ಸೌರಮಾನ ಯುಗಾದಿಯನ್ನು (Ugadi) ಕರಾವಳಿಯಲ್ಲಿ (Karavali) ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಹಿರಿಯರ ಕಾಲದಿಂದಲೂ ಕೇರಳ (Kerala) ಹಾಗೂ ತುಳುನಾಡಿನಲ್ಲಿ (Tulunadu) ವಿಷು ಹಬ್ಬವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇಂದಿನಿಂದ ಈ ಭಾಗದಲ್ಲಿ ಹೊಸ ಸಂವತ್ಸರ ಆರಂಭಗೊಳ್ಳುವುದು ಎಂಬ ನಂಬಿಕೆ. ಹೀಗಾಗಿ ಈ ದಿನವನ್ನು ಹೊಸ ವರ್ಷವೆಂದು ಜನ ಆಚರಿಸಿಕೊಳ್ಳುತ್ತಿದ್ದಾರೆ.
ವಿಶೇಷ ಅಂದ್ರೆ ಈ ಹಬ್ಬದಂದು ಕರಾವಳಿ ಹಾಗೂ ಕೇರಳದಲ್ಲಿ ದೇವರ ಕೋಣೆಯಲ್ಲಿ ʼವಿಷು ಕಣಿʼ ಇಡುವ ಸಂಪ್ರದಾಯವಿದೆ. ವಿಷುಕಣಿ ವಿಷು ಹಬ್ಬದ ಪ್ರಮುಖ ಭಾಗವಾಗಿದೆ. ಮಲಯಾಳಂನ ‘ಕಣಿ’ ಪದವು ‘ಮೊದಲು ಕಾಣುವವನು’ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ವಿಷುಕಣಿಯು ವಿಷುವಿನಲ್ಲಿ ಮೊದಲು ಮುಂಜಾನೆಯನ್ನು ನೋಡುವುದು ಎಂಬುದಾಗಿದೆ. ವಿಷು ಹಬ್ಬದಂದು ಇಲ್ಲಿನ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲಿ ಈ ದಿನ ವಿಶೇಷ ಪೂಜೆಗಳು ನಡೆಯುತ್ತವೆ. ಎಲ್ಲಾ ದೇವಸ್ಥಾನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿರುತ್ತಾರೆ.
Advertisement
Advertisement
ಆಚರಣೆ ಹೇಗೆ?
ವಿಷು ಹಬ್ಬದ ಹಿಂದಿನ ದಿನವೇ ಮನೆಯನ್ನು ಶುಚಿಗೊಳಿಸಿ ಶೃಂಗಾರ ಮಾಡುತ್ತಾರೆ. ದೇವರ ಕೋಣೆಯಲ್ಲಿ ಕಣಿ ಕಾಣಲು ಬೇಕಾದ ವಸ್ತುಗಳನ್ನು ತಯಾರು ಮಾಡುತ್ತಾರೆ. ದೇವರ ವಿಗ್ರಹ, ಫಲ ವಸ್ತುಗಳು, ನವ ಧಾನ್ಯ, ಹೊಸ ಬಟ್ಟೆ, ಧನ, ಕನಕ ಇತ್ಯಾದಿಯನ್ನು ಅಣಿಗೊಳಿಸಿ ಹೊಸ ಮಡಿಕೆಯಲ್ಲಿ ಅಥವಾ ಉರುಳಿ ಪಾತ್ರೆಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ ಹಾಗೂ ಕನ್ನಡಿಯನ್ನು ಇಡುತ್ತಾರೆ.
Advertisement
ಸಂಪ್ರದಾಯದ ಪ್ರಕಾರ, ಮನೆಯ ಪ್ರತಿಯೊಬ್ಬ ಸದಸ್ಯನು ಬೆಳಗ್ಗೆ ಬೇಗನೇ ಎದ್ದು ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ಗುರು ಹಿರಿಯರಿಗೆ ವಂದಿಸಿ, ಆಶೀರ್ವಾದ ಪಡೆದು ಆ ಮೇಲೆ ಕಣಿ ಕಾಣಬೇಕು. ಕಣಿಕಂಡ ನಂತರ ಕನ್ನಡಿಯಲ್ಲಿ ಮುಖ ನೋಡಬೇಕು. ಕನ್ನಡಿಯಲ್ಲಿ ಮುಖ ನೋಡಿದರೆ ಆಯುಷ್ಯವು ಹೆಚ್ಚುತ್ತದೆ, ಸಂಪತ್ತು ಉಂಟಾಗುತ್ತದೆ, ಪಾಪ ದೂರವಾಗುತ್ತದೆ ಎಂಬ ನಂಬಿಕೆ ಇದೆ. ಹತ್ತಿರದ ದೇವಾಲಯಗಳಿಗೂ ಹೋಗಿ ಅಲ್ಲಿ ಇಟ್ಟ ಕಣಿಯನ್ನು ಕಾಣುವುದೂ, ದೇವರಲ್ಲಿ ಪ್ರಾರ್ಥಿಸುವುದು, ಯಶಸ್ಸಿಗಾಗಿ ಬೇಡಿಕೊಳ್ಳುವುದು ರೂಢಿ. ಕೆಲವರು ವಿಷುಕಣಿಯನ್ನು ವೀಕ್ಷಿಸಿದ ನಂತರ ಧಾರ್ಮಿಕ ಪುಸ್ತಕಗಳು ಹಾಗೂ ಭಗವದ್ಗೀತೆಯ ಶ್ಲೋಕಗಳನ್ನು ಓದುತ್ತಾರೆ.
Advertisement
ವಿಷುಕಣಿಯಲ್ಲಿ ಏನೇನಿರುತ್ತೆ?:
ವಿಷುಕಣಿಯಲ್ಲಿ ಮಂಗಳಕರ ವಸ್ತುಗಳಾದ ಅಕ್ಕಿ, ಮಾವು, ಹಲಸು, ತೆಂಗಿನಕಾಯಿ, ನಿಂಬೆ, ಬಾಳೆಹಣ್ಣು, ಹತ್ತಿಯ ಧೋತಿ, ಅಡಿಕೆ, ಸೌತೆಕಾಯಿಗಳು, ವೀಳ್ಯದೆಲೆಗಳು, ಚಿನ್ನ, ನೋಟುಗಳು ಅಥವಾ ನಾಣ್ಯಗಳು, ರೇಷ್ಮೆ ಬಟ್ಟೆ, ಕನ್ನಡಿ, ಪವಿತ್ರ ಹಿಂದೂ ಪುಸ್ತಕಗಳು, ಕನ್ನಡಿ ತಾಜಾ ಹಣ್ಣುಗಳು, ಹೂವುಗಳನ್ನು ಒಳಗೊಂಡಿರುತ್ತದೆ. ಈ ಎಲ್ಲಾ ವಸ್ತುಗಳನ್ನು ಆ ಮನೆಯ ಹಿರಿಯ ಮಹಿಳೆ ಒಂದು ಹರಿವಾಣ ಅಥವಾ ದೊಡ್ಡ ತಟ್ಟೆಯಲ್ಲಿಟ್ಟು ಅಲಂಕರಿಸಿ ದೇವರ ಫೋಟೋದ ಮುಂದೆ ಇಡಲಾಗುತ್ತದೆ.
ವಿಶೇಷ ಭೋಜನ:
ಈ ದಿನ ಎಲ್ಲರ ಮನೆಯಲ್ಲಿಯೂ ವಿಶೇಷ ಊಟವಿರುತ್ತದೆ. ಈ ಭೋಜನದಲ್ಲಿ ವಸಂತ ಋತುವಿನಲ್ಲಿ ಬೆಳೆಯುವ ಹೊಸ ಆಹಾರ ಪದಾರ್ಥಗಳಿಂದ, ತರಕಾರಿಗಳಿಂದ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಎಳೆ ಹಲಸು, ಮಾವು, ಕುಂಬಳಕಾಯಿ ಇತ್ಯಾದಿ ವಸ್ತುಗಳು ಸೇರಿಕೊಂಡಿರುತ್ತದೆ. ಇದರೊಂದಿಗೆ ವಿಷು ಗಂಜಿ ಮತ್ತು ಪಚಡಿಯು ಪ್ರಮುಖವಾದ ಆಹಾರ ಖಾದ್ಯಗಳಾಗಿವೆ.