇ ನಿಜ ಎಂದು ನಂಬಿದ ಜಿಲ್ಲೆಯ ಹಲವು ಜನ ತಡರಾತ್ರಿ ನಿದ್ದೆ ಬಿಟ್ಟು ಜಾಗರಣೆ ಮಾಡಿದ್ದಾರೆ.
ತಾವು ನಿದ್ದೆ ಬಿಟ್ಟಿದಲ್ಲದೇ ಬಂಧು-ಬಳಗ, ಸಂಬಂಧಿಕರಿಗೆ, ಪರಿಚಯಸ್ಥರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಇದರಿಂದ ಒಬ್ಬರಿಂದ ಒಬ್ಬರಿಗೆ ಒಂದೇ ರಾತ್ರಿಯಲ್ಲಿ ಕಾಡ್ಗಿಚ್ಚಿಗಿಂತ ಬಲು ಜೋರಾಗಿ ಸುಳ್ಳು ಸಂದೇಶ ರವಾನೆಯಾಗಿ ಜನ ಆತಂಕಕ್ಕೀಡಗಿದ್ದಾರೆ. ಕೆಲ ಗ್ರಾಮಗಳಲ್ಲಿ ರಾತ್ರೋರಾತ್ರಿ ಪೂಜಾ ಕಾರ್ಯಗಳನ್ನು ನಡೆಸಿದ್ದಾರೆ.
ಕೇವಲ ಚಿಕ್ಕಬಳ್ಳಾಪುರ ಜಿಲ್ಲೆಗಷ್ಟೇ ಅಲ್ಲದೇ ಪಕ್ಕದ ಬೆಂಗಳೂರು ಗ್ರಾಮಾಂತರ ಜಿಲ್ಲೆಗೂ ಇದು ಹಬ್ಬಿತ್ತು. ಮೊದಲೇ ಕೊರಾನಾ ಭಯದಿಂದ ಜನ ಬದುಕುತ್ತಿದ್ದರೆ ಜಿಲ್ಲೆಯ ಜನರನ್ನು ಸುಳ್ಳು ವದಂತಿಯೊಂದು ರಾತ್ರಿಯೆಲ್ಲಾ ನಿದ್ದೆ ಕೆಡುವಂತೆ ಮಾಡಿತ್ತು. ಮತ್ತೊಂದೆಡೆ ಸೋಷಿಯಲ್ ಮಿಡಿಯಾದಲ್ಲಿ ಇದು ಭಾರೀ ವೈರಲ್ ಚರ್ಚೆಗೆ ಗ್ರಾಮವಾಗಿತ್ತು.