ತಂತ್ರಜ್ಞಾನ ಬೆಳೆದಂತೆ, ಡಿಜಿಟಲ್ ವಹಿವಾಟು ಹೆಚ್ಚುತ್ತಿದ್ದಂತೆ ಆನ್‌ಲೈನ್ ವಂಚನೆಯೂ ಹೆಚ್ಚಾಗುತ್ತಿದೆ. ವಂಚಕರು ನೇರವಾಗಿ ಬ್ಯಾಂಕ್ ಖಾತೆಗೆ (Bank Account) ಕನ್ನ ಇಡಲು ಶುರು ಮಾಡಿದ್ದಾರೆ. ಗಾಯಕರು, ಚಿತ್ರ ನಟರು, ಅಷ್ಟೇ ಯಾಕೆ ನಮ್ಮ ಪ್ರಧಾನಿ ಮೋದಿ ಹೆಸರಿನಲ್ಲೂ ವಂಚನೆ ಮಾಡೋದಕ್ಕೆ ಶುರು ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ಬಿಡುಗಡೆಯಾದ ವಿಶ್ವ ಸೈಬರ್ ಅಪರಾಧ ಸೂಚ್ಯಂಕವು ಭಾರತ ಜಾಗತಿಕ ಮಟ್ಟದಲ್ಲಿ 10ನೇ ಸ್ಥಾನದಲ್ಲಿದೆ ಎಂಬುದನ್ನು ತೋಓರಿಸಿದೆ. ಸೈಬರ್ ಅಪರಾಧದ ಮೂಲ ಹಾಗೂ ಯಾವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಸೈಬರ್ ಅಪರಾಧಗಳು ಘಟಿಸುತ್ತವೆ ಎಂಬುದನ್ನು ಪತ್ತೆ ಹಚ್ಚಲು ಆಕ್ಸ್‌ಫರ್ಡ್ ವಿವಿ, ನ್ಯೂ ಸೌತ್ ವೇಲ್ಸ್ ವಿವಿ, ಮೊನಾಶ್ ವಿವಿ ಹಾಗೂ ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆಯಾದ ಸೈನ್ಸ್ ಪೊ ನಡೆಸಿದ ಅಧ್ಯಯನ ಇದಾಗಿದೆ. ಇದೀಗ ಡಿಜಿಟಲ್ ಅರೆಸ್ಟ್, ಇತರ ಸೈಬರ್ ವಂಚನೆ ಮುನ್ನೆಲೆಗೆ ಬಂದಿದ್ದಕ್ಕೆ ಕಾರಣವೂ ಇದೆ.
Advertisement
ಇತ್ತೀಚೆಗೆ ಡಿಜಿಟಲ್ ಅರೆಸ್ಟ್ ಮತ್ತು ಇತರ ಸೈಬರ್ ವಂಚನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೇ ತಮ್ಮ ʻಮನದ ಮಾತು’ ಬಾನುಲಿ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿರುವುದು ಎಷ್ಟು ಗಂಭೀರ ಎಂಬುದನ್ನು ಸೂಚಿಸುತ್ತದೆ. 2 ವರ್ಷಗಳ ಹಿಂದೆ ಡಿಜಿಟಲ್ ಅರೆಸ್ಟ್ ನಮಗೆ ಗೊತ್ತೇ ಇಲ್ಲದ ಮತ್ತು ನಂಬಲು ಕೂಡ ಸಾಧ್ಯವಿಲ್ಲದ ಸಂಗತಿಯಾಗಿತ್ತು. ಆದರೆ ಈಗ, ಡಿಜಿಟಲ್ ಅರೆಸ್ಟ್ ಎಂಬುದು ನಿಜಜೀವನದ ದೊಡ್ಡ ಬೆದರಿಕೆಯಾಗಿದೆ. ಪ್ರಧಾನಿಯೇ ಎಚ್ಚರಿಕೆ ನೀಡುವಷ್ಟು ಗಂಭೀರವೂ ಆಗಿದೆ. ವಂಚಕರು ಪೊಲೀಸ್, ಸಿಬಿಐ, ಡ್ರಗ್ಸ್ ತಡೆ ಘಟಕ ಮತ್ತು ಕೆಲವೊಮ್ಮೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕಾರಿಗಳ ಹೆಸರು ಹೇಳಿಕೊಂಡು ವಂಚಿಸಲು ಯತ್ನಿಸುತ್ತಾರೆ. ಅವರು ಒಡ್ಡುವ ಮಾನಸಿಕ ಒತ್ತಡ ಎಷ್ಟಿರುತ್ತದೆ ಎಂದರೆ ಸಂತ್ರಸ್ತರು ದಿಗಿಲುಗೊಳ್ಳುತ್ತಾರೆ ಎಂದು ಪ್ರಧಾನಿ ಹೇಳಿದ್ದಾರೆ. ಭಾರತ ಮಾತ್ರವಲ್ಲದೇ ಇಡೀ ವಿಶ್ವದ ವಿವಿಧ ರಾಷ್ಟ್ರಗಳಲ್ಲೂ ಇಂತಹ ಸೈಬರ್ ಅಪರಾಧ ನಡೆಯುತ್ತಿದೆ.
Advertisement
Advertisement
ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜನರು ಡಿಜಿಟಲ್ ಅರೆಸ್ಟ್‌ನಿಂದಾಗಿ (Digital Arrest) ಸುಮಾರು 120 ಕೋಟಿ ರೂ. ಕಳೆದುಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಡಿಜಿಟಲ್ ಅರೆಸ್ಟ್ ಮಾತ್ರವಲ್ಲ, ‘ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ’ (ಕೆವೈಸಿ) ಪರಿಷ್ಕರಣೆ, ಬ್ಯಾಂಕ್ ಖಾತೆ, ಷೇರು ವಹಿವಾಟು, ಹೂಡಿಕೆ ಇತ್ಯಾದಿ ಹೆಸರಿನಲ್ಲಿ ಕೂಡ ವಂಚನೆ ನಡೆಯುತ್ತಿದೆ. ವಿದ್ಯಾವಂತರು ಮತ್ತು ತಿಳಿವಳಿಕೆಯುಳ್ಳವರು ಸಹ ಸೈಬರ್ ವಂಚನೆಯ ಸಂತ್ರಸ್ತರಾಗಿದ್ದಾರೆ. ಕೈಗಾರಿಕೋದ್ಯಮಿಯೊಬ್ಬರನ್ನು ಡಿಜಿಟಲ್ ಅರೆಸ್ಟ್‌ಗೆ ಒಳಪಡಿಸಿ 7 ಕೋಟಿ ರೂ. ದೋಚಿದ ಘಟನೆಯೂ ನಡೆದಿದೆ. ಜಾಗೃತಿ ಕೊರತೆಯ ಕಾರಣದಿಂದ ಜನರು ವಂಚಕರ ಬಲೆಗೆ ಬೀಳುತ್ತಾರೆ. ಸರ್ಕಾರದ ಕೆಲವು ಸಂಸ್ಥೆಗಳ ಕುರಿತು ಇರುವ ಭಯದಿಂದಾಗಿ ಈ ಸಂಸ್ಥೆಗಳ ಪ್ರತಿನಿಧಿಗಳ ಹೆಸರಿನಲ್ಲಿ ಕರೆ ಮಾಡಿದ ವಂಚಕರಿಗೆ ಜನರು ಪ್ರಶ್ನಿಸದೆಯೇ ಶರಣಾಗಿಬಿಡುತ್ತಾರೆ. ಯಾವೆಲ್ಲ ರೀತಿಯ ಸೈಬರ್ ವಂಚನೆಗಳಿಂದ ಜನ ಮೋಸ ಹೋಗುತ್ತಿದ್ದಾರೆ ಎಂಬುದನ್ನು ನೋಡೋಣ… ಅದಕ್ಕೂ ಮುನ್ನ ಡಿಜಿಟಲ್ ಅರೆಸ್ಟ್ ಎಂದರೇನು ಅನ್ನೋ ಬಗ್ಗೆ ತಿಳಿಯೋಣ…
Advertisement
ಡಿಜಿಟಲ್ ಅರೆಸ್ಟ್ ಎಂದರೇನು?
ಡಿಜಿಟಲ್ ಅರೆಸ್ಟ್ ಸೈಬರ್ ವಂಚನೆಯ ಹೊಸ ವಿಧಾನವಾಗಿದೆ. ಇದರಲ್ಲಿ ವಂಚಕರು ಕಾನೂನು ಅಧಿಕಾರಿಗಳಂತೆ ಪೋಸ್ ನೀಡುತ್ತಾರೆ ಮತ್ತು ಆಡಿಯೊ ಅಥವಾ ವೀಡಿಯೊ ಕರೆಗಳಲ್ಲಿ ಜನರನ್ನು ಬೆದರಿಸುತ್ತಾರೆ. ಬಂಧನದ ಸುಳ್ಳು ನೆಪದಲ್ಲಿ ಡಿಜಿಟಲ್ ಒತ್ತೆಯಾಳುಗಳನ್ನಾಗಿ ಮಾಡಿ ಹಣ ಪೀಕುತ್ತಾರೆ.
ಪ್ರಧಾನಿ ತಲುಪಿದ ʻಪಬ್ಲಿಕ್ ಟಿವಿʼ ವರದಿ
ಜಿಲ್ಲೆಯ ಸಂತೋಷ್ ಎಂಬುವವರಿಗೆ ಮುಂಬೈನಿಂದ ಕರೆ ಮಾಡಿ ಬ್ಲ್ಯಾಕ್‌ಮೇಲ್ ಮಾಡಿ, ಹೆದರಿಸಿರುವ ಸುದ್ದಿಯನ್ನು ನಿಮ್ಮ `ಪಬ್ಲಿಕ್ ಟಿವಿ’ ಬಿತ್ತರಿಸಿತ್ತು. ಇದರ ಬೆನ್ನಲ್ಲೇ ಈ ಸುದ್ದಿ ಪ್ರಧಾನಿ ಮೋದಿಯವರಿಗೆ ತಲುಪಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಕಳೆದ ಅಕ್ಟೋಬರ್ 27ರಂದು ನಡೆದ ಮನ್ ಕಿ ಬಾತ್‌ನಲ್ಲಿ ಮಾತನಾಡಿದ್ದರು. ಪ್ರಧಾನಿ ಮೋದಿ ಮನ್ ಕಿ ಬಾತ್‌ನ 115ನೇ ಸಂಚಿಕೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾ, ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣ ಹಿನ್ನೆಲೆ ದೇಶದ ಜನರಿಗೆ ಜಾಗೃತಿ ಮೂಡಿಸಿದರು. ವಿಜಯಪುರದ ನಿವಾಸಿ ಸಂತೋಷ್ ಎಂಬುವವರಿಗೆ ಮುಂಬೈನಿಂದ ಕರೆ ಮಾಡಿ, ನಾವು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಎಂದು ಹೇಳಿ ಬ್ಲ್ಯಾಕ್‌ಮೇಲ್ ಮಾಡಿ, ಹೆದರಿಸಿದ್ದರು. ಇದರ ಸಂಪೂರ್ಣ ದೃಶ್ಯವನ್ನು ಸಂತೋಷ್ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಈ ಕುರಿತು ವಿಸ್ತೃತ ವರದಿಯನ್ನು ಪಬ್ಲಿಕ್ ಟಿವಿ ಬಿತ್ತರಿಸಿತ್ತು. ಈ ಸುದ್ದಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದು, ಪ್ರಧಾನಿ ಮೋದಿಯವರೆಗೆ ತಲುಪಿತ್ತು. ಇದೇ ಪ್ರಕರಣವನ್ನು ಪ್ರಧಾನಿ ಮೋದಿ ಇತ್ತೀಚೆಗೆ ಉಲ್ಲೇಖಿಸಿ ಮಾತನಾಡಿದರು. ಅಲ್ಲದೇ ಬೆಳಗ್ಗೆ 11 ಗಂಟೆಗೆ ಆರಂಭವಾದ ʻಮೋದಿ ಮನ್ ಕಿ ಬಾತ್ʼನಲ್ಲಿ ಸಂತೋಷ್ ಸೆರೆ ಹಿಡಿದಿದ್ದ ಸಂಪೂರ್ಣ ವಿಡಿಯೋವನ್ನು ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಯಿತು.
3.25 ಲಕ್ಷ ನಕಲಿ ಬ್ಯಾಂಕ್ ಖಾತೆ ಸ್ಥಗಿತಕ್ಕೆ ಆದೇಶ
ಡಿಜಿಟಲ್ ಅರೆಸ್ಟ್‌ಗೆ ಸಂಬಂಧಿಸಿದ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ ಇವುಗಳ ತನಿಖೆಗಾಗಿ ಕೇಂದ್ರ ಗೃಹ ಸಚಿವಾಲಯವು ಈಗಾಲೇ ಉನ್ನತ ಮಟ್ಟದ ಸಮಿತಿ ರಚಿಸಿದೆ. ಮೂಲಗಳ ಪ್ರಕಾರ, ಸಮಿತಿಯು ಗೃಹ ಸಚಿವಾಲಯದ ಆಂತರಿಕ ಭದ್ರತಾ ಕಾರ್ಯದರ್ಶಿಯ ಮೇಲ್ವಿಚಾರಣೆಯಲ್ಲಿರಲಿದೆ. ಪ್ರಸಕ್ತ ವರ್ಷದಲ್ಲಿ ಈವರೆಗೂ 6,000ಕ್ಕೂ ಹೆಚ್ಚು ಡಿಜಿಟಲ್ ಅರೆಸ್ಟ್ ದೂರುಗಳು ದಾಖಲಾಗಿವೆ. ಹಗರಣಕ್ಕೆ ಸಂಬಂಧಿಸಿದಂತೆ 6 ಲಕ್ಷ ಮೊಬೈಲ್ ಸಂಖ್ಯೆಗಳನ್ನು ನಿರ್ಬಂಧಿಸಿದೆ. ಸೈಬರ್ ಅಪರಾಧ ಸಮನ್ವಯ ಕೇಂದ್ರವು ಕನಿಷ್ಠ 709 ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ. ಸೈಬರ್ ವಂಚನೆಗೆ ಸಂಬಂಧಿಸಿದ 3.25 ಲಕ್ಷ ನಕಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳು ಆದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೋಸ ಹೋಗದಿರಲು ಈ ಅಂಶ ಗಮನಿಸಬೇಕು
* ಕರೆ ಮಾಡಿ ಹಣ ಅಕ್ರಮ ವರ್ಗಾವಣೆ, ಡ್ರಗ್ ಕಳ್ಳಸಾಗಣೆಯಂತಹ ಆರೋಪ ಮಾಡಿದ ಸಂದರ್ಭದಲ್ಲಿ ಆತಂಕ ಗೊಳ್ಳಬೇಡಿ. ನಿಮ್ಮ ಭಯ ಮತ್ತು ಆತುರವನ್ನೇ ವಂಚಕರು ಬಂಡವಾಳವಾಗಿ ಮಾಡಿಕೊಳ್ಳುತ್ತಾರೆ.
* ಫೋನ್ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ವೈಯಕ್ತಿಕ ಮಾಹಿತಿ, ಬ್ಯಾಂಕ್ ಮಾಹಿತಿಯನ್ನು ಹಂಚಿಕೊಳ್ಳಬೇಡಿ
* ವಂಚಕರಿಗೆ ಪ್ರತಿಕ್ರಿಯಿಸುವ ಮುನ್ನ ತಾಳ್ಮೆಯಿಂದ ಯೋಚಿಸಿ. ಒತ್ತಡದಲ್ಲಿದ್ದಾಗ ಹಣ ವರ್ಗಾವಣೆ ಮಾಡಬೇಡಿ. ತನಿಖಾ ಸಂಸ್ಥೆಗಳು ತಕ್ಷಣ ಹಣ ವರ್ಗಾವಣೆ ಮಾಡುವಂತೆ ಎಂದಿಗೂ ಒತ್ತಡ ಹೇರುವುದಿಲ್ಲ. ಫೋನ್ ಅಥವಾ ಆನ್‌ಲೈನ್ ಮೂಲಕ ಹಣಕ್ಕೆ ಬೇಡಿಕೆ ಇಟ್ಟಲ್ಲಿ ಬಹುತೇಕ ಅದು ಆನ್‌ಲೈನ್ ವಂಚನೆಯೇ ಆಗಿರುತ್ತದೆ
* ಆನ್‌ಲೈನ್ ವಂಚನೆಯ ಅನುಮಾನ ಬಂದರೆ, ಸಂಬಂಧಿತ ಸಂಸ್ಥೆಗಳನ್ನು ಸಂಪರ್ಕಿಸಿ ಪರಿಶೀಲಿಸಿ ಎಚ್ಚರಿಕೆಯಿಂದ ಇರುವುದು ಆನ್‌ಲೈನ್ ವಂಚನೆಯಿಂದ ಪಾರಾಗುವ ಪ್ರಮುಖ ʻಅಸ್ತ್ರʼ.
ಯಾವ ರೀತಿ ವಂಚನೆ ನಡೆಯುತ್ತೆ?
* ಆನ್‌ಲೈನ್ ಡೇಟಿಂಗ್ ಆ್ಯಪ್‌ಗಳ ಮೂಲಕ ಪರಿಚಯಿಸಿಕೊಂಡು ಭಾವನಾತ್ಮಕವಾಗಿ ಕಟ್ಟಿಹಾಕಿ, ವೈದ್ಯಕೀಯ ಚಿಕಿತ್ಸೆ ಮತ್ತಿತರ ನೆಪಗಳನ್ನು ಮುಂದಿಟ್ಟುಕೊಂಡು ಹಣ ಪಡೆದು ವಂಚಿಸುತ್ತಾರೆ.
* ದೊಡ್ಡ ದೊಡ್ಡ ಸ್ಯಾಲರಿ ಆಫರ್‌ಗಳನ್ನು ತೋರಿಸಿ ಉದ್ಯೋಗ ಒದಗಿಸುವ ನೆಪದಲ್ಲಿ ಹಣಕ್ಕೆ ಬೇಡಿಕೆ ಇಡುತ್ತಾರೆ.
* ತಂತ್ರಜ್ಞಾನ ಕುರಿತ ಬಳಕೆದಾರರ ಸೀಮಿತ ಜ್ಞಾನವನ್ನೇ ಬಂಡವಾಳವಾಗಿ ಮಾಡಿಕೊಂಡು, ಸಂತ್ರಸ್ತರ ಕಂಪ್ಯೂಟರ್‌ನ ಪಾಸ್‌ವರ್ಡ್ ಪಡೆದು ವೈಯಕ್ತಿಕ ಮತ್ತು ಗೌಪ್ಯ ಮಾಹಿತಿ ಕದಿಯುತ್ತಾರೆ.
* ನಕಲಿ ವೆಬ್‌ಸೈಟ್ ಅಥವಾ ಸಾಮಾಜಿಕ ಜಾಲತಾಣ ಖಾತೆ ತೆರೆದು ವಿಪತ್ತು ಪರಿಹಾರ, ಆರೋಗ್ಯ ನಿಧಿಗೆ ಸಂಬಂಧಿಸಿದ ಕಾರ್ಯಕ್ಕಾಗಿ ದೇಣಿಗೆ ನೀಡುವಂತೆ ಮನವಿ ಮಾಡುತ್ತಾರೆ.
* ಕೆಲ ವಂಚಕರು ಇ-ಮೇಲ್ ಅಥವಾ ಜಾಲತಾಣಗಳ ಮೂಲಕ ಸಂಪರ್ಕಿಸಿ, ತಪ್ಪಾಗಿ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗಿದೆ. ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಬೇಕೆಂದಿದ್ದರೆ ಕೂಡಲೇ ಹಣ ವರ್ಗಾಯಿಸಿ ಎಂದು ಕೇಳುತ್ತಾರೆ.
* ನಕಲಿ ಆನ್‌ಲೈನ್ ಸ್ಟೋರ್ ಸೃಷ್ಟಿಸಿ ʻಕ್ಯಾಶ್ ಆನ್ ಡೆಲಿವರಿ’ ಅಯ್ಕೆ ನೀಡುತ್ತಾರೆ. ಆದರೆ ವಿಳಾಸಕ್ಕೆ ತಲುಪಿದ ವಸ್ತುವು ನಕಲಿಯಾಗಿರುತ್ತದೆ ಅಥವಾ ಆರ್ಡರ್ ಮಾಡಿದ್ದಕ್ಕಿಂತ ಕಳಪೆಯಾಗಿರುತ್ತದೆ.
* ಟೆಲಿಕಾಂ ನಿಯಂತ್ರಣ ಸಂಸ್ಥೆ ಹೆಸರಿನಲ್ಲಿ ಸಂತ್ರಸ್ತರಿಗೆ ಕರೆ ಮಾಡಿ, ʻಸೇವೆಯಲ್ಲಿ ಸಮಸ್ಯೆ ತಲೆದೋರಿದೆ. ಅದಕ್ಕಾಗಿ ಗುರುತು ಪರಿಶೀಲನೆಗಾಗಿ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಮತ್ತು ಬ್ಯಾಂಕ್ ಮಾಹಿತಿ ಹಂಚಿಕೊಳ್ಳಿ’ ಎಂದು ಕೇಳುತ್ತಾರೆ. ಹೀಗೆ ಅನೇಕ ರೀತಿಯಲ್ಲಿ ಡಿಜಿಟಲ್ ವಂಚಕರು ಹಣ ಪೀಕುತ್ತಿದ್ದಾರೆ.