– ಅತೃಪ್ತರ ಮೇಲೆ ದೋಸ್ತಿಗಳ ಭವಿಷ್ಯ?
– ತನ್ನ ಶಾಸಕರಿಗೆ ವಿಪ್ ಜಾರಿ ಮಾಡಿದ ಕಾಂಗ್ರೆಸ್
ಬೆಂಗಳೂರು: ರಾಜ್ಯ ರಾಜಕೀಯದ ಅತ್ಯಂತ ನಿರ್ಣಾಯಕ ಬಂದೇ ಬಿಟ್ಟಿದೆ. ಆಪರೇಷನ್ ಕಮಲದ ವದಂತಿಗಳ ಬೆನ್ನಲ್ಲೇ ನಾಳೆಯಿಂದ ವಿಧಾನಸಭೆಯ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ. ನಾಳೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಭಾಷಣ ಮಾಡಲಿದ್ದು, ಹೈಡ್ರಾಮಾ ನಡೆಯುವ ಸಾಧ್ಯತೆಗಳೇ ಹೆಚ್ಚಾಗಿವೆ. ಆಪರೇಷನ್ ಕಮಲದ ಭೀತಿಯಲ್ಲಿರೋ ಕಾಂಗ್ರೆಸ್, ತನ್ನ ಶಾಸಕರಿಗೆ ವಿಪ್ ಜಾರಿಗೆ ಮಾಡಿದೆ.
ನಾಳೆಯಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಕಡ್ಡಾಯವಾಗಿ ಭಾಗಿಯಾಗುವಂತೆ ಎಲ್ಲ ಶಾಸಕರಿಗೂ ಸೂಚನೆಯನ್ನ ಕಾಂಗ್ರೆಸ್ ರವಾನಿಸಿದೆ. ಬಿಜೆಪಿ ಹಿಡಿತದಲ್ಲಿದ್ದಾರೆ ಎನ್ನಲಾಗುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಶಾಸಕರಾದ ನಾಗೇಂದ್ರ, ಕಂಪ್ಲಿ ಗಣೇಶ್ ಸೇರಿದಂತೆ ಅತೃಪ್ತ ಶಾಸಕರು ಇಂದು ರಾತ್ರಿಯೊಳಗಾಗಿ ಬೆಂಗಳೂರಿಗೆ ಆಗಮಿಸುವ ಸಾಧ್ಯತೆಗಳಿವೆ.
Advertisement
Advertisement
ಬಿಜೆಪಿಗೂ ರಿವರ್ಸ್ ಆಪರೇಷನ್ ಭೀತಿ ಇದ್ದು, ಮೈತ್ರಿ ಸರ್ಕಾರದ ಸಂಪರ್ಕದಲ್ಲಿದ್ದಾರೆ ಎನ್ನಲಾದ ಶಾಸಕರ ಜೊತೆಗೆ ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಮಾಲೋಚನೆ ನಡೆಸಿದ್ದಾರಂತೆ. ಈ ಮಧ್ಯೆ ಅತೃಪ್ತ ಶಾಸಕರ ಗೈರನ್ನು ಆಧರಿಸಿ ಮುಂದಿನ ರಾಜಕೀಯ ತಂತ್ರಗಳನ್ನು ಹೆಣೆಯಲು ಬಿಜೆಪಿ ನಿರ್ಧರಿಸಿದೆ. ಸಾಧ್ಯವಾದ್ರೆ, ರಾಜ್ಯಪಾಲರ ಭಾಷಣಕ್ಕೂ ಅಡ್ಡಿ ಉಂಟುಮಾಡಲು ಬಿಜೆಪಿ ಆಲೋಚಿಸಿದೆ. ಅಧಿವೇಶನದ ಬೆನ್ನಲ್ಲೇ ಉಭಯ ನಾಯಕರುಗಳು ವಾಕ್ಸಮರದಲ್ಲಿ ತೊಡಗಿದ್ದಾರೆ.
Advertisement
ಡಿನ್ನರ್ ಪಾಲಿಟಿಕ್ಸ್:
ಆಪರೇಷನ್ ಕಮಲದ ಬೆನ್ನಲ್ಲೇ ತಮ್ಮ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರುಗಳು ಪಾರ್ಟಿಗಳ ಮೇಲೆ ಪಾರ್ಟಿ ಕರೆದಿದ್ದಾರೆ. ಇವತ್ತು ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಉಪಹಾರ ಕೂಟ ಕರೆದು, ಶಾಸಕರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಮಾಜಿ ಡಿಸಿಎಂ ಆರ್. ಅಶೋಕ್ ಕೂಡ ಡಿನ್ನರ್ ಪಾರ್ಟಿ ಕರೆದಿದ್ದು, ಇದರಲ್ಲಿ ಬಿಜೆಪಿ ಶಾಸಕರುಗಳು ಭಾಗಿಯಾಗಿದ್ದಾರೆ.
Advertisement
ಪಾರ್ಟಿ ವಿಚಾರದಲ್ಲಿ ಕಾಂಗ್ರೆಸ್ ಏನೂ ಹಿಂದೆ ಬಿದ್ದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವತ್ತು ಹಿರಿಯ ಸಚಿವರುಗಳ ಸಭೆ ಕರೆದಿದ್ದಾರೆ. ನಾಳೆಯಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ನಾಳೆ ಬೆಳಗ್ಗೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಕೂಡ ನಾಳೆ ಭೋಜನಾ ಕೂಟ ಕರೆದಿದ್ದಾರೆ. ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ ಅಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡೇ ಮಾಡುತ್ತಾರೆ ಅಂತ ಸ್ಪಷ್ಟಪಡಿಸಿದ್ದಾರೆ. ಇನ್ನೊಂದು ಕಡೆ, ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸರ್ಕಾರ ಬೀಳೋವರೆಗೆ ಶಾಂತವಾಗಿ ಕಾಯೋಣ ಅನ್ನೋ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv