ಜೈನ ಧರ್ಮವು ಈ ಪ್ರದೇಶದಲ್ಲಿ ಪ್ರಮುಖ ಧರ್ಮವಾಗಿರುವುದರಿಂದ ಕಾರ್ಕಳವು ಅನೇಕ ಬಸದಿಗಳಿಂದ ಕೂಡಿದೆ. ಅವುಗಳಲ್ಲಿ ಸಾವಿರ ಕಂಬ ಬಸದಿ, ವರಂಗ ಫೇಮಸ್. ಇದೀಗ ಈ ಪಟ್ಟಿಗೆ ಕಾರ್ಕಳದ ಆನೆಕೆರೆ ಬಸದಿ ಕೂಡ ಸೇರಿದೆ.
ಹೌದು.. ಕೆರೆ ಬಸದಿ ಎಂದಾಗ ಥಟ್ಟನೆ ನೆನಪಾಗೋದು ಉಡುಪಿಯ ಹೆಬ್ರಿ ತಾಲೂಕಿನಲ್ಲಿರುವ ವರಂಗ. ಇದು ಅನೇಕ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ಫೋಟೋಶೂಟ್ ಮಾಡಲು ಉತ್ತಮ ಸ್ಥಳ ಕೂಡ ಆಗಿದೆ. ಅದರಲ್ಲೂ ಕೆಲವು ತಿಂಗಳ ಹಿಂದೆ ಆನಂದ್ ಮಹೀಂದ್ರಾ ಅವರು ಮಳೆಗಾಲದ 10 ಪ್ರೇಕ್ಷಣೀಯ ಸ್ಥಳಗಳಲ್ಲಿ ವರಂಗದ ಕೆರೆ ಬಸದಿಯನ್ನೂ ಪಟ್ಟಿ ಮಾಡಿದ್ದರು. ಆ ಬಳಿಕ ವರಂಗದ ಕೆರೆ ಬಸದಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಜಾಸ್ತಿಯಾಗಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ವರಂಗವನ್ನೇ ಹೋಲುವ ಇನ್ನೊಂದು ಜೈನ ಬಸದಿ (Jaina Basadi) ಇದೆ. ಈ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಅದುವೇ ಕಾರ್ಕಳ ತಾಲೂಕಿನ ಆನೆಕೆರೆ ಚತುರ್ಮುಖ ಬಸದಿ. ಇದು ಕಾರ್ಕಳದ 18 ಜೈನಬಸದಿಗಳಲ್ಲಿ ಒಂದಾಗಿದೆ.
Advertisement
ಕೆರೆ ಮಧ್ಯೆ ಬಸದಿ: ಕೆರೆ ಬಸದಿಯು ಅದರ ಸ್ಥಳದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಕ್ರಿ.ಶ 1545ರಲ್ಲಿ ಕಾರ್ಕಳ ನಗರದಲ್ಲಿ ಸುಮಾರು 24.66 ಎಕ್ರೆ ವಿಸ್ತೀರ್ಣದ ಆನೆಕೆರೆಯ (Anekere Basadi) ಮಧ್ಯೆ ನಿರ್ಮಿಸಿರುವ ಬಸದಿಯು “ಚತುರ್ಮುಖ ಬಸದಿ” ಎಂದೇ ಪ್ರಸಿದ್ಧಿ ಪಡೆದಿದೆ. ಈ ಬಸದಿಯು ಸರ್ವಧರ್ಮೀಯರ ಪುಣ್ಯಕ್ಷೇತ್ರವಾಗಿದೆ. ಈ ಬಸದಿಗೆ ನಾಲ್ಕು ಕಡೆಯಿಂದಲೂ ಬಾಗಿಲುಗಳಿದ್ದು, ಪ್ರತಿಯೊಂದು ಬಾಗಿಲುಗಳು ಕೂಡ ಗರ್ಭಗುಡಿಯನ್ನು ಸೇರುತ್ತದೆ. ಬಸದಿಯ ಮೇಲಿನ ನೆಲೆಯಲ್ಲಿ ಪಾರ್ಶ್ವನಾಥ ಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಿ, ಆದಿನಾಥ ಸ್ವಾಮಿ, ಮಹಾವೀರ ಸ್ವಾಮಿ, ಚಂದ್ರನಾಥ ಸ್ವಾಮಿ ಮತ್ತು ಶಾಂತಿನಾಥ ಸ್ವಾಮಿಯನ್ನು ಕೆಳ ನೆಲೆಯಲ್ಲಿ ಪೂಜಿಸಲಾಗುತ್ತದೆ.
Advertisement
ಈ ಕೆರೆ ಬಸದಿಯನ್ನು ಭೈರವ ಅರಸು ವಂಶದ ಪಾಂಡ್ಯನಾಥ ಪಾಂಡ್ಯಪ್ಪೆಡೆಯ ಕಟ್ಟಿಸಿದ ಎಂಬ ಇತಿಹಾಸವಿದೆ. ಆನೆಕೆರೆಯನ್ನು 1262ರಲ್ಲಿ ಭೈರರಸ ಸಾಮ್ರಾಜ್ಯದ ದೊರೆ ರಾಜ ಪಾಂಡ್ಯದೇವನು ಸಣ್ಣದಾದ ಹೊಂಡದ ರೀತಿಯಲ್ಲಿ ನಿರ್ಮಿಸಿದ್ದನು ಎನ್ನಲಾಗಿದೆ. ಮುಂದೆ ಈ ಕೆರೆಯು 25 ಎಕರೆವರೆಗೂ ವಿಸ್ತರಿಸಿಕೊಂಡಿತ್ತು. ಆದರೆ ಈಗ ಕಾರ್ಕಳ ನಗರದಿಂದ ಕೇವಲ 1 ಕಿಲೋ ಮೀಟರ್ ದೂರದಲ್ಲಿರುವ ಆನೆಕೆರೆಯು 7 ಎಕರೆ ಜಾಗದಲ್ಲಿದ್ದು, ಸ್ಥಳೀಯ ನೀರಿನ ಮೂಲವಾಗಿಯೂ, ಆಕರ್ಷಕವಾಗಿಯೂ ಗಮನ ಸೆಳೆಯುತ್ತಿದೆ.
Advertisement
ಸರ್ಕಾರಿ ದಾಖಲೆಗಳ ಪ್ರಕಾರ, ಇದು ಆರಂಭದಲ್ಲಿ 25 ಎಕರೆ ಪ್ರದೇಶದಲ್ಲಿ ಹರಡಿತ್ತು. ನಂತರ ಈ ಪ್ರದೇಶಕ್ಕೆ ಕುಡಿಯುವ ನೀರನ್ನು ಪೂರೈಸಲು ಬಳಸಲಾಯಿತು. 8 ಶತಮಾನಗಳಿಗೂ ಹೆಚ್ಚು ಕಾಲ ನಗರಕ್ಕೆ ಕುಡಿಯುವ ನೀರಿನ ಪ್ರಾಥಮಿಕ ಮೂಲ ಆನೆಕೆರೆ ಕೆರೆ ಆಗಿತ್ತು. ಇದನ್ನೂ ಓದಿ: ಆಗುಂಬೆ ಘಾಟ್- ಒಂದು ಬಾರಿ ಹೋದ್ರೆ ಮತ್ತೆ ಮತ್ತೆ ಸೆಳೆಯುವ ಏಕೈಕ ಸ್ಥಳ
Advertisement
ಹೆಸರು ಬಂದಿದ್ದು ಹೇಗೆ?: ರಾಜನ ಆನೆಗಳಿಗೆ ಸ್ನಾನ ಮಾಡಲು, ನೀರು ಕುಡಿಯಲು ಹಾಗೂ ಹಾಯಾಗಿರಲು ಬಸದಿಯ ಸುತ್ತ ಬೃಹದಾಕಾರದ ಕೆರೆಯನ್ನು ನಿರ್ಮಾಣ ಮಾಡಲಾಯಿತು. ಬಳಿಕದಿಂದ ಆನೆಕೆರೆ ಬಸದಿ ಎಂಬ ಖ್ಯಾತಿ ಪಡೆಯಿತು. ಹೊಯ್ಸಳ ಮತ್ತು ಗಂಗರ ಶೈಲಿಯಲ್ಲಿ ಬಸದಿಯನ್ನು ನಿರ್ಮಿಸಲಾಗಿದೆ. ಗಜ ಕಟಾಂಜನ, ಸಿಂಹ ಕಟಾಂಜನವಿರುವ ಕಲ್ಲಿನ ಕಂಬಗಳು ಇಲ್ಲಿವೆ.
ಸುತ್ತಲೂ ಉದ್ಯಾನವನ, ವಾಕಿಂಗ್ ಟ್ರ್ಯಾಕ್ ಗಳನ್ನು ನಿರ್ಮಿಸಿರುವ ಕಾರಣ ಧಾರ್ಮಿಕತೆ ಜೊತೆಗೆ ಪ್ರವಾಸೋದ್ಯಮಕ್ಕೂ ಈಗ ಒತ್ತುಕೊಡಲಾಗಿದೆ. ಆನೆಕೆರೆ ಪಕ್ಷಿಧಾಮವಾಗಿ ಅಭಿವೃದ್ಧಿಗೊಳ್ಳಬೇಕು. ಬೋಟಿಂಗ್ ವ್ಯವಸ್ಥೆ ಕಲ್ಪಿಸಿ, ಇಲ್ಲಿಗಾಗಮಿಸುವ ಭಕ್ತರು ಮತ್ತು ಪ್ರವಾಸಿಗರು ಸಂಭ್ರಮಿಸುವಂತೆ ಆಹ್ಲಾದಕರ ವಾತಾವರಣ ನಿರ್ಮಿಸಿಕೊಡಬೇಕೆಂಬುದು ಹಲವು ದಶಕಗಳ ಬೇಡಿಕೆಯಾಗಿದೆ.
ವರಂಗದ ವಿಶೇಷ ಏನು..?: ವರಂಗ ಎಂಬುದು ಜೈನ ಧರ್ಮೀಯರ ಅತ್ಯಂತ ಪವಿತ್ರವಾದ ಸ್ಥಳ. ವರಂಗ ರಾಜನ ಆಡಳಿತಕ್ಕೆ ಒಳಪಟ್ಟ ಪ್ರದೇಶವಾಗಿದ್ದ ಹಿನ್ನೆಲೆಯಲ್ಲಿ ಈ ಸ್ಥಳಕ್ಕೆ ವರಂಗವೆಂಬ ಹೆಸರು ಬಂದಿದೆ. ಇಲ್ಲಿ ವಿಶೇಷವಾಗಿ ಮೂರು ಬಸದಿಗಳು ಇವೆ. ಈ ಮೂರು ಬಸದಿಗಳಾದ ನೇಮಿನಾಥ ಬಸದಿ, ಚಂದ್ರನಾಥ ಬಸದಿ ಮತ್ತು ಈ ಕೆರೆ ಬಸದಿ ಕೂಡ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಕಾರ್ಕಳದಿಂದ ಹೆಬ್ರಿಗೆ ತೆರಳುವ ದಾರಿ ಮಧ್ಯೆ ವರಂಗ ಸಿಗುತ್ತವೆ. ಪ್ರಕೃತಿಯ ನಡುವೆ ಇಂದಿಗೂ ಹಳ್ಳಿ ಸೊಗಡನ್ನ ಹಾಗೆಯೇ ಪಸರಿಸುತ್ತಾ ತಲೆ ಎತ್ತಿ ನಿಂತಿದೆ. ಸುತ್ತಲೂ ನೀರು ಅದರ ಮಧ್ಯೆ ಇರುವ ಬಸದಿಗೆ ದೋಣಿಯ ಮೂಲಕ ಸಾಗಿ ಅಲ್ಲಿನ ಪ್ರಕೃತಿ ವೀಕ್ಷಣೆ ಮಾಡಿದರೆ ಒಂದು ಅದ್ಭುತ ಅನುಭವವನ್ನು ನೀಡುತ್ತದೆ.
ವರಂಗಕ್ಕೂ, ಇಲ್ಲಿಗೂ ವ್ಯತ್ಯಾಸವೇನು?: ಹೌದು ಪ್ರಸಿದ್ಧ ಪ್ರವಾಸಿ ತಾಣವಾಗಿರುವ ವರಂಗಕ್ಕೂ ಇಲ್ಲಿಗೂ ಸ್ವಲ್ಪ ವ್ಯತ್ಯಾಸವಿದೆ. ನೋಡೋದಕ್ಕೇನೋ ವರಂಗವನ್ನೇ ಹೋಲುವ ಕಾರ್ಕಳದ ಆನೆಕೆರೆ ಚತುರ್ಮುಖ ಬಸದಿ ಹಾಗೂ ವರಂಗ ಕೆರೆ ಬಸದಿ ನಡುವೆ ಸಣ್ಣ ವ್ಯತ್ಯಾಸಗಳಷ್ಟೇ ಕಾಣಬಹುದು. ವರಂಗದಲ್ಲಿ ಬಸದಿಗೆ ತಲುಪಬೇಕಿದ್ದರೆ ದೋಣಿ ಆಶ್ರಯ ಪಡರಯಬೇಕಾಗುತ್ತದೆ. ಆದರೆ ಇಲ್ಲಿ ಕೆರೆ ಮಧ್ಯೆ ಬಸದಿ ತನಕ ವಾಕಿಂಗ್ ಟ್ರ್ಯಾಕ್ ಇದೆ.
ಹೋಗುವುದು ಹೇಗೆ..?: ಆನೆಕೆರೆ ಬಸದಿಗೆ ಹೋಗಬೇಕಾದರೆ ಮೊದಲು ಕಾರ್ಕಳಕ್ಕೆ ಹೋಗಬೇಕಾಗುತ್ತದೆ. ಕಾರ್ಕಳವು ಬೆಂಗಳೂರಿನಿಂದ 360 ಕಿ.ಮೀ ಹಾಗೂ ಮಂಗಳೂರಿನಿಂದ 55 ಕಿ.ಮೀ ದೂರದಲ್ಲಿದೆ. ಕಾರ್ಕಳ ನಗರದಿಂದ ಕೇವಲ 1 ಕಿ.ಮೀ ದೂರದಲ್ಲಿ ಆನೆಕೆರೆ ಬಸದಿ ಇದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಆನೆಕೆರೆ ಕೆರೆಯಿಂದ 42 ಕಿಮೀ ದೂರದಲ್ಲಿದೆ. ನೀವು ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ತೆಗೆದುಕೊಳ್ಳಬಹುದು. ರೈಲಿನ ಮೂಲಕವಾದರೆ ಉಡುಪಿ ರೈಲು ನಿಲ್ದಾಣವು ಆನೆಕೆರೆ ಕೆರೆಗೆ ಸಮೀಪವಿರುವ ರೈಲು ನಿಲ್ದಾಣವಾಗಿದೆ. 36 ಕಿಮೀ ದೂರವನ್ನು ಖಾಸಗಿ ಅಥವಾ ಸಾರ್ವಜನಿಕ ಸಾರಿಗೆಯಿಂದ ಕ್ರಮಿಸಬಹುದು.
ಇದು ಕಾರ್ಕಳ-ಮಂಗಳೂರು ಪ್ರಮುಖ ಹೆದ್ದಾರಿಗೆ ಸಮೀಪವೇ ಇದೆ. ರಸ್ತೆ ಬದಿ ಪಾರ್ಕ್ ಇದೆ. ಈ ಪಾರ್ಕಿನಲ್ಲಿ ಕುಳಿತುಕೊಂಡು ಕೆರೆ ಹಾಗೂ ಚತುರ್ಮುಖ ಬಸದಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಜೊತೆಗೆ ನೀವು ಇನ್ನೊಂದು ಸ್ಥಳಕ್ಕೂ ಭೇಟಿ ಕೊಡಬಹುದು. ಅದು ಯಾವುದೆಂದರೆ ಈ ಬಸದಿಯಿಂದ ಸುಮಾರು ಒಂದೂವರೆ ಕಿಲೋ ಮೀಟರ್ ಸಾಗಿದರೆ ಪ್ರಸಿದ್ಧ ಕಾರ್ಕಳದ ಗೊಮ್ಮಟೇಶ್ವರನ ಪ್ರತಿಮೆಯನ್ನು ನೋಡಬಹುದು. ಅದು ಕೂಡಾ ಅತ್ಯುತ್ತಮ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ.
ಒಟ್ಟಿನಲ್ಲಿ ಐದು ಶತಮಾನಗಳಷ್ಟು ಪ್ರಾಚೀನ ಹಾಗೂ ಐವರು ತೀರ್ಥಂಕರರ ದಿವ್ಯ ಬಿಂಬಗಳಿಂದ ಕೂಡಿರುವ ಆನೆಕೆರೆ ಬಸದಿಯ ಜೀರ್ಣೋದ್ಧಾರ ಕಾರ್ಯ ಇತ್ತೀಚೆಗೆ ಬಹುತೇಕ ಮುಗಿದಿದೆ. ಸುಮಾರು 2.50 ಕೋ.ರೂ. ವೆಚ್ಚದಲ್ಲಿ ಆನೆಕೆರೆ ಬಸದಿ ಅಭಿವೃದ್ಧಿಗೊಳಿಸಲಾಗಿದೆ. ಆನೆಕೆರೆ ಸುತ್ತ 2.60 ಕೋಟಿ ರೂ. ವೆಚ್ಚದಲ್ಲಿ ಸುತ್ತುಪೌಳಿ ಕಾಮಗಾರಿ, ಇಂಟರ್‌ಲಾಕ್ ಅಳವಡಿಸಲಾಗಿದೆ.