– ಪಾಕ್, ರಷ್ಯಾ, ಚೀನಾದಿಂದಲೂ ನ್ಯೂಕ್ಲಿಯರ್ ಪರೀಕ್ಷೆ; ಭಾರತದ ನಡೆ ಗೌಪ್ಯ
ಆ ದಿನ ಭೂಮಿಯ ಬೆಳಕು ಬೂದಿಯಾಯಿತು, ಅಧಿಕಾರದ ಅಮಲಿಗೆ ಅಂತಃಕರಣ ಅಗ್ನಿಗಾಹುತಿಯಾಯಿತು, ಕರುಳು ಕತ್ತರಿಸಿ ಸತ್ತುಹೋಯಿತು. ಮನುಷ್ಯರ ಮಾರಣಹೋಮವನ್ನ ನೇಮದಂತೆ ನೆರವೇರಿಸಲಾಯಿತು. ಕ್ರೌರ್ಯವನ್ನೇ ಶೌರ್ಯವೆಂದು ತಿಳಿದ ಸಮರೋನ್ಮಾದಕ್ಕೆ ಆಕಾಶ ಅವಕಾಶ ಕಲ್ಪಿಸಿತು, ನೆಲದಲ್ಲಿ ನೆತ್ತರ ಕೊಡಿ ಹರಿಯಿತು. ದಿಕ್ಕುಗಳೆಲ್ಲ ದಿಕ್ಕಾಪಾಲಾಗಿ ವಿಶ್ವಕ್ಕೆ ವಿಶ್ವವೇ ತತ್ತರಿಸಿಹೋಗಿತ್ತು.
ಹೌದು. ಇಂತಹ ದುರ್ಘಟನೆ ಯಾರೂ ಊಹಿಸದ ರೀತಿಯಲ್ಲಿ ನಡೆದಿದ್ದು, 1945ರ ಆಗಸ್ಟ್ 6 ಮತ್ತು ಆಗಸ್ಟ್ 9ರಂದು 2ನೇ ವಿಶ್ವಮಹಾಯುದ್ಧದ ಸಂರ್ಭದಲ್ಲಿ. ಜಪಾನ್ ದೇಶವು ಅಮೆರಿದ ಶರಣಾಗತಿಗೆ ಒಪ್ಪಲಿಲ್ಲ. ಜರ್ಮನಿಯು 1945ನೇ ಮೇ 8ರಂದು ಶರಣಾಗತಿಗೆ ಸಹಿಮಾಡಿಯಾಗಿತ್ತು. ಜಪಾನ್ ಸಹ ಅದೇ ರೀತಿಯಲ್ಲಿ ಯಾವ ಷರತ್ತೂ ಇಲ್ಲದೇ ಶರಣಾಗತಿಯ ಒಪ್ಪಂದಕ್ಕೆ ಸಹಿಮಾಡಬೇಕೆಂಬುದು ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ಆಗ್ರಹವಾಗಿತ್ತು. ಆಗ ಜಪಾನಿನ ರಾಜನಾಗಿದ್ದ ಹಿರೋಹಿಟೊ ಇದಕ್ಕೆ ಒಪ್ಪಲಿಲ್ಲ. ತನ್ನ ಆಣತಿಗೆ ತಲೆಬಾಗದವರನ್ನು ಸುಮ್ಮನೆ ಬಿಡುವ ಬುದ್ಧಿಯು ಅಮೆರಿಕದ ಅಧಿಕಾರಸ್ಥರಿಗೂ ಇರಲಿಲ್ಲ, ಈಗಲೂ ಇಲ್ಲ. ಅಂದು ಅಮೆರಿಕದ ಅಧ್ಯಕ್ಷನಾಗಿದ್ದ ಹ್ಯಾರಿ ಟ್ರೂಮನ್ ಜಪಾನಿನ ಮೇಲೆ ಅಣುಬಾಂಬು ಹಾಕಲು ತೀರ್ಮಾನಿಸಿದ. ತನ್ನ ಹಿಂದಿನ ಅಧ್ಯಕ್ಷ ರೂಸ್‌ವೆಲ್ಟ್ ಕಾಲದಲ್ಲೇ ತಯಾರಾಗಿದ್ದ ಅಣುಬಾಂಬ್‌ಗಳ ಪ್ರಯೋಗಕ್ಕೆ ಜಪಾನಿನ ನಿಲುವು ಒಂದು ವರದಂತೆ ಬಂದುಬಿಟ್ಟಿತು. ಆದರೆ ಅಣ್ವಸ್ತ್ರಗಳನ್ನು ಪರಸ್ಪರ ಒಪ್ಪಿಗೆಯಿಲ್ಲದೆ ಬೇರೆ ರಾಷ್ಟ್ರಗಳ ಮೇಲೆ ಪ್ರಯೋಗಿಸಬಾರದೆಂಬ ಒಪ್ಪಂದವೊಂದು 1943ರಲ್ಲಿ ಅಮೆರಿಕ ಮತ್ತು ಬ್ರಿಟನ್ ನಡುವೆ ಆಗಿತ್ತು. ಬ್ರಿಟನ್ನಿನ ಫೀಲ್ಡ್ ಮಾರ್ಷಲ್ ಹೆನ್ರಿ ವಿಲ್ಸನ್ ಪ್ರಕಾರ ಜಪಾನಿನ ಮೇಲೆ ಅಣುಬಾಂಬ್ ಪ್ರಯೋಗಿಸುವುದು ಈ ಎರಡು ದೇಶಗಳ ಜಂಟಿ ನೀತಿಯಾಗಿತ್ತು.
ಆದಾಗ್ಯೂ 1945ರ ಆಗಸ್ಟ್ 6ರಂದು ಜಪಾನಿನ ಹಿರೋಶಿಮಾ ನಗರದ ಮೇಲೆ ಅಣುಬಾಂಬನ್ನು ಹಾಕಲಾಯಿತು. ಅಮೇರಿಕದ ಹೇಳಿಕೆಯಂತೆಯೇ ಹಿರೋಶಿಮಾದ 4.7 ಚದರ ಮೈಲಿ ವಿಸ್ತೀರ್ಣ ನಾಶವಾಯಿತು. ಆಗ ಆಗಿರುವ ಜೀವಹಾನಿಯನ್ನು ಲೆಕ್ಕದ ಬುಕ್ಕಿನಲ್ಲಿ ಬರೆಯಲು ಸಾಧ್ಯವೇ ಇಲ್ಲ. ಹೀಗೆ ಲಕ್ಷಾಂತರ ಜನರ ಜೀವನಾಶದೊಂದಿಗೆ ದ್ವಿತೀಯ ಜಾಗತಿಕ ಯುದ್ಧಕ್ಕೆ ಅಂತ್ಯ ಹಾಡಲಾಯಿತು. ಆದ್ರೆ ಇತ್ತೀಚೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ನೀಡಿರುವ ಹೇಳಿಕೆ, ಅದಕ್ಕೆ ಪಾಕ್ ಪ್ರತಿಕ್ರಿಯಿಸಿದ ರೀತಿ ನೋಡಿದ್ರೆ ಇಡೀ ಜಗತ್ತು ಮತ್ತೊಮ್ಮೆ ಪರಮಾಣು ಯುದ್ಧಕ್ಕೆ ಅಣಿಯಾಗುತ್ತಿದೆಯೇ ಅನ್ನೋ ಅನುಮಾನ ಹುಟ್ಟಿಸಿದೆ. ಆದ್ರೆ ಪರಮಾಣು ಪರೀಕ್ಷೆ ವಿಚಾರದಲ್ಲಿ ಭಾರತದ ನಡೆ ಮಾತ್ರ ಗೌಪ್ಯವಾಗಿಯೇ ಇದೆ.
ಅಷ್ಟಕ್ಕೂ ಟ್ರಂಪ್ ಹೇಳಿದ್ದೇನು? ಪಾಕ್ ಭಾರತಕ್ಕೆ ಪೈಪೋಟಿ ನೀಡಲು ಪರಮಾಣು ಪರೀಕ್ಷೆ ನಡೆಸುತ್ತಿದೆಯೇ? ವಿವಿಧ ದೇಶಗಳು ಪರಮಾಣು ಪರೀಕ್ಷೆ ನಡೆಸುತ್ತಿರೋದು ಏಕೆ? ಪರಮಾಣು ಯುದ್ಧಕ್ಕೆ ಜಗತ್ತು ಹತ್ತಿರವಾಗುತ್ತಿದೆಯೇ? ಅನ್ನೋ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ ಮುಂದೆ ಓದಿ…
ಡೊನಾಲ್ಡ್ ಟ್ರಂಪ್ ಹೇಳಿದ್ದೇನು? ಪಾಕ್ ಉತ್ತರ ವೇನು?
ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕಿಸ್ತಾನ, ಚೀನಾ, ರಷ್ಯಾ, ಉತ್ತರ ಕೊರಿಯಾ ದೇಶಗಳು ಪರಮಾಣು ಪರೀಕ್ಷೆಗಳನ್ನ ನಡೆಸುತ್ತಿವೆ. ಹೀಗಿರುವಾಗ ಅಮೆರಿಕ ಮಾತ್ರ ಸಂಯಮ ತೋರಿಸುವ ದೇಶವಾಗಿ ಉಳಿಯಲು ಸಾಧ್ಯವಿಲ್ಲ ಎನ್ನುತ್ತಾ ಪರಮಾಣು ಪರೀಕ್ಷೆಗೆ ಸೂಚಿಸಿದರು. ಇತರ ಎಲ್ಲಾ ದೇಶಗಳಿಗಿಂತ ಅಮೆರಿಕ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳನ್ನ ಹೊಂದಿದೆ. ಇಡೀ ಜಗತ್ತನ್ನ 150 ಬಾರಿ ಸ್ಫೋಟಿಸುವಷ್ಟು ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳನ್ನು ನಾವು ಹೊಂದಿದ್ದೇವೆ. ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್ ಇಬ್ಬರೊಂದಿಗೂ ಈ ವಿಷಯ ಚರ್ಚಿಸಿದ್ದೇನೆ. ಆದಾಗ್ಯೂ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಪರಿಸ್ಥಿತಿ ಅನುಗುಣವಾಗಿ ನಾವು ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನದ ಅಧಿಕಾರಿಯೊಬ್ಬರು, ಪರಮಾಣು ಬಾಂಬ್ ದಾಳಿ ನಡೆಸಿದ, ಪರೀಕ್ಷೆ ಪುನರಾರಂಭಿಸಿದ ಮೊದಲಿಗರೂ ನಾವಲ್ಲ ಎಂದು ಹೇಳಿದ್ದರು.
ಅಮೆರಿಕ ಕೊನೆಯ ನ್ಯೂಕ್ಲಿಯರ್ ಪರೀಕ್ಷೆ ನಡೆಸಿದ್ದು ಯಾವಾಗ?
ಅಮೆರಿಕ 1992ರಲ್ಲಿ ತನ್ನ ಕೊನೆಯ ಪರಮಾಣು ಪರೀಕ್ಷೆ ನಡೆಸಿತ್ತು. ವಿಕಿರಣ ತಡೆಯಲು ನೇವಾಡಾ ಮರುಭೂಮಿಯಲ್ಲಿರುವ ರೈನಿಯರ್ ಮೆಸಾ ಪರ್ವತಗಳ ಕೆಳಗೆ ಸುಮಾರು 2,300 ಅಡಿ ಆಳದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಇದು ಅಮೆರಿಕದ 1,030ನೇ ನ್ಯೂಕ್ಲಿಯರ್ ಪರೀಕ್ಷೆಯಾಗಿತ್ತು. ಇದಕ್ಕೆ ʻಡಿವೈಡರ್ʼ ಎಂದೂ ಹೆಸರಿಡಲಾಗಿತ್ತು. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಭೂಮಿ ಒಂದಡಿ ಮೇಲಕ್ಕೆ ಚಿಮ್ಮಿ ಕೆಳಕ್ಕಿಳಿದಿತ್ತು. ಈಗಲೂ ಆ ಸ್ಥಳದಲ್ಲಿ 150 ಮೀಟರ್ ಅಗಲದ ದೊಡ್ಡ ಕುಳಿ ಹಾಗೇ ಉಳಿದಿದೆ. ಇದೀಗ ಮತ್ತೆ ಪರಿಸ್ಥಿತಿ ನೋಡಿಕೊಂಡು ಪರಮಾಣು ಪರೀಕ್ಷೆ ನಡೆಸಲು ರಕ್ಷಣಾ ಇಲಾಖೆಗೆ ಸೂಚನೆ ನೀಡಿದ್ದಾರೆ.
ಭಾರತ-ಪಾಕ್ ಪರಮಾಣು ಪಯಣ ಹೇಗಿತ್ತು?
ಭಾರತದ ಪರಮಾಣು ಪಯಣ ಶುರುವಾಗಿದ್ದು 1974ರಲ್ಲಿ. 1974ರ ಮೇ 18ರಂದು ಸ್ಮೈಲಿಂಗ್ ಬುದ್ಧ ಅಥವಾ ಪೋಖ್ರಾನ್ – 1 ಎಂಬ ಅಣ್ವಸ್ತ್ರ ಪರೀಕ್ಷೆಯನ್ನು ಭಾರತ ನಡೆಸಿತು. ಈ ಮೂಲಕ ನ್ಯೂಕ್ಲಿಯರ್ ಸಾಮರ್ಥ್ಯ ಇರುವ ಜಗತ್ತಿನ 6ನೇ ರಾಷ್ಟ್ರವಾಯಿತು. ಅದಾಗಿ ಕಾಲು ಶತಮಾನದ ಬಳಿಕ ಅಂದ್ರೇ 1998ರಲ್ಲಿ ಪಾಕಿಸ್ತಾನ ತನ್ನ ಅಣ್ವಸ್ತ್ರ ಪರೀಕ್ಷೆ ನಡೆಸಿತು. ಈ ಮೂಲಕ ಅಣ್ವಸ್ತ್ರವನ್ನು ತಾನು ಹೊಂದಿದ್ದೇನೆ ಎಂದು ಜಗತ್ತಿಗೇ ತೋರಿಸಿತು. ಕಾಲು ಶತಮಾನ ಲೇಟಾಗಿ ನ್ಯೂಕ್ಲಿಯರ್ ರೇಸ್‌ಗೆ ಎಂಟ್ರಿ ಕೊಟ್ಟರೂ ಸಹ ಪಾಕಿಸ್ತಾನ ಇಷ್ಟು ದಿನ ಭಾರತಕ್ಕಿಂತ ಹೆಚ್ಚಿನ ಅಣ್ವಸ್ತ್ರಗಳನ್ನ ಹೊಂದಿತ್ತು. ಆದರೆ, ಈಗ ಕಾಲ ಬದಲಾಗಿದ್ದು, ಭಾರತ ಹೆಚ್ಚಿನ ನ್ಯೂಕ್ಲಿಯರ್ ಸಿಡಿತಲೆಗಳನ್ನ ಹೊಂದುವ ಮೂಲಕ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದೆ
ಅಣ್ವಸ್ತ್ರ ವಿಚಾರದಲ್ಲಿ ಎರಡು ದೇಶಗಳ ನೀತಿಯೇನು?
ಅಣ್ವಸ್ತ್ರ ವಿಚಾರದಲ್ಲಿ ಭಾರತ ʻನೋ ಫಸ್ಟ್ ಯೂಸ್ʼ ಎಂಬ ನೀತಿಯನ್ನು ಬಳಸುತ್ತಿದೆ. ಏನೇ ಆದರೂ ಪರಮಾಣು ಅಸ್ತ್ರಗಳನ್ನು ಮೊದಲು ಬಳಸುವುದಿಲ್ಲ ಎಂಬ ತತ್ವವನ್ನು ಭಾರತ ಹೊಂದಿದೆ. ಶತ್ರು ರಾಷ್ಟ್ರಗಳು ಅಥವಾ ಎದುರಾಳಿಗಳು ಅಣ್ವಸ್ತ್ರ ಬಳಸಿದ ಬಳಿಕ ಭಾರತ ಅವರ ವಿರುದ್ಧ ನ್ಯೂಕ್ಲಿಯರ್ ಅಸ್ತ್ರವನ್ನು ಬಳಸಲಿದೆ. ಆದರೆ, ಪಾಕಿಸ್ತಾನ ಫಸ್ಟ್ ಯೂಸ್ ನೀತಿಯನ್ನ ಹೊಂದಿದ್ದು, ಸಣ್ಣ ಸೇನಾ ಕಾರ್ಯಾಚರಣೆ ವಿರುದ್ಧವೂ ಅಣ್ವಸ್ತ್ರವನ್ನ ಬಳಸುತ್ತದೆ. ಇದು ಆತಂಕಕಾರಿ ವಿಚಾರವಾಗಿದ್ದು, ಪರಮಾಣು ಯುದ್ಧಕ್ಕೆ ಎಡೆ ಮಾಡಿಕೊಡಲಿದೆ. ಇನ್ನು, ಭಾರತವು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಯಲ್ಲಿ ಸದಸ್ಯನಾಗಿದ್ದು, ಪರಮಾಣು ಪೂರೈಕೆದಾರರ ಗುಂಪಿನ ಸದಸ್ಯನಾಗಲು ಬಯಸುತ್ತಿದೆ. ಆದರೆ, ಪರಮಾಣು ಪ್ರಸರಣ ರಹಿತ ಒಪ್ಪಂದ ಹಾಗೂ ಅಣ್ವಸ್ತ್ರದ ಸಮಗ್ರ ಪರೀಕ್ಷಾ ನಿಷೇಧ ಒಪ್ಪಂದದಿಂದ ಭಾರತ ಹಿಂದುಳಿದಿದ್ದು, ಪರಮಾಣು ಬಳಸುವ ಆಯ್ಕೆಯನ್ನು ಮುಕ್ತವಾಗಿಟ್ಟುಕೊಂಡಿದೆ. ಇದು ಯುದ್ಧಭೂಮಿಯಲ್ಲಿ ಭಾರತಕ್ಕೆ ಗೇಮ್ ಚೇಂಜರ್ ಆಗಲಿದೆ.
ಪರಮಾಣು ಪರೀಕ್ಷೆ ಭೂಮಿಯಲ್ಲೇ ನಡೆಸಬೇಕೆ?
ನ್ಯೂಕ್ಲಿಯರ್ ಟೆಸ್ಟಿಂಗ್‌ನಲ್ಲಿ ಮೂರು ವಿಧಾನಗಳಿವೆ. ವಾಯುಗಾಮಿ, ಭೂಗತ ಮತ್ತು ನೀರೊಳಗೆ ಪರೀಕ್ಷೆ ನಡೆಸಬಹುದು. ಆದ್ರೆ 1996ರಲ್ಲಿ CTBT (ಸಮಗ್ರ ಪರಮಣು ಪರೀಕ್ಷೆ ನಿಷೇಧ ಒಪ್ಪಂದ) ಅನ್ನು ಅನುಸರಿಸಿ ಹೆಚ್ಚಿನ ದೇಶಗಳು ವಾಯುಗಾಮಿ ಮತ್ತು ನಿರೊಳಗಿನ ಪರೀಕ್ಷೆಗಳನ್ನ ನಿಲ್ಲಿಸಿದವು. ಈಗ ಭೂಗತ ಪರೀಕ್ಷೆಗಳನ್ನಷ್ಟೇ ನಡೆಸಲಾಗುತ್ತಿದೆ. ಆದ್ರೆ ರಷ್ಯಾ ಇತ್ತೀಚೆಗೆ ಜಲಾಂತರ್ಗಾಮಿಯ ನ್ಯೂಕ್ಲಿಯರ್ ಟಾರ್ಪಿಡೊ ಪರೀಕ್ಷೆಯನ್ನೂ ಯಶಸ್ವಿಯಾಗಿ ನಡೆಸಿದೆ ಎಂದು ಕೆಲ ವರದಿಗಳಿಂದ ಬೆಳಕಿಗೆ ಬಂದಿದೆ.
ವಿಶ್ವಾದ್ಯಂತ 1945 ರಿಂದ ಈವರೆಗೆ 2,000 ಕ್ಕೂ ಹೆಚ್ಚು ಪರಮಾಣು ಪರೀಕ್ಷೆಗಳನ್ನ ನಡೆಸಲಾಗಿದೆ. ಇವುಗಳಲ್ಲಿ ಅಮೆರಿಕ, ಸೋವಿಯತ್ ಒಕ್ಕೂಟ (ಇಂದಿನ ರಷ್ಯಾ), ಬ್ರಿಟನ್, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ ಮತ್ತು ಉತ್ತರ ಕೊರಿಯಾ ಮುಂತಾದ ದೇಶಗಳು ಸೇರಿವೆ.
ನ್ಯೂಕ್ಲಿಯರ್ ಟೆಸ್ಟಿಂಗ್‌ನಲ್ಲಿ ಏನಾಗುತ್ತದೆ?
ಪರಮಾಣು ಪರೀಕ್ಷೆ ಮತ್ತು ಪರಮಾಣು ಬಾಂಬ್ ಪರೀಕ್ಷೆ ಎರಡರ ರಿಯಾಕ್ಷನ್ಸ್ ವಿಭಿನ್ನವಾಗಿರುತ್ತೆ. ಪರಮಾಣು ಪರೀಕ್ಷೆಯು ಶಸ್ತ್ರಾಸ್ತ್ರದ ವಿನ್ಯಾಸ, ಶಕ್ತಿ, ಸುರಕ್ಷತೆ ಹಾಗೂ ವಿಶ್ವಾಸಾರ್ಹತೆ ಪರೀಕ್ಷಿಸುವ ನಿಯಂತ್ರಿತ ವೈಜ್ಞಾನಿಕ ಪ್ರಯೋಗವಾಗಿದೆ. ಇದನ್ನ ಭೂಗತ ಅಥವಾ ದ್ವೀಪಗಳಂತಹ ಜನವಸತಿಯಿಲ್ಲದ ದೂರದ ಪ್ರದೇಶಗಳಲ್ಲಿ ಪರೀಕ್ಷಿಸಲಾಗುತ್ತದೆ. ವಿಕಿರಣದ ಪ್ರಮಾಣವನ್ನು ಮಿತಿಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮುಂಚಿತವಾಗಿಯೇ ಮಾಡಿಕೊಳ್ಳಲಾಗಿರುತ್ತೆ. ಭಾರತ 1974ರಲ್ಲಿ ಪೋಖ್ರಾನ್‌ನಲ್ಲಿ ನಡೆಸಿದ ʻಆಪರೇಷನ್ ಸ್ಮೈಲಿಂಗ್ ಬುದ್ಧʼ ಹಾಗೂ 1998ರಲ್ಲಿ ನಡೆಸಿದ ʻಆಪರೇಷನ್ ಶಕ್ತಿʼ ಪರೀಕ್ಷೆಗಳೇ ಇದಕ್ಕೆ ಉದಾಹರಣೆ.
ನ್ಯೂಕ್ಲಿಯರ್ ಟೆಸ್ಟಿಂಗ್‌ಗೆ ಹೇಗಿರುತ್ತೆ ತಯಾರಿ?
ಪರಮಾಣು ಪರೀಕ್ಷೆ ನಡೆಸುವ 24 ಗಂಟೆ ಅಥವಾ 48 ಗಂಟೆಗಳ ಮೊದಲು ಇಡೀ ಪ್ರದೇಶದ ಸುರಕ್ಷತೆಯನ್ನು ಗಮನಿಸಲಾಗುತ್ತದೆ. ವಾಯುಪಡೆಯು ಗಸ್ತು ನಡೆಸುತ್ತದೆ. ವಿಕಿರಣ ಮೇಲ್ವಿಚಾರಣಾ ತಂಡವನ್ನು ನಿಯೋಜಿಸಲಾಗುತ್ತದೆ. ಪರೀಕ್ಷೆ ಕಾರ್ಯ ಶುರುವಾಗುತ್ತಿದ್ದಂತೆ ಎಲ್ಲಾ ವಿಜ್ಞಾನಿಗಳು 5 ರಿಂದ 10 ಕಿಮೀ ದೂರದಲ್ಲಿರುವ ಕಾಂಕ್ರೀಟ್ ಬಂಕರ್‌ಗಳಲ್ಲಿ ಅಡಗಿಕೊಳ್ಳುತ್ತಾರೆ. ಈ ಬಂಕರ್‌ಗಳಲ್ಲಿ ಆಕ್ಸಿಜನ್ ಸರಬರಾಜಿಗೆ ವ್ಯವಸ್ಥೆ ಮಾಡಲಾಗಿರುತ್ತದೆ. ಜೊತೆಗೆ ಭೂಮಿಯ ಮೇಲ್ಮೈ ವಾತಾವರಣ ಗಮನಿಸಲು ಸಿಸಿಟಿವಿ ವ್ಯವಸ್ಥೆ ಕೂಡ ಮಾಡಿಕೊಂಡಿರುತ್ತಾರೆ.
ಎಲ್ಲವೂ ಸಿದ್ಧವಾದ ನಂತರ ಕೌಂಟ್‌ಡೌನ್ ಶುರುವಾಗುತ್ತೆ. ಎಲೆಕ್ಟ್ರಾನಿಕ್ ಟಿಗರ್ ಸ್ಫೋಟಕಗಳನ್ನ ಸ್ಫೋಟಿಸುತ್ತೆ. ಇದರಿಂದ ಪ್ಲುಟೋನಿಯಂ (ಒಂದು ವಿಕಿರಣಶೀಲ, ಬೆಳ್ಳಿಯ-ಬೂದು ಲೋಹ) ಅನ್ನು ಸಂಕುಚಿತಗೊಳಿಸುತ್ತೆ (ಕಂಪ್ರೆಸ್). ಇದು ನಿರ್ಣಾಯಕ ದ್ರವ್ಯರಾಶಿಯನ್ನ ತಲುಪಿದಾಗ ಪರಮಾಣು ಪರೀಕ್ಷಾ ಪ್ರಕ್ರಿಯೆ ಶುರುವಾಗುತ್ತದೆ. ನಂತರ ಲಕ್ಷಾಂತರ ಡಿಗ್ರಿ ಶಾಖದೊಂದಿಗೆ ಉಂಟಾಗುವ ಪ್ರಕಾಶಮಾನ ಬೆಳಕು ಶತಕೋಟಿ ನ್ಯೂಟ್ರಾನ್‌ಗಳನ್ನ (ನ್ಯೂಟ್ರಾನ್ ಅನ್ನೋದು ತಟಸ್ಥ ವಿದ್ಯುದಾವೇಶದ ಪರಮಾಣುವಿನ ಕಣ) ಬಿಡುಗಡೆ ಮಾಡುತ್ತದೆ. ಇದು ಭೂಗತದಲ್ಲಿ ಸಂಭವಿಸೋದ್ರಿಂದ 4.0 ರಿಂದ 6.0 ತೀವ್ರತೆ ಭೂಕಂಪದಂತೆ ಭೂಮಿಯ ಮೇಲೆ ಭಾಸವಾಗುತ್ತದೆ. ಮೇಲಿನ ಮಣ್ಣು ಬಿಸಿಯಾಗಿ ಕರಗೇಬಿಡುತ್ತದೆ, ಪರೀಕ್ಷೆ ನಡೆಸಿದ ಸ್ಥಳದಲ್ಲಿ ದೊಡ್ಡ ಕುಳಿ ಸೃಷ್ಟಿಯಾಗುತ್ತದೆ.
ನ್ಯೂಕ್ಲಿಯರ್ ಟೆಸ್ಟಿಂಗ್ ಬಳಿಕ ಏನಾಗುತ್ತದೆ?
ಪರಮಾಣು ಸ್ಫೋಟದ ಕೆಲವು ಮಿಲಿ ಸೆಕೆಂಡುಗಳ ನಂತರ (ಮಿಲಿ ಸೆಕೆಂಡ್ ಅಂದ್ರೆ ಒಂದು ಸೆಕೆಂಡಿನ ಸಾವಿರದ ಒಂದು ಭಾಗ) ಎಲ್ಲಾ ಸಂವೇದಕಗಳು ಡೇಟಾವನ್ನ ಕಳುಹಿಸುತ್ತವೆ. ಸೂಪರ್ ಕಂಪ್ಯೂಟರ್‌ಗಳು ಈ ಎಲ್ಲಾ ದತ್ತಾಂಶಗಳನ್ನ ತಕ್ಷಣವೇ ಸ್ವೀಕರಿಸುತ್ತವೆ. ಇದರಿಂದ ವಿಜ್ಞಾನಿಗಳು ಪರಮಾಣುವಿನ ಬಲವನ್ನು ತಕ್ಷಣವೇ ಅಂದಾಜು ಮಾಡುತ್ತಾರೆ. ಸ್ಫೋಟದ ಕೆಲ ಗಂಟೆಗಳ ನಂತರ ರೊಬೋಟ್‌ಗಳು ಮತ್ತು ಡ್ರೋನ್‌ಗಳನ್ನ ಸ್ಥಳಕ್ಕೆ ಕಳುಹಿಸಲಾಗುತ್ತದೆ. ಇವುಗಳ ಮೂಲಕ ಸ್ಫೋಟ ನಡೆದ ಜಾಗದ ಮಣ್ಣು ಮತ್ತು ಗಾಳಿಯ ಮಾದರಿಗಳನ್ನ ಸಂಗ್ರಹಿಸುತ್ತಾರೆ. ಕ್ರಿಪ್ಟಾನ್ ಮತ್ತು ಕ್ಸೆನಾನ್‌ನಂತಹ ವಿಕಿರಣಶೀಲ ಅನಿಲಗಳನ್ನ ಪರೀಕ್ಷಿಸಲಾಗುತ್ತದೆ. ನಂತರ ಆ ಇಡೀ ಪ್ರದೇಶವನ್ನು ನಿಷೇಧಿತ ಪ್ರದೇಶ ಅಂತ ಘೋಷಿಸಿ. ಅಲ್ಲಿಗೆ ಜನಸಂಪರ್ಕವನ್ನು ಸ್ಥಗಿತಗೊಳಿಸಲಾಗುತ್ತದೆ.
ಇಷ್ಟಕ್ಕೆ ನಿಲ್ಲೋದಿಲ್ಲ. ಆ ಪ್ರದೇಶದಲ್ಲಿ ಯಾವುದೇ ವಿಕಿರಣದ ಅಪಾಯವಿಲ್ಲ ಎಂದು ಖಚಿತಪಡಿಸಿಕೊಳ್ಳಲು ಹಲವಾರು ತಿಂಗಳ ಕಾಲ ಪರಿಸರದ ಮೇಲ್ವಿಚಾರಣೆಯನ್ನ ನಡೆಸಲಾಗುತ್ತದೆ. ಅಂತಿಮವಾಗಿ ವೈಜ್ಞಾನಿಕ ತಂಡವು ವರದಿಯನ್ನ ಸಿದ್ಧಪಡಿಸಿ, ಗೌಪ್ಯವಾಗಿಡುತ್ತದೆ. ಈ ವರದಿಯ ಆಧಾರದಲ್ಲಿ ಪರಮಾಣು ದಾಳಿ ಮಾಡಬೇಕಾದಂತಹ ಸಂದರ್ಭದಲ್ಲಿ ಯಾವ ದೇಶದ ಮೇಲೆ ಎಷ್ಟು ಸಾಮರ್ಥ್ಯದ ಪರಮಾಣುವನ್ನು ಕ್ಷಿಪಣಿಯನ್ನ ಸ್ಫೋಟಿಸಬೇಕು ಅನ್ನೋದನ್ನ ನಿರ್ಧರಿಸಲಾಗುತ್ತದೆ.
ಒಟ್ಟಿನಲ್ಲಿ ಇಡೀ ಮನುಕುಲ ಕಂಡ ಹಿರೋಶಿಮಾ ನಾಗಸಾಕಿ ಪರಮಾಣು ದಾಳಿ ಇಂದಿಗೂ ವಿಶ್ವವನ್ನು ಕಾಡುತ್ತಿದೆ. ಈಗಲೂ ಅಲ್ಲಿ ಹುಟ್ಟುವ ಮಕ್ಕಳು ಅಂಗವಿಕಲತೆ ಅನುಭವಿಸುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಮುಂದೆ ಇಂತಹ ದುಸ್ಥಿತಿ ಯಾವದೇಶಕ್ಕೂ ಬಾರದಿರಲಿ ಅನ್ನೋದು ವಿಶ್ವನಾಯಕರು, ದೇಶದ ಪ್ರತಿಯೊಬ್ಬರ ಆಶಯವಾಗಿದೆ.







