ಚಂಡೀಗಢ: ವಾಟ್ಸಪ್‍ನಲ್ಲಿ ಪೋಸ್ಟ್ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ಗ್ರೂಪ್ ಅಡ್ಮಿನ್ ಒಬ್ಬ ಸದಸ್ಯನನ್ನು ಕೊಲೆ ಮಾಡಿದ ಘಟನೆ ಹರ್ಯಾಣದ ಸೋನಿಪತ್ ಜಿಲ್ಲೆಯಲ್ಲಿ ನಡೆದಿದೆ.
ಹತ್ಯೆಯಾದ ವ್ಯಕ್ತಿ ಲವಕುಮಾರ್ ಎಂದು ತಿಳಿದು ಬಂದಿದ್ದು, ಆರೋಪಿ ದಿನೇಶ್ ಕುಮಾರ್ ಅಲಿಯಾಸ್ ಬಂಟಿ ವಿರುದ್ಧ ಲವ ಕುಮಾರನ ಸಂಬಂಧಿಕರು ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸ್ ಅಧಿಕಾರಿ ನರೇಂದ್ರ ಕುಮಾರ್ ಮಾತನಾಡಿ ಆರೋಪಿಯ ವಿರುದ್ಧ ಕೊಲೆ, ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
ಲವ ಕುಮಾರ್ ವಾಹನಗಳ ಎಸಿ ರಿಪೇರಿ ವ್ಯಾಪಾರ ಮಾಡುತ್ತಿದ್ದು, ಮೂಲತಃ ಚಿನ್ನದ ವರ್ತಕ ಸಮುದಾಯಕ್ಕೆ ಸೇರಿದವನಾಗಿದ್ದಾನೆ. ದಿನೇಶ್ ಕುಮಾರ್ ಸೋಪು ವ್ಯಾಪಾರ ಕೆಲಸ ಮಾಡಿಕೊಂಡಿದ್ದನು. ಇಬ್ಬರು ಸ್ಥಳೀಯ ನಿವಾಸಿಗಳಾಗಿದ್ದು, ಪರಸ್ಪರ ಪರಿಚಯಸ್ಥರಾಗಿದ್ದಾರೆ. ದಿನೇಶ್ `ಜೋಹ್ರಿ’ ಎಂಬ ವಾಟ್ಸಪ್ ಗ್ರೂಪ್ ರಚಿಸಿ ಗ್ರೂಪ್ ಅಡ್ಮಿನ್ ಆಗಿದ್ದನು.
Advertisement
ಘಟನಾ ವಿವರ:
ವಾಟ್ಸಪ್‍ನಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದ ವಸ್ತುಗಳ ಕುರಿತು ದಿನೇಶ್ ಸಂದೇಶ ಹಾಕಿದ್ದ. ಇದನ್ನು ಪ್ರಶ್ನಿಸಿದ ಲವಕುಮಾರ್ ಮತ್ತು ಇತರೆ ಸದಸ್ಯರು ವಾಟ್ಸಪ್‍ನಲ್ಲಿಯೇ ಕಿತ್ತಾಡಿಕೊಂಡಿದ್ದರು. ಈ ಸಂಬಂಧ ಮಾತನಾಡಲು ಆರೋಪಿಗೆ ಕರೆ ಮಾಡಿದಾಗ ಅಂಗಡಿ ಹತ್ತಿರ ಬರುವಂತೆ ಹೇಳಿದ್ದಾನೆ. ಲವ ತನ್ನ ತಮ್ಮ ಮೋನಿ ಹಾಗೂ ಸಂಬಂಧಿಕರೊಂದಿಗೆ ಅವನ ಅಂಗಡಿಗೆ ತೆರಳಿದ್ದಾರೆ. ಅಂಗಡಿಯಲ್ಲಿ ದಿನೇಶ್ ಸಿಕ್ಕಿಲ್ಲ, ಬಳಿಕ ಕರೆ ಮಾಡಿ ಮನೆಗೆ ಬರುವಂತೆ ಸೂಚಿಸಿದ್ದಾನೆ.
Advertisement
ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದ ದಿನೇಶ್ ಮತ್ತು ಸಂಗಡಿಗರು, ಮನೆಗೆ ಬಂದ ಲವ ಕುಮಾರ್ ಮತ್ತು ಸಂಬಂಧಿಕರ ಮೇಲೆ ಇಟ್ಟಿಗೆ ಮತ್ತು ಕಲ್ಲುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡು ಲವಕುಮಾರ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿ, ಶವವನ್ನು ಪರೀಕ್ಷೆಗೆ ರವಾನಿಸಿದ್ದಾರೆ.
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೆ ವಾಟ್ಸಪ್‍ನಲ್ಲಾದ ಜಗಳವೇ ಕಾರಣವೆಂದು ತಿಳಿದು ಬಂದಿದ್ದು. ಗ್ರೂಪ್ ಅಡ್ಮಿನ್ ಆದ ದಿನೇಶ್ ಪ್ರಮುಖ ಆರೋಪಿಯಾಗಿದ್ದಾನೆ. ಕೃತ್ಯಕ್ಕೆ ಸಹಾಯ ಮಾಡಿದ ಆರೋಪಿಗಳ ಗುರುತು ಪತ್ತೆಯಾಗಿದ್ದು, ಶೀಘ್ರವೇ ಬಂಧಿಸಲಾಗುವುದು. ಕೃತ್ಯಕ್ಕೆ ಬಳಸಿದ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ಮಾಹಿತಿಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.