ಪ್ರಕೃತಿಯ ಮಧ್ಯೆ ವಿಶ್ರಾಂತಿ ಪಡೆಯಲು ಬಯಸುವ ಪ್ರತಿಯೊಬ್ಬರಿಗೂ ಕನಸಿನ ತಾಣ ಕಾಶ್ಮೀರ. ಕಾಶ್ಮೀರದ ಪ್ರವಾಸ ಶ್ರೀನಗರದಿಂದ ಆರಂಭವಾದರೆ ಸೂಕ್ತ. ಅತಿ ಸುಂದರವಾಗಿರುವ ಈ ನಗರವು ಹೂಬಿಡುವ ಉದ್ಯಾನಗಳು, ಸ್ಫಟಿಕ ಸ್ಪಷ್ಟ ಸರೋವರಗಳು, ಭವ್ಯವಾದ ರಚನೆಗಳಿಂದ ಕೂಡಿದೆ. ಇಂತಹ ವರ್ಣರಂಜಿತ ಸ್ಥಳದಲ್ಲಿ ಶಿಕಾರ ರೈಡ್’ಗೆ ಹೋಗುವುದು ಇನ್ನು ಮಜಾವಾಗಿರುತ್ತದೆ. ಸಾಮಾನ್ಯವಾಗಿ ದಾಲ್ ಸರೋವರ ಮತ್ತು ಶ್ರೀನಗರದ ನಾಗಿನ್ ಸರೋವರದಲ್ಲಿ ಶಿಕಾರ ಸವಾರಿ ಕಂಡುಬರುತ್ತದೆ, ಇದು ನಗರದಲ್ಲಿ ಮೋಡಿಮಾಡುವ ಆಕರ್ಷಣೆಗಳಲ್ಲಿ ಒಂದಾಗಿದೆ. ಹಳೆಯ ಪ್ರಪಂಚದ ಮೋಡಿಯನ್ನು ಮರಳಿ ಪಡೆಯುವಂತೆ ಮಾಡುವ ಶಿಕಾರ, ಕಾಶ್ಮೀರದ ಸೌಂದರ್ಯವನ್ನು ಅನುಭವಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಇದೀಗ ಉಬರ್ ಕಂಪನಿ ಏಷ್ಯಾದ ಮೊದಲ ಜಲ ಸಾರಿಗೆ ಸೇವೆ ʼಉಬರ್ ಶಿಕಾರʼವನ್ನು ಜಮ್ಮು ಮತ್ತು ಕಾಶ್ಮೀರದ ದಾಲ್ ಸರೋವರದಲ್ಲಿ ಪರಿಚಯಿಸಿದೆ. ಈ ಮೂಲಕ ಪ್ರವಾಸಿಗರು ಮುಂಚಿತವಾಗಿ ಮುಂಗಡ ಬಕ್ಕಿಂಗ್ ಮಾಡಿ ತಮ್ಮ ಪ್ರಯಾಣವನ್ನು ಕಾಯ್ದಿರಿಸಬಹುದಾಗಿದೆ. ಹಾಗಿದ್ರೆ ಏನಿದು ಉಬರ್ ಶಿಕಾರ? ಬುಕ್ಕಿಂಗ್ ಮಾಡುವುದು ಹೇಗೆ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ. ಅದಕ್ಕೂ ಮುನ್ನ ದಾಲ್ ಸರೋವರದ ವಿಶೇಷತೆ ಹಾಗೂ ಶಿಕಾರದ ಕುರಿತು ಒಂದಿಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
Advertisement
Advertisement
ದಾಲ್ ಸರೋವರದ ಬಗ್ಗೆ:
ದಾಲ್ ಸರೋವರವು ಸುಮಾರು 18 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿದೆ. ಇದರ ಅಗಲ ಸುಮಾರು 3.5 ಕಿಲೋಮೀಟರ್ ಮತ್ತು ಗರಿಷ್ಠ ಆಳ 20 ಅಡಿ. ದಾಲ್ ಸರೋವರವು ಬೋಡ್ ದಾಲ್, ನಾಗಿನ್, ಗಾಗ್ರಿಬಲ್ ಮತ್ತು ಲೋಕುತ್ ದಾಲ್ ಎಂಬ ನಾಲ್ಕು ಜಲಾನಯನ ಪ್ರದೇಶಗಳನ್ನು ಹೊಂದಿದೆ. ಮೊಘಲರ ಕಾಲದಲ್ಲಿ ನಿರ್ಮಿಸಲಾದ ಉದ್ಯಾನವನಗಳು ಮತ್ತು ಸುಂದರವಾದ ಉದ್ಯಾನವನಗಳು ಈ ಸರೋವರದ ಸೌಂದರ್ಯವನ್ನು ಹೆಚ್ಚಿಸಿವೆ.
Advertisement
ಹೆಸರು ಹೇಗೆ ಬಂತು?
ದಾಲ್ ಲೇಕ್ ಎಂಬ ಪದವು ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಕಾಶ್ಮೀರಿ ಭಾಷೆಯಲ್ಲಿ ‘ದಳ’ ಎಂಬ ಪದದ ಅರ್ಥವೇ ಸರೋವರ. ಇದುವೇ ಅಪಭ್ರಂಶಗೊಂಡು ‘ದಾಲ್’ ಆಗಿದ್ದು ಕಾಲಾನಂತರದಲ್ಲಿ ಅದರ ಜತೆ ‘ಲೇಕ್’ ಪದವು ಸೇರಿಕೊಂಡಿತು. ನಂತರ ಅದು ‘ದಾಲ್ ಲೇಕ್’ ಆಯಿತು.
Advertisement
ದಾಲ್ ಸರೋವರವನ್ನು ಕಾಶ್ಮೀರದ ರತ್ನ ಅಥವಾ ಶ್ರೀನಗರದ ಆಭರಣ ಎಂದೂ ಕರೆಯಲಾಗುತ್ತದೆ. ಜುಲೈ-ಆಗಸ್ಟ್ ತಿಂಗಳಿನಲ್ಲಿ ಇಲ್ಲಿನ ಉದ್ಯಾನಗಳ ಸೌಂದರ್ಯ ಕಣ್ಮನ ಸೆಳೆಯುತ್ತದೆ.
ದಾಲ್ ಸರೋವರ ಪ್ರಸಿದ್ಧ ಏಕೆ?
ಈ ಸರೋವರವು ಪ್ರವಾಸೋದ್ಯಮ ಮತ್ತು ಮನರಂಜನೆಗೆ ಪ್ರಮುಖ ತಾಣವಾಗಿದೆ. ಪ್ರವಾಸೋದ್ಯಮವನ್ನು ಹೊರತುಪಡಿಸಿ, ಮೀನುಗಾರಿಕೆ ಇಲ್ಲಿ ಎರಡನೇ ದೊಡ್ಡ ವ್ಯಾಪಾರವಾಗಿದೆ. ಇದು ಸ್ಥಳೀಯ ಜನರ ಜೀವನೋಪಾಯಕ್ಕೆ ಆಧಾರವಾಗಿದೆ.
ಶಿಕಾರ ಎಂದರೇನು?
ಶಿಕಾರ ಎಂಬುದು ಭಾರತದ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ದಾಲ್ ಸರೋವರ ಮತ್ತು ಸಮೀಪದ ಸರೋವರಗಳಲ್ಲಿ ಕಂಡುಬರುವ ಒಂದು ರೀತಿಯ ಮರದ ದೋಣಿ. ಶಿಕಾರಗಳು ವೈವಿಧ್ಯಮಯ ಗಾತ್ರದಲ್ಲಿದ್ದು, ಜನರ ಸಾಗಣೆ ಸೇರಿದಂತೆ ಅನೇಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಶಿಕಾರದಲ್ಲಿ ಅರ್ಧ ಡಜನ್ ಜನರನ್ನು ಕೂರಿಸಬಹುದು. ಡ್ರೈವರ್ ಹಿಂಭಾಗದಲ್ಲಿ ಪ್ಯಾಡ್ಲಿಂಗ್ ಮಾಡುತ್ತಾನೆ. ವೆನೆಷಿಯನ್ ಗೊಂಡೊಲಾಗಳಂತೆ, ಶಿಕಾರವು ಕಾಶ್ಮೀರದ ಸಾಂಸ್ಕೃತಿಕ ಸಂಕೇತವಾಗಿದೆ.
ಶಿಕಾರ ದೋಣಿ ಕೇರಳದಲ್ಲೂ ಲಭ್ಯವಿದೆ. ಅಲೆಪ್ಪಿಯಲ್ಲಿನ ಶಿಕಾರಾ ಗಾತ್ರದಲ್ಲಿ ಚಿಕ್ಕದಾಗಿದ್ದು, ಇದು 4 – 20 ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ನೀವು ಬಯಸಿದಲ್ಲಿ ಅಲೆಪ್ಪೆಯ ಹಿನ್ನೀರಿನ ಕಿರಿದಾದ ಕಾಲುವೆಗಳ ಮೂಲಕ ಶಿಕಾರಾದಲ್ಲಿ ಹೋಗಬಹುದು. ಕೇರಳದ ಶಿಕಾರಾದ ಮೇಲ್ಛಾವಣಿ ಮತ್ತು ಗೋಡೆಗಳನ್ನು ಬಿದಿರಿನ ಹಾಳೆಗಳಿಂದ ಕೆತ್ತಲಾಗಿರುತ್ತದೆ.
ಶಿಕಾರ ನಿರ್ಮಾಣ ಹೇಗೆ?
ಶಿಕಾರ ಕರಕುಶಲತೆಯು ಡಿಯೋಡರ್ ಮರದ ಮೇಲೆ ಅವಲಂಬಿತವಾಗಿರುತ್ತದೆ. ಇದು ನೀರಿನಲ್ಲಿ ಕೊಳೆಯುವುದಿಲ್ಲ. ಸುಮಾರು 25 ರಿಂದ 41 ಅಡಿ ಉದ್ದವಿರುತ್ತದೆ. ಮರದ ಹಲಗೆಗಳು ಪ್ರತಿಯೊಂದು ಬದಿಯಲ್ಲಿ 1.5 ಅಡಿಗಳಷ್ಟು ಲಂಬವಾಗಿ ಎತ್ತರದಲ್ಲಿರುತ್ತವೆ. ದೋಣಿಯನ್ನು 10 ರಿಂದ 12 ದಿನಗಳಲ್ಲಿ ರಚಿಸಲಾಗುತ್ತದೆ. ಅಂತಿಮವಾಗಿ ಶಿಕಾರಗಳನ್ನು ಗಾಢ ಬಣ್ಣಗಳಲ್ಲಿ ಚಿತ್ರಿಸಲಾಗುತ್ತದೆ. ಕೆಲವರು ಮತ್ತಷ್ಟು ಹೊಳಪು ನೀಡಿದರೆ, ಮತ್ತೆ ಕೆಲವರು ಕೆತ್ತನೆಗೆ ಪ್ರಾಮುಖ್ಯತೆ ಕೊಡುತ್ತಾರೆ.
ವಿಶ್ರಾಂತಿ ಕಳೆಯುವುದನ್ನು ಹೊರತುಪಡಿಸಿ ಕಾಶ್ಮೀರದ ಶಿಕಾರವನ್ನು ಇತರ ಉದ್ದೇಶಗಳಿಗಾಗಿಯೂ ಬಳಸಲಾಗುತ್ತದೆ. ಮುಖ್ಯವಾಗಿ ಸ್ಥಳೀಯರು ಈ ದೋಣಿಯನ್ನು ಸಾರಿಗೆ, ಕಡಲಕಳೆ ಕೊಯ್ಲು ಮತ್ತು ಮೀನುಗಾರಿಕೆಗಾಗಿ ಬಳಸುತ್ತಾರೆ. ಇದನ್ನು ತೇಲುವ ಮಾರುಕಟ್ಟೆ ಬಳಕೆಗೂ ಬಳಸಲಾಗುತ್ತಿದ್ದು, ಬಹಳಷ್ಟು ವಿಶಿಷ್ಟವಾಗಿದೆ.
ಇದೀಗ ದಾಲ್ ಸರೋವರದಲ್ಲಿ ಉಬರ್ ತನ್ನ ಮೊದಲ ಜಲ ಸಾರಿಗೆಯನ್ನು ಆರಂಭಿಸಿದೆ. ಜಮ್ಮು ಕಾಶ್ಮೀರದ ದಾಲ್ ಸರೋವರಕ್ಕೆ ಭೇಟಿ ನೀಡುವವರು ಉಬರ್ ಅಪ್ಲಿಕೇಷನ್ ಮೂಲಕ 12 ಗಂಟೆಗಳಿಂದ ಹಿಡಿದು 15 ದಿನಗಳವರೆಗೆ ಮುಂಚಿತವಾಗಿ ಶಿಕಾರ ರೈಡ್‌ಗಳನ್ನು ಬುಕ್ ಮಾಡಬಹುದಾಗಿದೆ.
ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾ ಅಧ್ಯಕ್ಷ ಪ್ರಭಜೀತ್ ಸಿಂಗ್ ಅವರು ಈ ಸೇವೆಯನ್ನು ಪ್ರಾರಂಭಿಸಿದರು. ಉಬರ್ ಶಿಕಾರ ಪ್ರಸ್ತುತ ಏಳು ಸ್ಥಳೀಯ ಶಿಕಾರಾ ಆಪರೇಟರ್‌ಗಳೊಂದಿಗೆ ಸಹಯೋಗ ಹೊಂದಿದೆ. ಬೇಡಿಕೆಯ ಆಧಾರದ ಮೇಲೆ ಈ ಸಂಖ್ಯೆಯನ್ನು ವಿಸ್ತರಿಸಲು ಕಂಪನಿ ಯೋಜಿಸಿದೆ. ದಾಲ್ ಸರೋವರದ ಸುಂದರವಾದ ಸ್ಥಳವಾದ ನೆಹರು ಪಾರ್ಕ್‌ನಲ್ಲಿ ಶಿಕಾರಗಳು ನೆಲೆಗೊಂಡಿವೆ.
ಬೆಲೆ ಮತ್ತು ಸಮಯ:
ಉಬರ್ ಶಿಕಾರಾ ರೈಡ್‌ಗಳಿಗೆ ಸರ್ಕಾರ-ನಿಯಂತ್ರಿತ ಬೆಲೆಗೆ ಬದ್ಧವಾಗಿದೆ. ಸೇವೆಯು ಶಿಕಾರ ಆಪರೇಟರ್‌ಗಳಿಗೆ ಹೆಚ್ಚುವರಿ ಶುಲ್ಕವನ್ನು ವಿಧಿಸುವುದಿಲ್ಲ. ಪ್ರತಿ ಉಬರ್ ಶಿಕಾರ ನಾಲ್ಕು ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ. ಸೇವೆಯು ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಕಾರ್ಯನಿರ್ವಹಿಸುತ್ತದೆ.
ಉಬರ್ ಕಾಲಾನಂತರದಲ್ಲಿ ಶಿಕಾರಗಳ ಸಮೂಹವನ್ನು ಬೆಳೆಸಲು ಉದ್ದೇಶಿಸಿದೆ. ವಿಸ್ತರಣೆಯು ಗ್ರಾಹಕರ ಪ್ರತಿಕ್ರಿಯೆ ಮತ್ತು ಬೇಡಿಕೆಯ ಮಟ್ಟವನ್ನು ಅವಲಂಬಿಸಿರುತ್ತದೆ. ಈ ಪಾಲುದಾರಿಕೆಯಿಂದ ಪ್ರವಾಸೋದ್ಯಮ ಮತ್ತು ಆದಾಯ ಹೆಚ್ಚುತ್ತದೆ. ಉಬರ್ ಇಟಲಿಯ ವೆನಿಸ್‌ನಂತಹ ಇತರ ನಗರಗಳಲ್ಲಿ ಇದೇ ರೀತಿಯ ಜಲ ಸಾರಿಗೆ ಸೇವೆಗಳನ್ನು ಪ್ರಾರಂಭಿಸಿದೆ.
ಬುಕ್ಕಿಂಗ್ ಹೇಗೆ?
*ಮೊದಲು ಉಬರ್ ಅಪ್ಲಿಕೇಷನ್ ಅನ್ನು ಅಪ್ಡೇಟ್ ಮಾಡಿಕೊಳ್ಳಿ.
*ಬಳಿಕ ಆಪ್ ಓಪನ್ ಮಾಡಿ ಪ್ರಾರಂಭ ಸ್ಥಳವನ್ನು ಶಿಕಾರ ಘಾಟ್ ಸಂಖ್ಯೆ 16ಕ್ಕೆ ಇರಿಸಿ ಉಬರ್ ಶಿಕಾರ ಆಯ್ಕೆಯನ್ನು ಆರಿಸಿ.
*ನಂತರ ನಿಮ್ಮ ಪ್ರಯಾಣದ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ.
*ಬಳಿಕ ಪಿಕಪ್ ಸ್ಥಳವನ್ನು ದೃಢೀಕರಿಸುವ ಬಟನ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಸವಾರಿಯನ್ನು ಖಚಿತಪಡಿಸಿಕೊಳ್ಳಿ.