ಬೆಂಗಳೂರು: ವಿದೇಶ ಪ್ರವಾಸಕ್ಕೆ ತೆರಳಿ ಬೆಂಗಳೂರಿಗೆ ಮರಳಿದ ಬೆನ್ನಲ್ಲೇ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ (HD Kumaraswamy) ಮತ್ತೊಮ್ಮೆ ವೈಎಸ್‍ಟಿ ಟ್ಯಾಕ್ಸ್ (YST Tax) ಬಾಂಬ್ ಸಿಡಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ವರ್ಗಾವಣೆ ಕುರಿತ ಸಭೆಯಲ್ಲಿ ವೈಎಸ್‌ವಿ ಟ್ಯಾಕ್ಸ್‌ನವರಿಗೆ ಏನು ಕೆಲಸ ಎಂದು ಪ್ರಶ್ನಿಸಿದ್ದಾರೆ.
ಮಾಧ್ಯಮಗಳ ಜೊತೆ ರಾತ್ರಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಜೆಡಿಎಸ್ 19 ಸ್ಥಾನ ಗೆದ್ದರೂ ಅವರಿಗೆ ನಮ್ಮ ಭಯ ಎಷ್ಟಿದೆ ಎಂಬುದನ್ನು ನಾವು ಕಾಣಬಹುದು. ನಾನು ವಿದೇಶದಲ್ಲಿದ್ದರೂ ಪ್ರತಿನಿತ್ಯದ ಬೆಳವಣಿಗೆಗಳನ್ನು ಗಮನಿಸಿದ್ದೇವೆ. ಗೃಹ ಇಲಾಖೆಯಲ್ಲಿ ಯಾವ ರೀತಿ ವರ್ಗಾವಣೆ ದಂಧೆ ನಡೆಯಿತು. ಪೊಲೀಸ್ ಅಧಿಕಾರಿಗಳನ್ನು ಆ ಮಟ್ಟಿಗೆ ಬಳಸಿಕೊಂಡರೆ ಪೊಲೀಸರು ಜನ ಸಾಮಾನ್ಯರಿಗೆ ಯಾವ ಮಟ್ಟದ ರಕ್ಷಣೆ ನೀಡಬಹುದು? ಗರುಡಾ ಮಾಲ್ ಬಳಿಯ ಪೊಲೀಸ್ ಮೆಸ್‌ನಲ್ಲಿ ಸಭೆ ನಡೆಯಬೇಕಾದರೆ ಯಾರು ಇದ್ದರು? ವೈಎಸ್‌ಟಿ ಟ್ಯಾಕ್ಸ್‌ನವರು ಅಲ್ಲೇ ಇದ್ದರು ಆಲ್ವಾ? ಅಧಿಕಾರಿಗಳ ವರ್ಗಾವಣೆ ಬಗ್ಗೆ ಮುಖ್ಯಮಂತ್ರಿಗಳು, ಗೃಹ ಸಚಿವರು ಚರ್ಚೆ ಮಾಡುವಾಗ ವೈಎಸ್‌ಟಿ ಟ್ಯಾಕ್ಸ್‌ನವರು ಯಾಕೆ ಇದ್ದರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಲೋಕಸಭೆಯಲ್ಲಿ ದೆಹಲಿ ಸೇವಾ ಮಸೂದೆ ಅಂಗೀಕಾರ – ಆಪ್‌ಗೆ ಭಾರೀ ಹಿನ್ನಡೆ
Advertisement
Advertisement
ವೈಎಸ್‌ವಿ ಅವರನ್ನು ಇಟ್ಟುಕೊಂಡು ಚರ್ಚೆ ಮಾಡಿದರೆ ಈ ಆಡಳಿತ ಎಲ್ಲಿಗೆ ಬಂತು? ವರ್ಗಾವಣೆ ಮಾಡಿ ಅದನ್ನು ಮತ್ತೆ ವಾಪಸ್ ಪಡೆದುಕೊಂಡರು. ಈಗ ರಿಪೋರ್ಟ್ ಕಾರ್ಡ್ ಬಿಡಲು 32 ಸಚಿವರನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದಾರೆ. ರಿಪೋರ್ಟ್ ಕಾರ್ಡ್ ಅನ್ನು ಜನತೆ ಮುಂದೆ ಬಿಡಬೇಕು. ಹೈಕಮಾಂಡ್ ಮುಂದೆ ಅಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
ಸದ್ಯಕ್ಕೆ ಪೆನ್ ಡ್ರೈವ್ ಬಿಡುಗಡೆ ಮಾಡುವುದಿಲ್ಲ ಎಂದ ಅವರು, ಕಾಂಗ್ರೆಸ್ ಶಾಸಕರೇ (Congress MLAs) ಅಭಿವೃದ್ಧಿಗೆ ದುಡ್ಡಿಲ್ಲ ಎಂದು ಹೇಳುತ್ತಿದ್ದಾರೆ. 72 ಸಾವಿರ ಕೋಟಿ ರೂ.ಸಾಲ ಮಾಡಿಕೊಂಡಿದ್ದಾರೆ. ಈ ವರ್ಷವೇ ಎಲ್ಲಾ ಗ್ಯಾರಂಟಿ ನೀಡುತ್ತೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕರ್ನಾಟಕದಲ್ಲಿ YST ಜೊತೆ VST ಟ್ಯಾಕ್ಸ್ , ಇದು VST ಸರ್ಕಾರ: ರವಿಕುಮಾರ್ ಕಿಡಿ
Advertisement
ಸರ್ಕಾರ ಪತನಕ್ಕೆ ಸಿಂಗಾಪುರಕ್ಕೆ ಹೋಗಿ ಷಡ್ಯಂತ್ರ ಮಾಡಲಾಗುತ್ತಿದೆ ಎಂದಿದ್ದ ಡಿಕೆ ಶಿವಕುಮಾರ್ (DK Shivakumar) ಹೇಳಿಕೆಗೆ, ರಾಜ್ಯ ಪೊಲೀಸ್ ಇಲಾಖೆಯ ಗುಪ್ತಚರ ಇಲಾಖೆ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದು ಗೊತ್ತಾಗುತ್ತಿದೆ. ನಾವು ಕುಟುಂಬ ಸಮೇತ ಯುರೋಪ್ ದೇಶಗಳಿಗೆ ಹೋಗಿದ್ದೆವು. ಆದರೆ ಬೆಳಗ್ಗೆ ನಾವು ಸರ್ಕಾರ ಕೆಡವಲು ಹೋಗಿದ್ದೇವೆ ಎಂಬ ರೀತಿ ವಾತಾವರಣ ಸೃಷ್ಟಿ ಮಾಡಿದ್ದಾರೆ ಎಂದು ಹೇಳುವ ಮೂಲಕ ಟಾಂಗ್ ನೀಡಿದರು.
ಬಹುಶಃ ಅವರ ಈ ಸರ್ಕಾರದ ಅವಧಿ ಬಹಳ ದಿನ ಇರುವುದಿಲ್ಲ ಎಂದು ಅವರು ಅಂದುಕೊಂಡಿರಬೇಕು. ನಮಗಿಂತ ಜಾಸ್ತಿ ಅವರೇ ಶಾಸ್ತ್ರ ಕೇಳುತ್ತಾರೆ. ಜ್ಯೋತಿಷ್ಯದವರನ್ನು ಬಹಳ ನಂಬುತ್ತಾರೆ. ಹಲವಾರು ರೀತಿ ಕುತಂತ್ರಗಳನ್ನ ಜ್ಯೋತಿಷ್ಯದಲ್ಲಿ ಮಾಡುತ್ತಾರೆ. ಅದರ ಕೃತಕವಾದ ಶಕ್ತಿಯನ್ನು ಚುನಾವಣೆಯಲ್ಲಿ ತುಂಬಿಕೊಂಡಿದ್ದಾರೆ. ಆ ಕೃತಕವಾದ ಶಕ್ತಿ ಬಹುಶಃ ಬಹಳ ದಿನ ಇರುವುದಿಲ್ಲ ಎಂದು ಅವರ ತಲೆಯಲ್ಲಿ ಇರಬಹುದು. ಅದಕ್ಕಾಗಿ ಇಂತಹ ಹೇಳಿಕೆ ನೀಡಿರಬೇಕು ಎಂದರು.
Web Stories