ಮಹಾಶಿವರಾತ್ರಿಯನ್ನು ದೇಶಾದ್ಯಂತ ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ ಪ್ರತಿ ಮಾಸದಲ್ಲಿ ಶಿವರಾತ್ರಿ ಇರುತ್ತದೆ. ಇದಕ್ಕೆ ಮಾಸ ಶಿವರಾತ್ರಿ ಎಂದೂ, ವರ್ಷಕ್ಕೆ ಒಮ್ಮೆ ಬರುವ ಶಿವರಾತ್ರಿಯನ್ನು ಮಹಾಶಿವರಾತ್ರಿ ಎನ್ನಲಾಗುತ್ತದೆ. ಪ್ರತಿ ವರ್ಷ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾಶಿವರಾತ್ರಿ ಆಚರಣೆ ಮಾಡಲಾಗುತ್ತದೆ. ಶಿವರಾತ್ರಿ ಭಗವಾನ್ ಶಿವನಿಗೆ ಅತ್ಯಂತ ಪ್ರಿಯವಾದ ದಿನವಾಗಿದೆ. ಈ ದಿನವನ್ನು ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವನಿಗೆ ಅರ್ಪಿಸಲಾಗಿದೆ.
ಮಹಾಶಿವರಾತ್ರಿಯನ್ನು ಶಿವ ಮತ್ತು ಪಾರ್ವತಿ ಮದುವೆಯಾದ ಶುಭ ದಿನ ಎನ್ನಲಾಗುತ್ತದೆ. ಏಕೆಂದರೆ ಮಾಘ ಬಹುಳ ಚತುರ್ದಶಿಯ ರಾತ್ರಿಯೇ ಶಿವ ಪಾರ್ವತಿಯನ್ನು ವರಿಸಿದ್ದನಂತೆ. ಹೀಗಾಗಿ ಅಂದು ರಾತ್ರಿ ದೇವಾನು ದೇವತೆಗಳೆಲ್ಲರೂ ಜಾಗರಣೆ ಮಾಡುವ ಮೂಲಕ, ಗಿರಿಜಾ ಕಲ್ಯಾಣ ವೀಕ್ಷಿಸಿ, ಶಿವ ಪಾರ್ವತಿಯರಿಬ್ಬರನ್ನೂ ಪೂಜಿಸಿದರಂತೆ. ಹೀಗಾಗಿಯೇ ಈ ದಿನ ಜಾಗರಣೆ ಪದ್ಧತಿ ಆಚರಣೆಗೆ ಬಂದಿದೆ ಎನ್ನಲಾಗುತ್ತದೆ. ಇವೆಲ್ಲಾ ಕಾರಣದಿಂದಾಗಿ ಮಹಾಶಿವರಾತ್ರಿಯ ಆಚರಣೆ ತುಂಬಾ ವಿಶೇಷವಾಗಿದ್ದು ಶಿವ ಭಕ್ತರು ಶಿವನನ್ನು ಪೂಜಿಸಲು, ಅಬಿಷೇಕ, ರುದ್ರಾಭಿಷೇಕ ಮಾಡಲು ಮತ್ತು ಭಗವಂತನ ಆಶೀರ್ವಾದ ಪಡೆಯಲು ವಿವಿಧ ಶಿವ ಮಂತ್ರಗಳನ್ನು ಪಠಿಸಲು ರಾತ್ರಿಯಿಡೀ ಎಚ್ಚರವಾಗಿರುತ್ತಾರೆ. ಭಕ್ತರಿಗೆ ಆಧ್ಯಾತ್ಮಿಕ ಜಾಗೃತಿ ಮತ್ತು ಮುಕ್ತಿಯನ್ನು ಪಡೆಯಲು ಇದು ಪರಿಪೂರ್ಣ ದಿನವಾಗಿದೆ.
ಶಿವ ಪುರಾಣದ ಪ್ರಕಾರ, ಶಿವರಾತ್ರಿಯಂದು ರಾತ್ರಿಯ ವೇಳೆಯಲ್ಲಿ ಶಿವನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ. ಹಾಗಾಗಿ ಶಿವರಾತ್ರಿಯು ಸಮಯ ಪೂಜೆಗೆ ಬಹು ಪ್ರಾಶಸ್ತ್ಯವಾದ ಸಮಯವಾಗಿದೆ. ಅಲ್ಲದೆ ಆ ದಿನ ಈಶ್ವರನ ಆರಾಧನೆ ಮಾಡಿದರೆ ಎಂದೂ ಲಭಿಸದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿ ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿದೆ.
ಪುರಾಣದ ಕಥೆಗಳೇನು?
ಚಳಿಗಾಲ ಕೊನೆಗೊಂಡು ವಸಂತ ಮತ್ತು ಬೇಸಿಗೆ ಪ್ರಾರಂಭವಾದಾಗ, ಋತು ಬದಲಾಗುವ ದಿನವನ್ನು ಮಹಾಶಿವರಾತ್ರಿಯ ಹೆಸರಿನಲ್ಲಿ ಎಲ್ಲೆಡೆ ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಬ್ರಹ್ಮಾಂಡದ ಎರಡು ಅತ್ಯುನ್ನತ ಶಕ್ತಿಗಳಾದ ಶಿವ ಹಾಗೂ ಪಾರ್ವತಿಯ ಸಂಯೋಗದ ಪ್ರತೀಕವಾಗಿ ಮಹಾ ಶಿವರಾತ್ರಿಯ ಆಚರಣೆ ಮಾಡಲಾಗುತ್ತದೆ ಎಂಬುದರಿಂದ ಹಿಡಿದು ಸಮುದ್ರ ಮಥನದ ಸಂದರ್ಭದಲ್ಲಿ ಬಂದ ಹಾಲಾಹಲವನ್ನು ಕುಡಿದ ಶಿವ ಜಗತ್ತನ್ನು ಉಳಿಸಿದ ಮಹಾ ಪರ್ವದಿದ ಎಂಬವರೆಗೆ ಹಲವು ಪೌರಾಣಿಕ ಕಥೆಗಳು ಮಹಾಶಿವರಾತ್ರಿಗೆ ತಳುಕು ಹಾಕಿಕೊಂಡಿವೆ.
ಮತ್ತೊಂದು ಕಥೆಯ ಪ್ರಕಾರ, ಮಹಾ ಶಿವರಾತ್ರಿಯನ್ನು ಶಿವನ ಸೃಷ್ಟಿ, ಸ್ಥಿತಿ ಲಯಗಳ ತಾಂಡವ ನೃತ್ಯ ಎಂದೂ ಹೇಳಲಾಗುತ್ತದೆ. ಸಮುದ್ರಮಂಥನದ ವೇಳೆ ಉದ್ಭವವಾದ ಹಾಲಾಹಲವನ್ನು ಜಗತ್ತಿನ ಉಳಿವಿಗಾಗಿ ಶಿವ ಕುಡಿದ ಪರಿಣಾಮ ಆತನ ಕುತ್ತಿಗೆ ಭಾಗ ನೀಲಿಯಾಯಿತು. ಇದರಿಂದಲೇ ಶಿವನಿಗೆ ನೀಲಕಂಠ ಎಂಬ ಹೆಸರೂ ಬಂದಿದೆ.
ಶಿವಲಿಂಗ ಪೂಜೆ:
ದಾಕ್ಷಾಯಿಣಿಯ ತಂದೆ ದಕ್ಷ ಪ್ರಜಾಪತಿಯು ಮಹಾ ಯಜ್ಞವೊಂದನ್ನು ಮಾಡಿ ಎಲ್ಲರಿಗೂ ಆಹ್ವಾನ ನೀಡುತ್ತಾನೆ. ಆದರೆ ಅಳಿಯನಾದ ಶಿವನಿಗೆ ಆಹ್ವಾನವಿರುವುದಿಲ್ಲ. ಈ ವಿಚಾರ ತಿಳಿದ ಸತಿಯು (ದಾಕ್ಷಾಯಿಣಿ) ಯಜ್ಞದ ಸಮಯದಲ್ಲಿ ಬೆಂಕಿಗೆ ಹಾರುತ್ತಾಳೆ. ಸತಿಯ ಸಾವಿನಿಂದ ಕಂಗೆಟ್ಟ ಶಿವ ಅಲೆಮಾರಿಯಂತೆ ಸುತ್ತುತ್ತಿರುತ್ತಾನೆ. ಈ ಸಂದರ್ಭದಲ್ಲಿ ನಡೆಯುವ ಬೆಳವಣಿಗೆಯೊಂದರಿಂದ ಭೂಮಿಯ ಮೇಲಿನ ಭಾರವು ಹೆಚ್ಚಾಗುತ್ತದೆ. ಮೂರು ಲೋಕವು ಅಸ್ತವ್ಯಸ್ತವಾಗುತ್ತದೆ. ಪರಿಸ್ಥಿತಿ ಹದಗೆಡುತ್ತಿದ್ದಂತೆ, ಎಲ್ಲಾ ಋಷಿಗಳು ಸಹಾಯಕ್ಕಾಗಿ ಬ್ರಹ್ಮನ ಬಳಿಗೆ ಹೋಗುತ್ತಾರೆ. ಬ್ರಹ್ಮನಿಗೆ ಘಟನೆಯ ಹಿಂದಿನ ಕಾರಣದ ಅರಿವಾಗುತ್ತದೆ. ನಂತರ ಬ್ರಹ್ಮದೇವರು ಶಿವನನ್ನು ಪೂಜಿಸಿ, ಲಿಂಗ ಪ್ರತಿಷ್ಠಾಪಿಸುತ್ತಾರೆ. ಆರಂಭದಲ್ಲಿ ಬ್ರಹ್ಮ ದೇವರು ಚಿನ್ನದ ಶಿವಲಿಂಗವನ್ನು ಸೃಷ್ಟಿಸಿ ಅದಕ್ಕೆ ಪೂಜೆ ಸಲ್ಲಿಸುತ್ತಿದ್ದರು. ನಂತರ ಎಲ್ಲಾ ದೇವರುಗಳು ಮತ್ತು ಋಷಿಗಳು ವಿವಿಧ ವಸ್ತುಗಳಿಂದ ಶಿವಲಿಂಗವನ್ನು ರಚಿಸಿ ಪೂಜಿಸಿದರು. ದಂತಕಥೆಯ ಪ್ರಕಾರ ಹೀಗೆ ಶಿವಲಿಂಗದ ಪೂಜೆ ಪ್ರಾರಂಭವಾಯಿತು.
ಶಿವಲಿಂಗವನ್ನು ಪೂಜಿಸುವ ಸ್ಥಳವು ತೀರ್ಥಯಾತ್ರೆಯ ಸ್ಥಳವಾಗುತ್ತದೆ ಎಂದು ನಂಬಲಾಗಿದೆ. ಶಿವಲಿಂಗವನ್ನು ಪೂಜಿಸುವ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸತ್ತರೆ, ಅವನು ಶಿವಲೋಕವನ್ನು ಪಡೆಯುತ್ತಾನೆ. ಶಿವನೆಂಬ ಪದವನ್ನು ಜಪಿಸುವುದರಿಂದ ಎಲ್ಲಾ ಪಾಪಗಳು ದೂರವಾಗುತ್ತವೆ ಎಂಬ ನಂಬಿಕೆ ಪುರಾಣಗಳಲ್ಲಿದೆ.
ಮಹಾಶಿವರಾತ್ರಿ ಆಚರಣೆ ಹೇಗೆ?
ಮಹಾಶಿವರಾತ್ರಿಯನ್ನು ದೇವಾಲಯಗಳಲ್ಲಿ ಅಷ್ಟೇ ಅಲ್ಲದೇ ಮನೆಯಲ್ಲಿಯೂ ಸರಳವಾಗಿ ಆಚರಣೆ ಮಾಡಬಹುದಾಗಿದೆ. ಮಹಾಶಿವರಾತ್ರಿಯ ದಿನದಂದು ಸಾಧ್ಯವಿರುವವರು ಉಪವಾಸ ವ್ರತ ಕೈಗೊಳ್ಳುತ್ತಾರೆ. ಪ್ರಾತಃಕಾಲ ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಿ ಶುಭ್ರವಾದ ಶ್ವೇತ ವಸ್ತ್ರ ಧರಿಸಿ ಶಿವನ ಪೂಜೆಯಲ್ಲಿ ತೊಡಗಬಹುದಾಗಿದೆ. ಶಿವಲಿಂಗಕ್ಕೆ ಹಾಲು, ಬಿಲ್ವಪತ್ರೆ, ಶ್ರೀಗಂಧ, ತುಪ್ಪ, ಸಕ್ಕರೆ ಮತ್ತು ಇತರ ವಸ್ತುಗಳನ್ನು ಅರ್ಪಿಸಿ ಪೂಜೆ ಮಾಡುವ ಕ್ರಮ ಹಲವೆಡೆ ಕಾಣಬಹುದಾಗಿದೆ.
ಮಹಾಶಿವರಾತ್ರಿಯ ದಿನದಂದು ಶಿವನನ್ನು ಆರಾಧಿಸುವವರು ದಿನವಿಡೀ ಉಪವಾಸ ಇರುತ್ತಾರೆ. ಇದು ಮಹಿಳೆಯರಿಗೆ ಅತ್ಯಂತ ವಿಶೇಷವಾದ ಹಬ್ಬವಾಗಿದೆ. ವಿವಾಹಿತ ಮಹಿಳೆಯರು ಈ ದಿನದಂದು ಶಿವನ ಬಳಿಯಲ್ಲಿ ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಅವಿವಾಹಿತೆಯರು ಭವಿಷ್ಯದಲ್ಲಿ ತಮಗೆ ಶಿವನಂತಹ ಪತಿ ಸಿಗಲಿ ಎಂದು ಬೇಡಿಕೊಳ್ಳುತ್ತಾರೆ.
ಮಹಾಶಿವರಾತ್ರಿಯಂದು ದೇಗುಲಗಳಲ್ಲಿ ವಿವಿಧ ಆಚರಣೆಗಳನ್ನು ಮಾಡಲಾಗುತ್ತದೆ. ಶಿವನು ಅಭಿಷೇಕಪ್ರಿಯನಾದ್ದರಿಂದ ನಾನಾ ಅಭಿಷೇಕ ಮಾಡಲಾಗುತ್ತದೆ. ಹಾಲು, ಜೇನುತುಪ್ಪ, ಹೂವುಗಳು ಹಾಗೂ ಬಿಲ್ವ ಪತ್ರೆಯನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಈ ದಿನ ಶಿವನ ಭಕ್ತರು ಏನನ್ನೂ ತಿನ್ನುವುದು ಅಥವಾ ಕುಡಿಯುವುದು ಮಾಡುವುದಿಲ್ಲ. ಕೆಲವರು ರಾತ್ರಿಯಿಡೀ ಜಾಗರಣೆಯಿದ್ದು ಶಿವನ ಧ್ಯಾನ ಮಾಡುತ್ತಿರುತ್ತಾರೆ. ಈ ದಿನ ಶಿವನ ದೇಗುಲ ಕಿಕ್ಕಿರಿದು ತುಂಬಿರುತ್ತದೆ. ಮಹಾ ಮೃತ್ಯುಂಜಯ ಮಂತ್ರ ಹಾಗೂ ಶಿವ ತಾಂಡವ ಸ್ತೋತ್ರದಂತಹ ಮಂತ್ರಗಳನ್ನು ಪಠಿಸುವ ಮೂಲಕ ಮಹಾದೇವನ ಕೃಪೆಗೆ ಭಕ್ತರು ಪಾತ್ರರಾಗುತ್ತಾರೆ.