ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಮಹಾಶಿವರಾತ್ರಿ ಕೂಡ ಒಂದು. ಮಹಾಶಿವರಾತ್ರಿ ಹಬ್ಬಕ್ಕೆ ತನ್ನದೇ ಆದ ಮಹತ್ವವಿದೆ. ಈ ದಿನ ಶಿವನ ಆರಾಧನೆಯನ್ನು ಮಾಡುವುದರಿಂದ ಕಷ್ಟಗಳೆಲ್ಲಾ ದೂರ ಆಗಿ ಸುಖ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಅಲ್ಲದೇ ಶಿವರಾತ್ರಿಯಂದು ಭಕ್ತಿಯಿಂದ ಶಿವನನ್ನು ಸ್ಮರಿಸುವುದರಿಂದ ಶಿವನ ಪ್ರೀತಿಗೆ ಪಾತ್ರರಾಗುತ್ತಾರೆ ಎಂದು ನಂಬಲಾಗಿದೆ. ಇಷ್ಟು ಮಾತ್ರವಲ್ಲದೇ ಶಿವರಾತ್ರಿಯಲ್ಲಿ ಜಾಗರಣೆ ಪ್ರಮುಖ ಪಾತ್ರವನ್ನು ವಹಿಸಿದೆ. ರಾತ್ರಿಯಿಡೀ ನಿದ್ದೆ ಮಾಡದೇ ಶಿವಧ್ಯಾನ ಮಾಡುವುದು ಶಿವರಾತ್ರಿಯ ವಿಶೇಷ. ಹಾಗಿದ್ರೆ ಮಹಾಶಿವರಾತ್ರಿಯ ಹಿಂದಿರುವ ಕಥೆಯೇನು? ಈ ದಿನದಂದು ಜಾಗರಣೆ ಏಕೆ ಮಾಡುತ್ತಾರೆ ಎಂಬುದರ ಕುರಿತು ಸಣ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಶಿವರಾತ್ರಿಯಂದು ನಡುರಾತ್ರಿ ಕೋಟಿ ಸೂರ್ಯ ಪ್ರಕಾಶನಾದ ಪರಶಿವ ಶಿವಲಿಂಗದಿಂದ ಸ್ವಯಂಭೂವಾಗಿ ಉದ್ಭವಿಸಿದನೆಂದು ಹೇಳಲಾಗುತ್ತದೆ. ಇದಲ್ಲದೇ ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಶಿವ ತಾಂಡವ ನೃತ್ಯ ಮಾಡಿದ ದಿನ ಇದಾಗಿದೆ ಎಂದು ಹೇಳುತ್ತಾರೆ. ಅಂದು ಶಿವಾಲಯಗಳಲ್ಲಿ, ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ, ಗೋಕರ್ಣ, ಯಾಣ, ಕಾಶಿ, ರಾಮೇಶ್ವರ ಮುಂತಾದ ತೀರ್ಥಕ್ಷೇತ್ರಗಳಲ್ಲಿ ಜನರು ವಿಶೇಷ ಪೂಜೆ ಸಲ್ಲಿಸುತ್ತಾರೆ. ಶಿವನ ಕಲ್ಪನೆ ಋಗ್ವೇದದಷ್ಟು ಪುರಾತನವಾದದ್ದು. ಸ್ಕಂದ, ಪದ್ಮ, ಗರುಡ ಪುರಾಣಗಳಲ್ಲಿ ಮಹಾಶಿವರಾತ್ರಿಯ ಉಲ್ಲೇಖವಿದೆ. ಈ ದಿನ ಬೇಡರ ಕಣ್ಣಪ್ಪ ಎಂಬ ಭಕ್ತ ಅರಿವಿಲ್ಲದೆ ಶಿವನನ್ನು ಅರ್ಚಿಸಿದ ಎಂಬ ಕಥೆಯೂ ಇದೆ.
Advertisement
Advertisement
ಶಿವ- ಪಾರ್ವತಿ ಮದುವೆಯಾದ ದಿನ:
ಕೈಲಾಸ ವಾಸ ಶಿವ ಮತ್ತು ಪಾರ್ವತಿ ದೇವಿ ಮಹಾಶಿವರಾತ್ರಿಯ ದಿನದಂದು ವಿವಾಹವಾದರು ಎಂಬ ನಂಬಿಕೆ ಇದೆ. ಈ ದಿನದಂದು ಭಜನೆ-ಕೀರ್ತನೆ ಹಾಗೂ ರಾತ್ರಿ ಜಾಗರಣೆ ಮಾಡುವ ಮೂಲಕ ಈಶ್ವರ ಮತ್ತು ತಾಯಿ ಪಾರ್ವತಿಯ ಆರಾಧನೆಯನ್ನು ಮಾಡಬೇಕು. ಮಹಾಶಿವರಾತ್ರಿಯನ್ನು ನಿಯಮಬದ್ಧ ಆಚರಣೆ ಮೂಲಕ ಪೂರ್ಣ ಭಕ್ತಿಯಿಂದ ಆಚರಿಸಿದರೆ ಶಿವನು ಪ್ರಸನ್ನನಾಗುತ್ತಾನೆ ಎಂಬ ನಂಬಿಕೆ ಇದೆ.
Advertisement
ಶಿವನು ಸಾಮಾನ್ಯವಾಗಿ ಭಾವಪರವಶನಾದ ಸ್ಥಿತಿಯಲ್ಲಿ ಇರುತ್ತಿದ್ದನು. ಇದರಿಂದಾಗಿ ಪಾರ್ವತಿಯು ಅವನತ್ತ ಆಕರ್ಷಿತಳಾದಳು. ಅವಳು ಶಿವನನ್ನು ತನ್ನತ್ತ ಸಳೆಯಲು ಸಾಕಷ್ಟು ಉಪಾಯಗಳನ್ನು ಮಾಡಿ, ಹಲವಾರು ರೀತಿಯ ಸಹಾಯಗಳನ್ನು ಪಡೆದುಕೊಂಡ ನಂತರ ಅವರಿಬ್ಬರು ಮದುವೆಯಾದರು.
Advertisement
ವೈಜ್ಞಾನಿಕ ಕಾರಣವೂ ಇದೆ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಹಾಶಿವರಾತ್ರಿಯ ರಾತ್ರಿ ಗ್ರಹಗಳ ಕೇಂದ್ರ ಬಲವು ವಿಶೇಷ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಬಲವು ಮೇಲಕ್ಕೆ ಚಲಿಸುತ್ತದೆ. ಇದರಿಂದಾಗಿ ನಮ್ಮ ದೇಹದ ಶಕ್ತಿಯು ಸ್ವಾಭಾವಿಕವಾಗಿ ಮೇಲಕ್ಕೆ ಹರಿಯುತ್ತದೆ. ಇದರಿಂದಾಗಿ ವ್ಯಕ್ತಿಯು ಆಧ್ಯಾತ್ಮಿಕ ಉತ್ತುಂಗದ ಕಡೆಗೆ ಸಾಗುತ್ತಾನೆ. ಇದರಿಂದ ದೈವಿಕತೆಯೊಂದಿಗೆ ಸಂಪರ್ಕ ಹೊಂದುತ್ತಾನೆ. ಈ ಕಾರಣಕ್ಕಾಗಿ, ಮಹಾಶಿವರಾತ್ರಿಯ ದಿನ, ಬೆನ್ನುಮೂಳೆಯನ್ನು ನೇರವಾಗಿಟ್ಟುಕೊಂಡು ಕುಳಿತು ಧ್ಯಾನ ಮಾಡಲು ಹೇಳಲಾಗುತ್ತದೆ.
ಶಿವರಾತ್ರಿಯಂದು ಮುಕ್ಕಣ್ಣನನ್ನು ಪೂಜಿಸಿ ಜಾಗರಣೆ ಮಾಡುವುದಕ್ಕೂ ಅರ್ಥವಿದೆ. ಮಧ್ಯರಾತ್ರಿಯಲ್ಲಿ ಶಿವನಿಗೂ ಪಾರ್ವತಿಗೂ ಕಲ್ಯಾಣವಾಯಿತು. ಈ ವಿವಾಹಕ್ಕೆ ಮೂರು ಲೋಕಗಳು ಅಂದು ಜಾಗರಣೆ ಮಾಡಿರುತ್ತವೆ. ಈ ಕಾರಣದಿಂದ ಅಂದು ನಿದ್ರೆ ಮಾಡದೆ ಶಿವರಾತ್ರಿ ಜಾಗರಣೆ ಮಾಡಬೇಕೆಂದು ಹೇಳಲಾಗುತ್ತದೆ. ಇದಲ್ಲದೆ, ವರ್ಷಕಾಲ ನಮ್ಮನ್ನು ಕಾಯುವ ಶಿವನಿಗೆ ಒಂದು ದಿನವಾದರೂ ಆತನನ್ನು ನಾವು ಕಾಯಬೇಕು. ಶಿವರಾತ್ರಿಯಂದು ಶಿವನು ಭಕ್ತರನ್ನು ಹರಸುವುದಕ್ಕಾಗಿ ಕೈಲಾಸ ಲೋಕದಿಂದ ಭೂಲೋಕಕ್ಕೆ ಬರುವುದರಿಂದ ಆತನನ್ನು ಭಕ್ತಿ ಭಾವದಿಂದ, ಹೃದಯಪೂರ್ವಕವಾಗಿ ಸ್ವಾಗತಿಸಬೇಕಂತಲೂ ಹೇಳಲಾಗುತ್ತದೆ.
ಶಿವರಾತ್ರಿ ಜಾಗರಣೆಯನ್ನು ಪ್ರಾರ್ಥನೆ ಹಾಗೂ ಧ್ಯಾನದ ಮುಖಾಂತರ ಮಾಡಬೇಕು. ಶಿವರಾತ್ರಿಯಂದು ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಶಿವನ ಕಡೆಗೆ ಕೊಂಡೊಯ್ಯಬೇಕು. ಅಲ್ಲದೆ ಅವನ ಸಾನ್ನಿಧ್ಯವನ್ನು ಅನುಭವಿಸಬೇಕು. ನಾವು ಯಾವಾಗ ನಮ್ಮ ಮನಸ್ಸು ಹಾಗೂ ಆತ್ಮವನ್ನು ಶಿವನ ಪಾದಗಳಿಗೆ ಸಮರ್ಪಿಸುತ್ತೇವೆಯೋ ಆಗ ನಮಗೆ ಎಲ್ಲೆಡೆ ಶಿವನ ದರ್ಶನವಾಗುತ್ತದೆ. ʼಸರ್ವಂ ಶಿವ ಮಯಂʼ ಎಂಬುದೇ ಶಿವರಾತ್ರಿ ಆಚರಣೆಯ ನಿಜವಾದ ಅರ್ಥ. ಒಂದು ಶಿವರಾತ್ರಿ ವ್ರತವನ್ನು ಆಚರಿಸಿದರೆ, ಸಾವಿರ ಏಕಾದಶಿ ವ್ರತಗಳು ಆಚರಿಸಿದಷ್ಟು ಫಲಗಳು ಹಾಗೂ ಕಾಶಿಯಲ್ಲಿ ಮುಕ್ತಿ ಪಡೆದ ಪುಣ್ಯ ಫಲಗಳು ಸಿಗುತ್ತದೆಂದು ಶಿವ ಪುರಾಣದಲ್ಲಿ ಹೇಳಲಾಗಿದೆ.
ಶಿವನ ಆರಾಧನೆ ವೇದಗಳ ಕಾಲದಿಂದಲೂ ಇದೆ. ಪ್ರತಿ ತಿಂಗಳ ಕೃಷ್ಣಪಕ್ಷದ ಚತುರ್ದಶಿ ತಿಥಿಗೆ ʼಮಾಸ ಶಿವರಾತ್ರಿʼ ಎಂಬ ಹೆಸರಿದ್ದು, ಮಾಘ ಮಾಸದ ಶಿವರಾತ್ರಿ ʼಮಹಾಶಿವರಾತ್ರಿʼಯಾಗಿದೆ. ಈ ದಿನ ರಾತ್ರಿಯಿಡೀ ಎಚ್ಚರವಿದ್ದು ʼಓಂ ನಮಃ ಶಿವಾಯʼ ಎಂಬ ಮೂಲಮಂತ್ರವನ್ನು ಜಪಿಸುತ್ತಾರೆ. ಶಿವರಾತ್ರಿಯಂದು ಶಿವಲಿಂಗದರ್ಶನ ಮಾಡುವುದರಿಂದ ವಿಶೇಷ ಪುಣ್ಯಫಲ ಲಭಿಸುತ್ತದೆ. ಈ ದಿನ ಶಿವನಿಗೆ ಇಷ್ಟವಾದ ಆಹಾರ ಹಾಗೂ ಶಿವನಿಗೆ ಅತ್ಯಂತ ಪ್ರಿಯವಾದ ಬಿಲ್ವಪತ್ರೆಯನ್ನು ಸಮರ್ಪಿಸಲಾಗುತ್ತದೆ.
ಇದಲ್ಲದೇ, ಭಗೀರಥನ ತಪಸ್ಸಿಗೆ ಮೆಚ್ಚಿ ಭೂಮಿಗೆ ಇಳಿದು ಬಂದ ಗಂಗೆಯ ರಭಸವನ್ನು ತಡೆಯಲು ಶಿವ ತನ್ನ ಜಡೆಯಲ್ಲಿ ಗಂಗೆಯನ್ನು ಹಿಡಿದುಕೊಳ್ಳುತ್ತಾನೆ. ಇಲ್ಲದಿದ್ದರೆ ಗಂಗೆಯ ರಭಸಕ್ಕೆ ಇಡೀ ಭೂಲೋಕ ಕೊಚ್ಚಿ ಹೋಗುತ್ತಿತ್ತು. ಶಿವ ಗಂಗೆಯನ್ನು ಹಿಡಿದುಕೊಂಡಿದ್ದು ಕಂಡ ಭಗೀರಥ ಸ್ವಲ್ಪ ಚಿಂತೆಗೆ ಒಳಗಾಗುತ್ತಾನೆ. ಕೊನೆಗೆ ಗಂಗೆಯನ್ನು ಭೂಮಿಗೆ ಹರಿದು ಬಿಡುವಂತೆ ಶಿವನನ್ನು ಬೇಡಿಕೊಳ್ಳುತ್ತಾನೆ. ಭಗೀರಥನ ಭಕ್ತಿಗೆ ಮೆಚ್ಚಿದ ಶಿವ ತನ್ನ ಜಡೆಯಲ್ಲಿದ್ದ ಗಂಗೆಯನ್ನು ಹರಿದು ಬಿಡುತ್ತಾನೆ. ಈ ದಿನವನ್ನೇ ಪುರಾಣಗಳ ಪ್ರಕಾರ ಶಿವರಾತ್ರಿ ಹಬ್ಬ ಎಂದು ಆಚರಿಸಲಾಗುತ್ತದೆ.