ಉತ್ತರಪ್ರದೇಶದ ರಾಯ್ ಬರೇಲಿ ಕ್ಷೇತ್ರದ ಸಂಸದ 54 ವರ್ಷದ ರಾಹುಲ್ ಗಾಂಧಿ (Rahul Gandhi) ಅವರನ್ನು ಕೊನೆಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಕಾಂಗ್ರೆಸ್ ಘೋಷಿಸಿದೆ. ಇತ್ತೀಚೆಗೆ ನಡೆದ ಇಂಡಿಯಾ ಬ್ಲಾಕ್ ಸಭೆಯಲ್ಲಿ ರಾಹುಲ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು. ಇದಾದ ನಂತರ ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹಂಗಾಮಿ ಸ್ಪೀಕರ್ ಭರ್ತ್ರಿಹರಿ ಮಹತಾಬ್ ಅವರಿಗೆ ಪತ್ರ ಬರೆದು ಈ ನಿರ್ಧಾರವನ್ನು ತಿಳಿಸಿದ್ದಾರೆ. ಜೂನ್ 26 ರಂದು ರಾಹುಲ್ ಸದನದಲ್ಲಿ ಜವಾಬ್ದಾರಿ ವಹಿಸಿಕೊಂಡರು.
ಹೌದು. 2014ರಲ್ಲಿ ಮೋದಿ ಸರ್ಕಾರ ರಚನೆಯಾದ ನಂತರ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ ಕಳೆದ 10 ವರ್ಷಗಳಿಂದ ಖಾಲಿ ಉಳಿದಿತ್ತು. ಸದ್ಯ ರಾಹುಲ್ ಗಾಂಧಿ ಈ ಸ್ಥಾನವನ್ನು ತುಂಬಿದ್ದಾರೆ. ಈ ಮೂಲಕ ರಾಗಾಗೆ ಸಂಪುಟ ಸಚಿವ ಸ್ಥಾನಮಾನ ಸಿಕ್ಕಿದೆ. ಇದು ಪ್ರೊಟೋಕಾಲ್ ಪಟ್ಟಿಯಲ್ಲಿ ಅವರ ಸ್ಥಾನವನ್ನು ಹೆಚ್ಚಿಸುತ್ತದೆ ಮತ್ತು ವಿರೋಧ ಪಕ್ಷದ ಮೈತ್ರಿಕೂಟದ ಪ್ರಧಾನಿಗೆ ಅವರು ಸಹಜ ಸ್ಪರ್ಧಿಯಾಗಬಹುದು. ಎರಡೂವರೆ ದಶಕಗಳಿಗೂ ಹೆಚ್ಚು ಕಾಲದ ತಮ್ಮ ರಾಜಕೀಯ ಜೀವನದಲ್ಲಿ ರಾಹುಲ್ ಗಾಂಧಿ ನಿರ್ವಹಿಸಿದ ಮೊದಲ ಸಾಂವಿಧಾನಿಕ ಹುದ್ದೆ ಇದಾಗಿದೆ. ರಾಹುಲ್ 5ನೇ ಬಾರಿ ಸಂಸದರಾಗಿದ್ದಾರೆ. ಕೈಯಲ್ಲಿ ಸಂವಿಧಾನದ ಪ್ರತಿಯೊಂದಿಗೆ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ವಿಶೇಷವಾಗಿತ್ತು.
Advertisement
Advertisement
ಐದನೇ ಬಾರಿಗೆ ಸಂಸದ: ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್ ಕೇರಳದ ವಯನಾಡ್ ಮತ್ತು ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಗೆದ್ದಿದ್ದಾರೆ. ಆದರೆ ಅವರು ವಯನಾಡ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ವಯನಾಡಿನಲ್ಲಿ ಉಪಚುನಾವಣೆ ನಡೆಯಲಿದ್ದು, ರಾಹುಲ್ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸಲಿದ್ದಾರೆ. 2004ರಲ್ಲಿ ರಾಜಕೀಯ ಪ್ರವೇಶಿಸಿದ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಅಮೇಠಿಯಿಂದ ಮೊದಲ ಬಾರಿಗೆ ಗೆದ್ದಿದ್ದರು. ಅವರು ಅಮೇಥಿಯಿಂದ 3 ಬಾರಿ ಚುನಾವಣೆಯಲ್ಲಿ ಗೆದ್ದಿದ್ದಾರೆ. 2019ರಲ್ಲಿ ಅವರು ವಯನಾಡಿನಿಂದ ಗೆದ್ದಿದ್ದರು.
Advertisement
ಹುದ್ದೆಗೆ ಏಕೆ ಮಹತ್ವ..?: ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ 1977 ರಲ್ಲಿ ಶಾಸನಬದ್ಧ ಮಾನ್ಯತೆ ನೀಡಲಾಯಿತು. ವಿರೋಧ ಪಕ್ಷದ ನಾಯಕನ ಹುದ್ದೆಯನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿಲ್ಲ. ಆದರೆ ಸಂಸತ್ತಿನ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಸಾಂವಿಧಾನಿಕ ಹುದ್ದೆಗಳ ನೇಮಕಾತಿಯಲ್ಲಿ ರಾಹುಲ್ ಪಾತ್ರವಿದೆ. ವಾಸ್ತವವಾಗಿ ವಿರೋಧ ಪಕ್ಷದ ನಾಯಕನ ಜವಾಬ್ದಾರಿಗಳನ್ನು ಪೂರೈಸುವುದರ ಜೊತೆಗೆ ರಾಹುಲ್ ಗಾಂಧಿ ಅನೇಕ ಜಂಟಿ ಸಂಸದೀಯ ಸಮಿತಿಗಳು ಮತ್ತು ಆಯ್ಕೆ ಸಮಿತಿಗಳ ಭಾಗವಾಗಿದ್ದಾರೆ.
Advertisement
ಇವುಗಳಲ್ಲಿ ಸಿಬಿಐ ನಿರ್ದೇಶಕರು, ಕೇಂದ್ರ ವಿಜಿಲೆನ್ಸ್ ಕಮಿಷನರ್, ಭಾರತದ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರು, ಮುಖ್ಯ ಮಾಹಿತಿ ಆಯುಕ್ತರು, ಲೋಕಾಯುಕ್ತ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕವನ್ನು ಆಯ್ಕೆ ಮಾಡುವ ಸಮಿತಿಗಳು ಸೇರಿವೆ. ಪ್ರತಿಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಈ ನಿರ್ಧಾರಗಳಲ್ಲಿ ನೇರ ಹಸ್ತಕ್ಷೇಪ ಮಾಡುತ್ತಾರೆ. ಈ ಸಮಿತಿಗಳ ನಿರ್ಧಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ರಾಗಾ ಒಪ್ಪಿಗೆಯೂ ಅಗತ್ಯವಾಗಿರುತ್ತದೆ.
ಸಿಬಿಐ ಮತ್ತು ಇತರ ಸಂಸ್ಥೆಗಳಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಸರ್ಕಾರವನ್ನು ಪದೇ ಪದೇ ಪ್ರಶ್ನಿಸುತ್ತಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಈಗ ಈ ಏಜೆನ್ಸಿಗಳ ಉನ್ನತ ಹುದ್ದೆಗಳ ನೇಮಕಾತಿಯಲ್ಲಿ ಅವರೂ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಸರ್ಕಾರಿ ಸಮಿತಿಗಳ ಭಾಗವಾಗಲಿದ್ದಾರೆ: ಪ್ರತಿಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರು ಲೆಕ್ಕಪತ್ರ ಸಮಿತಿಯ ಮುಖ್ಯಸ್ಥರೂ ಆಗಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಸರ್ಕಾರದ ಆರ್ಥಿಕ ನಿರ್ಧಾರಗಳನ್ನು ಸೂಕ್ಷ್ಮವಾಗಿ ಗಮನಿಸಿ ಅವುಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಅಕೌಂಟ್ಸ್ ಕಮಿಟಿ ಮಾತ್ರ ಸರ್ಕಾರದ ವೆಚ್ಚವನ್ನು ಪರಿಶೀಲಿಸುತ್ತದೆ. ಆದ್ದರಿಂದ ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ನಾಯಕರಾಗಿ ಈ ಜವಾಬ್ದಾರಿಯನ್ನು ಸ್ವಯಂಚಾಲಿತವಾಗಿ ಪಡೆಯಲಿದ್ದಾರೆ.
ರಾಹುಲ್ ಗಾಂಧಿ ಅವರು ಸಂಸತ್ತಿನ ಪ್ರಮುಖ ಸಮಿತಿಗಳಿಗೆ ವಿರೋಧ ಪಕ್ಷದ ನಾಯಕರಾಗಿ ಸೇರಲು ಸಾಧ್ಯವಾಗುತ್ತದೆ ಮತ್ತು ಸರ್ಕಾರದ ಕಾರ್ಯವೈಖರಿಯನ್ನು ನಿರಂತರವಾಗಿ ಪರಿಶೀಲಿಸುವ ಹಕ್ಕನ್ನು ಹೊಂದಿರುತ್ತಾರೆ.
ಪ್ರಧಾನಿಯವರೊಂದಿಗೆ ರಾಹುಲ್ ಕೂಡ ಸಭೆಯಲ್ಲಿ ಭಾಗಿ: ಈ ಎಲ್ಲಾ ನೇಮಕಾತಿಗಳಲ್ಲಿ ಪ್ರತಿಪಕ್ಷದ ನಾಯಕರಾಗಿ ರಾಹುಲ್ ಅವರು ಪ್ರಧಾನಿ ಮತ್ತು ಸದಸ್ಯರು ಒಟ್ಟಿಗೆ ಕುಳಿತುಕೊಳ್ಳುತ್ತಾರೆ. ಈ ನೇಮಕಾತಿಗಳಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಪ್ರಧಾನಿಯವರು ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿಯವರ ಒಪ್ಪಿಗೆಯನ್ನೂ ತೆಗೆದುಕೊಳ್ಳಬೇಕಾಗುತ್ತದೆ. ಅವರ ಅಭಿಪ್ರಾಯ ಮತ್ತು ಸಲಹೆ ಮುಖ್ಯವಾಗುತ್ತದೆ.
ಯಾವೆಲ್ಲಾ ಸೌಲಭ್ಯಗಳು ಸಿಗಲಿದೆ..?
– ಕ್ಯಾಬಿನೆಟ್ ಸಚಿವರಿಗೆ ಸಮಾನವಾದ ಶ್ರೇಣಿ
– ಸರ್ಕಾರಿ ಸುಸಜ್ಜಿತ ಬಂಗಲೆ
– ಸಚಿವಾಲಯದಲ್ಲಿನ ಕಚೇರಿ
– ಉನ್ನತ ಮಟ್ಟದ ಭದ್ರತೆ
– ಉಚಿತ ವಿಮಾನ ಪ್ರಯಣ
– ಉಚಿತ ರೈಲು ಪ್ರಯಾಣ
– ಸರ್ಕಾರಿ ವಾಹನ ಅಥವಾ ಸಾರಿಗೆ ಭತ್ಯೆ
– ರೂ 3.30 ಲಕ್ಷ ಮಾಸಿಕ ವೇತನ ಮತ್ತು ಭತ್ಯೆಗಳು
– ತಿಂಗಳಿಗೆ ಆತಿಥ್ಯ ಭತ್ಯೆ
– ದೇಶದೊಳಗೆ ಪ್ರತಿ ವರ್ಷದಲ್ಲಿ 48 ಕ್ಕೂ ಹೆಚ್ಚು ಪ್ರಯಾಣಗಳಿಗೆ ಭತ್ಯೆ
– ದೂರವಾಣಿ, ಕಾರ್ಯದರ್ಶಿಯ ನೆರವು ಮತ್ತು ವೈದ್ಯಕೀಯ ಸೌಲಭ್ಯಗಳು
ವಿರೋಧ ಪಕ್ಷದ ನಾಯಕನ ಕಾರ್ಯಗಳೇನು?: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಕೆಲಸವು ಸಭಾನಾಯಕನ ಕಾರ್ಯಕ್ಕೆ ವಿರುದ್ಧವಾಗಿದೆ. ಈ ಜವಾಬ್ದಾರಿಯನ್ನು ಸದನದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ವಿರೋಧ ಪಕ್ಷವು ಸರ್ಕಾರದ ಅವಿಭಾಜ್ಯ ಅಂಗವಾಗಿದೆ. ಆಡಳಿತ ಪಕ್ಷವು ಸರ್ಕಾರವನ್ನು ನಡೆಸುತ್ತದೆ ಮತ್ತು ಪ್ರತಿಪಕ್ಷಗಳು ಟೀಕಿಸುತ್ತವೆ. ಹೀಗಾಗಿ ಇಬ್ಬರಿಗೂ ಕರ್ತವ್ಯ ಮತ್ತು ಹಕ್ಕುಗಳಿವೆ. ಸರ್ಕಾರ ಮತ್ತು ಮಂತ್ರಿಗಳ ಮೇಲೆ ವಾಗ್ದಾಳಿ ಮಾಡುವುದು ಪ್ರತಿಪಕ್ಷಗಳ ಕೆಲಸ. ಪ್ರತಿಪಕ್ಷಗಳು ದೋಷಪೂರಿತ ಆಡಳಿತವನ್ನು ಪ್ರಶ್ನಿಸಬೇಕು ಮತ್ತು ಅದನ್ನು ಬಲವಾಗಿ ವಿರೋಧಿಸಬೇಕಾಗಿದೆ. ಪ್ರತಿಪಕ್ಷಗಳು ಮತ್ತು ಸರ್ಕಾರವು ಸಮಾನವಾಗಿ ಒಮ್ಮತದಿಂದ ಕೆಲಸ ಮಾಡುತ್ತವೆ.
ಗಾಂಧಿ ಕುಟುಂಬದ 3ನೇ ವ್ಯಕ್ತಿಗೆ ಜವಾಬ್ದಾರಿ: ಇದು ಮೂರನೇ ಬಾರಿಗೆ ಗಾಂಧಿ ಕುಟುಂಬದ ಸದಸ್ಯರೊಬ್ಬರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಪಾತ್ರದಲ್ಲಿದ್ದಾರೆ. ಇದಕ್ಕೂ ಮುನ್ನ ಸೋನಿಯಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕನ ಜವಾಬ್ದಾರಿ ನಿರ್ವಹಿಸಿದ್ದಾರೆ. ಸೋನಿಯಾ ಗಾಂಧಿಯವರು 1999ರ ಅಕ್ಟೋಬರ್ 13 ರಿಂದ 2004ರ ಫೆಬ್ರವರಿ 06 ರವರೆಗೆ ವಿರೋಧ ಪಕ್ಷದ ನಾಯಕಿಯ ಜವಾಬ್ದಾರಿಯನ್ನು ಹೊಂದಿದ್ದರು. ಇನ್ನು ರಾಜೀವ್ ಗಾಂಧಿ ಅವರು 1989ರ ಡಿಸೆಂಬರ್ 18 ರಿಂದ 1990 ರ ಡಿಸೆಂಬರ್ 24 ರವರೆಗೆ ವಿರೋಧ ಪಕ್ಷದ ನಾಯಕರಾಗಿದ್ದರು.
ಕಾಂಗ್ರೆಸ್ ಹೇಳಿದ್ದೇನು?: ರಾಹುಲ್ ಗಾಂಧಿಯವರು 18ನೇ ಲೋಕಸಭೆಯಲ್ಲಿ ಜನರ ಕಟ್ಟಕಡೆಯ ವ್ಯಕ್ತಿಯ ಧ್ವನಿಯಾಗುತ್ತಾರೆ. ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮತ್ತು ಮಣಿಪುರದಿಂದ ಮಹಾರಾಷ್ಟ್ರದವರೆಗೆ ಇಡೀ ದೇಶವನ್ನು ಸುತ್ತಿದ್ದಾರೆ. ಅವರು ಜನರ ಧ್ವನಿ ಎತ್ತುತ್ತಾರೆ ಎಂದು ರಾಹುಲ್ ಆಯ್ಕೆಯ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಾಂಗ್ರೆಸ್ 99 ಸಂಸದರ ಅತಿ ದೊಡ್ಡ ಪಕ್ಷವಾಗಿ ಆಯ್ಕೆ: 10 ವರ್ಷಗಳ ನಂತರ ಕಾಂಗ್ರೆಸ್‍ಗೆ ಪ್ರತಿಪಕ್ಷ ನಾಯಕ ಸ್ಥಾನ ಸಿಕ್ಕಿದೆ. 2014 ಮತ್ತು 2019ರಲ್ಲಿ ಪ್ರತಿಪಕ್ಷ ನಾಯಕನ ಸ್ಥಾನಕ್ಕೇರಲು ಕಾಂಗ್ರೆಸ್‍ಗೆ ಸಾಕಷ್ಟು ಸಂಸದರಿರಲಿಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸಂಖ್ಯೆಯನ್ನು ದ್ವಿಗುಣಗೊಳಿಸಿಕೊಂಡಿದೆ. 2019ರಲ್ಲಿ ಕಾಂಗ್ರೆಸ್ 52 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ 99 ಸ್ಥಾನಗಳನ್ನು ಗೆದ್ದಿದೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 44 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. 2014 ಮತ್ತು 2019ರಲ್ಲಿ ಬಿಜೆಪಿ ನಂತರ ಎರಡನೇ ಅತಿ ದೊಡ್ಡ ಪಕ್ಷವಾಗಿದ್ದರೂ ಕಾಂಗ್ರೆಸ್ ಪ್ರಮುಖ ವಿರೋಧ ಪಕ್ಷವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಾಸ್ತವವಾಗಿ 10 ಪ್ರತಿಶತಕ್ಕಿಂತ ಕಡಿಮೆ ಸ್ಥಾನಗಳನ್ನು ಹೊಂದಿರುವ ಪಕ್ಷವು ಕೆಳಮನೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆಯಲು ಸಾಧ್ಯವಿಲ್ಲ.