ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ (Donald Trump) ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಈ ಪೈಕಿ ಕೆಲವು ನಿರ್ಧಾರಗಳು ವಿವಾದವನ್ನು ಸೃಷ್ಟಿಸಿವೆ. ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಹಿಂದೆ ಸರಿಯುವ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದು, ಜಾಗತಿಕ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ. ಡಬ್ಲ್ಯೂಹೆಚ್‌ಒದಿಂದ ಹಿಂದೆ ಸರಿಯುವುದಕ್ಕೆ ಟ್ರಂಪ್ ಕೋವಿಡ್ ಸೇರಿದಂತೆ ಅನೇಕ ಬಲವಾದ ಕಾರಣಗಳನ್ನು ನೀಡಿದ್ದಾರೆ. ಜಾಗತಿಕ ಆರೋಗ್ಯ ವಿಚಾರದಲ್ಲಿ ಸಂಸ್ಥೆಯ ನಡೆಯನ್ನು ಪ್ರಶ್ನಿಸಿದ್ದಾರೆ. ಅವರ ನಿರ್ಧಾರದ ಹಿಂದೆ ಚೀನಾ ಕೂಡ ಟಾರ್ಗೆಟ್ ಆಗಿದೆ.
ಸಾಂಕ್ರಾಮಿಕ ರೋಗಗಳು, ಹವಾಮಾನ-ಸಂಬಂಧಿತ ಕಾಯಿಲೆಗಳು ಮತ್ತು ತುರ್ತು ಆರೋಗ್ಯ ಸವಾಲುಗಳೊಂದಿಗೆ ಜಗತ್ತು ಹಿಡಿತ ಸಾಧಿಸುತ್ತಿರುವ ಹೊತ್ತಿನಲ್ಲಿ ಅಮೆರಿಕ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಡಬ್ಲ್ಯೂಹೆಚ್‌ಒಗೆ ಅಮೆರಿಕ ಅತಿದೊಡ್ಡ ದಾನಿ. ಆ ದೇಶವೇ ಸಂಸ್ಥೆಯಿಂದ ಹೊರನಡೆದಿರುವುದು ಸಹಜವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟçಗಳಲ್ಲಿ ಆತಂಕ ಮೂಡಿಸಿದೆ. ಇದರಿಂದ ಜಾಗತಿಕ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ಭಾರತದ ಆರೋಗ್ಯ ಕ್ಷೇತ್ರದ ಮೇಲಾಗುವ ಎಫೆಕ್ಟ್ ಏನು? ಡಬ್ಲ್ಯೂಹೆಚ್‌ಒಗೆ ಚೀನಾ ಬೆಂಬಲವಾಗಿ ನಿಲ್ಲುತ್ತಾ ಎಂಬ ಪ್ರಶ್ನೆಗಳು ಉದ್ಭವಿಸಿವೆ.
Advertisement
ಡಬ್ಲ್ಯೂಹೆಚ್‌ಒ ಜಾಗತಿಕ ಆರೋಗ್ಯದ ಮೇಲೆ ಕೆಲಸ ಮಾಡುವ ಯುಎನ್ ಸಂಸ್ಥೆಯಾಗಿದೆ. ತಮ್ಮ ಪ್ರಾಥಮಿಕ ಆರೋಗ್ಯ ರಕ್ಷಣೆಯನ್ನು ಬಲಪಡಿಸಲು ಜಾಗತಿಕ ದೇಶಗಳೊಂದಿಗೆ ಇದು ಕೆಲಸ ಮಾಡುತ್ತದೆ. ಡಬ್ಲ್ಯೂಹೆಚ್‌ಒ ಮಾರ್ಗಸೂಚಿಗಳು ಸರ್ಕಾರದ ನೀತಿಗಳನ್ನು ತಯಾರಿಸಲು ಸಹಾಯ ಮಾಡುತ್ತದೆ. ನಿರ್ದಿಷ್ಟ ರೋಗಗಳನ್ನು ನಿಭಾಯಿಸಲು ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕಾರ ನೀಡುತ್ತದೆ.
Advertisement
Advertisement
ಟ್ರಂಪ್ ಹೇಳಿದ್ದೇನು?
ಕೊರೊನಾ ಸಾಂಕ್ರಾಮಿಕ ಸೇರಿ ಇತರ ಅಂತರರಾಷ್ಟ್ರೀಯ ಆರೋಗ್ಯ ಬಿಕ್ಕಟ್ಟುಗಳ ನಿರ್ವಹಣೆಯಲ್ಲಿ ಡಬ್ಲ್ಯೂಹೆಚ್‌ಒ ವಿಫಲವಾಗಿದೆ. ಇದು ನಮ್ಮನ್ನು (ಅಮೆರಿಕ) ಅಳಿಸಿ ಹಾಕಲು ನೋಡಿತ್ತು. ಎಲ್ಲರೂ ನಮ್ಮನ್ನು ತುಳಿಯಲು ನೋಡಿದ್ದರು. ಆದರೆ, ಇನ್ಮುಂದೆ ಇದು ನಡೆಯುವುದಿಲ್ಲ. ಮುಂದಿನ 12 ತಿಂಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹೊರಬರಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕದ ಇತಿಹಾಸದಲ್ಲೇ ಬೃಹತ್ ಗಡಿಪಾರು ಕಾರ್ಯಾಚರಣೆ – 538 ಅಕ್ರಮ ವಲಸಿಗರು ಅರೆಸ್ಟ್, ನೂರಾರು ಮಂದಿ ಗಡಿಪಾರು
Advertisement
ಟ್ರಂಪ್ ಕಾರ್ಯಕಾರಿ ಆದೇಶದಲ್ಲೇನಿದೆ?
* ಡಬ್ಲ್ಯೂಹೆಚ್‌ಒ ನೀಡುತ್ತಿದ್ದ ಆರ್ಥಿಕ ನೆರವನ್ನು ಅಮೆರಿಕ ನಿಲ್ಲಿಸಲಿದೆ. (ಯುಎಸ್ ನಿಧಿಗಳು ಮತ್ತು ಸಂಪನ್ಮೂಲಗಳ ಯಾವುದೇ ವರ್ಗಾವಣೆ ಇರಲ್ಲ)
* ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕೆಲಸ ಮಾಡುವ ಅಮೆರಿಕದ ಸರ್ಕಾರಿ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುವುದು.
* ಡಬ್ಲ್ಯೂಹೆಚ್‌ಒ ಜೊತೆ ಅಗತ್ಯ ಮಾತುಕತೆ ನಡೆಸಲು ಪಾಲುದಾರರನ್ನು ಮರು ನೇಮಕ ಮಾಡುವುದು.
* ಸಾಂಕ್ರಾಮಿಕ ರೋಗಗಳ ನಿರ್ವಹಣೆ ಒಪ್ಪಂದ ಮಾತುಕತೆಗಳು ನಿಲ್ಲಿಸಲಿದೆ. (ಸಾಂಕ್ರಾಮಿಕ ರೋಗಗಳಿಗೆ ಪ್ರತಿರೋಧ ಒಡ್ಡಲು ದೇಶಗಳನ್ನು ಸಜ್ಜುಗೊಳಿಸುವುದು. ಸಾಂಕ್ರಾಮಿಕ ರೋಗ ಸಂಭವಿಸಿದರೆ ಜಾಗತಿಕ ಸಹಕಾರಕ್ಕಾಗಿ ಚೌಕಟ್ಟನ್ನು ರಚಿಸುವುದು. ಔಷಧಗಳು ಮತ್ತು ಲಸಿಕೆಗಳಂತಹ ವೈದ್ಯಕೀಯ ಸಹಕಾರ ನೀಡುವ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸುವುದು ಒಪ್ಪಂದದ ಗುರಿಯಾಗಿತ್ತು.)
ಅತಿ ದೊಡ್ಡ ದಾನಿ ಅಮೆರಿಕ
ಅಮೆರಿಕವು ಡಬ್ಲ್ಯೂಹೆಚ್‌ಒಗೆ ಅತಿ ದೊಡ್ಡ ದಾನಿಯಾಗಿತ್ತು. ಹೆಚ್ಚಿನ ಆರ್ಥಿಕ ಬೆಂಬಲ ಯುಎಸ್‌ನಿಂದಲೇ ಸಿಗುತ್ತಿತ್ತು. ವಿಶ್ವ ಆರೋಗ್ಯ ಸಂಸ್ಥೆ ಒಟ್ಟು ನಿಧಿಯ 18% ನೆರವನ್ನು ಅಮೆರಿಕ ನೀಡುತ್ತಿತ್ತು. ಹೀಗಿರುವಾಗ, ಅಮೆರಿಕ ಹೊರನಡೆಯುವುದು ಡಬ್ಲ್ಯೂಹೆಚ್‌ಒ ಮೇಲೆ ಭಾರಿ ಆರ್ಥಿಕ ಪರಿಣಾಮ ಬೀರುತ್ತದೆ. 140 ಕೋಟಿ ಜನಸಂಖ್ಯೆ ಹೊಂದಿರುವ ದೇಶ ಚೀನಾ. ಅಮೆರಿಕ 300% ನಷ್ಟು ಜನಸಂಖ್ಯೆಯನ್ನು ಈ ದೇಶ ಹೊಂದಿದೆ. ಆದರೆ, ಡಬ್ಲ್ಯೂಹೆಚ್‌ಒ ಸುಮಾರು 90% ನಷ್ಟು ಕಡಿಮೆ ಆರ್ಥಿಕ ನೆರವು ನೀಡುತ್ತದೆ ಎಂಬುದು ಟ್ರಂಪ್ ಕಾರ್ಯಕಾರಿ ಆದೇಶದ ವಾದ.
ನಿಧಿಗೆ ಹಣ ಹೇಗೆ ಬರುತ್ತೆ?
ಆರೋಗ್ಯ ಸಂಸ್ಥೆಯ ನಿಧಿಯು ಮೂಲಭೂತವಾಗಿ ಎರಡು ರೀತಿಯಲ್ಲಿ ಬರುತ್ತದೆ. ಒಂದು- ಅದರ ಎಲ್ಲಾ ಸದಸ್ಯ ರಾಷ್ಟ್ರಗಳಿಂದ ಕಡ್ಡಾಯವಾಗಿ ನಿಧಿ ಸಂಗ್ರಹವಾಗುತ್ತದೆ. ಎರಡು- ವಿವಿಧ ದೇಶಗಳು ಮತ್ತು ಸಂಸ್ಥೆಗಳು ಸ್ವಯಂಪ್ರೇರಿತ ಕೊಡುಗೆಗಳನ್ನು ನೀಡುತ್ತವೆ. ಅತಿದೊಡ್ಡ ಪಾವತಿದಾರನಾಗಿರುವ ಅಮೆರಿಕ 22.05% ಕೊಡುಗೆ ನೀಡುತ್ತದೆ. ಚೀನಾ 15% ಆರ್ಥಿಕ ನೆರವು ಕೊಡುತ್ತದೆ. ಆರೋಗ್ಯ ಸಂಸ್ಥೆಗೆ ಹರಿದು ಬರುವ ಒಟ್ಟು 578 ಮಿಲಿಯನ್ ಯುಎಸ್ ಡಾಲರ್‌ನಲ್ಲಿ ಅಮೆರಿಕವೇ ಸರಿಸುಮಾರು 138 ಮಿಲಿಯನ್ ಡಾಲರ್ ನೆರವು ನೀಡುತ್ತಿದೆ. ಚೀನಾ 87.6 ಮಿಲಿಯನ್ ಡಾಲರ್ ಕೊಡುಗೆ ಕೊಡುತ್ತಿದೆ. ಸ್ವಯಂಪ್ರೇರಿತ ಕೊಡುಗೆಗಳಲ್ಲಿಯೂ ಅಮೆರಿಕವೇ ದೊಡ್ಡ ದಾನಿಯಾಗಿದ್ದು, 2023 ರಲ್ಲಿ ಒಟ್ಟು ಕೊಡುಗೆಗಳಲ್ಲಿ ಸುಮಾರು 13% (356.3 ಮಿಲಿಯನ್ ಡಾಲರ್) ಪಾಲನ್ನು ಹೊಂದಿದೆ. ಚೀನಾ ಒಟ್ಟು ಕೊಡುಗೆಗಳು 0.14% (3.9 ಮಿಲಿಯನ್ ಡಾಲರ್) ಮಾತ್ರ. ಎರಡನೆಯ ಅತಿ ದೊಡ್ಡ ಸ್ವಯಂಪ್ರೇರಿತ ಕೊಡುಗೆದಾರರೆಂದರೆ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್.
ಯುಎಸ್ ಅಧ್ಯಕ್ಷೀಯ ಚುನಾವಣೆಗಳ ಕಾರಣ ಅನಿಶ್ಚಿತತೆಯಿಂದ ಕಳೆದ ವರ್ಷ ಡಬ್ಲ್ಯೂಹೆಚ್‌ಒ ಹೆಚ್ಚು ಸ್ವಯಂಪ್ರೇರಿತ ಕೊಡುಗೆಗಳನ್ನು ಸ್ವೀಕರಿಸಲು ಕಾರಣವಾಯಿತು. ನವೆಂಬರ್‌ನಲ್ಲಿ ಕೊನೆಗೊಂಡ 2024 ರ ಫಂಡಿಂಗ್ ಸುತ್ತಿನಲ್ಲಿ, ಆಸ್ಟ್ರೇಲಿಯಾ, ಇಂಡೋನೇಷ್ಯಾ ಮತ್ತು ಸ್ಪೇನ್ 1.7 ಬಿಲಿಯನ್ ಡಾಲರ್ ನೀಡುವುದಾಗಿ ವಾಗ್ದಾನ ಮಾಡಿದ್ದವು. ಇದು 2025-28 ರ ನಡುವೆ ಕಾರ್ಯಕ್ರಮದ ಅನುಷ್ಠಾನಕ್ಕೆ ಅಗತ್ಯವಿರುವ 7.1 ಡಾಲರ್ ಶತಕೋಟಿಯ 53% ಅನ್ನು ಡಬ್ಲ್ಯೂಹೆಚ್‌ಒ ಪಡೆಯಲು ಕಾರಣವಾಯಿತು. ಇದು 2020 ರಲ್ಲಿ ಅದರ ಹಿಂದಿನ ನಾಲ್ಕು ವರ್ಷಗಳ ಅವಧಿಗೆ ಪಡೆದುಕೊಂಡ 17% ಕ್ಕಿಂತ ಹೆಚ್ಚಾಗಿದೆ.
ಡಬ್ಲ್ಯೂಹೆಚ್‌ಒ ಪ್ರತಿಕ್ರಿಯೆ ಏನು?
ಅಮೆರಿಕದ ಈ ನಿರ್ಧಾರಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು ವಿಷಾದಿಸಿದೆ. ಯುಎಸ್ ತನ್ನ ನಿಲುವನ್ನು ಪುನರ್‌ವಿಮರ್ಶೆಗೆ ಒಳಪಡಿಸುತ್ತದೆ ಎಂದು ನಂಬಿದ್ದೇವೆ. ಅಮೆರಿಕನ್ನರು ಸೇರಿದಂತೆ ವಿಶ್ವದ ಜನರ ಆರೋಗ್ಯ ಮತ್ತು ಸುರಕ್ಷತೆಯನ್ನು ರಕ್ಷಿಸುವಲ್ಲಿ ಡಬ್ಲ್ಯೂಹೆಚ್‌ಒ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಯುಎಸ್ ಮತ್ತು ಇತರೆ ಸದಸ್ಯ ರಾಷ್ಟ್ರಗಳ ಭಾಗವಹಿಸುವಿಕೆಯಿಂದ ಡಬ್ಲ್ಯೂಹೆಚ್‌ಒ ಕಳೆದ 7 ವರ್ಷಗಳಲ್ಲಿ ತನ್ನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದೆ ಎಂದು ಹೇಳಿಕೊಂಡಿದೆ.
ಭಾರತದ ಮೇಲೆ ಬೀಳುತ್ತಾ ಎಫೆಕ್ಟ್?
ಡಬ್ಲ್ಯೂಹೆಚ್‌ಒ ತನ್ನ ನಿಧಿಯ ಗಮನಾರ್ಹ ಪ್ರಮಾಣವನ್ನು ಕಳೆದುಕೊಳ್ಳುವುದರಿಂದ, ಭಾರತ ಸೇರಿದಂತೆ ಅನೇಕ ದೇಶಗಳ ಆರೋಗ್ಯ ವಲಯದಲ್ಲಿ ಪರಿಣಾಮ ಬೀರುವ ಸಾಧ್ಯತೆಯಿದೆ. ಹೆಚ್‌ಐವಿ-ಮಲೇರಿಯಾ-ಕ್ಷಯರೋಗ, ಸೂಕ್ಷ್ಮಾಣುಜೀವಿಗಳ ವಿರುದ್ಧದ ಪ್ರತಿರೋಧ ಮೊದಲಾದ ಭಾರತ ಸರ್ಕಾರದ ಹಲವಾರು ಆರೋಗ್ಯ ಕಾರ್ಯಕ್ರಮಗಳಲ್ಲಿ ಡಬ್ಲ್ಯೂಹೆಚ್‌ಒ ಭಾಗವಹಿಸುತ್ತದೆ. ಮುಖ್ಯವಾಗಿ, ಇದು ದೇಶದ ಪ್ರತಿರಕ್ಷಣೆ ಕಾರ್ಯಕ್ರಮದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸಂಸ್ಥೆಯ ತಂಡಗಳು ಲಸಿಕೆ ವ್ಯಾಪ್ತಿಯನ್ನು ಸಹ ಮೇಲ್ವಿಚಾರಣೆ ಮಾಡುತ್ತವೆ. ಅಷ್ಟೇ ಅಲ್ಲ, ಡಬ್ಲ್ಯೂಹೆಚ್‌ಒ ಪ್ರಪಂಚದಾದ್ಯಂತದ ದೇಶಗಳ ಆರೋಗ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತದೆ. ನಿಧಿ ಕಡಿತವು ಈ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಸಂಸ್ಥೆಗೆ ಸಾಧ್ಯವಾಗುವುದಿಲ್ಲ ಎಂದು ಭಾರತದ ಸಾರ್ವಜನಿಕ ಆರೋಗ್ಯ ತಜ್ಞರು ವಿಶ್ಲೇಷಿಸಿದ್ದಾರೆ.
ಅಮೆರಿಕ ತಜ್ಞರು ಹೊರಕ್ಕೆ?
ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಮೆರಿಕ ತಜ್ಞರು ಹೊರನಡೆಯುವ ಸಾಧ್ಯತೆ ಕೂಡ ಇದೆ. ಯುಎಸ್ ಪರಿಣಿತರ ನಷ್ಟವು ಡಬ್ಲ್ಯೂಹೆಚ್‌ಒ ಪಾತ್ರದ ಮೇಲೆ ಪರಿಣಾಮ ಬೀರಲಿದೆ. ವೈರಸ್, ದೀರ್ಘ ಕಾಯಿಲೆ, ಸಾಂಕ್ರಾಮಿಕ ರೋಗಗಳು ಮೊದಲಾದವುಗಳಿಗೆ ಸಂಬಂಧಿಸಿದಂತೆ ಡಬ್ಲ್ಯೂಹೆಚ್‌ಒ ಮಾರ್ಗಸೂಚಿಗಳನ್ನು ಒದಗಿಸುತ್ತದೆ. ಅದನ್ನು ಜಾಗತಿಕ ದೇಶಗಳು ತಮ್ಮ ಸ್ಥಳೀಯ ಕಾರ್ಯಕ್ರಮಗಳಿಗೆ (ಆರೋಗ್ಯಕ್ಕೆ ಸಂಬಂಧಿಸಿ) ಬಳಸಿಕೊಳ್ಳುತ್ತವೆ. ಈ ಮಾರ್ಗಸೂಚಿಗಳನ್ನು ಸಾಮಾನ್ಯವಾಗಿ ಎಲ್ಲಾ ಪ್ರಕಟಿತ ಪುರಾವೆಗಳನ್ನು ಸಂಗ್ರಹಿಸಿ, ಅವುಗಳನ್ನು ಶ್ರೇಣೀಕರಿಸಿ ನಂತರ ತಜ್ಞರ ಸಮಿತಿಗಳಲ್ಲಿಟ್ಟು ಚರ್ಚಿಸುವ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ. ರೋಗ ಸ್ಥಳೀಯತೆ ಮತ್ತು ಅಲ್ಲಿ ನಡೆಸುವ ಸಂಶೋಧನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸಮಿತಿಗಳನ್ನು ರಚಿಸಲಾಗುತ್ತದೆ. ಬೇರೆ ಬೇರೆ ದೇಶಗಳ ಪ್ರತಿನಿಧಿಗಳೂ ಆ ಸಮಿತಿಯಲ್ಲಿರುತ್ತದೆ. ಯುಎಸ್ ತಜ್ಞರು ಅಂತಹ ಹಲವಾರು ಸಮಿತಿಗಳ ಭಾಗವಾಗಿದ್ದಾರೆ. ಅವರನ್ನು ಹೊರತೆಗೆದರೆ ಡಬ್ಲ್ಯೂಹೆಚ್‌ಒ ಕೆಲಸದ ಮೇಲೆ ಪರಿಣಾಮ ಬೀರುತ್ತದೆ.
ಸದಸ್ಯ ರಾಷ್ಟ್ರಗಳು ಹೊರಬರಬಹುದೇ?
ಡಬ್ಲ್ಯೂಹೆಚ್‌ಒನ ಸಂವಿಧಾನದಲ್ಲಿ ಸದಸ್ಯ ರಾಷ್ಟ್ರಗಳು ಹೊರಬರುವುದಕ್ಕೆ ಯಾವುದೇ ಅವಕಾಶವಿಲ್ಲ. ಆದಾಗ್ಯೂ, 1948 ರಲ್ಲಿ ಸಂಸ್ಥೆಗೆ ಸೇರುವ ಸಮಯದಲ್ಲಿ ಯುಎಸ್ ಕಾಂಗ್ರೆಸ್ ಒಂದು ಷರತ್ತನ್ನು ಹಾಕಿತು. ಒಂದು ವರ್ಷದ ಸೂಚನೆಯನ್ನು ನೀಡಿದ ನಂತರ ಮತ್ತು ಪ್ರಸಕ್ತ ವರ್ಷದ ಹಣಕಾಸಿನ ಜವಾಬ್ದಾರಿಗಳನ್ನು ಪೂರೈಸಿದ ನಂತರ ದೇಶವು ಸಂಸ್ಥೆಯಿAದ ಹೊರನಡೆಯಬಹುದು. ಹೊರನಡೆಯುವ ಪ್ರಕ್ರಿಯೆ ಕೂಡ ತಕ್ಷಣಕ್ಕೆ ಆಗುವುದಿಲ್ಲ. ಒಂದು ವರ್ಷದವರೆಗಿನ ಅವಧಿ ಇರುತ್ತದೆ. ಈ ಅವಧಿಯಲ್ಲಿ ಯುಎಸ್‌ನ ನಿರ್ಧಾರದ ಮರುಪರಿಶೀಲನೆಗೆ ಅವಕಾಶವೂ ಇರುತ್ತದೆ.
ಅಮೆರಿಕ ಎಷ್ಟು ಮುಖ್ಯ?
1948 ರಲ್ಲಿ ಸ್ಥಾಪನೆಯಾದಾಗಿನಿಂದ ಡಬ್ಲ್ಯೂಹೆಚ್‌ಒಗೆ ಮೂಲಾಧಾರವಾಗಿ ವಾಷಿಂಗ್ಟನ್ ಸೇವೆ ಸಲ್ಲಿಸಿದೆ. ಸಂಸ್ಥೆಯ ಅತಿದೊಡ್ಡ ಏಕೈಕ ದಾನಿಯಾಗಿದೆ. ಸಂಸ್ಥೆಯ 2023 ಬಜೆಟ್‌ನ 18% ರಷ್ಟು ಕೊಡುಗೆಯನ್ನು ಅಮೆರಿಕ ನೀಡಿತು. ಇದು ವಾರ್ಷಿಕವಾಗಿ ನೂರಾರು ಮಿಲಿಯನ್ ಡಾಲರ್‌ಗಳಷ್ಟಿದೆ. ಈ ನಿಧಿಗಳು ರೋಗಗಳನ್ನು ನಿರ್ಮೂಲನೆ ಮಾಡುವುದರಿಂದ ಹಿಡಿದು ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ತುರ್ತುಸ್ಥಿತಿಗಳಿಗೆ ಸ್ಪಂದಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. 2024-2025ರಲ್ಲಿ ಡಬ್ಲೂö್ಯಹೆಚ್‌ಒನ ಬಜೆಟ್ 6.8 ಶತಕೋಟಿ ಡಾಲರ್‌ನಷ್ಟಿದೆ. ಅದರಲ್ಲಿ ಯುಎಸ್ ಕೊಡುಗೆಗಳು 22% ಕಡ್ಡಾಯ ನಿಧಿಯನ್ನು ಹೊಂದಿವೆ. ಈ ಪ್ರಮಾಣದ ಆರ್ಥಿಕ ಬೆಂಬಲವನ್ನು ಜಗತ್ತಿನ ಯಾವ ದೇಶವೂ ನೀಡಿಲ್ಲ.
ಡಬ್ಲ್ಯೂಹೆಚ್‌ಒ ಕೈ ಹಿಡಿಯುತ್ತ ಭಾರತ, ದಕ್ಷಿಣ ದೇಶಗಳು?
ಯುನೈಟೆಡ್ ಸ್ಟೇಟ್ಸ್ ಸೃಷ್ಟಿಸಿದ ನಿರ್ವಾತವನ್ನು ಚೀನಾ (China) ಮತ್ತು ಭಾರತ (India) ಸೇರಿದಂತೆ ಜಾಗತಿಕ ದಕ್ಷಿಣದ ದೇಶಗಳು ತುಂಬುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. ‘ಪ್ರಧಾನಿ ಮೋದಿ ಅವರು ಜನರಿಗಾಗಿ ಸಮಗ್ರ ಆರೋಗ್ಯದಲ್ಲಿ ಹೂಡಿಕೆ ಮಾಡುವ ಮೂಲಕ ಉತ್ತಮ ಉದಾಹರಣೆಯನ್ನು ನೀಡುತ್ತಿದ್ದಾರೆ. ಜಾಗತಿಕ ದಕ್ಷಿಣದ ಧ್ವನಿಯಾಗಿ ಭಾರತವು ಅಗ್ರಸ್ಥಾನದಲ್ಲಿದೆ. ಹೊಸ ಜಾಗತಿಕ ಕ್ರಮದಲ್ಲಿ ಭಾರತ, ದಕ್ಷಿಣ ಆಫ್ರಿಕಾ ಮತ್ತು ಇತರರ ದೇಶಗಳು ನಮಗೆ ಬೇಕು. ಅವರ ಜೊತೆಗೆ ಇತರೆ ದೇಶಗಳನ್ನು ಮೇಲೆತ್ತುವ ಕಾರ್ಯ ಆಗಬೇಕಿದೆ’ ಎಂದು ತಜ್ಞರಾದ ಡಾ. ಅಲಕಿಜಾ ಅಭಿಪ್ರಾಯಪಟ್ಟಿದ್ದಾರೆ.