ಅತ್ತ ಬದುಕಲೂ ಆಗದೆ, ಇತ್ತ ಸಾಯುವ ಹಾದಿಯೂ ಸಿಗದೆ ಪರಿತಪಿಸುವ ಜೀವಗಳು ಕೊನೆಗೆ ‘ದಯಾಮರಣ’ (Euthanasia) ಎಂಬ ಕನ್ನಡಿಯೊಳಗಿನ ಗಂಟನ್ನು ಹುಡುಕುತ್ತಾ ಹೊರಡುತ್ತವೆ. ‘ಸಾವಿನ ಭಿಕ್ಷೆ’ ಬೇಡುತ್ತಾ ಹೊರಟವರಿಗೆ ಗೌರವಯುತ ಸಾವು ಸಿಗುವುದು ಭಾರತ ಸಹಿತ ಹಲವು ದೇಶಗಳ ಕಾನೂನಿನಲ್ಲಿ (Law) ಸಾಧ್ಯವೇ ಇಲ್ಲ. ಆದಾಗ್ಯೂ ಕೆಲ ದೇಶಗಳಲ್ಲಿ ದಯಾಮರಣವನ್ನು ಕಾನೂನುಬದ್ಧಗೊಳಿಸಲಾಗಿದೆ. ವೈದ್ಯರ ನೆರವಿನೊಂದಿಗೆ ನೋವಿಲ್ಲದ ಸಾವು ಹೊಂದುವವರಿಗೆ ಇದು ರಹದಾರಿಯಾಗಿದೆ.
ಹೌದು. ಇತ್ತೀಚೆಗೆ ಯುಕೆನಲ್ಲಿ ದಯಾಮರಣಕ್ಕಾಗಿ ಹೊಸ ಕಾನೂನು ಪರಿಚಯಿಸಲು ಅಲ್ಲಿನ ಸರ್ಕಾರ (England Government) ಮುಂದಾಗಿದೆ. ಇತ್ತೀಚೆಗಷ್ಟೇ ಸಂಸತ್‌ನಲ್ಲಿ ಹೊಸ ಮಸೂದೆ ಮಂಡನೆ ಮಾಡಿದ್ದು, ಅದನ್ನ ಆತ್ಮಸಾಕ್ಷಿ ಮತಗಳ ಮೂಲಕ ಅಂಗೀಕರಿಸಲಾಯಿತು. ಬಳಿಕ ಅದರಲ್ಲಿನ ಅಂಶಗಳನ್ನ ಪರಿಶೀಲಿಸಲು ಸಾರ್ವಜನಿಕ ಮಸೂದೆ ಸಮಿತಿಗೆ ಕಳುಹಿಸಲಾಗಿದೆ. ಮತ್ತೊಮ್ಮೆ ಹೌಸ್ ಆಫ್ ಕಾಮನ್ಸ್‌ನಲ್ಲಿ ಮಸೂದೆಗೆ ತಿದ್ದುಪಡಿ ತರುವ ಕುರಿತು ಮತಚಲಾವಣೆ ಮಾಡಲಾಗುತ್ತದೆ. ಬಳಿಕ ಅದನ್ನು ಹೌಸ್ ಆಫ್ ಲಾರ್ಡ್ಸ್‌ಗೆ ಕಳುಹಿಸಲಾಗುತ್ತದೆ, ಅಲ್ಲಿ ಮಸೂದೆ ಕುರಿತು ಚರ್ಚೆ ನಡೆಸಿದ ಬಳಿಕ ಕಾನೂನು ರೂಪ ನೀಡಲಾಗುತ್ತದೆ. ಅಷ್ಟಕ್ಕೂ ಈ ʻಅಸಿಸ್ಟೆಡ್ ಡೈಯಿಂಗ್ ಬಿಲ್ʼ (Assisted Dying Bill) ಪರಿಚಯಿಸಲು ಕಾರಣವೇನು? ಅನ್ನೋದನ್ನ ತಿಳಿಯೋದಕ್ಕೂ ಮುನ್ನ ದಯಾಮರಣ ಎಂದರೇನು ಎಂಬುದನ್ನು ತಿಳಿಯೋಣ.
Advertisement
Advertisement
ʻದಯಾಮರಣʼ ಎಂದರೇನು?
ಘೋರ ನೋವಿನಿಂದ ನರಳುತ್ತಿರುವ ವ್ಯಕ್ತಿಯ ಇಚ್ಛೆಯ ಅನುಸಾರ ನೀಡಲಾಗುವ ‘ಸಾವು’. ಅಂದ್ರೆ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ ಇನ್ನು ಸಹಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂಬ ಸಂದರ್ಭದಲ್ಲಿ ತನಗೆ ಮರಣದ ದಯೆಯನ್ನು ನೀಡಿ ಎಂದು ಅರ್ಜಿ ಸಲ್ಲಿಸುತ್ತಾರೆ. ಕಾನೂನಿನ ಅಡಿಯಲ್ಲಿಯೇ ಅವರಿಗೆ ಸಾವನ್ನು ‘ಕರುಣಿಸಲಾಗುತ್ತದೆ’. ಆದರೆ, ಭಾರತ ಸಹಿತ ಹಲವು ದೇಶಗಳಲ್ಲಿ ಇದಕ್ಕೆ ಅವಕಾಶ ಇಲ್ಲ. ಇದಕ್ಕೆ ಯುಥೆನೇಸಿಯಾ ಎಂಬ ಗ್ರೀಕ್ ಪದವನ್ನು ಸಾಮಾನ್ಯವಾಗಿ ಬಳಸುತ್ತಾರೆ. ಇದರ ಅರ್ಥ ಒಳ್ಳೆಯ ಸಾವು ಎಂದು. 2013 ರಿಂದ, ಯುಕೆಯಲ್ಲಿ ದಯಾಮರಣ ಅನುಮತಿಸಲು ಕನಿಷ್ಠ ಮೂರು ಮಸೂದೆಗಳನ್ನು ಪರಿಚಯಿಸಲಾಗಿದೆ. ಆದ್ರೆ ಕಾನೂನಾಗಿ ಅಧಿಕೃತಗೊಂಡಿಲ್ಲ. ಒಂದು ವೇಳೆ ಮತ್ತೊಬ್ಬರ ಸಹಾಯದಿಂದ ದಯಾಮರಣ ಹೊಂದಿದರೆ, ಸಹಾಯ ಮಾಡಿದವರಿಗೆ 14 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸುವ ಅವಕಾಶ ಕಾನೂನಿಗೆ ಇದೆ.
Advertisement
Advertisement
ಮಸೂದೆ ಏನು ಹೇಳುತ್ತದೆ?
ಸ್ವಂತ ಮರಣಕ್ಕೆ ಇಚ್ಚಿಸುವ ಯಾವುದೇ ವ್ಯಕ್ತಿ 18 ವರ್ಷಕ್ಕಿಂತ ಮೇಲ್ಪಟ್ಟು ಮಾರಣಾಂತಿಕ ಕಾಯಿಲೆಗೆ ತುತ್ತಾಗಿದ್ದು, ತನ್ನಿಂದ ಬದುಕಲು ಸಾಧ್ಯವಾಗುವುದೇ ಇಲ್ಲ ಅನ್ನೂ ಹಂತಕ್ಕೆ ತಲುಪಿರಬೇಕು. ಅಲ್ಲದೇ ದೇಶದಲ್ಲಿ ದಯಾಮರಣ ಬಯಸುವವರು ಇಂಗ್ಲೆಂಡ್ ಅಥವಾ ವೇಲ್ಸ್‌ನಲ್ಲಿ ಕನಿಷ್ಠ 1 ವರ್ಷ ವಾಸವಿರಬೇಕು.
ಪ್ರಕ್ರಿಯೆ ಹೇಗೆ ನಡೆಯುತ್ತೆ?
ಮೊದಲು ವೈದ್ಯರ ಷರತ್ತುಗಳಿಗೆ ಒಪ್ಪಿ ಆತ ಸಹಿ ಹಾಕಬೇಕು. ಷರತ್ತುಗಳನ್ನು ಪೂರ್ಣಗೊಳಿಸಿದ ನಂತರ ವೈದ್ಯರು ಆತನ ದೇಹಸ್ಥಿತಿ ಪರಿಶೀಲಿಸುತ್ತಾರೆ. ಒಂದು ವೇಳೆ ವೈದ್ಯರು ದಯಾಮರಣಕ್ಕೆ ನಿರಾಕರಿಸಿದ್ರೆ ಮತ್ತೊಬ್ಬ ವೈದ್ಯರಿಗೆ ಸಂತ್ರಸ್ತನು ತನ್ನ ಮನವಿ ಸಲ್ಲಿಸಬಹುದು. ಇಷ್ಟಕ್ಕೆ ಮುಗಿಯುವುದಿಲ್ಲ, ವೈದ್ಯರು ದಯಾಮರಣಕ್ಕೆ ಸಂಪೂರ್ಣ ಒಪ್ಪಿ ದೃಢೀಕರಿಸಿದ ನಂತರ ಅದನ್ನು ಲಂಡನ್‌ನಲ್ಲಿನ ಹೈಕೋರ್ಟ್‌ಗೆ ಕಳುಹಿಸಲಾಗುತ್ತದೆ. ರೋಗಿಯ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲಾಗಿದೆ ಎಂದು ಕೋರ್ಟ್ ದೃಢೀಕರಿಸಿದ ನಂತರವಷ್ಟೇ ಮುಂದಿನ 7 ಅಥವಾ 14 ದಿನಗಳಲ್ಲಿ ರೋಗಿಯ ಇಚ್ಛೆಯನ್ನು ಪೂರೈಸಲಾಗುತ್ತದೆ.
ವಿರೋಧ ಏಕೆ?
ಯುಕೆ ನಲ್ಲಿ ದಯಾಮರಣ ಕಾನೂನು ಪರಿಚಯಿಸಲು ಕೆಲವರಿಂದ ವಿರೋಧವೂ ಇದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಯುವಕರ ಸಂಖ್ಯೆಗಿಂತ ವೃದ್ಧರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗಿದೆ. ಹಾಗಾಗಿ ಇಂತಹ ಕಾನೂನನ್ನು ಜಾರಿಗೊಳಿಸಿದ್ರೆ ದುರ್ಬಲರಾದವರು, ವಯಸ್ಸಾದ ವ್ಯಕ್ತಿಗಳಿಗೆ ಒತ್ತಾಯಪೂರ್ವಕವಾಗಿ ದಯಾಮರಣಕ್ಕೆ ಸಹಿ ಮಾಡಿಸಲು ಅನುವು ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಈ ಮಸೂದೆ ಜಾರಿಗೆ ಬೇಡ ಎಂದು ಕೆಲವರು ವಿರೋಧಿಸಿದ್ದಾರೆ.
ಭಾರತದಲ್ಲಿ ಮೊದಲ ದಯಾಮರಣ ಯಾವಾಗ?
ಅರುಣಾ ಶಾನುಬಾಗ್ ಅವರದ್ದು ಭಾರತದ ಮೊದಲ ದಯಾಮರಣ ಪ್ರಕರಣ. 1973ರಲ್ಲಿ ಕ್ರೂರವಾಗಿ ಅತ್ಯಾಚಾರಕ್ಕೆ ಒಳಗಾದ ಅರುಣಾ ಅವರು 42 ವರ್ಷ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. 2015ರಲ್ಲಿ ಅವರು ಮೃತಪಟ್ಟರು. ಅರುಣಾ ಅವರಿಗೆ ಬಲವಂತವಾಗಿ ಆಹಾರ ನೀಡುವುದನ್ನು ನಿಲ್ಲಿಸಬೇಕು ಎಂದು ಕೋರಿ ಸಲ್ಲಿಕೆಯಾದ ಅರ್ಜಿಯನ್ನು 2011ರಲ್ಲಿ ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ಬಳಿಕ ದಯಾಮರಣಕ್ಕೆ ಅವಕಾಶ ಕೊಟ್ಟಿತ್ತು. ಜೀವನಕ್ಕೆ ಮರಳುವುದು ಸಾಧ್ಯವೇ ಇಲ್ಲ ಎಂಬಂತಹ ರೋಗಿಗಳಿಗೆ ದಯಾಮರಣದ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಒರೆಗಾನ್‌ನಲ್ಲಿ ವಿಷ ಔಷಧಿ:
ಅಮೆರಿಕದ ಒರೆಗಾನ್ ರಾಜ್ಯದಲ್ಲಿ ‘ಒರೆಗಾನ್‌ನ ಘನತೆವೆತ್ತ ಸಾವು ಕಾಯ್ದೆ’ (ಡಿಡಬ್ಲ್ಯೂಡಿಎ)ಯನ್ನು 1997ರಲ್ಲಿ ಶಾಸನಬದ್ಧಗೊಳಿಸಲಾಯಿತು. ಈ ಕಾಯಿದೆಯ ಪ್ರಕಾರ, ಮಾರಕ ಅನಾರೋಗ್ಯಕ್ಕೆ ತುತ್ತಾದ ಒರೆಗಾನ್‌ನ ಮಂದಿ ತಮ್ಮ ವೈದ್ಯರಿಂದ ವಿಷಕಾರಿ ಔಷಧ ಪಡೆದು, ಅದನ್ನು ಸ್ವಯಂ ನುಂಗಿ ಸಾಯುವುದಕ್ಕೆ ಅವಕಾಶ ನೀಡಲಾಯಿತು. ಈ ಕಾನೂನು ಜಾರಿಗೆ ಬಂದ ದಿನದಿಂದ ಇದುವರೆಗೆ ಈ ರಾಜ್ಯದಲ್ಲಿ 1,173 ಮಂದಿ ಡಿಡಬ್ಲ್ಯೂಡಿಎ ಅಡಿ ವಿಷಯುಕ್ತ ಔಷಧಗಳನ್ನು ತಮ್ಮ ವೈದ್ಯರಿಂದ ಬರೆಸಿಕೊಂಡಿದ್ದಾರೆ. ಇವರಲ್ಲಿ ಈ ಔಷಧಗಳನ್ನು ಚುಚ್ಚಿಕೊಂಡು 752 ಸತ್ತಿದ್ದಾರೆ. 2013ನೇ ಇಸವಿಯೊಂದರಲ್ಲೇ 122 ಮಂದಿ ವಿಷ ಔಷಧಿ ಚೀಟಿ ಬರೆಸಿಕೊಂಡಿದ್ದಾರೆ. 2014ರ ಜ.22ರವರೆಗೆ ಇವರಲ್ಲಿ 71 ಜನರು ಈ ಔಷಧಗಳನ್ನು ನುಂಗಿ ಮರಣ ಹೊಂದಿದ್ದಾರೆ. ಅಧ್ಯಕ್ಷ ಜಾರ್ಜ್ ಬುಷ್ ವಿರೋಧದ ನಡುವೆಯೂ ಈ ಕಾಯ್ದೆಯನ್ನು ಅಮೆರಿಕದ ಸುಪ್ರೀಂ ಕೊರ್ಟ್ 2006ರಲ್ಲಿ ಎತ್ತಿ ಹಿಡಿದಿತ್ತು. ಇದೇ ರೀತಿಯ ಕಾಯ್ದೆ ಒರೆಗಾನ್‌ನ ಪಕ್ಕದ ರಾಜ್ಯ ವಾಷಿಂಗ್ಟನ್‌ನಲ್ಲೂ 2008ರಲ್ಲಿ ಅನುಷ್ಠಾನಗೊಂಡಿತು.
ಬೇರೆ ಬೇರೆ ದೇಶಗಳ ಕಾನೂನು ಹೇಗಿದೆ?
ನೆದರ್‌ಲ್ಯಾಂಡ್ಸ್‌ನಲ್ಲಿ ಒಬ್ಬ ರೋಗಿಯ ಮನವಿಯನ್ನು ಆಧರಿಸಿ ಆತನ ಬದುಕನ್ನು ಕೊನೆಗೊಳಿಸುವ ಅಧಿಕಾರ ವೈದ್ಯರಿಗೆ ಇದೆ. ಇದರಲ್ಲಿ ಸ್ವ ಪ್ರೇರಿತ, ಸ್ವಪ್ರೇರಿತವಲ್ಲದ ಹಾಗೂ ಸ್ವಪ್ರೇರಣೆಗೆ ವಿರುದ್ಧವಾದ ಎಂಬ ಮೂರು ಪ್ರತ್ಯೇಕ ವಿಭಾಗಗಳಿವೆ. ಸ್ವಪ್ರೇರಿತ ದಯಾಮರಣಕ್ಕೆ ಅಮೆರಿಕ ಹಾಗೂ ಕೆನಡಾದ ಕೆಲವು ಭಾಗಗಳಲ್ಲಿ ಅವಕಾಶ ಇದೆ. ಬೆಲ್ಜಿಯಂ. ಲಕ್ಸಂಬರ್ಗ್, ಸ್ವಿಜರ್‌ಲೆಂಡ್, ಎಸ್ಟೋನಿಯ, ಅಲ್ಬೇನಿಯಾ ಮುಂತಾದೆಡೆ ದಯಾಮರಣಕ್ಕೆ ಕಾನೂನಿನ ಮನ್ನಣೆ ಇದೆ.