ಹೋಳಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಇದನ್ನು ದೇಶಾದ್ಯಂತ ಬಹಳ ಆಡಂಬರದಿಂದ ಆಚರಿಸಲಾಗುತ್ತದೆ. ಹೋಳಿ ಹಬ್ಬ ಬಣ್ಣಗಳಿಂದ ಕೂಡಿರುವುದರಿಂದ ಎಲ್ಲರೂ ಪ್ರೀತಿಸುತ್ತಾರೆ. ಈ ಬಣ್ಣದ ಹಬ್ಬವು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಅಚ್ಚುಮೆಚ್ಚು. ಹಾಗಾಗಿ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ.
ಬಣ್ಣಗಳ ಹಬ್ಬ ಎಂದೂ ಕರೆಯಲ್ಪಡುವ ಹೋಳಿಯನ್ನು ಸಾಂಪ್ರದಾಯಿಕವಾಗಿ ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಆಚರಿಸಲಾಗುತ್ತದೆ. ಹೋಳಿಯು ವಸಂತಕಾಲದ ಆಗಮನ ಮತ್ತು ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ. ಇದು ಹಿಂದೂ ತಿಂಗಳ ಫಾಲ್ಗುಣದೊಂದಿಗೆ ಸಂಬಂಧವನ್ನು ಹೊಂದಿದೆ. ಈ ದಿನ ಜನರು ತಮ್ಮ ದುಃಖ, ನೋವುಗಳನ್ನು ಮರೆತು ಎಲ್ಲರೂ ಒಂದಾಗಿ ಬಣ್ಣಗಳಿಂದ ಹೋಳಿಯನ್ನು ಸಂಭ್ರಮಿಸುತ್ತಾರೆ.
ಹೋಳಿ ಹಬ್ಬವನ್ನು ಆಚರಿಸುವುದರಿಂದ ವಿವಿಧ ಭಯಗಳನ್ನು ದೂರ ಮಾಡಬಹುದು ಎಂಬ ನಂಬಿಕೆಯಿದೆ. ಹೋಳಿ ಹಬ್ಬದ ದಿನದಂದು ಬೆಳಿಗ್ಗೆ, ಜನರು ತೆರೆದ ಸ್ಥಳಗಳು, ಉದ್ಯಾನವನಗಳು ಮತ್ತು ಬೀದಿಗಳಲ್ಲಿ ಸ್ನೇಹಿತರನ್ನು, ಪ್ರೀತಿ ಪಾತ್ರರನ್ನು ಭೇಟಿ ಮಾಡುವ ಮೂಲಕ ಬಣ್ಣವನ್ನು ಎರಚಿಕೊಳ್ಳುತ್ತಾರೆ. ಹೋಳಿ ಹಬ್ಬದ ಪ್ರಮುಖ ಅಂಶವೆಂದರೆ ಅದು ಸೌಹಾರ್ದತೆಯಾಗಿದೆ. ಈ ದಿನದಂದು, ಎಲ್ಲಾ ವರ್ಗದ ಜನರು ಆಚರಣೆಗಳಲ್ಲಿ ಸೇರುವುದರಿಂದ ಸಾಮಾಜಿಕ ಅಡೆತಡೆಗಳು ದೂರಾಗುತ್ತದೆ. ಪ್ರೀತಿಯು ಪರಸ್ಪರ ಹೆಚ್ಚಾಗುತ್ತದೆ. ಅಪರಿಚಿತರು ಸ್ನೇಹಿತರಾಗುತ್ತಾರೆ. ಉತ್ತರ ಭಾರತದಲ್ಲಿ ಹೋಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಹೋಳಿ ಹಬ್ಬದ ದಿನ ಬಣ್ಣಗಳ ಆಟ ಮಾತ್ರವಲ್ಲದೇ ವಿಶೇಷ ಖಾದ್ಯಗಳನ್ನೂ ತಯಾರಿಸಲಾಗುತ್ತದೆ. ಮಥುರಾ ಮತ್ತು ವೃಂದಾವನದಂತಹ ಸ್ಥಳಗಳಲ್ಲಿ, ಈ ಹಬ್ಬವನ್ನು ಭಗವಾನ್ ಕೃಷ್ಣ ಮತ್ತು ರಾಧೆಯ ನಡುವಿನ ಪ್ರೀತಿಯ ಸಂಕೇತವಾಗಿಯೂ ಆಚರಿಸಲಾಗುತ್ತದೆ.
ಹೋಳಿ ಹಬ್ಬದ ಮೊದಲ ದಿನದಂದು ಪೂಜೆಯನ್ನು ಮಾಡಲಾಗುತ್ತದೆ, ಕಟ್ಟಿಗೆಗಳ ರಾಶಿಯನ್ನು ಸುಡಲಾಗುತ್ತದೆ. ಇದನ್ನು ಕೆಡುಕಿನ ಮೇಲೆ ಒಳಿತಿನ ವಿಜಯದ ಸಂಕೇತವಾಗಿ ಸುಡಲಾಗುತ್ತದೆ. ಹೋಳಿ ಪೂಜೆಯನ್ನು ಮಾಡಲು ಹಸಿ ಹತ್ತಿ ದಾರ, ತೆಂಗಿನಕಾಯಿ, ಗುಲಾಬಿ ಪುಡಿ, ಸಿಂಧೂರ, ಅಕ್ಷತೆ, ಧೂಪ ಮತ್ತು ಹೂವುಗಳು, ಬತಾಶೆ, ಅರಿಶಿನ ಮತ್ತು ನೀರು ಅವಶ್ಯಕವಾಗಿರುತ್ತದೆ.
ಹೋಲಿಕಾ ದಹನ ಹಿಂದಿನ ಕಥೆ ಏನು?
ಹೋಲಿಕಾ ದಹನ ಕಥೆಯು ವಿಷ್ಣುವಿನ ಭಕ್ತನಾದ ಪ್ರಹ್ಲಾದನಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ದಂತಕಥೆಯ ಪ್ರಕಾರ, ಪ್ರಹ್ಲಾದನ ತಂದೆ ರಾಕ್ಷಸ ರಾಜ ಹಿರಣ್ಯಕಶ್ಯಪ, ವಿಷ್ಣುವಿನ ಅತಿದೊಡ್ಡ ಶತ್ರು ಎಂದು ಪರಿಗಣಿಸಲ್ಪಟ್ಟಿದ್ದ ಮತ್ತು ತನ್ನನ್ನು ತಾನು ದೇವರೆಂದು ಪರಿಗಣಿಸಿಕೊಂಡಿದ್ದ. ಅವನು ತನ್ನ ರಾಜ್ಯದಲ್ಲಿ ಎಲ್ಲರೂ ದೇವರನ್ನು ಯಾರೂ ಆರಾಧಿಸಬಾರದು ಎಂದು ಆಜ್ಞಾಪಿಸಿದ್ದನು. ಆದರೆ ಅವನ ಮಗ ಪ್ರಹ್ಲಾದನು ವಿಷ್ಣುವಿನ ಮಹಾನ್ ಭಕ್ತನಾಗಿದ್ದನು. ತನ್ನ ಮಗ ದೇವರನ್ನು ಪೂಜಿಸುತ್ತಿರುವುದನ್ನು ಕಂಡ ಹಿರಣ್ಯಕಶಿಪು ತನ್ನ ಸ್ವಂತ ಮಗನನ್ನೇ ಶಿಕ್ಷಿಸಲು ನಿರ್ಧರಿಸಿದನು. ಹಿರಣ್ಯಕಶ್ಯಪು ಪ್ರಹ್ಲಾದನಿಗೆ ಹಲವು ಬಾರಿ ತೊಂದರೆ ನೀಡಲು ಪ್ರಯತ್ನಿಸಿದನು, ಆದರೆ ಯಾವುದೂ ಸಾಧ್ಯವಾಗಲಿಲ್ಲ.
ಕೊನೆಗೆ ರಾಜ ಹಿರಣ್ಯಕಶ್ಯಪು ತನ್ನ ಸಹೋದರಿ ಹೋಲಿಕಾಳ ಸಹಾಯ ಕೇಳಿದ. ಹೋಲಿಕಾಗೆ ಬೆಂಕಿ ತನ್ನನ್ನು ಸುಡುವುದಿಲ್ಲ ಎಂಬ ವರವಿತ್ತು, ಆದ್ದರಿಂದ ಹೋಲಿಕಾ ಪ್ರಹ್ಲಾದನನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಬೆಂಕಿಯಲ್ಲಿ ಕುಳಿತಳು. ಆದರೆ ವಿಷ್ಣುವಿನ ಕೃಪೆಯಿಂದ ಹೋಲಿಕಾ ಆ ಬೆಂಕಿಯಲ್ಲಿ ಸುಟ್ಟುಹೋದಳು ಮತ್ತು ಪ್ರಹ್ಲಾದನು ಬದುಕುಳಿದನು. ಅಂದಿನಿಂದ ಹೋಲಿಕಾ ದಹನ ಹಬ್ಬವನ್ನು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವೆಂದು ಆಚರಿಸಲಾಗುತ್ತದೆ. ಹೋಲಿಕಾ ದಹನದ ಮರುದಿನ ಬಣ್ಣಗಳ ಹಬ್ಬ ಹೋಳಿಯನ್ನು ಆಚರಿಸಲಾಗುತ್ತದೆ.
‘ಹೋಲಿಕಾ ದಹನ’ ಪೂಜೆಯನ್ನು ಮಾಡುವುದಕ್ಕಾಗಿ, ಕಟ್ಟಿಗೆ ರಾಶಿಯ ಸುತ್ತಲೂ ಮೂರು ಅಥವಾ ಏಳು ಸುತ್ತಿ ಹತ್ತಿ ದಾರವನ್ನು ಸುತ್ತಲಾಗುತ್ತದೆ. ಇದರ ನಂತರ, ಗಂಗಾಜಲ, ಹೂವು ಮತ್ತು ಸಿಂಧೂರವನ್ನು ಇದರ ಮೇಲೆ ಚಿಮುಕಿಸಲಾಗುತ್ತದೆ. ನಂತರ ಜಪಮಾಲೆ, ಕುಂಕುಮ, ಅಕ್ಷತೆ, ಬತಾಶೆ, ಅರಿಶಿನ, ಗುಲಾಬಿ ಬಣ್ಣ ಮತ್ತು ತೆಂಗಿನಕಾಯಿ ಬಳಸಿ, ರಚನೆಯನ್ನು ಪೂಜಿಸಲಾಗುತ್ತದೆ.
ಹೋಳಿ ಹಬ್ಬದಂದು ಬಿಳಿ ಬಟ್ಟೆಯನ್ನೇ ಧರಿಸುವುದೇಕೆ?
ಹೋಳಿಯಾಡುವಾಗ ಬಿಳಿ ಬಣ್ಣದ ಬಟ್ಟೆಯನ್ನೇ ಹೆಚ್ಚಾಗಿ ಧರಿಸುತ್ತಾರೆ. ಬೇರೆ ದಿನಗಳಲ್ಲಿ ಬಣ್ಣ ತಾಕಿದರೆ ಬಟ್ಟೆ ಹಾಳಾಗುತ್ತದೆ ಎಂದು ಭಾವಿಸಿದರೂ ಹೋಳಿಯಲ್ಲಿ ಬೇಕಂತಲೇ ಬಿಳಿ ಬಣ್ಣದ ಬಟ್ಟೆ ಧರಿಸಿ ಹೋಳಿಯಾಡಿ ಸಂಭ್ರವಿಸುತ್ತಾರೆ. ಆದರೆ ಹೋಳಿ ಸಂದರ್ಭ ಬಿಳಿ ಬಣ್ಣದ ಬಟ್ಟೆ ಧರಿಸುವುದರ ಹಿಂದಿದೆ ಹಲವು ಧಾರ್ಮಿಕ ಕಾರಣಗಳು.
ಬಿಳಿ ಬಟ್ಟೆಯ ಮೇಲೆ ಹಸಿರು, ಕೆಂಪು, ಗುಲಾಬಿ, ನೀಲಿ ಮತ್ತು ಹಳದಿ ಬಣ್ಣಗಳು ವಿಶೇಷವಾಗಿ ಕಾಣುತ್ತವೆ. ಅಷ್ಟೇ ಅಲ್ಲ, ಹೋಳಿ ಹಬ್ಬ ಬರುವುದು ಬೇಸಿಗೆ ಕಾಲದಲ್ಲಿ. ಈ ಸಮಯದಲ್ಲಿ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿರುತ್ತದೆ. ದೇಹವನ್ನು ಶಾಖದಿಂದ ರಕ್ಷಿಸಲು ಮತ್ತು ಆರಾಮದಾಯಕವಾಗಿರಲು ಬಿಳಿ ಬಟ್ಟೆಗಳನ್ನು ಧರಿಸಲಾಗುತ್ತದೆ ಎಂಬುದು ಎಂದು ವಿಚಾರ.
ಹೋಳಿ ಪ್ರೀತಿ ಹಂಚುವ ಹಬ್ಬವಾಗಿದೆ. ಹೋಳಿಯ ದಿನ ಜನರು ಪರಸ್ಪರ ದ್ವೇಷವನ್ನು ಮರೆತು ಪ್ರೀತಿಯಿಂದ, ಸಂತೋಷ ಹಂಚುತ್ತಾ ಈ ಹಬ್ಬವನ್ನು ಒಟ್ಟಿಗೆ ಆಚರಿಸುತ್ತಾರೆ. ಅಲ್ಲದೆ ಬಿಳಿ ಬಣ್ಣವನ್ನು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ, ಜನರು ಹೋಳಿ ಆಡುವಾಗ ಬಿಳಿ ಬಟ್ಟೆಗಳನ್ನು ಧರಿಸುತ್ತಾರೆ.