ಹಾಸನ: ಜೆಡಿಎಸ್‌ಗೆ (JDS) ಮತ ಹಾಕಿದರೆ ಕಾಂಗ್ರೆಸ್‌ಗೆ (Congress) ಮತ ಹಾಕಿದಂತೆ ಎಂಬ ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿಕೆಗೆ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು (HD Deve Gowda) ಬೇಸರ ವ್ಯಕ್ತಪಡಿಸಿದ್ದಾರೆ.
ಹಾಸನ (Hassan) ಜಿಲ್ಲೆ, ಅರಸೀಕೆರೆ ತಾಲೂಕಿನ ಲಾಳನಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಗುರ ಮಾತು ಬೇಡ, ಇದು ಅವರಿಗೆ ಶೋಭೆ ತರುವುದಿಲ್ಲ. ಕಳೆದ ಬಾರಿ ರಾಹುಲ್ ಗಾಂಧಿ (Rahul Gandhi) ಮಾಡಿದ್ದನ್ನು, ಈ ಬಾರಿ ಮೋದಿ ಮಾಡಿದ್ದಾರೆ. ಇದು ಸಲ್ಲದು ಎಂದರು.
ರಾಹುಲ್ ಗಾಂಧಿಗೂ ಇವರಿಗೂ ವ್ಯತ್ಯಾಸ ಇದೆ. ರಾಹುಲ್ ಗಾಂಧಿ ಅವರ ಮಟ್ಟಕ್ಕೆ ಮೋದಿ ಅವರನ್ನು ಇಳಿಸಬಾರದಿತ್ತು. ‘ರಾಹುಲ್ ಗಾಂಧಿ ಈಸ್ ಎ ಯಂಗ್‌ಸ್ಟರ್, ಮೋದಿ ಈಸ್ ಎ ಮೆಚ್ಯೂರ್ಡ್ ಲೀಡರ್’. ಅವರಿಂದ ಇಂತಹ ಮಾತು ಬರುತ್ತೆ ಎಂದು ನಾನು ಯೋಚನೆ ಮಾಡಿರಲಿಲ್ಲ. ಮೋದಿ ಅವರು ದೇಶದ ಪ್ರಧಾನಿಯಾಗಿ, ಜೆಡಿಎಸ್ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಬಾರದು. ಅದು ಅವರಿಗೆ ಶೋಭೆಯಲ್ಲ ಎಂದರು.
ಇದೇ ವೇಳೆ ತಮ್ಮ ಮಾಜಿ ಶಿಷ್ಯ ಕೆಎಂ ಶಿವಲಿಂಗೇಗೌಡ ವಿರುದ್ಧ ಹರಿಹಾಯ್ದ ಗೌಡರು, ಈ ಸಭೆ ದೇವರ ಸಭೆ. ನನ್ನ 92ನೇ ವಯಸ್ಸಿನಲ್ಲಿ ಸಭೆಯಲ್ಲಿ ನಿಂತು ಅಸತ್ಯ ಮಾತನಾಡಲು ಸಿದ್ಧನಿಲ್ಲ. ಹೇಮಾವತಿ ಎಡದಂಡೆ ನಾಲೆಯಿಂದ ಅರಸೀಕೆರೆಗೆ ನೀರು ಕೊಡಲು ರೇವಣ್ಣ ಹಠ ಮಾಡಿದ್ದರು. ನಾನು ಮಂಜೂರಾತಿ ಕೊಟ್ಟೆ. ಆದರೆ ಅದನ್ನು ತುಮಕೂರಿಗೆ ತೆಗೆದುಕೊಂಡು ಹೋದರು. ಆಗ ಅರಸೀಕೆರೆಗೆ ನೀರಿನ ಕೊರತೆ ಎದುರಾದಾಗ 23 ಕೊಳವೆ ಬಾವಿ ಕೊರೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಿದೆ. ಅದು ಉಪ್ಪಿನ ನೀರು ಎಂದು ಹೇಳಿದರು. ಹೀಗಾಗಿ ಆಗಲಿಲ್ಲ ಎಂದರು.
ಅರಸೀಕೆರೆಯ ಕೆಲ ಗ್ರಾಮಗಳಿಗೆ ನೀರು ತುಂಬಿಸುವಂತೆ ಅಂದಿನ ಸಿಎಂ ವೀರೇಂದ್ರ ಪಾಟೀಲ್‌ರಿಗೆ 1971 ಜುಲೈ 31 ರಂದು ಬರೆದಿದ್ದ ಪತ್ರ ಪ್ರದರ್ಶಿಸಿದ ಹೆಚ್‌ಡಿಡಿ, 40 ಕೆರೆಗಳಿಗೆ ನೀರು ತುಂಬಿಸಲು ಪತ್ರ ಬರೆದಿದ್ದು ಯಾರು ಹೇಳಿ? ಜೀವನದಲ್ಲಿ ಅವರು ಏನೇನು ಮಾಡಿದ್ದಾರೆ ಅದನ್ನು ಗುಣಗಾಣ ಮಾಡಲ್ಲ. ಆತನನ್ನು ರೇವಣ್ಣ ಬೆನ್ನಿಗೆ ಕಟ್ಟಿಕೊಂಡು ಜೊತೆಯಲ್ಲಿಯೇ ಎಳೆದುಕೊಂಡು ಹೋದರು. ಅದೇ ರೇವಣ್ಣನನ್ನು ಇವತ್ತು ತುಳಿತೀನಿ ಎನ್ನುತ್ತಿದ್ದಾರೆ. ಇಂತಹ ವ್ಯಕ್ತಿ ಅರಸೀಕೆರೆಯಲ್ಲಿ ಮತ್ತೊಮ್ಮೆ ಮುಂದುವರಿಯಕೂಡದು. ಎಂತಹ ವಂಚನೆ, ಮೋಸ, ಮತ್ತೊಬ್ಬ ಇಂತಹ ಕೆಟ್ಟ ರಾಜಕಾರಣಿ ಅರಸೀಕೆರೆಗೆ ಬರಬಾರದು, ಹುಟ್ಟಬಾರದು. ಅಂತ್ಯ ಹಾಡಲೇಬೇಕು ಎಂದು ಕರೆ ನೀಡಿದರು.
ಒಂದು ವೋಟ್‌ಗೆ ಒಂದೂವರೆ ಸಾವಿರ ಕೊಡುತ್ತಾರೆ. 50 ಲಕ್ಷ, ಕೋಟಿ ಖರ್ಚು ಮಾಡುತ್ತಾರೆ. ಎಲ್ಲಿಂದ ಬಂತು ಹಣ? ಒಡೆದು ಆಳುವ ನೀತಿ ಅಂತ್ಯ ಆಗಬೇಕು. ನಾನು ಕೇವಲ ನನ್ನ ಜಾತಿಗೋಸ್ಕರ ಮಾಡಲಿಲ್ಲ. ಹೇಮಾವತಿ ನದಿಯಿಂದ ನೇರವಾಗಿ ಅರಸೀಕೆರೆಗೆ ನೀರು ತರುವ ಯೋಜನೆ ಮಾಡಿದ್ದು ನಾನು ಎಂದು ಹೇಳಿದರು. ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ ರಸ್ತೆ ಬದಿ ಅಂಗಡಿಯಲ್ಲಿ ಟೀ ಕುಡಿದ ಕಿಚ್ಚ ಸುದೀಪ್
ಗುರುವಾರ ಹಾಗೂ ಶುಕ್ರವಾರ ಜಿಲ್ಲೆಯ ಏಳೂ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಸಿದ್ಧನಾಗಿ ಬಂದಿದ್ದೇನೆ. ಯಾವುದೇ ಕ್ಷೇತ್ರಗಳನ್ನು ಕಡೆಗಣಿಸುವ ಪ್ರಶ್ನೆ ಇಲ್ಲ. ಕಡೂರು ಸೇರಿ ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ಲುವ ಸಂಕಲ್ಪ ಮಾಡಿದ್ದೇವೆ. ಭವಾನಿ ಅವರು ಹಾಸನದಲ್ಲಿ ಸ್ವರೂಪ್ ಅವರನ್ನು ತನ್ನ 3ನೇ ಮಗ ಎಂದು ಘೋಷಣೆ ಮಾಡಿದ್ದಾರೆ. ಮೊನ್ನೆ ಪ್ರಧಾನಿ ಮೋದಿ ಅವರು ಜಿಲ್ಲೆಯ ಬೇಲೂರಿಗೆ ಬಂದಿದ್ದರು. ನಾನೂ ಕೂಡ ಪ್ರಚಾರ ಮಾಡಿದ್ದೇನೆ. ನಾಳೆವರೆಗೂ ಹಾಸನದಲ್ಲಿ ಪ್ರಚಾರ ನಡೆಸುತ್ತೇನೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ನವರು ಆಂಜನೇಯನ ಬಾಲಕ್ಕೆ ಬೆಂಕಿ ಹಚ್ಚಿದ್ದಾರೆ: ಅಶೋಕ್ ಕಿಡಿ