44 ಗಂಟೆ ತಡವಾಗಿ ಬಂದ್ರು – ನಾ ಬಂದು ಏನ್ಮಾಡಬೇಕಿತ್ತೆಂದು ಆರೋಗ್ಯ ಸಚಿವರ ಉಡಾಫೆ

Public TV
3 Min Read
MYS HEALTH MINISTER copy

– ಪ್ರಸಾದ ವಿಷ ವಿಚಾರ ಗೊತ್ತಾಗಿದ್ದೇ ನಿನ್ನೆ ಸಂಜೆಯಂತೆ!
– ಆರೋಗ್ಯ ಸಚಿವರಿಗೇ ಮಾಹಿತಿ ಕೊರತೆಯ ಅನಾರೋಗ್ಯ!
– ಸಿಎಂ ಬಂದಿರುವಾಗ ನಾ ಬಂದು ಇನ್ನೇನಾಗಬೇಕಿದೆ?

ಮೈಸೂರು: ಕೇಳ್ರಪ್ಪೋ ಕೇಳಿ…., ಸುಳ್ವಾಡಿ ಗ್ರಾಮದಲ್ಲಿ ಮಾರಮ್ಮ ದೇಗುಲದ ವಿಷ ಪ್ರಸಾದ ಸೇವನೆ ವಿಷಯ ನಮ್ಮ ಘನತೆವತ್ತ ಆರೋಗ್ಯ ಸಚಿವ ಶಿವಾನಂದ ಪಾಟೀಲರಿಗೆ ಗೊತ್ತಾಗಿದ್ದೇ ನಿನ್ನೆ ಸಂಜೆಯಂತೆ. ಶುಕ್ರವಾರ ಮಧ್ಯಾಹ್ನ ನಡೆದ ಘಟನೆ ಆರೋಗ್ಯ ಸಚಿವ ಶಿವಾನಂದ ಪಾಟೀಲರ ಗಮನಕ್ಕೆ ಬಂದಿದ್ದು ನಿನ್ನೆ ಸಂಜೆ 4 ಗಂಟೆಗಂತೆ. ಈ ಮೂಲಕ ಸಚಿವರು ರಾಜ್ಯವೇ ಬೆಚ್ಚಿಬಿದ್ದ ಪ್ರಕರಣ ತಮ್ಮ ಗಮನಕ್ಕೆ ತಡವಾಗಿ ಬಂತು ಎಂದು ಅಜ್ಞಾನದ ಪ್ರದರ್ಶನ ಮಾಡಿದ್ದಾರೆ. ಜೊತೆಗೆ ನಾನು ಬಂದು ಏನು ಮಾಡೋದಿತ್ತು ಎಂಬ ಉಡಾಫೆಯನ್ನೂ ಪ್ರದರ್ಶಿಸಿದ್ದಾರೆ.

MYS 5 1

ಇಂದು ಬೆಳಗ್ಗೆ ಮೈಸೂರಿಗೆ ಬಂದ ಸಚಿವರು ಮಾಧ್ಯಮಗಳ ಜೊತೆ ಮಾತನಾಡುತ್ತಾ, 44 ಗಂಟೆ ತಡವಾಗಿ ಬಂದಿದ್ದಕ್ಕೆ ತಮ್ಮನ್ನು ತಾವೇ ಸಮರ್ಥಿಸಿಕೊಂಡರು. 13 ಜನರ ಸಾವಿನ ಪ್ರಕರಣದ ಬಗ್ಗೆ ಸಚಿವರ ಅಜ್ಞಾನ ಎಷ್ಟಿತ್ತೆಂದರೆ, ನನಗೆ ವಿಷಯ ಗೊತ್ತಾಗಿದ್ದೇ ನಿನ್ನೆ ಸಂಜೆ 4 ಗಂಟೆಗೆ. ನಾನಿರೋದು ವಿಜಯಪುರದಲ್ಲಿ. ಅಲ್ಲಿಂದ ಇಲ್ಲಿಗೆ ಬರೋಕೆ ಟೈಂ ಆಗುತ್ತೆ. ಮುಖ್ಯಮಂತ್ರಿಗಳೇ ಬಂದಿದ್ದಾರೆ ತಾನೇ…? ನಾ ಬಂದು ಇನ್ನೇನು ಆಗಬೇಕಿದೆ. ನನಗಿಂತ ದೊಡ್ಡವರೇ ಬಂದಿದ್ದರಲ್ಲ ಬಿಡಿ ಎಂದು ರಾಜ್ಯಕ್ಕೆ ರಾಜ್ಯವೇ ಮರುಗಿದ ಪ್ರಕರಣಕ್ಕೆ ಉಢಾಫೆ ಉತ್ತರ ನೀಡಿದರು.

vlcsnap 2018 12 16 12h20m06s228

ಮಾರಮ್ಮ ದೇವಿಯ ಪ್ರಸಾದದಲ್ಲಿ ವಿಷ ಸೇರಿತ್ತು ಎಂಬುದನ್ನು ಖಚಿತ ಮಾಡಿಕೊಳ್ಳುವ ವಿಚಾರದಲ್ಲಿ ವಿಳಂಬವಾಯಿತು. ಹೀಗಾಗಿ ಅಸ್ವಸ್ಥರಿಗೆ ಚಿಕಿತ್ಸೆ ನೀಡಲು ಮೈಸೂರಿಗೆ ಸ್ಥಳಾಂತರ ಮಾಡುವಾಗ ತಡವಾಗಿದ್ದು ಸತ್ಯ ಎಂದು ಒಪ್ಪಿಕೊಂಡರು. ಕೆ.ಆರ್. ಆಸ್ಪತ್ರೆಗೆ ಪುಟ್ಟರಂಗಶೆಟ್ಟಿ, ಸಂಸದ ಧೃವನಾರಾಯಣ್ ಜೊತೆ ಭೇಟಿ ನೀಡಿದ ಆರೋಗ್ಯ ಸಚಿವರಾದ ಶಿವಾನಂದ್ ಪಾಟೀಲ್, ಅಪೋಲೋ ಆಸ್ಪತ್ರೆಯಲ್ಲಿ 6 ಮಂದಿ ಪರಿಸ್ಥಿತಿ ಗಂಭೀರವಾಗಿದೆ ಎಂದರು.

MYS 4 1

ಅಜ್ಞಾನ ದರ್ಶನದ ನಡುವೆಯೂ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡ ಸಚಿವರು, ನಾನು ಬಂದ ಮೇಲೆ ಹಲವು ವಿಚಾರಗಳನ್ನು ಸರಿಪಡಿಸಿದ್ದೇನೆ. 400 ಅಂಬ್ಯುಲೆನ್ಸ್ ಖರೀದಿ ಮಾಡಿದ್ದೇವೆ. 360 ವೈದ್ಯರನ್ನ ನೇಮಿಸಿಕೊಂಡಿದ್ದೇವೆ. ಇನ್ನೂ 1000 ಹುದ್ದೆ ಕೊರತೆ ಇದ್ದು, ಅವೆಲ್ಲವನ್ನು ತುಂಬುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.

MYS 1 3

ಇಡೀ ರಾಜ್ಯವೇ ಮಾರಮ್ಮ ದೇವಿಯ ಪ್ರಸಾದಕ್ಕೆ ವಿಷ ಹಾಕಿದ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದರೂ ಅವರ ಗಮನಕ್ಕೆ ಬಂದಿರಲಿಲ್ಲ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದಕ್ಕೆ ಸಚಿವರೇ ಉತ್ತರ ನೀಡಬೇಕು. ಘಟನೆಯ ತೀವ್ರತೆ ಅರಿತು ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಲು ಚೆನ್ನೈಗೆ ತೆರಳಿದ್ದ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ನೇರವಾಗಿ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಅಧಿಕಾರಿಗಳ ಸಭೆ ನಡೆಸಿದ್ದ ಸಿಎಂ ಕುಮಾರಸ್ವಾಮಿ ಅವರು ಅಲ್ಲಿಂದಲೇ ನೇರವಾಗಿ ವಿಶೇಷ ವಿಮಾನದ ಮೂಲಕ ಮೈಸೂರಿಗೆ ಧಾವಿಸಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದವರ ಆರೋಗ್ಯ ವಿಚಾರಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಧರ್ಮಸೇನ, ಸಚಿವ ಜಿ.ಟಿ.ದೇವೇಗೌಡ, ಸಂಸದ ಧೃವನಾರಾಯಣ, ಪ್ರತಾಪ್ ಸಿಂಹ ಸೇರಿದಂತೆ ಸ್ಥಳೀಯ ಶಾಸಕರೆಲ್ಲಾ ಆಸ್ಪತ್ರೆಗೆ ಆಗಮಿಸಿ ಎಲ್ಲರ ಯೋಗ ಕ್ಷೇಮ ವಿಚಾರಿಸಿದ್ದರು.

MYS 3 2

ಆದರೆ ಸರ್ಕಾರದ ಆರೋಗ್ಯ ಇಲಾಖೆಯನ್ನು ಮುನ್ನಡೆಸಬೇಕಾದ ಶಿವಾನಂದ ಪಾಟೀಲರು ನನಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸಿದ್ದು ಮಾತ್ರ ವಿಪರ್ಯಾಸ. 44 ಗಂಟೆ ತಡವಾಗಿ ಬಂದರೂ ತಾನು ಮಾಡಿದ್ದೇ ಸರಿ ಎಂದ ಸಚಿವ ಶಿವಾನಂದ ಪಾಟೀಲರ ಉಡಾಫೆ ಉತ್ತರಕ್ಕೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *