ಉಡುಪಿ: ವಾಟ್ಸಪ್ ಅಡ್ಮಿನ್‍ಗಳೇ ನಿಮ್ಮ ಗ್ರೂಪ್‍ನಲ್ಲಿ ಗಲಾಟೆ ಆಗ್ತಿದೆಯಾ, ನೀವು ಸ್ವಲ್ಪ ಜಾಗ್ರತೆ ವಹಿಸೋದು ಒಳ್ಳೆಯದು. ಸ್ವಲ್ಪ ಯಾಮಾರಿದ್ರೂ ನಿಮಗೆ ಏಟು ಬೀಳುತ್ತೆ ಹುಷಾರು.
ಹೌದು. ಉಡುಪಿ ಜಿಲ್ಲೆ ಕಾರ್ಕಳದಲ್ಲಿ ವಾಟ್ಸಪ್ ಕಲಹ ಬೀದಿ ರಂಪಾಟದಲ್ಲಿ ಅಂತ್ಯವಾಗಿದೆ. ಸಮಾನ ಮನಸ್ಕರು ಸೇರಿಕೊಂಡು `ಹೆಲ್ಪಿಂಗ್ ಫ್ರೆಂಡ್ಸ್’ ಅನ್ನೋ ವಾಟ್ಸಪ್ ಗ್ರೂಪ್ ಮಾಡಿದ್ರು. ನಂತರ ಕ್ರಮೇಣ ಎಲ್ಲಾ ಮನೋಧರ್ಮದವರೂ ಅದರಲ್ಲಿ ಸೇರಿಕೊಂಡಿದ್ದಾರೆ. ಈ ನಡುವೆ ಗ್ರೂಪ್‍ನಲ್ಲಿ ಪ್ರಸ್ತುತ ರಾಜಕೀಯ ವಿಷಯಗಳ ಬಗ್ಗೆ ಭಾರೀ ಚರ್ಚೆ ನಡೆದಿದೆ. ಕಾಲ ಕಳೆದಂತೆ ಈ ಗ್ರೂಪ್‍ನಲ್ಲಿ ಕಾಂಗ್ರೆಸ್-ಬಿಜೆಪಿ ಅಂತ ಗಲಾಟೆ ಶುರುವಾಗಿದೆ. ಗಲಾಟೆಯಲ್ಲಿ ಗ್ರೂಪ್ ಹೆಸರನ್ನು `ಹೆಲ್ಪಿಂಗ್ ಫ್ರೆಂಡ್ಸ್’ ನಿಂದ `ಪೋಲಿಟಿಕಲ್ ಫೈಟರ್ಸ್’ ಅಂತ ಬದಲಾವಣೆ ಮಾಡಲಾಗಿದೆ.
Advertisement
ಗ್ರೂಪ್ ನಲ್ಲಿ ಇತ್ತೀಚಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಸಿದ್ಧಾಂತಗಳ ಕುರಿತು ಹಲವು ಬಾರಿ ಬಿರುಸಿನ ಚರ್ಚೆ ನಡೆದಿದೆ. ಗ್ರೂಪ್‍ನ ಸದಸ್ಯರಾಗಿರುವ ವಿಖ್ಯಾತ್ ಶೆಟ್ಟಿ ಅವರ ತಂದೆ ಬಗ್ಗೆ ಈ ಗ್ರೂಪ್‍ನಲ್ಲಿ ಕಾಂಗ್ರೆಸ್ ಒಲವಿನ ಕೆಲವು ಸದಸ್ಯರು ಟೀಕೆ ಮಾಡಿದ್ದಾರೆ. ಇದರಿಂದ ವೈಯ್ಯಕ್ತಿಕ ಚರ್ಚೆ ಆರಂಭವಾಗಿದೆ. ಮಾತಿನ ಚಕಮಕಿ ಜೋರಾಗಿ ವಿಖ್ಯಾತ್ ಶೆಟ್ಟಿ ಮತ್ತು ಕೃಷ್ಣ ಶೆಟ್ಟಿ ಎಂಬವರ ನಡುವೆ ಬಿಸಿಬಿಸಿ ಚ್ಯಾಟಿಂಗ್ ನಡೆದಿದ್ದು, ಕೊನೆಗೆ ಗಲಾಟೆ ಜೋರಾಗಿ ಹಲ್ಲೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದೆ.
Advertisement
ವ್ಯಾಟ್ಸಪ್ ನಲ್ಲಿ ಆರಂಭವಾದ ಚರ್ಚೆಯಿಂದ ಕಾರ್ಕಳದ ಗುಮ್ಮಟ ಬೆಟ್ಟದ ಬಳಿ ಎರಡೂ ತಂಡ ಸೇರಿ ಹೊಡೆದಾಟ ಆರಂಭಿಸಿದೆ. ವಿಷಯ ತಿಳಿದು ಗಲಾಟೆ ತಪ್ಪಿಸಲು ಹೋದ ಗ್ರೂಪ್ ಅಡ್ಮಿನ್ ಅಮೃತೇಶ್ ಶೆಟ್ಟಿಗೆ, ವಿಖ್ಯಾತ್ ಮತ್ತು ತಂಡದವರು ಹಲ್ಲೆ ಮಾಡಿದ್ದಾರೆ. ಪ್ರಸ್ತುತ ಈ ಎರಡೂ ತಂಡಗಳು ಕಾರ್ಕಳ ಠಾಣೆಯಲ್ಲಿ ಪರಸ್ಪರ ದೂರು ನೀಡಿವೆ.