– ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ಬಡವರಿಗೆ ಆಗೋ ಪ್ರಯೋಜನಗಳೇನು?
– ಪರ-ವಿರೋಧದ ಚರ್ಚೆ ಏನು?
ದೇಶಾದ್ಯಂತ ವಕ್ಫ್ ಸುದ್ದಿಯೇ ಹೆಚ್ಚು ಸದ್ದು ಮಾಡುತ್ತಿದೆ. ಕೇಂದ್ರ ಸರ್ಕಾರವು ಮಂಡಿಸಿದ ವಕ್ಫ್ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು ಎಂದಿದೆ. ಸುದೀರ್ಘ ಚರ್ಚೆ, ವಾಕ್ಸಮರದ ನಡುವೆ ಮಸೂದೆ ಅಂಗೀಕಾರಗೊಂಡಿದೆ. ಸಂಸತ್‌ನ ಹೊರಗೂ ವಕ್ಫ್ ಬಗೆಗಿನ ಪರ-ವಿರೋಧದ ಚರ್ಚೆ ಜೋರಾಗಿದೆ. ಕೇಂದ್ರದ ಈ ಮಸೂದೆಗೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಮುಸ್ಲಿಂ ಸಂಘಟನೆಗಳಲ್ಲಿ ಕೆಲವು ಆಕ್ಷೇಪ ವ್ಯಕ್ತಪಡಿಸಿದರೆ, ಇನ್ನೂ ಕೆಲವು ಬೆಂಬಲ ಸೂಚಿಸಿವೆ.
ತಿದ್ದುಪಡಿಯಾದ ವಕ್ಫ್ ಕಾಯ್ದೆಯು ಹಿಂದಿನ ಕಾಯ್ದೆಯ ನ್ಯೂನತೆಗಳನ್ನು ಸರಿಪಡಿಸುವುದು, ನೋಂದಣಿ ಪ್ರಕ್ರಿಯೆ ಸುಧಾರಿಸುವುದು, ವಕ್ಫ್ ಆಸ್ತಿಗಳ ನಿರ್ವಹಣೆ, ಪಾರದರ್ಶಕತೆ, ವಕ್ಫ್ ದಾಖಲೆಗಳನ್ನು ನಿರ್ವಹಿಸುವಲ್ಲಿ ತಂತ್ರಜ್ಞಾನದ ಪಾತ್ರವನ್ನು ಹೆಚ್ಚಿಸುವುದು, ಬಡವರ ಹಿತಕ್ಕಾಗಿ ಮಹತ್ವದ ಬದಲಾವಣೆ ತರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ, ವಿಪಕ್ಷಗಳು ಮಸೂದೆಗೆ ವಿರೋಧ ವ್ಯಕ್ತಪಡಿಸಿವೆ. ಇದು ಅಸಾಂವಿಧಾನಿಕ, ಮುಸ್ಲಿಮರ ಹಕ್ಕು ಕಸಿಯುವ ಯತ್ನ, ಧಾರ್ಮಿಕ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಟೀಕಿಸಿವೆ.
ಏನಿದು ವಕ್ಫ್ ವಿವಾದ? ಹೊಸ ತಿದ್ದುಪಡಿ ಮಸೂದೆಯಲ್ಲೇನಿದೆ? ಕೇಂದ್ರದ ಸಮರ್ಥನೆ ಏನು? ವಿಪಕ್ಷಗಳ ವಿರೋಧ ಯಾಕೆ? ಸಂಸತ್‌ನಲ್ಲಿ ಮಸೂದೆ ಅಂಗೀಕಾರವಾದರೆ ಆಗುವ ಬದಲಾವಣೆಗಳೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ವಿವರ ಇಲ್ಲಿದೆ.
ವಕ್ಫ್ ಎಂದರೇನು?
ವಕ್ಫ್ ಎನ್ನುವುದು ಮುಸ್ಲಿಮರು ಆಸ್ತಿ ರೂಪದಲ್ಲಿ ನೀಡುವ ದತ್ತಿ ಅಥವಾ ಧಾರ್ಮಿಕ ದೇಣಿಗೆಯಾಗಿದೆ. ಮಸೀದಿ, ದರ್ಗಾ, ಸ್ಮಶಾನಗಳು, ಆಶ್ರಯ ಮನೆಗಳು, ಶಿಕ್ಷಣ ಸಂಸ್ಥೆಗಳು ಮುಂತಾದ ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ದೇವರ ಹೆಸರಿನಲ್ಲಿ ಸಮರ್ಪಿಸಲಾದ ಆಸ್ತಿಯಾಗಿದೆ. 1954ರಲ್ಲಿ ವಕ್ಫ್ ಕಾಯ್ದೆ ಜಾರಿಗೆ ಬಂದಿತು. ಈ ಕಾನೂನಿನ ಅನ್ವಯ, ಇಸ್ಲಾಂ ಅನ್ನು ಪ್ರತಿಪಾದಿಸುವ ಯಾವುದೇ ವ್ಯಕ್ತಿ ಧಾರ್ಮಿಕ ಕಾರಣಕ್ಕಾಗಿ ಆಸ್ತಿಯನ್ನು ದಾನ ಮಾಡಿದರೆ, ಅದು ವಕ್ಫ್ ಆಸ್ತಿಯಾಗಿ ವಕ್ಫ್ ಮಂಡಳಿಯ ಸ್ವಾಧೀನಕ್ಕೆ ಒಳಪಡುತ್ತದೆ. ವಕ್ಫ್ ಆಸ್ತಿಯನ್ನು ತನ್ನದು ಎಂದು ಘೋಷಿಸಿ ವಶಕ್ಕೆ ಪಡೆಯುವ ಸವೋಚ್ಛ ಅಧಿಕಾರವನ್ನು ವಕ್ಫ್ ಮಂಡಳಿ ಹೊಂದಿದೆ.
ವಕ್ಫ್ ಆಸ್ತಿ ಆಗುವುದು ಹೇಗೆ?
ಪತ್ರ ಅಥವಾ ಉಪಕರಣದ ಮೂಲಕ ಆಸ್ತಿಯನ್ನು ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಬಳಸಿದರೆ ವಕ್ಫ್ ಆಗಬಹುದು. ಇಸ್ಲಾಂ ಧರ್ಮವನ್ನು ಪ್ರತಿಪಾದಿಸುವ ಮುಸ್ಲಿಮೇತರನು ಕೂಡ ವಕ್ಫ್ ರಚಿಸಬಹುದು. ಆದರೆ, ವಕ್ಫ್ ಅನ್ನು ರಚಿಸುವ ಉದ್ದೇಶ ಇಸ್ಲಾಮಿಕ್ ಆಗಿರಬೇಕು. ಆಸ್ತಿಯನ್ನು ವಕ್ಫ್ ಎಂದು ಗೊತ್ತುಪಡಿಸಿದರೆ, ಅದನ್ನು ಬೇರೆ ಕಡೆ ವರ್ಗಾಯಿಸಲು ಸಾಧ್ಯವಿಲ್ಲ. ದೇವರ ಹೆಸರಲ್ಲಿ ದತ್ತಿ ಕಾರ್ಯವಾಗಿ ಶಾಶ್ವತವಾಗಿ ಉಳಿಯುತ್ತದೆ. 1955ರ ಕಾಯ್ದೆ ಅಡಿಯಲ್ಲಿ ಸರ್ವೇ ಕಮಿಷನರ್ ಸ್ಥಳೀಯ ತನಿಖೆಯನ್ನು ನಡೆಸುತ್ತಾರೆ. ಸಾಕ್ಷಿಗಳನ್ನು ಕರೆಯುವುದು, ಸಾರ್ವಜನಿಕ ದಾಖಲೆಗಳನ್ನು ಕೇಳುವುದನ್ನು ಇದು ಒಳಗೊಂಡಿರುತ್ತದೆ. ಬಳಿಕ ವಕ್ಫ್ ಎಂದು ಘೋಷಿಸಲಾದ ಎಲ್ಲಾ ಆಸ್ತಿಗಳನ್ನು ಪಟ್ಟಿ ಮಾಡುತ್ತಾರೆ.
ವಕ್ಫ್ ಆಸ್ತಿ ಎಷ್ಟಿದೆ?
ಭಾರತದಲ್ಲಿ ಒಟ್ಟು 8.72 ಲಕ್ಷ ವಕ್ಫ್ ಆಸ್ತಿಗಳಿವೆ. 8 ಲಕ್ಷ ಎಕರೆ ವಕ್ಫ್ ಆಸ್ತಿ ವಿಸ್ತೀರ್ಣ ಆಗಿದೆ. ಆಸ್ತಿಯ ಅಂದಾಜು ಮೌಲ್ಯ 1 ಲಕ್ಷ ಕೋಟಿ ರೂ.. ಆಸ್ತಿಯಲ್ಲಿ ಒಟ್ಟು 1,50,569 ಸ್ಮಶಾನಗಳಿವೆ. 1,19,200 ಮಸೀದಿಗಳಿವೆ. 1,13,187 ಅಂಗಡಿ ಮತ್ತು 92,505 ಮನೆಗಳಿವೆ. 1,40,788 ಕೃಷಿ ಭೂಮಿಗಳಿವೆ. ವಕ್ಫ್ ಆಸ್ತಿಯ ವ್ಯಾಪ್ತಿಯಲ್ಲಿ 33,492 ಧಾರ್ಮಿಕ ಸ್ಥಳಗಳಿವೆ. ದೇಶದಲ್ಲಿ 32 ವಕ್ಫ್ ಮಂಡಳಿಗಳಿವೆ.
ವಕ್ಫ್ ಕಾಯ್ದೆಗೆ ಎಷ್ಟು ತಿದ್ದುಪಡಿಯಾಗಿವೆ?
1995ರಲ್ಲಿ ವಕ್ಫ್ ಕಾಯ್ದೆಗೆ ಮೊದಲ ತಿದ್ದುಪಡಿ ಮಾಡಲಾಯಿತು. 2013ರಲ್ಲಿ ಕಾಯ್ದೆಗೆ 2ನೇ ತಿದ್ದುಪಡಿ ತರಲಾಯಿತು. 2024ರಲ್ಲಿ 2 ಬಾರಿ ತಿದ್ದುಪಡಿ ಮಸೂದೆ ಮಂಡಿಸಲಾಯಿತು. ಈಗ ಹೊಸ ಮಸೂದೆಯಲ್ಲಿ 44 ತಿದ್ದುಪಡಿಗಳಿವೆ.
ಹೊಸ ಮಸೂದೆ ಯಾಕೆ?
ವಕ್ಫ್ ವ್ಯಾಖ್ಯಾನ, ರಾಜ್ಯ ವಕ್ಫ್ ಮಂಡಳಿಗಳ ಅಧಿಕಾರ, ನೋಂದಣಿ, ವಕ್ಫ್ ಆಸ್ತಿಗಳ ಸರ್ವೆ, ಒತ್ತುವರಿ ತೆರವು ಸೇರಿದಂತೆ ಹಲವು ವಿಚಾರಗಳಿಗೆ ಕಾಯ್ದೆಯಲ್ಲಿ ಇನ್ನಷ್ಟು ಸುಧಾರಣೆ ಅಗತ್ಯವಿದೆ ಎಂದು ಕಾಯ್ದೆಗೆ ತಿದ್ದುಪಡಿ ತಂದು ಕೇಂದ್ರ ಸರ್ಕಾರ ಹೊಸ ಮಸೂದೆ ಮಂಡಿಸಿದೆ. ವಕ್ಫ್ ಆಸ್ತಿಗಳ ನಿರ್ವಹಣೆ, ಇರುವ ನ್ಯೂನತೆಗಳನ್ನು ಸರಿಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಸರ್ಕಾರ ಹೇಳಿದೆ.
ವಕ್ಫ್ ಮಂಡಳಿ ಬಗೆಗಿನ ವಿವಾದ ಏನು?
ವಕ್ಫ್ ಮಂಡಳಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಒಮ್ಮೆ ವಕ್ಫ್ ಆಸ್ತಿಯಾಗಿದ್ದರೆ, ಅದು ಯಾವಾಗಲೂ ವಕ್ಫ್ ಆಸ್ತಿಯೇ ಆಗಿರುತ್ತದೆ. ಇದರಿಂದ ವಕ್ಫ್ ಆಸ್ತಿ ರದ್ದತಿ ಅಸಾಧ್ಯ. ಈ ನಿಯಮ ವಿವಾದಗಳನ್ನು ಹುಟ್ಟುಹಾಕಿದೆ. ವಕ್ಫ್ ಕಾಯ್ದೆಗೆ ತಂದಿರುವ ತಿದ್ದುಪಡಿಗಳು ಪರಿಣಾಮಕಾರಿಯಾಗಿಲ್ಲ. ಅಕ್ರಮ ಭೂ ಸ್ವಾಧೀನ, ದುರುಪಯೋಗ, ಮಾಲೀಕತ್ವದ ವಿವಾದಗಳು, ನೋಂದಣಿ ಮತ್ತು ಸಮೀಕ್ಷೆಗಳಲ್ಲಿನ ವಿಳಂಬ, ದೂರುಗಳ ಹೆಚ್ಚಳದಂತಹ ಸಮಸ್ಯೆಗಳಿಗೆ ಕಾರಣವಾಗಿದೆ. ಅಷ್ಟೇ ಅಲ್ಲ, ವಕ್ಫ್ ನ್ಯಾಯಮಂಡಳಿ ನೀಡಿದ ತೀರ್ಪುಗಳನ್ನು ಪ್ರಶ್ನಿಸಿ ಉನ್ನತ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಲು ಆಗುವುದಿಲ್ಲ. ಇದು ವಕ್ಫ್ ನಿರ್ವಹಣೆಯಲ್ಲಿನ ಪಾರದರ್ಶಕತೆ ಮೇಲೆ ಪ್ರಶ್ನೆ ಹುಟ್ಟುಹಾಕಿದೆ. ಕೆಲವು ರಾಜ್ಯ ವಕ್ಫ್ ಮಂಡಳಿಗಳು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಸಮುದಾಯಗಳ ನಡುವೆ ವೈಷಮ್ಯ ಮೂಡಿಸಿವೆ. ಇದು ಕಾನೂನು ವಿವಾದಕ್ಕೆ ಕಾರಣವಾಗಿದೆ.
ವಕ್ಫ್ ಕಾಯ್ದೆ ಒಂದು ಧರ್ಮಕ್ಕಷ್ಟೇ ಸೀಮಿತವಾಗಿದೆ. ಇತರೆ ಧರ್ಮಗಳಿಗೆ ಈ ರೀತಿಯ ಕಾನೂನು ಇಲ್ಲ. ವಕ್ಫ್ ಕಾಯ್ದೆ ಸಾಂವಿಧಾನಿಕವೇ ಎಂಬ ಪ್ರಶ್ನೆಯೊಂದಿಗೆ ದೆಹಲಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆಯಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡುವಂತೆ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಕೇಳಿದೆ.
ತಿದ್ದುಪಡಿ ಮಸೂದೆಯಲ್ಲೇನಿದೆ?
* ತಿದ್ದುಪಡಿ ಮಸೂದೆಯು 1995ರ ವಕ್ಫ್ ಕಾಯ್ದೆಯನ್ನು ‘ಏಕೀಕೃತ ವಕ್ಫ್ ನಿರ್ವಹಣೆ, ಮೌಲ್ಯವರ್ಧನೆ, ಕಾರ್ಯದಕ್ಷತೆ ಮತ್ತು ಅಭಿವೃದ್ಧಿ ಕಾಯ್ದೆ-1995’ ಎಂದು ಮರುನಾಮಕರಣ ಮಾಡುತ್ತದೆ. ಅದರಂತೆ, ಕನಿಷ್ಠ 5 ವರ್ಷಗಳಿಂದ ಇಸ್ಲಾಂ ಧರ್ಮವನ್ನು ಅನುಸರಿಸುತ್ತಿರುವ ವ್ಯಕ್ತಿ ತನ್ನ ಒಡೆತನದಲ್ಲಿರುವ ಆಸ್ತಿಯನ್ನು ವಕ್ಫ್ಗೆ ನೀಡಬಹುದು. ದಾನ ನೀಡುವವರೊಂದಿಗೆ ‘ವಕ್ಫ್-ಅಲಲ್-ಔಲಾದ್’ (ದತ್ತಿ ಒಪ್ಪಂದ) ಮಾಡಿಕೊಳ್ಳುವಾಗ, ಕುಟುಂಬದ ಮಹಿಳೆಯರಿಗೆ ಪಿತ್ರಾರ್ಜಿತವಾಗಿ ಸಿಗುವ ಹಕ್ಕನ್ನು ನಿರಾಕರಿಸುವಂತಿಲ್ಲ ಎಂಬುದನ್ನು ಖಾತ್ರಿಪಡಿಸುತ್ತದೆ.
* ಮೂಲ ಕಾಯ್ದೆಯ ಸೆಕ್ಷನ್ 4ರ ಪ್ರಕಾರ ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳ ಸರ್ವೆ ನಡೆಸಲು ರಾಜ್ಯ ಸರ್ಕಾರ ಸರ್ವೆ ಆಯುಕ್ತರನ್ನು ನೇಮಕ ಮಾಡುವಂತಿತ್ತು. ಆದರೆ, ತಿದ್ದುಪಡಿ ಮಸೂದೆಯಲ್ಲಿ ಈ ಜವಾಬ್ದಾರಿಯನ್ನು ಸರ್ವೆ ಆಯುಕ್ತರ ಬದಲು ಜಿಲ್ಲಾಧಿಕಾರಿಗೆ ನೀಡಲಾಗಿದೆ.
* 1995ರ ವಕ್ಫ್ ಮಸೂದೆ ಪ್ರಕಾರ, ಸರ್ಕಾರಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಲಾಗುತ್ತಿತ್ತು. ಹೊಸ ತಿದ್ದುಪಡಿ ಮಸೂದೆಯಲ್ಲಿ ಸರ್ಕಾರಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಿದರೂ, ಜಿಲ್ಲಾಧಿಕಾರಿ ವಿವಾದವನ್ನು ಪರಿಹರಿಸಬಹುದು.
* ಹಿಂದಿನ ಕಾಯ್ದೆಯಲ್ಲಿ ಕೇಂದ್ರ ವಕ್ಫ್ ಮಂಡಳಿಯಲ್ಲಿ ಮುಸ್ಲಿಮರು ಮಾತ್ರ ಇರಬೇಕು ಎಂದಿತ್ತು. ಈಗಿನ ತಿದ್ದುಪಡಿ ಮಸೂದೆಯಲ್ಲಿ ಇಬ್ಬರು ಮುಸ್ಲಿಮೇತರರು ಮತ್ತು ಇಬ್ಬರು ಮುಸ್ಲಿಂ ಮಹಿಳೆಯರು ಇರಬೇಕು ಎಂದು ಬದಲಾಯಿಸಲಾಗಿದೆ. (ಶಿಯಾ, ಸುನ್ನಿ ಮತ್ತು ಮುಸ್ಲಿಮರ ಹಿಂದುಳಿದ ವರ್ಗಗಳಿಂದ ಕನಿಷ್ಠ ಒಬ್ಬರು ಸದಸ್ಯರು ಇರಬೇಕು).
* ಮೂಲ ಕಾಯ್ದೆಯಡಿ ವಕ್ಫ್ ನ್ಯಾಯಮಂಡಳಿ ತೀರ್ಮಾನವೇ ಅಂತಿಮ ಎಂದಿತ್ತು. ತಿದ್ದುಪಡಿ ಮಸೂದೆಯಲ್ಲಿ, ಆದೇಶದ ಮೇಲೆ 90 ದಿನಗಳ ಒಳಗಾಗಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
* 1995 ಕಾಯ್ದೆಯಲ್ಲಿ ವಕ್ಫ್ ಮಂಡಳಿಗೆ ಕೆಲವು ನಿರ್ದೇಶನ ನೀಡುವ ಅಧಿಕಾರವಷ್ಟೇ ಕೇಂದ್ರ ಸರ್ಕಾರಕ್ಕಿತ್ತು. ಆದರೆ, ಕಾನೂನು ರಚಿಸುವ ಅಧಿಕಾರ ಇರಲಿಲ್ಲ. ಆದರೆ, ಹೊಸ ತಿದ್ದುಪಡಿ ಮಸೂದೆಯು ವಕ್ಫ್ ಆಸ್ತಿಗಳ ನಿರ್ವಹಣೆ, ನೋಂದಣಿ, ಲೆಕ್ಕಪರಿಶೋಧನೆಯಲ್ಲಿ ಕೇಂದ್ರದ ಪಾತ್ರವನ್ನು ಹೆಚ್ಚಿಸಿದೆ.
ವಕ್ಫ್ ಕಾಯ್ದೆಗೆ ಪರಮಾಧಿಕಾರ ನೀಡಿದ್ದ ಸೆಕ್ಷನ್ 40 ರದ್ದು
ಯಾವುದೇ ಭೂಮಿ ವಕ್ಫ್ ಆಸ್ತಿ ಎಂದು ಘೋಷಿಸಲು ವಕ್ಫ್ ಮಂಡಳಿಗಳು ಮತ್ತು ನ್ಯಾಯಾಧೀಕರಣಕ್ಕೆ ಈ ಹಿಂದಿನ ವಕ್ಫ್ ಕಾಯ್ದೆಯಲ್ಲಿದ್ದ ಸೆಕ್ಷನ್ 40 ಅವಕಾಶ ನೀಡಿತ್ತು. ಈ ನಿಯಮ ಬಳಸಿಕೊಂಡು ಸಾಮೂಹಿಕ ಭೂ ಪರಿವರ್ತನೆ ಮಾಡಿಕೊಳ್ಳಲಾಗುತ್ತಿತ್ತು. ನ್ಯಾಯಾಲಯದ ಮೊರೆ ಹೋಗಲು ಅವಕಾಶ ಇರಲಿಲ್ಲ. ಆದರೆ, ತಿದ್ದುಪಡಿ ಮಸೂದೆಯಲ್ಲಿ ಈ ಸೆಕ್ಷನ್ ಕೈಬಿಡಲಾಗಿದ್ದು, ವಕ್ಫ್ ಹಕ್ಕು ಸಾಧಿಸುವ ಆಸ್ತಿಯನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶ ಕಲ್ಪಿಸಿದೆ.
ಮುಸ್ಲಿಮೇತರ ಆಸ್ತಿಗಳ ಕಥೆ ಏನು?
2024ರ ಸೆಪ್ಟೆಂಬರ್ ತಿಂಗಳಲ್ಲಿ 25 ರಾಜ್ಯಗಳ 5,973 ಸರ್ಕಾರಿ ಆಸ್ತಿಗಳನ್ನು ವಕ್ಫ್ ಎಂದು ಮಂಡಳಿಗಳು ಘೋಷಿಸಿದ್ದವು. ಕರ್ನಾಟಕದಲ್ಲೂ ಕೃಷಿ ಜಮೀನು, ಸಾರ್ವಜನಿಕ ಸ್ಥಳಗಳು, ಸರ್ಕಾರಿ ಜಾಗ, ಸ್ಮಶಾನ, ಕೆರೆ ಹಾಗೂ ದೇವಾಲಯಗಳನ್ನೂ ವಕ್ಫ್ ಆಸ್ತಿಗಳು ಎಂದು ಗುರುತಿಸಲಾಗಿತ್ತು. ಕರ್ನಾಟಕದ ನೆರೆ ರಾಜ್ಯಗಳಲ್ಲೂ ವಕ್ಫ್ ಆಸ್ತಿ ವಿಚಾರವಾಗಿ ವಿವಾದ ಹುಟ್ಟುಕೊಂಡಿದೆ. ಕರ್ನಾಟಕದಲ್ಲೂ ಹಲವೆಡೆ ಇಂಥ ಘಟನೆಗಳು ನಡೆದಿವೆ. ಇವುಗಳ ಕಥೆ ಏನು ಎಂಬುದು ಪ್ರಶ್ನೆಯಾಗಿದೆ.
ತಿದ್ದುಪಡಿ ಮಸೂದೆಯಿಂದ ಬಡವರಿಗೆ ಪ್ರಯೋಜನ ಆಗುತ್ತಾ?
ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ಡಿಜಿಟಲೀಕರಣಕ್ಕೆ ಆದ್ಯತೆ ನೀಡಲಾಗಿದೆ. ವಕ್ಫ್ ಆಸ್ತಿ ನಿರ್ವಹಣೆಯ ಡಿಜಿಟಲೀಕರಣವು ಟ್ರಾö್ಯಕಿಂಗ್, ಗುರುತಿಸುವಿಕೆ, ಮೇಲ್ವಿಚಾರಣೆಯನ್ನು ಸುಧಾರಿಸುತ್ತದೆ. ಪಾರದರ್ಶಕತೆ, ಹೊಣೆಗಾರಿಕೆಯನ್ನು ಖಚಿತಪಡಿಸುತ್ತದೆ. ಜಾಗ ಒತ್ತುವರಿ, ಪಾರದರ್ಶಕ ಕೊರತೆ ನೀಗಿಸುತ್ತದೆ. ಜೊತೆಗೆ, ಆರ್ಥಿಕವಾಗಿ ಪಾರದರ್ಶಕತೆ ತರುವುದರಿಂದ ಹಣದ ಸೋರಿಕೆಯಾಗದೇ, ಹಣವನ್ನು ಕಲ್ಯಾಣ ಉದ್ದೇಶಗಳಿಗಾಗಿ ಬಳಸುವುದನ್ನು ಖಾತ್ರಿಪಡಿಸುತ್ತದೆ. ವಕ್ಫ್ ಭೂಮಿಗಳ ದುರುಪಯೋಗ, ಅಕ್ರಮ ಸ್ವಾಧೀನ ತಡೆಗಟ್ಟಿ ಆದಾಯ ಹೆಚ್ಚಿಸುತ್ತದೆ. ಹಣ ನೇರವಾಗಿ ಬಡವರ ಕಲ್ಯಾಣಕ್ಕೆ ಬಳಕೆಯಾಗಲಿದೆ ಎಂದು ಅಲ್ಪಸಂಖ್ಯಾತರ ಸಚಿವಾಲಯ ತಿಳಿಸಿದೆ.